ನೂರು ದಿನದ ಬಳಿಕ ದಕ್ಷಿಣ ಮುಖಿ: ಹೊಸ ಮಜಲಿಗೆ ಹೊರಳಿದ ರೈತ ಹೋರಾಟ!

ಈಗಾಗಲೇ ಚರಿತ್ರೆಯಲ್ಲಿ ದಾಖಲಾಗುವ ಸಾಕಷ್ಟು ದಿಗ್ವಿಜಯಗಳನ್ನು ಸಾಧಿಸಿರುವ ರೈತ ಹೋರಾಟ, ಈಗ ಮತ್ತೊಂದು ಮಜಲಿಗೆ ಹೊರಳಿದ್ದು, ಉತ್ತರಭಾರತದ ಬಳಿಕ ದಕ್ಷಿಣ ಭಾರತದಲ್ಲಿ ರೈತ ಮಹಾ ಪಂಚಾಯತ್ ಮೂಲಕ ಹೋರಾಟದ ಕಾವನ್ನು ಹಬ್ಬಿಸಲು ಮುಂದಾಗಿದೆ. ದಕ್ಷಿಣ ರಾಜ್ಯಗಳಲ್ಲೇ ಮೊಟ್ಟಮೊದಲ ಬಾರಿಗೆ ಇದೇ ಮಾರ್ಚ್ 20ರಂದು ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ನಡೆಯಲಿದೆ.
ನೂರು ದಿನದ ಬಳಿಕ ದಕ್ಷಿಣ ಮುಖಿ: ಹೊಸ ಮಜಲಿಗೆ ಹೊರಳಿದ ರೈತ ಹೋರಾಟ!

ಸುಮಾರು ಮೂರೂವರೆ ತಿಂಗಳ ಹಿಂದೆ ದೆಹಲಿಯ ಗಡಿಯಲ್ಲಿ ಆರಂಭವಾದ ರೈತರ ಚಾರಿತ್ರಿಕ ಆಹೋರಾತ್ರಿ ಪ್ರತಿಭಟನೆ, ಇದೀಗ ನೂರು ದಿನಗಳನ್ನು ಪೂರೈಸಿದೆ.

ಕೇಂದ್ರದ ಬಿಜೆಪಿ ಸರ್ಕಾರ, ಬಹುತೇಕ ಪ್ರತಿಪಕ್ಷಗಳ ವಿರೋಧದ ಹೊರತಾಗಿಯೂ ತನ್ನ ಬಹುಮತದ ಬಲದ ಮೇಲೆ ಏಕಪಕ್ಷೀಯವಾಗಿ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್ ಮತ್ತು ಹರ್ಯಾಣ ರೈತರ ಪ್ರತಿರೋಧವಾಗಿ ಆರಂಭವಾದ ಈ ಹೋರಾಟ, ಸದ್ಯ ಅತಿ ದೀರ್ಘಾವಧಿಯ ಶಾಂತಿಯುತ ನಾಗರಿಕ ಹೋರಾಟವಾಗಿ ಜಾಗತಿಕ ಮಟ್ಟದಲ್ಲಿ ದಾಖಲಾಗಿದೆ.

ಈ ನಡುವೆ, ಸೋಮವಾರವಷ್ಟೇ ಬ್ರಿಟನ್ ಸಂಸತ್ತಿನಲ್ಲಿ ಈ ರೈತ ಚಳವಳಿ, ಅದನ್ನು ಸರ್ಕಾರ ಹತ್ತಿಕ್ಕುತ್ತಿರುವ ರೀತಿ ಮತ್ತು ನಾಗರಿಕ ಹೋರಾಟಗಾರರು ಮತ್ತು ಪತ್ರಕರ್ತರನ್ನು ಭಾರತ ಸರ್ಕಾರ ದಮನ ಮಾಡುತ್ತಿರುವ ಕ್ರಮಗಳ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆದಿದೆ. ಭಾರತದಲ್ಲಿ ನಾಗರಿಕ ಹಕ್ಕುಗಳು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಈಗಿನ ಸರ್ಕಾರ ದಮನ ಮಾಡುತ್ತಿದೆ ಎಂಬುದು ಬ್ರಿಟನ್ ಸಂಸತ್ತಿನಲ್ಲಿ ಚರ್ಚೆಯಾಗುತ್ತಲೇ ಜಗತ್ತಿನಾದ್ಯಂತ ಅದು ದೊಡ್ಡ ಸುದ್ದಿಯಾಗಿದೆ.

ಒಂದು ಕಡೆ ಹೀಗೆ ಭಾರತ ಸರ್ಕಾರ ತನ್ನ ಪ್ರಜೆಗಳ ಪ್ರಜಾಸತ್ತಾತ್ಮಕ ಹೋರಾಟಗಳನ್ನು, ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ, ಹೋರಾಟಗಾರರನ್ನು ಜೈಲಿಗಟ್ಟುವ ಸರ್ವಾಧಿಕಾರಿ ವರಸೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಇತರೆ ರಾಷ್ಟ್ರಗಳ ಸಂಸತ್ತಿನಲ್ಲಿ ಚರ್ಚೆಯಾಗುವ ಮಟ್ಟಿಗೆ ವಿಷಯ ಗಂಭೀರ ಆಯಾಮ ಪಡೆದುಕೊಂಡಿದ್ದರೆ, ಮತ್ತೊಂದು ಕಡೆ ದೆಹಲಿ ಮತ್ತು ಹರ್ಯಾಣದ ಸಿಂಘು ಗಡಿಯಲ್ಲಿ ಮೂರೂವರೆ ತಿಂಗಳಿನಿಂದ ರೈತರು ನಿರಂತರ ಧರಣಿ ನಡೆಸುತ್ತಿರುವ ಸ್ಥಳದಲ್ಲಿ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರೈತ ಮಹಿಳೆಯರು ಪ್ರತಿಭಟನೆಯ ನೇತೃತ್ವ ವಹಿಸಿ ವೇದಿಕೆ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿರುವಾಗ ದುಷ್ಕರ್ಮಿಗಳು ಗಾಳಿಯಲ್ಲಿ ಗುಂಡು ಹಾರಿಸಿದ ಆಘಾತಕಾರಿ ಘಟನೆ ನಡೆದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ವರ್ಷ ಸರಿಸುಮಾರು ಇದೇ ಹೊತ್ತಿಗೆ ಸಿಎಎ-ಎನ್ ಆರ್ ಸಿ ವಿರೋಧಿಸಿ ಶಾಹೀನ್ ಭಾಗ್ ಮತ್ತು ಜಾಮಿಯಾ ಕಾಲೇಜು ಬಳಿ ನಾಗರಿಕರು ನಿರಂತರ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ನುಗ್ಗಿ ಪೊಲೀಸರ ಕಣ್ಣೆದುರಲ್ಲೇ ಕೆಲವರು ಗುಂಡಿನ ದಾಳಿ ನಡೆಸಿದ ಎರಡು ಘಟನೆಗಳು ನಡೆದಿದ್ದವು. ಆ ಘಟನೆಗಳ ಹಿಂದೆ ಆಡಳಿತರೂಢ ಬಿಜೆಪಿಯ ಕೆಲವರು ಇರುವುದು ಮತ್ತು ಆ ಗುಂಡಿನ ದಾಳಿ ನಡೆಸಿದವರು ಅಧಿಕೃತವಾಗಿ ಬಿಜೆಪಿಗೆ ಸೇರಿದ ಆಘಾತಕಾರಿ ವಿದ್ಯಮಾನಗಳು ಕ್ರಮೇಣ ಬೆಳಕಿಗೆ ಬಂದಿದ್ದವು. ಆ ಹಿನ್ನೆಲೆಯಲ್ಲಿ ಇದೀಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವೇ ರೈತ ಮಹಿಳೆಯರ ಎದೆಗುಂದಿಸುವ ಮತ್ತು ಅದೇ ಹೊತ್ತಿಗೆ ಇಡೀ ಹೋರಾಟಕ್ಕೆ ಬೇರೊಂದು ಆಯಾಮ ನೀಡುವ ಪ್ರಯತ್ನದಂತೆ ಈ ಗುಂಡಿನ ದಾಳಿ ನಡೆದಿರುವುದು ಒಂದು ರೀತಿಯಲ್ಲಿ ನಿರೀಕ್ಷಿತವಾದರೆ, ಮತ್ತೊಂದು ರೀತಿಯಲ್ಲಿ ಆಘಾತಕಾರಿ!

ಕಳೆದ ವರ್ಷದ ನವೆಂಬರ್ 26ರಂದು ಪಂಜಾಬ್- ಹರ್ಯಾಣ- ರಾಜಸ್ತಾನ ಸೇರಿದಂತೆ ಉತ್ತರದ ಗೋಧಿ ಮತ್ತು ಕಬ್ಬು ಬೆಳೆ ಪ್ರದೇಶದ ರೈತರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿದ್ದ ಹೋರಾಟದ ಮುಂದುವರಿದ ಭಾಗವಾಗಿ ದೆಹಲಿಗೆ ಮುತ್ತಿಗೆ ಹಾಕಲು ಬಂದಾಗ, ದೆಹಲಿ ಪ್ರವೇಶಕ್ಕೆ ಅವಕಾಶ ನೀಡದೆ ಹೆದ್ದಾರಿಯಲ್ಲೇ ಕಂದಕ ತೋಡಿ, ಬೃಹತ್ ಕಂಟೇನರುಗಳನ್ನು ಅಡ್ಡಲಾಗಿ ಇಟ್ಟು, ಜಲಪಿರಂಗಿ, ಅಶ್ರುವಾಯು ಸಿಡಿಸಿ ಸರ್ಕಾರ, ಶಾಂತಿಯುತ ಹೋರಾಟವನ್ನು ಹಿಮ್ಮೆಟ್ಟಿಸುವ ಯತ್ನ ನಡೆಸಿತ್ತು. ಬಳಿಕ ಹಲವು ಬಾರಿ ಹೋರಾಟಗಾರರ ಮೇಲೆ ಪೊಲೀಸ್ ಲಾಠಿ ಪ್ರಹಾರ, ಪ್ರತಿಭಟನಾ ಸ್ಥಳ ತೆರವು ಯತ್ನಗಳು ನಡೆದವು. ಅವು ಸಾಲದು ಎಂಬಂತೆ ರೈತ ಪ್ರತಿಭಟನೆಯ ಸುತ್ತ ಕಬ್ಬಿಣದ ಮೊಳೆ ನೆಟ್ಟು, ಸಿಮೆಂಟ್ ಗೋಡೆ ಕಟ್ಟಿ, ತಂತಿಬೇಲಿಯನ್ನು ನಿರ್ಮಿಸಿ ಕಿರುಕುಳ ನೀಡಲಾಯಿತು. ಆ ಬಳಿಕ ಗಣರಾಜ್ಯೋತ್ಸವದ ದಿನ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಪರೇಡ್ ವೇಳೆ ಸನ್ನಿ ಡಿಯೋಲ್ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಂಟು ಹೊಂದಿದ್ದ ನಟ ದೀಪ್ ಸಿಧು ನೇತೃತ್ವದಲ್ಲಿ ಪ್ರಚೋದಿತ ಗುಂಪೊಂದು ಕೆಂಪುಕೋಟೆಗೆ ನುಗ್ಗಿ ದಾಂಧಲೆ ನಡೆಸಿ, ಇಡೀ ಹೋರಾಟಕ್ಕೆ ಮಸಿ ಬಳಿಯುವ ಮತ್ತು ಆ ಮೂಲಕ ಹಿಂಸಾಚಾರದ ನೆಪವೊಡ್ಡಿ ರೈತರನ್ನು ಬಲವಂತವಾಗಿ ತೆರವು ಮಾಡುವ ಪ್ರಯತ್ನ ನಡೆಯಿತು. ಆದರೆ, ಸಂಯುಕ್ತ ಕಿಸಾನ್ ಮೋರ್ಚಾದ ರೈತ ನಾಯಕರು ಸರ್ಕಾರ ಮತ್ತು ಅದರ ಬೆಂಬಲಿಗರ ಅಂತಹ ಪ್ರಯತ್ನಗಳಿಗೆ ಸೊಪ್ಪು ಹಾಕಲಿಲ್ಲ. ಎದೆಗುಂದಲಿಲ್ಲ.

ಗಣರಾಜ್ಯೋತ್ಸವ ಹಿಂಸಾಚಾರ ಘಟನೆಯ ಬೆನ್ನಲ್ಲೇ ಚಳವಳಿಯ ನೇತಾರರಲ್ಲಿ ಒಬ್ಬರಾದ ರಾಕೇಶ್ ಟಿಕಾಯತ್ ರೈತ ಮಹಾಪಂಚಾಯತ್ ಗೆ ಕರೆ ನೀಡಿದರು. ತಿಂಗಳುಗಳಿಂದ ದೇಶದ ರೈತ ಸಮುದಾಯ ನಡೆಸುತ್ತಿರುವ ಹೋರಾಟ, ಸರ್ಕಾರ ಆ ಹೋರಾಟವನ್ನು ಬಗ್ಗುಬಡಿಯಲು ನಡೆಸುತ್ತಿರುವ ಯತ್ನಗಳು, ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವುದು ಯಾಕೆ? ದೇಶದ ಕೃಷಿಕರ ಮುಂದಿರುವ ಸವಾಲುಗಳೇನು ಮತ್ತು ಅಪಾಯಗಳನ್ನು ದಾಟುವ ಬಗೆ ಏನು? ಎಂಬುದು ಸೇರಿದಂತೆ ಸದ್ಯದ ಮತ್ತು ಭವಿಷ್ಯದ ರೈತ ಸಮಸ್ಯೆ ಮತ್ತು ಸವಾಲುಗಳನ್ನು ಆ ಮಹಾ ಪಂಚಾಯತ್ ಗಳಲ್ಲಿ ಚರ್ಚೆಗೆತ್ತಿಕೊಂಡರು. ಹೋರಾಟಕ್ಕೆ ರೈತರ ಬೆಂಬಲ ಯಾಚಿಸಿದರು. ಒಂದು ಕಡೆ ದೆಹಲಿಯ ಗಡಿಗಳಲ್ಲಿ ಸರ್ಕಾರ ಮುಳ್ಳುಬೇಲಿಗಳನ್ನು ಹಾಕಿ, ಉಕ್ಕಿನ ಮೊಳೆ ನೆಟ್ಟು ಹೋರಾಟವನ್ನು ಹತ್ತಿಕ್ಕತೊಡಗಿದರೆ, ಮತ್ತೊಂದು ಕಡೆ ಹೋರಾಟ ಅನ್ನದಾತರು ನೆಟ್ಟ ಗಿಡಗಂಟೆ-ಬಳ್ಳಿಯಂತೆ ಹೋರಾಟ ಹವಲು ಕವಲುಗಳಾಗಿ, ಕುಡಿಗಳಾಗಿ ಹಬ್ಬತೊಡಗಿತು.

ಪಂಜಾಬ್ ನಿಂದ ಆರಂಭವಾದ ರೈತ ಮಹಾಪಂಚಾಯತ್ ಮಹಾ ಸಮಾವೇಶಗಳು ಹರ್ಯಾಣ, ಉತ್ತರಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ವ್ಯಾಪಿಸಿದವು. ಪ್ರತಿ ಮಹಾ ಪಂಚಾಯತ್ ಸಭೆಯಲ್ಲಿ ದೇಶದ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರಮಾಣದ ಮಹಾ ಜನಸ್ತೋಮ ನೆರೆಯತೊಡಗಿತು. ಸ್ವತಂತ್ರ ಭಾರತದ ಇತಿಹಾಸದಲ್ಲೇ ದೇಶದ ಉದ್ದಗಲದ ನೂರಾರು ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕೂಲಿಕಾರ್ಮಿಕ ಸಂಘಟನೆಗಳು ಒಂದಾಗಿ ನಡೆಸಿದ ಮಹಾ ಚಳವಳಿ ಈ ರೈತ ಹೋರಾಟವನ್ನು ಹೊರತುಪಡಿಸಿದರೆ ಮತ್ತೊಂದಿಲ್ಲ ಎಂಬ ಮಾತುಗಳು ಕೇಳಿಬಂದವು. ಅದರಲ್ಲೂ ಈ ರೈತ ಹೋರಾಟದಲ್ಲಿ ಮಹಿಳೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದ ರೀತಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಿತು. ಸೆಲೆಬ್ರಿಟಿ ಪಾಪ್ ಗಾಯಕಿ ರಿಹಾನಾ, ಪರಿಸರ ಕಾರ್ಯಕರ್ತೆ ಗ್ರೆಥಾ ಥನ್ ಬರ್ಗ್, ಲೇಖಕಿ ಮೀನಾ ಹ್ಯಾರಿಸ್, ಹಾಲಿವುಡ್ ನಟಿ ಸೂಸಾನ್ ಸೆರಂಡನ್, ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗದ ಮುಖ್ಯಸ್ಥೆ ಮಿಷೆಲ್ ಬ್ಯಾಷ್ಲೆಟ್, ಬ್ರಿಟನ್ ಸಂಸದೆ ಕರೋಲಿನಾ ಲುಕಾಸ್ ಸೇರಿದಂತೆ ಜಾಗತಿಕ ಗಣ್ಯ ಮಹಿಳೆಯರು ಹೋರಾಟದ ಪರ ದನಿ ಎತ್ತಿದರು. ಭಾರತ ಸರ್ಕಾರದ ದಮನ ನೀತಿಗಳನ್ನು ಪ್ರಶ್ನಿಸಿದರು.

ಈ ನಡುವೆ, ಹೋರಾಟದ ಒತ್ತಡಕ್ಕೆ ಮಣಿದ ಸರ್ಕಾರ, ಕನಿಷ್ಟ ಬೆಂಬಲ ಬೆಲೆ ಮುಂದುವರಿಸುವುದಾಗಿ ಹೇಳಿತು. ಎಪಿಎಂಸಿಗಳನ್ನು ಮುಚ್ಚುವುದಿಲ್ಲ ಎಂದು ಆಶ್ವಾಸನೆ ನೀಡಿತು. ಆದರೆ, ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂಬ ರೈತರ ಬೇಡಿಕೆಗೆ ಪ್ರತಿಯಾಗಿ, 18 ತಿಂಗಳ ಕಾಲ ಆ ಕಾಯ್ದೆಗಳನ್ನು ಜಾರಿಗೆ ತರುವುದಿಲ್ಲ ಎಂದು ಸಂಸತ್ತಿನಲ್ಲಿ ಘೋಷಿಸಿದೆ. ಜೊತೆಗೆ ಈ ಕಾಯ್ದೆಗಳು ಜಾರಿಗೆ ಬಂದ ಬಳಿಕವೂ, ಕಾಯ್ದೆಯ ಅಡಿಯಲ್ಲಿ ವ್ಯವಹರಿಸುವುದು ಅಥವಾ ಬಿಡುವುದು ರೈತರ ಆಯ್ಕೆ ಎಂಬ ಹೊಸ ರಾಜಿ ಸಂಧಾನದ ಮಾತನ್ನೂ ಸರ್ಕಾರ ಆಡಿದೆ. ಅಂದರೆ; ಹೋರಾಟದ ಆರಂಭದ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳ ಜಾರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವ ಹೋರಾಟ ಎಷ್ಟು ನಡೆದರೂ ತಾವು ಕಾಯ್ದೆ ಜಾರಿಗೆ ತಂದೇ ಸಿದ್ಧ ಎಂದು ಹೇಳುತ್ತಿದ್ದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪ್ರತಿಷ್ಠೆಯ ಹೇಳಿಕೆಯ ಹೊರತಾಗಿಯೂ ಅನ್ನದಾತರ ಪಟ್ಟಿಗೆ ಸರ್ಕಾರ ಜಗ್ಗಿದೆ.

ಆದರೆ, ಪ್ರಧಾನಿ ಮೋದಿಯವರ ವರ್ಚಸ್ಸು, ಸರ್ಕಾರದ ಪ್ರತಿಷ್ಠೆಯ ಪ್ರಶ್ನೆಯಾಗಿ ಈ ವಿಷಯ ವ್ಯಾಪಕತೆ ಪಡೆದುಕೊಂಡಿರುವುದರಿಂದ, ಏಕಾಏಕಿ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಬಿಜೆಪಿ ಸರ್ಕಾರ ಸಿದ್ಧವಿಲ್ಲ. ಆದರೆ, ಐತಿಹಾಸಿಕ ರೈತ ಹೋರಾಟದ ಯಶಸ್ಸು ಕೇವಲ ರೈತರ ಬೇಡಿಕೆಗಳ ಈಡೇರಿಕೆ ಅಥವಾ ತಿರಸ್ಕಾರ ಕುರಿತ ಸರ್ಕಾರದ ನಡೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ದೇಶದ ಇತಿಹಾಸದಲ್ಲೇ ಅಭೂತಪೂರ್ವವಾದ ಮತ್ತು ಜಾಗತಿಕ ಮಟ್ಟದಲ್ಲಿ ಕೂಡ ಒಂದು ಮಾದರಿಯಾದ ಬೃಹತ್ ಮತ್ತು ಸುದೀರ್ಘ ರೈತ ಚಳವಳಿಯನ್ನು ಈ ಹೋರಾಟ ಕಟ್ಟಿಕೊಟ್ಟಿದೆ. ದೇಶದಲ್ಲಿ ಬಹುತೇಕ ಎರಡು ದಶಕಗಳಿಂದ ಬದಿಗೆ ಸರಿದಿದ್ದ ರೈತ ರಾಜಕಾರಣ(ಚುನಾವಣಾ ರಾಜಕಾರಣಕ್ಕೆ ಸೀಮಿತವಲ್ಲ)ಕ್ಕೆ ಮರು ಚೈತನ್ಯ ನೀಡಿದೆ. ಮುಖ್ಯವಾಗಿ ತಮ್ಮೆಲ್ಲಾ ಭಿನ್ನಮತ ಮರೆತು ದೇಶದ ಉದ್ದಗಲಕ್ಕೆ ರೈತ, ಕೃಷಿ ಕೂಲಿ, ದಲಿತ ಸಂಘಟನೆಗಳು ಒಂದಾಗಲು ಈ ಹೋರಾಟ ದೊಡ್ಡ ಪ್ರೇರಣೆಯಾಗಿದೆ. ಆ ಮೂಲಕ ದೇಶದ ರಾಜಕೀಯ ಬದಲಾವಣೆಯ ದೊಡ್ಡ ಭರವಸೆಯನ್ನು ಹುಟ್ಟಿಸಿದೆ ಎಂಬುದನ್ನು ಗಮನಿಸಿದೆ, ಈ ಹೋರಾಟ ಸಾಧಿಸಿರುವ ಮತ್ತು ಬರುವ ದಿನಗಳಲ್ಲಿ ಸಾಧಿಸಲಿರುವುದು ದೊಡ್ಡದಿದೆ.

Anindito Mukherjee

ಅದೇ ಹೊತ್ತಿಗೆ, ಭಾರೀ ಬಹುಮತ ಮತ್ತು ಬಹಳ ವ್ಯವಸ್ಥಿತವಾಗಿ ಕಟ್ಟಿದ ನರೇಂದ್ರ ಮೋದಿಯವರ ಚರಿಷ್ಮಾದ ಮೇಲೆ ಏಕ ಚಕ್ರಾಧಿಪತ್ಯದ ಪಾರುಪತ್ಯದಂತೆ ಸರ್ಕಾರವನ್ನು ನಡೆಸುತ್ತಿದ್ದ ಬಿಜೆಪಿಯ ಅಹಂಗೆ ಕೂಡ ಹೋರಾಟ ಮರ್ಮಾಘಾತದ ಪೆಟ್ಟು ಕೊಟ್ಟಿದೆ. ಹೋರಾಟದ ಫಲವಾಗಿ ಒಂದು ಕಡೆ ಅದರ ಮತಬ್ಯಾಂಕ್ ಸೋರಿಕೆಯಾಗತೊಡಗಿದ್ದರೆ, ಮತ್ತೊಂದು ಕಡೆ ‘ವಿಶ್ವಗುರು’ ‘ಅವತಾರ ಪುರುಷ’ ಮುಂತಾದ ಸ್ವಯಂ ಕಥಿತ ಬಿರುದು- ಬಾವಲಿಗಳ ಮೇಲೆ ನಿಂತಿದ್ದ ಪ್ರಧಾನಿ ಮೋದಿಯವರ ವರ್ಚಸ್ಸಿಗೂ ರೈತರ ಹೋರಾಟ ಏಟು ನೀಡಿದೆ. ಜಾಗತಿಕ ಮಟ್ಟದಲ್ಲಂತೂ ಕೆನಡಾ, ಅಮೆರಿಕ, ಬ್ರಿಟನ್, ಆಷ್ಟ್ರೇಲಿಯಾದಂತಹ ದೇಶಗಳಲ್ಲಿ ಭಾರತದ ಆಡಳಿತ ಮತ್ತು ಆಡಳಿತದ ಚುಕ್ಕಾಣಿ ಹಿಡಿದವರ ಕುರಿತ ಗ್ರಹಿಕೆಗಳು ಸಾಕಷ್ಟು ಬದಲಾಗಿವೆ ಎಂಬುದಕ್ಕೆ ಸೋಮವಾರದ ಬ್ರಿಟನ್ ಸಂಸತ್ ಚರ್ಚೆಯೇ ನಿದರ್ಶನ.

ಹೀಗೆ, ಈಗಾಗಲೇ ಚರಿತ್ರೆಯಲ್ಲಿ ದಾಖಲಾಗುವ ಸಾಕಷ್ಟು ದಿಗ್ವಿಜಯಗಳನ್ನು ಸಾಧಿಸಿರುವ ರೈತ ಹೋರಾಟ, ಈಗ ಮತ್ತೊಂದು ಮಜಲಿಗೆ ಹೊರಳಿದ್ದು, ಉತ್ತರಭಾರತದ ಬಳಿಕ ದಕ್ಷಿಣ ಭಾರತದಲ್ಲಿ ರೈತ ಮಹಾಪಂಚಾಯತ್ ಮೂಲಕ ಹೋರಾಟದ ಕಾವನ್ನು ಹಬ್ಬಿಸಲು ಮುಂದಾಗಿದೆ. ದಕ್ಷಿಣ ರಾಜ್ಯಗಳಲ್ಲೇ ಮೊಟ್ಟಮೊದಲ ಬಾರಿಗೆ ಇದೇ ಮಾರ್ಚ್ 20ರಂದು ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ನಡೆಯಲಿದ್ದು, ಆ ಸಮಾವೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಯೋಗೇಂದ್ರ ಯಾದವ್ ಮತ್ತಿತರರು ಭಾಗವಹಿಸಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ವಿವಿಧ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಮತ್ತು ಸಾಮಾಜಿಕ ಸಂಘಟನೆಗಳ ಮಹಾ ಪಂಚಾಯತ್ ಪೂರ್ವತಯಾರಿಗಳು ಬಿರುಸುಗೊಂಡಿವೆ.

ಶಿವಮೊಗ್ಗ ಮಾತ್ರವಲ್ಲದೆ ರಾಜ್ಯದ ಹಾವೇರಿ, ಬೆಳಗಾವಿ ಮತ್ತು ಬೆಂಗಳೂರಿನಲ್ಲಿಯೂ ರಾಷ್ಟ್ರೀಯ ಚಳವಳಿಯ ನಾಯಕರ ನೇತೃತ್ವದಲ್ಲಿ ರೈತ ಮಹಾಪಂಚಾಯತ್, ಸಮಾವೇಶ ಮತ್ತು ಪ್ರತಿಭಟನೆಗಳು ನಡೆಯಲಿವೆ. ಹಾಗೇ ರಾಜ್ಯವಲ್ಲದೆ, ನೆರೆಯವ ಆಂಧ್ರಪ್ರದೇಶ, ತೆಲಂಗಾಣ ಮತ್ತಿತರ ಕಡೆಯೂ ರೈತ ಮಹಾಪಂಚಾಯತ್ ಆಯೋಜನೆಯ ಪ್ರಯತ್ನಗಳು ಆರಂಭವಾಗಿವೆ ಎನ್ನಲಾಗಿದೆ. ಅಂದರೆ, ರೈತ ಹೋರಾಟದ ಸಂಘಟನಾ ಬಲವಾಗಿ ಈಗಾಗಲೇ ಹೊರಹೊಮ್ಮಿರುವ ಮತ್ತು ಅದೇ ಕಾರಣಕ್ಕೆ ಸರ್ಕಾರದ ಮೇಲೆ ಒತ್ತಡ ತರುತ್ತಿರುವ ರೈತ ಮಹಾ ಪಂಚಾಯತ್ ಈಗ ದೇಶಾದ್ಯಂತ ವಿಸ್ತರಿಸತೊಡಗಿದೆ.

ಚಳವಳಿಯ ನಾಯಕ ರಾಕೇಶ್ ಟಿಕಾಯತ್ ಅವರು, ಚಳವಳಿಗೆ ಸರ್ಕಾರ ಜಗ್ಗದಿರುವ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, “ನಾವು ರೈತರು, ಭೂಮಿ ಹಸನು ಮಾಡಿ ಬೀಜ ಬಿತ್ತುತ್ತೇವೆ. ಅದು ಮೊಳಕೆಯೊಡೆದು ಸೊಂಪಾಗಿ ಬೆಳೆದು ಒಳ್ಳೆಯ ಫಸಲು ಕೊಡುತ್ತದೆ ಎಂಬ ಕನಸಿನಲ್ಲೇ ಅದರ ಜತನ ಮಾಡುತ್ತೇವೆ. ಆದರೆ, ಬಿತ್ತಿದ ಬೀಜಗಳೆಲ್ಲಾ ಮೊಳಕೆಯೊಡೆದು ಫಸಲು ನೀಡುವುದಿಲ್ಲ ಮತ್ತು ಫಸಲು ಕೈಗೆ ಬರುವ ಕೊನೇ ಕ್ಷಣದವರೆಗೂ ಒಂದಲ್ಲಾ ಒಂದು ನೈಸರ್ಗಿಕ ವಿಕೋಪ ಬಂದು ಎಲ್ಲವನ್ನೂ ಕಿತ್ತುಕೊಳ್ಳಲೂಬಹುದು ಎಂಬ ಆತಂಕ ಇದ್ದೇ ಇರುತ್ತದೆ. ಆದರೂ, ಪ್ರತಿ ಬಾರಿ ಮತ್ತೆ ಮತ್ತೆ ಬಿತ್ತನೆ ಮಾಡುತ್ತೇವೆ. ಫಸಲಿನ ಕನಸು ಕಾಣುತ್ತೇವೆ” ಎಂದಿದ್ದರು. ಸರ್ಕಾರ ಕೂಡ ಹಾಗೇ, ರೈತರ ಹೋರಾಟಕ್ಕೆ ತಕ್ಷಣಕ್ಕೆ ಮಣಿಯದೇ ಇರಬಹುದು. ಆದರೆ, ಅನ್ನದಾತರು ಅಷ್ಟಕ್ಕೇ ಭ್ರಮನಿರಸಗೊಂಡು, ಮನೆಗೆ ಮರಳುವುದಿಲ್ಲ. ಪ್ರತಿ ವೈಫಲ್ಯ, ಸೋಲಿನ ಬಳಿಕವೂ ಭರವಸೆ ಕಳೆದುಕೊಳ್ಳದೆ ಬೀಜ ಬಿತ್ತಿ, ತಿಂಗಳುಗಟ್ಟಲೆ ಕಾದು, ಫಸಲಿನ ಕನಸು ಕಾಣುವಂತೆ ಅನ್ನದಾತರು ತಮ್ಮ ಪ್ರಯತ್ನಗಳನ್ನು ಮುಂದುವರಿಸಲಿದ್ದಾರೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದರು.

ಹಾಗಾಗಿ, ಅತಿವೃಷ್ಟಿ-ಅನಾವೃಷ್ಟಿಗಳು ಸದಾ ಕಾಲ ರೈತನ ಬೆವರಿನ ಪ್ರತಿಫಲ ಕಿತ್ತುಕೊಳ್ಳಲಾಗದು ಎಂಬುದು ಸರ್ಕಾರಕ್ಕೆ ಎಷ್ಟು ಬೇಗ ಅರಿವಾಗುವುದು ಎಂಬುದಷ್ಟೇ ಈಗ ಉಳಿದಿರುವ ಕುತೂಹಲ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com