ಟಿಎಂಸಿ ಸೇರಿ ಮಮತಾ ಬ್ಯಾನರ್ಜಿಯನ್ನು ಹಾಡಿಹೊಗಳಿದ ಬಿಜೆಪಿ ಮಾಜಿ ನಾಯಕ ಯಶ್ವಂತ್ ಸಿನ್ಹಾ

ಬಿಜೆಪಿ ಪಕ್ಷಕ್ಕೆ ಗೆಲುವೊಂದೇ ಮೂಲ‌ಮಂತ್ರವಾಗಿರುವಲ್ಲಿ ಸಿದ್ಧಾಂತ ಮುಖ್ಯವಾಗುವುದಿಲ್ಲ ಎಂಬುವುದಕ್ಕೆ ಇತ್ತೀಚಿನ ಪಕ್ಷಾಂತರಗಳು ಮತ್ತು ಅಧಿಕಾರ ಬದಲಾವಣೆಗಳು ಸಾಕ್ಷ್ಯ ವಹಿಸುತ್ತವೆ
ಟಿಎಂಸಿ ಸೇರಿ ಮಮತಾ ಬ್ಯಾನರ್ಜಿಯನ್ನು ಹಾಡಿಹೊಗಳಿದ ಬಿಜೆಪಿ ಮಾಜಿ ನಾಯಕ ಯಶ್ವಂತ್ ಸಿನ್ಹಾ

ದೇಶಾದ್ಯಂತ ಕಳೆದ ನಾಲ್ಕು ವರ್ಷಗಳಲ್ಲಿ 170 ಕಾಂಗ್ರಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾಯಿತ ಪ್ರತಿನಿಧಿಗಳು ಪಕ್ಷ ಬದಲಿಸಿದ್ದರಿಂದ ಸರ್ಕಾರಗಳೇ ಬಿದ್ದುಹೋಗಿವೆ. ಇದೀಗ ಕುತೂಹಲಕಾರಿ ನಡೆಯೊಂದರಲ್ಲಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಯಶ್ವಂತ್ ಸಿನ್ಹಾ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ವಾರಗಳ ಮುಂಚೆಯೇ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. 83 ರ ಹರೆಯದ ಅವರು ಬಿಜೆಪಿಯನ್ನು 2018 ರಲ್ಲಿ ತ್ಯಜಿಸಿದ್ದರು. ಕಳೆದ ಕೆಲವು ತಿಂಗಳುಗಳಿಂದ ಟಿಎಂಸಿಯಿಂದ ಹಲವು ನಾಯಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಈ ಹೊಸ ಬೆಳವಣಿಗೆಯಿಂದ ತೃಣಮೂಲ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಡುತ್ತಾರೆ.

ಕೋಲ್ಕತ್ತಾದ ತೃಣಮೂಲ ಭವನದಲ್ಲಿ ಡೆರೆಕ್ ಒ ಬ್ರಿಯಾನ್, ಸುದೀಪ್ ಬಂದೋಪಾಧ್ಯಾಯ ಮತ್ತು ಸುಬ್ರತಾ ಮುಖರ್ಜಿ ಅವರ ಸಮ್ಮುಖದಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ಸಿನ್ಹಾ ಪಕ್ಷ ಸೇರಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

"ದೇಶವು ಇಂದು ಆಘಾತಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಅದರ ಸಂಸ್ಥೆಗಳ ಬಲದಲ್ಲಿದೆ. ಆದರೆ ಈಗ ನ್ಯಾಯಾಂಗ ಸೇರಿದಂತೆ ಎಲ್ಲಾ ಸಂಸ್ಥೆಗಳು ಈಗ ದುರ್ಬಲಗೊಂಡಿವೆ" ಎಂದು ಅವರು ತೃಣಮೂಲಕ್ಕೆ ಸೇರಿದ ನಂತರ ಹೇಳಿದರು.

ಪ್ರಸ್ತುತ ನಡೆಯುತ್ತಿರುವ ರೈತರ ಆಂದೋಲನ ಮತ್ತು ಚೀನಾದ ಗಡಿ ಪರಿಸ್ಥಿತಿ ಸೇರಿದಂತೆ ಪತ್ರಿಕಾಗೋಷ್ಠಿಯಲ್ಲಿ ಅವರು ಹಲವಾರು ವಿಷಯಗಳನ್ನು ಚರ್ಚಿಸಿದ ಅವರು, ನರೇಂದ್ರ ಮೋದಿ ಸರ್ಕಾರ ಮತ್ತು ಅವರ ಮಾಜಿ ಪಿಎಂ ವಾಜಪೇಯಿ ಅವರನ್ನು ಹೋಲಿಸುತ್ತಾ "ಸರ್ಕಾರದ ತಪ್ಪುಗಳನ್ನು ತಡೆಯಲು ಈಗ ಯಾರೂ ಇಲ್ಲ. ಅಟಲ್ ಜಿ ಕಾಲದಲ್ಲಿ ಬಿಜೆಪಿ ಒಮ್ಮತವನ್ನು ನಂಬಿತ್ತು ಆದರೆ ಇಂದಿನ ಸರ್ಕಾರವು ಪುಡಿಮಾಡಿ ಜಯಿಸುವುದರಲ್ಲಿ ನಂಬಿಕೆ ಇಟ್ಟಿದೆ. ಅಕಾಲಿಗಳು, ಬಿಜೆಡಿ, ಶಿವಸೇನೆ ಬಿಜೆಪಿಯನ್ನು ತೊರೆದಿವೆ. ಜೆಡಿಯು ಹೊರತುಪಡಿಸಿ ‌ಇಂದು ಬಿಜೆಪಿಯೊಂದಿಗೆ ಯಾರಿದ್ದಾರೆ?" ಎಂದು‌ ಅವರು‌ ಪ್ರಶ್ನಿಸಿದ್ದಾರೆ.

1960 ರ ಬ್ಯಾಚ್‌ನ ಮಾಜಿ ಐಎಎಸ್ ಅಧಿಕಾರಿ ಸಿನ್ಹಾ ಅವರು 1984 ರಲ್ಲಿ ರಾಜಕೀಯಕ್ಕೆ ಸೇರಿದ್ದರು, ಸರ್ಕಾರಿ ಸೇವೆಯನ್ನು ತ್ಯಜಿಸಿದ ನಂತರ ಜನತಾ ಪಕ್ಷದೊಂದಿಗೆ ರಾಜಕೀಯ ಜೀವನ ಪ್ರಾರಂಭಿಸಿದ ಅವರು ನಂತರ ಬಿಜೆಪಿಗೆ ಸೇರಿದರು.

ಯಶವಂತ್ ಸಿನ್ಹಾ ಮೊದಲ ಬಾರಿ ನವೆಂಬರ್ 1990 ರಲ್ಲಿ ಹಣಕಾಸು ಮಂತ್ರಿಯಾದರು ಮತ್ತು ಜೂನ್ 1991 ರವರೆಗೆ ಪ್ರಧಾನ ಮಂತ್ರಿ ಚಂದ್ರಶೇಖರ್ ಅವರ ಅಡಿಯಲ್ಲಿ ಸೇವೆ ಸಲ್ಲಿಸಿದರು. ಡಿಸೆಂಬರ್ 1998 ಮತ್ತು ಜುಲೈ 2002 ರ ನಡುವೆ ಪಿಎಂ ವಾಜಪೇಯಿ ಸಂಪುಟದಲ್ಲಿ ಮತ್ತೆ ಸಚಿವರಾದರು. ಅಲ್ಲಿಂದ ಮೇ 2004 ರವರೆಗೆ ಅವರು ಭಾರತದ ವಿದೇಶಾಂಗ ಸಚಿವರಾಗಿದ್ದರು.

ಬಿಜೆಪಿ ತನ್ನ ಮಾರ್ಗದಿಂದ‌ ಈಗ ಸಂಪೂರ್ಣ ವಿಮುಖವಾಗಿದೆ. ಈಗ ಅದು ಚುನಾವಣೆಯಲ್ಲಿ ಗೆಲ್ಲುವುದರಲ್ಲಿ ಮಾತ್ರ ನಂಬಿಕೆ‌ ಇಟ್ಟಿದೆ ಎಂದು ಅಭಿಪ್ರಾಯ ಪಟ್ಟರು. "ಪ್ರಜಾಪ್ರಭುತ್ವದಲ್ಲಿ ನಾವು ಅನುಸರಿಸುತ್ತಿದ್ದ ಮೌಲ್ಯಗಳು ಈಗ ಅಪಾಯದಲ್ಲಿದೆ ಎಂಬುದಾಗಿ ಪ್ರಸ್ತುತ‌ಭಾರತದ ಸ್ಥಿತಿ ತೋರಿಸುತ್ತದೆ. ಇಂದು ನಮ್ಮ ಬಹುತೇಕ ಎಲ್ಲಾ ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲಗೊಂಡಿವೆ" ಎಂದು ಅವರು ಹೇಳಿದರು.

ಮಾರ್ಚ್ 10 ರಂದು ಮಮತಾ ಬ್ಯಾನರ್ಜಿ ಅವರ‌ ಮೇಲೆ ಪ್ರಚಾರ ನಡೆಸುತ್ತಿದ್ದಾಗ ನಡೆದ ದಾಳಿಯ ನಂತರ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದೇನೆ ಎಂದು ಸಿನ್ಹಾ ಹೇಳಿದ್ದಾರೆ. "ನಂದಿಗ್ರಾಮದಲ್ಲಿ ಮಮತಾ ಜಿ ಮೇಲೆ ನಡೆದ ದಾಳಿ ಟಿಪ್ಪಿಂಗ್ ಪಾಯಿಂಟ್" ಎಂದು ಅವರು "ಈ ಕ್ಷಣವೇ ನಾನು ಟಿಎಂಸಿಗೆ ಸೇರಲು ಮತ್ತು ಮಮತಾರನ್ನು ಬೆಂಬಲಿಸಲು ನಿರ್ಧರಿಸಿದೆ" ಎಂದರು.

ವಾಜಪೇಯಿ ಸಂಪುಟದಲ್ಲಿದ್ದ, ಓದು ಬರಹ ಬಲ್ಲ, ಪ್ರಪಂಚ ಜ್ಞಾನವಿದ್ದ ಬಿಜೆಪಿಯ ಥಿಂಕ್ ಟ್ಯಾಂಕ್ ಎಂದೇ ಗುರುತಿಸಿಕೊಂಡ ಹಲವು ನಾಯಕರು ಈಗ ಮರಣ ಹೊಂದಿದ್ದಾರೆ. ಅರುಣ್ ಜೇಟ್ಲಿ, ಸುಶ್ಮಾ ಸ್ವರಾಜ್, ಪಾರಿಕ್ಕರ್ ಅಂತಹ ಹಲವು ನಾಯಕರನ್ನು ಆ ಪಕ್ಷ ಈಗಾಗಲೇ ಕಳೆದುಕೊಂಡಿದೆ. ಈಗ ಯಶ್ವಂತ್ ಸಿನ್ಹಾರಂತವರೂ ಪಕ್ಷ ತೊರೆದರೆ ಬೌದ್ಧಿಕ ನೆಲೆಯಲ್ಲಿ ಬಿಜೆಪಿ ಬಹುದೊಡ್ಡ ಶಕ್ತಿಯೊಂದನ್ನು ಕಳೆದುಕೊಂಡಂತಾಗುತ್ತದೆ. ಆದರೆ ಯಶ್ವಂತ್ ಸಿನ್ಹಾ ಹೇಳಿದಂತೆ ಬಿಜೆಪಿ ಈಗ ಗೆಲುವಿನ ಮೇಲೆ ಮಾತ್ರ ನಂಬಿಕೆ ಇರಿಸಿಕೊಂಡಿರುವ ಪಕ್ಷ. ಹಾಗಾಗಿ‌ ಪಕ್ಷದ ಉನ್ನತ ಮೂಲಗಳನ್ನು ಈ‌ ಪಕ್ಷಾಂತರ ಭಾದಿಸುವುದು ಸಂಶಯ. ಆ ಪಕ್ಷಕ್ಕೆ ಗೆಲುವೊಂದೇ ಮೂಲ‌ಮಂತ್ರವಾಗಿರುವಲ್ಲಿ ಸಿದ್ಧಾಂತ ಮುಖ್ಯವಾಗುವುದಿಲ್ಲ ಎಂಬುವುದಕ್ಕೆ ಇತ್ತೀಚಿನ ಪಕ್ಷಾಂತರಗಳು ಮತ್ತು ಅಧಿಕಾರ ಬದಲಾವಣೆಗಳು ಸಾಕ್ಷ್ಯ ವಹಿಸುತ್ತವೆ. ಆದರೆ ಬಂಗಾಳದಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಏಕಮುಖ‌ ಪಕ್ಷಾಂತರವನ್ನು ಈ ಹೊಸ ಬೆಳವಣಿಗೆಯು ದ್ವಿಮುಖವಾಗಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com