ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ಆದಷ್ಟು ಬೇಗ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ (SIT) ಸೂಚನೆ ನೀಡಿದೆ. ಬೇಗ ವರದಿ ನೀಡಿ ಎಂದು ಹೇಳಿರುವುದರ ಅರ್ಥ 'ಬೇಗ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಕೊಡಿ' ಎಂದು ಹೇಳಿದಂತಿದೆ. ಹಾಗಾಗಿ ಎಸ್ ಐಟಿ ತ್ವರಿತ ಕಾರ್ಯಾಚರಣೆಗೆ ಇಳಿದಿದೆ. ಆದರೆ ಇದಕ್ಕಿಂತಲೂ ಬೇಗವಾಗಿ ಕಾರ್ಯಾಚರಣೆ ನಡೆಸುತ್ತಿರುವವರು ಜಾರಕಿಹೊಳಿ ಸಹೋದರರು.
ರಾಸಲೀಲೆ ಪ್ರಕರಣದ ಸಿಡಿ ನಕಲಿ ಎಂಬ ವರದಿ ಬರಲಿದೆ, ಆ ಮೂಲಕ ತಮಗೆ ಕ್ಲೀನ್ ಚಿಟ್ ಸಿಗಲಿದೆ ಎಂಬ ತುಂಬು ವಿಶ್ವಾಸ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರದು. ಹಾಗಾಗಿಯೇ ಅವರು ಈಗಾಗಲೇ ಮತ್ತೆ ಮಂತ್ರಿ ಸ್ಥಾನವನ್ನು ಪಡೆಯುವ ಕಸರತ್ತು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು, ರಮೇಶ್ ಜಾರಕಿಹೊಳಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾರೆ. ರಾಸಲೀಲೆ ಪ್ರಕರಣ ಘಟಿಸುವ ಮುನ್ನ ಬಹುತೇಕ ತೆರೆಮರೆಯಲ್ಲಿದ್ದ ಬಾಲಚಂದ್ರ ಜಾರಕಿಹೊಳಿ ಈಗ ಸಹೋದರನಿಗೆ ಮತ್ತೆ ಸಚಿವ ಸ್ಥಾನ ಕೊಡಿಸಲು ತಮ್ಮ 'ಹಳೆಯ ಕಲೆ'ಗಳಿಗೆ ಕಸುವು ತುಂಬುತ್ತಿದ್ದಾರೆ. ಹಳೆಯ 'ನೆಟ್ ವರ್ಕ್'ಗಳನ್ನೂ ಬಳಸುತ್ತಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಬಳಿ ಇದ್ದ ಜಲಸಂಪನ್ಮೂಲ ಖಾತೆ ಪಡೆಯಲು ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಮತ್ತಿತರರು ಭಾರೀ ಲಾಭಿ ನಡೆಸುತ್ತಿದ್ದಾರೆ. ಈ ನಡುವೆ 'ಜಲಸಂಪನ್ಮೂಲ ಖಾತೆಯನ್ನು ಯಾರಿಗೂ ಕೊಡಬೇಡಿ, ಎಸ್ ಐಟಿ ವರದಿಯಲ್ಲಿ ಪಾವನರಾದ ಬಳಿಕ ಮತ್ತೆ ನಮಗೆ ಕೊಡಿ' ಎಂದು ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದೂ ಕೂಡ ಹೇಳಲಾಗುತ್ತದೆ. ಆದರೆ ಈ ನಡುವೆ ಜಾರಕಿಹೊಳಿ ಸಹೋದರರಿಗೆ ಈ ಬಾರಿ 'ಸಿಎಂ ಯಡಿಯೂರಪ್ಪ ಒಪ್ಪಿದ ಮಾತ್ರಕ್ಕೆ ಮಂತ್ರಿ ಸ್ಥಾನ ಮರಳಿ ಬರುವುದಿಲ್ಲ' ಎಂಬುದು ಗೊತ್ತಾಗಿದೆ. ಅಲ್ಲದೆ ಲೋಕೋಪಯೋಗಿ ಇಲಾಖೆಯ ಬಳಿಕ ಅತಿಹೆಚ್ಚು ಹಣ ಇರುವ ಜಲಸಂಪನ್ಮೂಲ ಖಾತೆ ಬಿಟ್ಟುಕೊಡಲು ಯಡಿಯೂರಪ್ಪ ಸುಲಭದಲ್ಲಿ ಒಪ್ಪುವುದಿಲ್ಲ, ಯಡಿಯೂರಪ್ಪ ಬಿಡಲು ಒಪ್ಪಿದರೂ ಅವರ ಪುತ್ರ ಬಿ.ವೈ. ವಿಜಯೇಂದ್ರ ಬಿಡುವುದಿಲ್ಲ ಎಂಬುದೂ ಗೊತ್ತಾಗಿದೆ.
ಆದುದರಿಂದ ಹೈಕಮಾಂಡ್ ಮೂಲಕ ಉದ್ದೇಶ ಈಡೇರಿಸಿಕೊಳ್ಳುವುದು ಸದ್ಯದ ಜಾರಕಿಹೊಳಿ ಬ್ರದರ್ಸ್ ಯೋಜನೆ. ಸದ್ಯಕ್ಕೆ ಅವರು ಯಡಿಯೂರಪ್ಪ ಅವರಿಂದ ಅಪೇಕ್ಷಿಸುತ್ತಿರುವುದು 'ಎಸ್ ಐಟಿಯಿಂದ ಬೇಗ ಕ್ಲೀನ್ ಚಿಟ್ ಕೊಡಿಸಲಿ' ಎಂದು ಮಾತ್ರ. ಉಳಿದಂತೆ ಬಿಜೆಪಿ ಹೈಕಮಾಂಡ್ ನಾಯಕರ ಮನವೊಲಿಸಿ ಮಂತ್ರಿ ಸ್ಥಾನ ಪಡೆಯಲು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಬ್ರದರ್ಸ್ 'ದೆಹಲಿ ದಂಡಯಾತ್ರೆ'ಯನ್ನೂ ಹಮ್ಮಿಕೊಂಡಿದ್ದಾರೆ. ದೆಹಲಿ ನಾಯಕರ ಮೂಲಕವೇ ಪಟ್ಟ ಪಡೆದರೆ ಮೊದಲಿನ 'ಪ್ರಭಾವ'ವೂ ಮುಸುಕಾಗುವುದಿಲ್ಲ ಎನ್ನುವುದು ಅವರ ಮತ್ತೊಂದು ಆಲೋಚನೆ.
ನಾಗಪುರದ ಮೊರೆ ಹೋದ ಬಾಲಚಂದ್ರ
ಜಾರಕಿಹೊಳಿ ಸಹೋದರರಿಬ್ಬರಿಗೂ ಆರ್ ಎಸ್ ಎಸ್ ಗೆ ಪ್ರೀತಿಪಾತ್ರರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಮಹಾರಾಷ್ಟ್ರದ ಹಲವು ಬಿಜೆಪಿ ನಾಯಕರರ ನೆಟ್ ವರ್ಕ್ ಇದೆ. ರಮೇಶ್ ಜಾರಕಿಹೊಳಿಗಿಂತಲೂ ಮೊದಲೇ ಬಿಜೆಪಿ ಸೇರಿದ್ದ ಬಾಲಚಂದ್ರ ಜಾರಕಿಹೊಳಿ ಆರ್ ಎಸ್ ಎಸ್ ಹೆಡ್ ಆಫೀಸ್ ನಾಗಪುರದಲ್ಲೂ ನೆಟ್ ವರ್ಕ್ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಸದ್ಯ ಬಾಲಚಂದ್ರ ಜಾರಕಿಹೊಳಿ ನಾಗಪುರ ತಲುಪಿದ್ದು ಅಲ್ಲಿನ ನಾಯಕರ ಮೂಲಕ ದೆಹಲಿ ನಾಯಕರಿಗೆ ಸೂಚನೆ ಕೊಡಿಸಲು ಮುಂದಾಗಿದ್ದಾರೆ. ಬಳಿಕ ಅವರು ದೆಹಲಿಗೆ ತೆರಳಲಿದ್ದಾರೆ.
ಕಾಮಾಕ್ಯಳ ಮೊರೆಹೋದ ರಮೇಶ್ ಜಾರಕಿಹೊಳಿ
ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಅಸ್ಸಾಂನ ಗೌಹಾಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದಾರೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಮಂತ್ರಿ ಸ್ಥಾನ ಪಡೆದಾಗಲೂ ಕಾಮಾಕ್ಯಳ ಆಶೀರ್ವಾದ ಪಡೆದಿದ್ದರು. ಈಗ ಮಂತ್ರಿ ಸ್ಥಾನವನ್ನು ಮರಳಿ ಪಡೆಯಲು ಕಾಮಾಕ್ಯಳ ಕೃಪೆ ಬೇಡುತ್ತಿದ್ದಾರೆ. ಇದಾದ ಬಳಿಕ ದೆಹಲಿಗೆ ಆಗಮಿಸುವ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಸಹೋದರ ಬಾಲಚಂದ್ರ ಜಾರಕಿಹೊಳಿ ಜೊತೆ ಸೇರಿಕೊಂಡು 'ಆಪರೇಷನ್ ಹೈಕಮಾಂಡ್' ಹಮ್ಮಿಕೊಳ್ಳಲಿದ್ದಾರೆ ಎಂಬುದು ಸದ್ಯದ ಮಾಹಿತಿ. ಯಡಿಯೂರಪ್ಪ ಮುಖಾಂತರ ಬಿಜೆಪಿಗೆ ಬಂದಿದ್ದರೂ ರಮೇಶ್ ಜಾರಕಿಹೊಳಿ ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಾಳೆಯದತ್ತ ಒಲವು ತೋರಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಬಲ್ಲವರಾಗಿದ್ದಾರೆ.
ಅದುವೇ ಪ್ರಬಲ ಅಸ್ತ್ರ
ರಾಜ್ಯದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಮತ್ತೊಮ್ಮೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ತರಲು ಸಾಕಷ್ಟು ಶ್ರಮಿಸಿದ್ದೇನೆ. ತಾನು ಗಟ್ಟಿಯಾಗಿ ನಿಂತಿದ್ದರಿಂದಲೇ ಇತರೆ ಶಾಸಕರು ಬಿಜೆಪಿ ಕಡೆ ಬರುವಂತಾಯಿತು. ಬಿಜೆಪಿ ಸರ್ಕಾರ ತರುವುದಕ್ಕಾಗಿ ತನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದೆ. ವರ್ಷಗಟ್ಟಲೆ ಅಜ್ಞಾತವಾಸ ಅನುಭವಿಸಿದ್ದೇನೆ. ಇತರೆ ಶಾಸಕರನ್ನು ಮನವೊಲಿಸಿದ್ದೇನೆ ಎಂಬುದನ್ನೇ ಪ್ರಮುಖವಾಗಿ ಹೈಕಮಾಂಡ್ ನಾಯಕರಿಗೆ ಹೇಳಿ ಮರಳಿ ಮಂತ್ರಿ ಸ್ಥಾನ ನೀಡುವಂತೆ ಕೇಳಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಾಲಚಂದ್ರ ಜಾರಕಿಹೊಳಿ ಕೂಡ ನಿತಿನ್ ಗಡ್ಕರಿ ಮೂಲಕ ಅಮಿತ್ ಶಾ ಮತ್ತು ಜೆ.ಪಿ. ನಡ್ಡ ಮನವೊಲಿಸಲು ಮುಂದಾಗಿದ್ದಾರೆ. ಅಂದು ಸರ್ಕಾರ ಬರಲೆಂದು ಬಳಸಿಕೊಂಡ ಬಿಜೆಪಿಯ ದೆಹಲಿ ನಾಯಕರು ಜಾರಕಿಹೊಳಿ ಸಹೋದರರನ್ನು 'ಈಗ' ಹೇಗೆ ನೋಡುವರು ಎಂಬುದೇ ನಿಜವಾದ ಕುತೂಹಲ.