ಕಾಂಗ್ರೆಸ್ ಮತ್ತು ಬಿಜೆಪಿ, ಎರಡೂ ಪಕ್ಷಗಳಲ್ಲೂ ಭರವಸೆ ಮೂಡಿಸಿರುವ ಅಸ್ಸಾಂ

ಮೊದಲಿಗೆ ಅಸ್ಸಾಂನಲ್ಲಿ ಈ ಸಲ ಮತ್ತೆ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಬಿಜೆಪಿ ತನ್ನ ಶ್ರಮವನ್ನೆಲ್ಲಾ ಪಶ್ಚಿಮ ಬಂಗಾಳದಲ್ಲಿ ವ್ಯಯಿಸಿ ಅಲ್ಲಿ ವಿಕ್ರಮ ಸಾಧಿಸಬೇಕೆಂದುಕೊಂಡು ಅಸ್ಸಾಂ ಬಗ್ಗೆ ಆಲಸಿತನ ತೋರಿತ್ತು.
ಕಾಂಗ್ರೆಸ್ ಮತ್ತು ಬಿಜೆಪಿ, ಎರಡೂ ಪಕ್ಷಗಳಲ್ಲೂ ಭರವಸೆ ಮೂಡಿಸಿರುವ ಅಸ್ಸಾಂ

ಸದ್ಯ ಐದು ರಾಜ್ಯಗಳಿಗೆ ಚುನಾವಣೆ ನಡೆಯುತ್ತಿದ್ದರೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ 'ತಾವು ಗೆಲ್ಲಬಹುದು' ಎಂದು ವಿಶ್ವಾಸ ಮೂಡಿಸಿರುವ ರಾಜ್ಯವೆಂದರೆ ಅದು ಅಸ್ಸಾಂ. ಹಾಗಾಗಿ ಈ‌ ರಾಜ್ಯದ ಚುನಾವಣಾ ಚಿತ್ರಣವನ್ನು 50:50 ಎಂದು ಅಥವಾ ಅತ್ಯಂತ ರೋಚಕ ಎಂದು ವ್ಯಾಖ್ಯಾನಿಸಬಹುದು.

ಇಡೀ ದೇಶದಲ್ಲಿ ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಮೊದಲು ಕಿಚ್ಚು ಹತ್ತಿಕೊಂಡದ್ದು ಅಸ್ಸಾಂನಲ್ಲಿ. ಈಗ ಸಿಎಎ ಮತ್ತು ಎನ್ ಆರ್ ಸಿ ವಿಷಯ ಚರ್ಚೆಯಾದ ಬಳಿಕ ಮೊದಲ ಬಾರಿ‌ಗೆ ಚುನಾವಣೆ ನಡೆಯುತ್ತಿದೆ. ಮೊದಲೆಲ್ಲಾ ನಾವು 'ಸಿಎಎ ಮತ್ತು ಎನ್ ಆರ್ ಸಿ ಜಾರಿಗೊಳಿಸಿಯೇ ತೀರುತ್ತೇವೆ' ಎಂದು ಅಬ್ಬರಿಸುತ್ತಿದ್ದ ಬಿಜೆಪಿ ನಾಯಕರ ದನಿ ಚುನಾವಣೆಯ ಹೊತ್ತಿನಲ್ಲಿ ಮೆದುವಾಗಿದೆ. ಹಲವು ವಿಷಯಗಳ ರೀತಿಯಲ್ಲಿ ಕಾಂಗ್ರೆಸ್ ಸಿಎಎ ಮತ್ತು ಎನ್ ಆರ್ ಸಿ ಬಗ್ಗೆ ಕೂಡ ಅಲ್ಲಿ 'ತನ್ನ ನಿಲುವೇನು' ಎಂಬುದನ್ನು ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. ಈ ಬಾರಿಯ ಅಸ್ಸಾಂ ಚುನಾವಣೆಯಲ್ಲಿ ಸಿಎಎ ಮತ್ತು ಎನ್ ಆರ್ ಸಿ ವಿಷಯವೇ ನಿರ್ಣಾಯಕ ಆಗಬಹುದು ಎಂಬ ಲೆಕ್ಕಾಚಾರ ‌ಹುಸಿಯಾಗತೊಡಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಸ್ಸಾಂ ಏಕೆ ಎರಡೂ ಪಕ್ಷಗಳಿಗೆ ಭರವಸೆ?

ಮೊದಲಿಗೆ ಅಸ್ಸಾಂನಲ್ಲಿ ಈ ಸಲ ಮತ್ತೆ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಬಿಜೆಪಿ ತನ್ನ ಶ್ರಮವನ್ನೆಲ್ಲಾ ಪಶ್ಚಿಮ ಬಂಗಾಳದಲ್ಲಿ ವ್ಯಯಿಸಿ ಅಲ್ಲಿ ವಿಕ್ರಮ ಸಾಧಿಸಬೇಕೆಂದುಕೊಂಡು ಅಸ್ಸಾಂ ಬಗ್ಗೆ ಆಲಸಿತನ ತೋರಿತ್ತು. 'ಹೇಗೂ ಗೆಲ್ಲುವುದಿಲ್ಲ' ಎಂದು‌ ಕಾಂಗ್ರೆಸ್ ಕೈಚೆಲ್ಲಿ ಕುಳಿತಿತ್ತು. ಆದರೆ 'ಬದಲಾದ ಚುನಾವಣಾ ವಿಷಯಗಳು ಹಾಗೂ ಸ್ಥಳೀಯ ಪಕ್ಷಗಳ ಸ್ಥಾನಪಲ್ಲಟ' ಅಸ್ಸಾಂ ಚುನಾವಣಾ ಚಿತ್ರಣವನ್ನೇ ಬದಲಿಸಿದೆ.

ಅದಲು ಬದಲಾದ ಮಿತ್ರರು

126 ಸದಸ್ಯರ ಅಸ್ಸಾಂ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು 64 ಸ್ಥಾನ ಬೇಕು. ನಿರಂತರವಾಗಿ ಇಲ್ಲಿ 15 ವರ್ಷ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಮತ್ತು ಸದ್ಯದ ಅತಿ ದೊಡ್ಡ ಪಕ್ಷ ಬಿಜೆಪಿಗೆ ಇಲ್ಲಿ 64 ಸ್ಥಾನ ಗೆಲ್ಲುವುದು ಸುಲಭವಾಗಿಲ್ಲ. ಎರಡೂ ಪಕ್ಷಗಳಿಗೂ ಮಿತ್ರಪಕ್ಷಗಳ ನೆರವು ಅಗತ್ಯ. ಕಳೆದ ಬಾರಿಯೂ ಮೈತ್ರಿಕೂಟ ಮಾಡಿಕೊಂಡೇ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೀಗ 'ಮಿತ್ರರು' ಅದಲುಬದಲಾಗಿದ್ದಾರೆ. ಕಳೆದ ಬಾರಿ ಬಿಜೆಪಿ ಜೊತೆಗಿದ್ದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಈ ಬಾರಿ ಕಾಂಗ್ರೆಸ್ ನೇತೃತ್ವದ 'ಮಹಾಜಾಥ್' ಸೇರಿಕೊಂಡಿದೆ‌.‌ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಹಗ್ರಾಮ ಮೊಹಿಲಾರಿ 'ಶಾಂತಿ, ಒಗ್ಗಟ್ಟು ಹಾಗೂ ಅಭಿವೃದ್ಧಿಗಾಗಿ ತಾವು ಕಾಂಗ್ರೆಸ್ ಜೊತೆ ಕೈ ಜೋಡಿಸುತ್ತಿರುವುದಾಗಿ, ತಮ್ಮ‌ ಈ ಆಶಯಗಳು ಬಿಜೆಪಿಯಿಂದ ಈಡೇರಲಿಲ್ಲ' ಎಂದು ಹೇಳಿದ್ದಾರೆ.

ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ತನ್ನ ಮೈತ್ರಿಕೂಟವನ್ನು ಬದಲಾಯಿಸಿಕೊಂಡಿರುವುದು ದೊಡ್ಡ ಪರಿಣಾಮ ಬೀರಿದೆ. ಏಕೆಂದರೆ 2016ರ ಚುನಾವಣೆಯಲ್ಲಿ ಇದು 12 ಸ್ಥಾನಗಳನ್ನು ಗೆದ್ದಿತ್ತು. ಸರ್ಕಾರ ರಚನೆಗೆ ಪ್ರಮುಖ ಕೊಡುಗೆ ನೀಡಿತ್ತು. ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಮೈತ್ರಿಕೂಟ ಬದಲಿಸಿದ ಬಳಿಕ ಮೊದಲಿನಷ್ಟು ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿ ಈಗ ಕಠಿಣ ಶ್ರಮ ಹಾಕುತ್ತಿದೆ. ಇದೂ ಅಲ್ಲದೆ ಬಿಜೆಪಿಗೆ ತಮಿಳುನಾಡು, ಕೇರಳದಲ್ಲಿ ನೆಲೆ ಇಲ್ಲ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದಲ್ಲೂ ಗೆಲುವಿನ ಸಾಧ್ಯತೆಗಳು ಕ್ಷೀಣಿಸಿವೆ. ಇದು ಕೂಡ ಬಿಜೆಪಿಗೆ ಅಸ್ಸಾಂ ಮೇಲೆ ಪ್ರೀತಿ ಹೆಚ್ಚಾಗಲು ಕಾರಣ. ಇನ್ನೊಂದೆಡೆ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ತಮ್ಮ ಪಾಳೆಯ ಸೇರಿದ್ದರಿಂದ ಕಾಂಗ್ರೆಸ್ ಹುಮ್ಮಸ್ಸು ಹೆಚ್ಚಾಗಿದೆ. ಅದು ಕೂಡ ಭರವಸೆಯಿಂದ ಹೋರಾಟ ಮುಂದುವರೆಸಿದೆ.

ನಿರುದ್ಯೋಗ ಸಮಸ್ಯೆ ಮಾತನಾಡುತ್ತಿರುವ ಕಾಂಗ್ರೆಸ್

ಅಸ್ಸಾಂನಲ್ಲಿ ಶೈಕ್ಷಣಿಕ ಮಟ್ಟ ಸುಧಾರಿಸಿದೆ. ಆದರೆ ವಿದ್ಯಾಭ್ಯಾಸ ಮಾಡಿರುವವರಿಗೆಲ್ಲಾ ಕೆಲಸ ಸಿಗುತ್ತಿಲ್ಲ. ಹಾಗಾಗಿಯೇ ಅಸ್ಸಾಂಮಿಗಳು ದೇಶದ ಬೇರೆ ಬೇರೆ ನಗರಗಳಿಗೆ ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ‌. ಈ ಬಗ್ಗೆ ಹೆಚ್ಚು ಗಮನ‌ ಹರಿಸಿರುವ ಕಾಂಗ್ರೆಸ್ ಈ ಬಾರಿ 'ನಿರುದ್ಯೋಗದ' ಬಗ್ಗೆ ಮಾತನಾಡತೊಡಗಿದೆ. 'ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 50%ರಷ್ಟು ಮೀಸಲಾತಿ ನೀಡಲಾಗುವುದು' ಎಂದು ಘೋಷಿಸಿದೆ. ಈ ಮೂಲಕ ‌ನಿರುದ್ಯೋಗದಲ್ಲೂ ಅತ್ಯಂತ ಹೆಚ್ಚು ಸಮಸ್ಯೆ ಇರುವ ಸಮುದಾಯ(ಮಹಿಳೆ)ವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ.

ಜಮೀನು ನೀಡುವುದಾಗಿ ಹೇಳುತ್ತಿರುವ ಬಿಜೆಪಿ

ಕಾಂಗ್ರೆಸಿನ ಉದ್ಯೋಗದ ಅಸ್ತ್ರಕ್ಕೆ ಬದಲಾಗಿ ಬಿಜೆಪಿ ಭೂಮಿಯ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ. ಈಗಾಗಲೇ ಪಹಣಿ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುವ ಬಿಜೆಪಿ, ತಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ 'ಜಮೀನು ಇಲ್ಲದ ಬಡವರಿಗೆ ಭೂಮಿ ನೀಡುವ' ಭರವಸೆ ಮುಂದಿಡುತ್ತದೆ. ಇದರಿಂದ ಸ್ವಯಂ ಉದ್ಯೋಗ ನಿರ್ಮಾಣ ಆಗಲಿದೆ. ವಲಸೆ ತಡೆಯಬಹುದಾಗಿದೆ ಎಂಬ ಮಾತನ್ನಾಡುತ್ತಿದೆ. ಅಂತಿಮವಾಗಿ ಜನ ಯಾರ ಭರವಸೆಯನ್ನು ನಂಬಿ ಮತ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಬಿಜೆಪಿ, ಅಸೋಮ್ ಗಣ ಪರಿಷತ್ (ಎಜಿಪಿ) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಒಂದು ಮೈತ್ರಿಕೂಟವಾಗಿವೆ. ಆದರೆ ಈ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ 1991ರಿಂದ 6 ಬಾರಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಬ್ರಹಾಂಪುರ್ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಎಜಿಪಿಯ ಸಂಸ್ಥಾಪಕ ಮಹಾಂತ ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. 'ಇದು ಕೇವಲ ಒಂದು ಕ್ಷೇತ್ರದ ಪ್ರಶ್ನೆಯಲ್ಲ. ಅಸ್ಸಾಂನಲ್ಲಿ ಪ್ರಾದೇಶಿಕತೆಯ ಹತ್ಯೆಯಾಗಿದೆ. ಸದ್ಯದ ಎಜಿಪಿ ನಾಯಕತ್ವವು ಪ್ರಾದೇಶಿಕ ಅಸ್ತಿತ್ವವನ್ನು ಬಿಜೆಪಿಗೆ ಮಾರಾಟ ಮಾಡಿಲಾಗಿದೆ. ಎಜಿಪಿ ನಾಯಕತ್ವದ ನಿಜಬಣ್ಣ ಬಯಲಾಗಿದೆ' ಎಂದು ಮಹಾಂತ ಅವರ ಪತ್ನಿ ಜಯಶ್ರೀ ಗೋಸ್ವಾಮಿ ಹೇಳಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಗಳ 'ಮಹಾ ಮೈತ್ರಿ’ ಮತ್ತು ನೂತನವಾಗಿ ಸ್ಥಾಪಿತವಾಗಿರುವ ಎರಡು 'ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ' ಇವೆ. ಕೆಲವು ಕಡೆ ತ್ರಿಕೋನ ಸ್ಪರ್ಧೆಯ ಸಾಧ್ಯತೆ ಇದೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com