ಸ್ವತಂತ್ರ ಮಾಧ್ಯಮಗಳ ನಿಯಂತ್ರಣಕ್ಕೆ ಹೊರಟ ಕೇಂದ್ರ ಸರ್ಕಾರ: ಸೋರಿಕೆಯಾದ ವರದಿಯಲ್ಲಿವೆ ಗಂಭಿರ ವಿಚಾರಗಳು!

ʼನಾವು ಅಧಿಕಾರದಲ್ಲಿದ್ದರೂ, ದಿ ವೈರ್, ಸ್ಕ್ರಾಲ್ ಮೊದಲಾದ ಸ್ವತಂತ್ರ ಆನ್‌ಲೈನ್ ಮಾಧ್ಯಮಗಳಲ್ಲಿ ನಮ್ಮ ಹಿಡಿತವೇಕೆ ಇನ್ನೂ ಬಿಗಿಯಾಗಿಲ್ಲʼ ಎಂದು ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ ರವಿಶಂಕರ್ ಪ್ರಸಾದ್ ವಿಷಾದಿಸಿರುವುದಾಗಿ ವರದಿ ಉಲ್ಲೇಖಿಸಿದೆ
ಸ್ವತಂತ್ರ ಮಾಧ್ಯಮಗಳ ನಿಯಂತ್ರಣಕ್ಕೆ ಹೊರಟ ಕೇಂದ್ರ ಸರ್ಕಾರ: ಸೋರಿಕೆಯಾದ ವರದಿಯಲ್ಲಿವೆ ಗಂಭಿರ ವಿಚಾರಗಳು!

ಹಿರಿಯ ಮಂತ್ರಿಗಳಿಗೆ ಮತ್ತು ಕೆಲವು ಪತ್ರಕರ್ತರಿಗೆ ಮಾಧ್ಯಮಗಳನ್ನು ನಿಯಂತ್ರಣ ಮಾಡಲು ಸರ್ಕಾರ ಕಳುಹಿಸಿದ್ದ ಟೂಲ್‌ಕಿಟ್ ಒಂದು ಸೋರಿಕೆಯಾಗಿದೆ. ಸ್ವತಂತ್ರ ಮಾಧ್ಯಮಗಳನ್ನು ಮತ್ತು ಕೆಲ ಸ್ಥಳೀಯ ಮಾಧ್ಯಮಗಳನ್ನು ನಿಯಂತ್ರಿಸಲು ಮೋದಿ ಸರ್ಕಾರ ರೂಪಿಸಿದ ಯೋಜನೆಗಳ ಬಗ್ಗೆ 97 ಪುಟಗಳ ವರದಿಯೊಂದನ್ನು ಕೆಲ ಮಂತ್ರಿಗಳ ಮತ್ತು ಪತ್ರಕರ್ತರ ಸಹಯೋಗದೊಂದಿಗೆ ತಯಾರಿಸಲಾಗಿದೆ.

ಕಳೆದ ವರ್ಷ ಕರೋನಾ ಸಾಂಕ್ರಾಮಿಕ ಉತ್ತುಂಗದಲ್ಲಿದ್ದಾಗ ನಡೆದ ಸರಣಿ ಸಭೆಗಳಲ್ಲಿ ಕೇಂದ್ರ ಸರ್ಕಾರವು ತನ್ನ ಮಂತ್ರಿಗಳಿಗೆ‌‌ ಮತ್ತು ಕಾರ್ಯದರ್ಶಿಗಳಿಗೆ ಸರ್ಕಾರದ ವಿರುದ್ಧ ವರದಿ ಪ್ರಕಟಿಸುವ, ಟೀಕಿಸುವ ಮಾಧ್ಯಮಗಳನ್ನು ಗುರುತಿಸುವುದನ್ನು ಕಡ್ಡಾಯಗೊಳಿಸಿತ್ತು. ಸರ್ಕಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧನಾತ್ಮಕ ಪರಿಣಾಮ ಬೀರಬಲ್ಲ ಪತ್ರಕರ್ತರು, ಮಾಜಿ ಸೇನಾ ಜನರಲ್‌ಗಳನ್ನು ಬಳಸಿಕೊಂಡು ಸರ್ಕಾರದ ಪರವಾಗಿ ಅಭಿಪ್ರಾಯ ರೂಪಿಸಲು ಸೂಚನೆ ನೀಡಲಾಗಿತ್ತು.

ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋವು ಸರ್ಕಾರದ ಪರ ಅಭಿಪ್ರಾಯ ರೂಪಿಸುವಲ್ಲಿ ಸೋತಿದೆ, ವಿಶೇಷವಾಗಿ ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಪಿಐಬಿಗೆ ನಿಯಂತ್ರಿಸಲಾಗುತ್ತಿಲ್ಲ ಎಂದು ಹಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸರ್ಕಾರಿ ಸಂವಹನದಲ್ಲಿ ಮಂತ್ರಿಗಳ ಗುಂಪು’ ಎಂಬ ಶೀರ್ಷಿಕೆಯ ವರದಿಯು 'ಅಂತರರಾಷ್ಟ್ರೀಯ ಮಾಧ್ಯಮ' ಮತ್ತು ಭಾರತೀಯ ಡಿಜಿಟಲ್ ನ್ಯೂಸ್ ಪ್ಲಾಟ್‌ಫಾರ್ಮ್‌ಗಳಾದ 'ದಿ ವೈರ್' ಮತ್ತು 'ಸ್ಕ್ರಾಲ್.ಇನ್‌' ನಂತಹ ಪೋರ್ಟಲ್‌ಗಳ ಪ್ರಭಾವ ನಿಭಾಯಿಸಲು ವಿವಿಧ ಸಚಿವಾಲಯಗಳು ಕೈಗೊಳ್ಳಬೇಕಾದ ಜವಾಬ್ದಾರಿಗಳ ವ್ಯಾಪಕ ಪಟ್ಟಿಯನ್ನು ದಾಖಲಿಸುತ್ತದೆ. ವರದಿಯ ಪ್ರಕಾರ ಈ ಪೋರ್ಟಲ್‌ಗಳು ಸುಳ್ಳು ಪ್ರತಿಪಾದನೆಗಳ” ಮೂಲಕ ಕೇಂದ್ರ ಸರ್ಕಾರದ ಬಗ್ಗೆ ನಕಾರಾತ್ಮಕ ಪ್ರಭಾವ ಬೀರುವ ವರದಿಗಳನ್ನು ಪ್ರಕಟಿಸುತ್ತವೆ.

ಐಟಿ ಸಚಿವಾಲಯವು ಕಳೆದ ತಿಂಗಳು ವಿವಾದಾತ್ಮಕ ಹೊಸ ಕಾನೂನುಗಳನ್ನು ಪ್ರಕಟಿಸಿದ್ದು, ಈ ಕರಡು ನಿಯಮದಲ್ಲಿ ಡಿಜಿಟಲ್ ಸುದ್ದಿ ವೇದಿಕೆಗಳನ್ನು ‘ನಿಯಂತ್ರಿಸಲು’ ಸರ್ಕಾರಕ್ಕೆ ವ್ಯಾಪಕ ಅಧಿಕಾರ ನೀಡಲಾಗಿದೆ. ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ ರವಿಶಂಕರ್ ಪ್ರಸಾದ್ “ನಾವು ಆಂತರಿಕ ಸಲಹೆಗಳನ್ನು ಪಡೆಯುತ್ತಿದ್ದರೂ, ಅಧಿಕಾರದಲ್ಲಿದ್ದರೂ, ದಿ ವೈರ್, ಸ್ಕ್ರಾಲ್ ಮತ್ತು ಕೆಲವು ಪ್ರಾದೇಶಿಕ ಮಾಧ್ಯಮಗಳಂತಹ ಆನ್‌ಲೈನ್ ಮಾಧ್ಯಮಗಳಲ್ಲಿ ನಮ್ಮ ಹಿಡಿತವೇಕೆ ಇನ್ನೂ ಬಿಗಿಯಾಗಿಲ್ಲ" ಎಂದು ವಿಷಾದಿಸುತ್ತಾ, ನಮ್ಮ ಮಾಧ್ಯಮ ಹಸ್ತಕ್ಷೇಪವು ವಿಸ್ತಾರವಾಗುತ್ತಿಲ್ಲ ಎಂದಿದ್ದಾರೆ ಎನ್ನುವ ವರದಿಗಳಿವೆ.

ವರದಿಯ ಮುಖ್ಯ ಶಿಫಾರಸುಗಳನ್ನು ಮೊದಲ ಬಾರಿ ಡಿಸೆಂಬರ್‌ನಲ್ಲಿ ಹಿಂದೂಸ್ತಾನ್ ಟೈಮ್ಸ್‌ನ ಅನಿಷಾ ದತ್ತಾ ಬಯಲು ಮಾಡಿದ್ದರು. ಬುಧವಾರ, ಕಾರವಾನ್ ನಿಯತಕಾಲಿಕವು ಅದರ ವಿಷಯಗಳ ಬಗ್ಗೆ ವಿವರವಾಗಿ ಸುದ್ದಿಯನ್ನು ಮಾಡಿತ್ತು.

ಮಂತ್ರಿಗಳ ಗುಂಪಿನ ವರದಿಯ ನಕಲು ಅಂತರ್ಜಾಲದಲ್ಲಿ ಸೋರಿಕೆಯಾಗಿದೆ, ಅದನ್ನು ದಿ ವೈರ್ ಅಧಿಕೃತವೆಂದು ದೃಢೀಕರಿಸಿದೆ.

2020 ರ ಜೂನ್‌‌ ಮತ್ತು ಜುಲೈನಲ್ಲಿ ಮಂತ್ರಿಗಳ ಗುಂಪು ಆರು ಸಭೆಗಳನ್ನು ನಡೆಸಿದ್ದು, ಡಿಸೆಂಬರ್ 3 ರಂದು ‘ಕ್ರಿಯಾ ಯೋಜನೆ’ಯೊಂದಿಗೆ ವರದಿಯ ಅನುಷ್ಠಾನಕ್ಕಾಗಿ ಎಲ್ಲಾ ಸಚಿವಾಲಯಗಳಿಗೆ ಹಂಚಲಾಗಿದೆ.

ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ಎಸ್.ಜೈಶಂಕರ್, ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಐವರು ರಾಜ್ಯ ಸಚಿವರುಗಳಾದ ಕಿರೆನ್ ರಿಜಿಜು, ಹರ್ದೀಪ್ ಸಿಂಗ್ ಪುರಿ, ಅನುರಾಗ್ ಠಾಕೂರ್ ಮತ್ತು ಬಾಬುಲ್ ಸುಪ್ರಿಯೋ ಈ ಮಂತ್ರಿಗಳ ಗುಂಪಿನ (ಗ್ರೂಪ್ ಆಫ್ ಮಿನಿಸ್ಟರ್ಸ್) ಸದಸ್ಯರಾಗಿದ್ದಾರೆ.

ಪ್ರಮುಖ ವ್ಯಕ್ತಿಗಳೊಂದಿಗೆ ವಿವಿಧ ಕೇಂದ್ರ ಸಚಿವರು ಸಭೆ ನಡೆಸಿದ್ದು‌ ಸರ್ಕಾರದ ವಿರುದ್ಧದ ಟೀಕೆಗಳನ್ನು ಹೇಗೆ ನಿಭಾಯಿಸಬೇಕು ಮತ್ತು ಸರ್ಕಾರದ ಪರವಾಗಿ ಹೇಗೆ ಅಭಿಪ್ರಾಯ ರೂಪಿಸಬೇಕು ಎಂದು ಸಲಹೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಕೇಂದ್ರ ಸಚಿವ ಕಿರೆನ್ ರಿಜಿಜು ಅವರು ಜೂನ್ 23, 2020 ರಂದು 12 ಪತ್ರಕರ್ತರೊಂದಿಗೆ ಮೊದಲ ಸಭೆಯನ್ನು ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು.

ಹಿಂದಿ‌‌ ಔಟ್‌ಲುಕ್‌ನ ಮಾಜಿ ಸಂಪಾದಕರಾದ ಅಲೋಕ್ ಮೆಹ್ತಾ, ಇಂಡಿಯಾ ಟುಡೇ ಗ್ರೂಪ್‌ನ ಜಯಂತ್ ಘೋಶಾಲ್, ಹಿಂದುಸ್ತಾನ್ ಟೈಮ್ಸ್‌ನ ಶಿಶಿರ್ ಗುಪ್ತ, ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್ ವೀಕ್ಲಿಯ ಸಂಪಾದಕ ಪ್ರಫುಲ್ ಕೇಟ್ಕರ್, ಟೈಮ್ಸ್ ಆಫ್ ಇಂಡಿಯಾದ ಮಹುವಾ ಚಟರ್ಜಿ, ದಿ ಹಿಂದುವಿನ ನಿಸ್ಟುಲಾ ಹೆಬ್ಬಾರ್, ಆಶುತೋಷ್, ರಾಮ್ ನಾರಾಯಣ್, ರವೀಶ್ ತಿವಾರಿ, ಹಿಮಾಂಶು ಮಿಶ್ರಾ, ರವೀಂದ್ರ ಗೌತಮ್ ಮುಂತಾದ ಪತ್ರಕರ್ತರು ಆ ಸಭೆಯಲ್ಲಿ ಭಾಗಿಯಾಗಿದ್ದರು. "75% ಪತ್ರಕರ್ತರು 'ನರೇಂದ್ರ ಮೋದಿಯವರ ನಾಯಕತ್ವದಿಂದ ಪ್ರಭಾವಿತರಾಗಿದ್ದಾರೆ ಮತ್ತು ಬಿಜೆಪಿ ಪಕ್ಷದಿಂದ ಸೈದ್ಧಾಂತಿಕವಾಗಿ ಪ್ರಭಾವಿತರಾಗಿದ್ದಾರೆ. ನಾವು ಈ ವ್ಯಕ್ತಿಗಳ ವಿಭಿನ್ನ ಗುಂಪುಗಳನ್ನು ರಚಿಸಿ ಅವರೊಂದಿಗೆ ನಿಯಮಿತವಾಗಿ ಸಂವಹನ ಮಾಡಬೇಕು” ಎಂದು ವರದಿ ಸೂಚಿಸಿದೆ.

“ಸರ್ಕಾರವನ್ನು ಬೆಂಬಲಿಸುವ ಸಂಪಾದಕರು, ಅಂಕಣಕಾರರು, ಪತ್ರಕರ್ತರು ಮತ್ತು ವ್ಯಾಖ್ಯಾನಕಾರರ ಗುಂಪುಗಳನ್ನು ರಚಿಸಬೇಕು ಮತ್ತು ಅವರು ನಿಯಮಿತವಾಗಿ ಸರ್ಕಾರದ ಪರ ವರದಿ ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮಾಹಿತಿಯು ಕಟ್ಟ ಕಡೆಯ ವ್ಯಕ್ತಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರದ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ಅವನ್ನು ಸರಿಪಡಿಸಬೇಕು. ವಿದೇಶಿ ಮಾಧ್ಯಮಗಳೊಂದಿಗಿನ ಸಂವಹನವು ತಿರುಗುಬಾಣವಾಗುವ ಸಾಧ್ಯತೆಯಿರುತ್ತದೆ, ಅದನ್ನು ತಡೆಗಟ್ಟಬೇಕು” ಎಂದು ಭಾಗವಹಿಸಿದ ಪತ್ರಕರ್ತರು ಸಚಿವ ರಿಜಿಜುಗೆ ತಿಳಿಸಿದರು ಎನ್ನಲಾಗುತ್ತಿದೆ

ಅಂತಹ ಮತ್ತೊಂದು ಸಭೆಯನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಜೂನ್ 23, 2020 ರಂದು ಬಲಪಂಥೀಯ ಪರವಿರುವ ಮತ್ತು ಪ್ರಸ್ತುತ ಉನ್ನತ ಮಟ್ಟದ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿರುವ ಪತ್ರಕರ್ತರೊಂದಿಗೆ ನಡೆಸಿದ್ದಾರೆ. ಮೂರನೆಯ ಸಭೆಯನ್ನು 2020 ರ ಜೂನ್ 24 ರಂದು ಸ್ಮೃತಿ ಇರಾನಿ ಅವರು ಟೆಲಿವಿಷನ್, ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ಪರ 'ಸಕಾರಾತ್ಮಕ ಪ್ರತಿಪಾದನೆ'ಗಳನ್ನು ಉತ್ತೇಜಿಸುವಲ್ಲಿ ಪ್ರಭಾವ ಬೀರುವ ಐವರು ಕಟ್ಟಾ ಹಿಂದುತ್ವ ಪ್ರತಿಪಾದಕರೊಮದಿಗೆ ನಡೆಸಿದ್ದಾರೆ.

ಸರ್ಕಾರಗಳ ಸುದ್ದಿ ಸತ್ಯ ಮತ್ತು ಅಸತ್ಯದ ಮಿಶ್ರಣವನ್ನು ಹೊಂದಿರಬೇಕು”,‌ "ನಿರೂಪಣೆಗಳನ್ನು ತಿರುಗಿಸಲು ಮತ್ತು ವಿರೋಧ ಪಕ್ಷಗಳನ್ನು ಪ್ರಶ್ನಿಸಲು ಮಾಜಿ ಸೇನಾ ಜನರಲ್‌ಗಳನ್ನು ಬಳಸಿಕೊಳ್ಳಬೇಕು, ಪ್ರಧಾನ ಮಂತ್ರಿ, ಗೃಹ ಸಚಿವರು ಮತ್ತು ಇತರ ಹಿರಿಯ ಮಂತ್ರಿಗಳು ಮಾಧ್ಯಮ ಮನೆಗಳಲ್ಲಿನ ಮಾಲೀಕರೊಂದಿಗೆ ಮತ್ತು ಸಂಪಾದಕರೊಂದಿಗೆ 'ವಿಶ್ವಾಸವನ್ನು ಬೆಳೆಸಲು' ಸಂಪರ್ಕದಲ್ಲಿರಬೇಕು, ಅನೇಕ ಮಾಧ್ಯಮಗಳು ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಮಾಧ್ಯಮಗಳಿಗೆ 'ಸಹಾಯ' ಮಾಡಲು ಇದು ಅತ್ಯುತ್ತಮ ಸಮಯ ಎಂದು ಈ ಸಭೆಯಲ್ಲಿ ಭಾಗವಹಿಸಿದ್ದ ಗುರುಮೂರ್ತಿ ಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎಂದು ವರದಿಗಳಿವೆ. “ಮಾಧ್ಯಮ ಹಗೆತನವನ್ನು” ನಿಭಾಯಿಸಲು ಪೋಖ್ರಾನ್ ತರಹದ ಪರಿಣಾಮವನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಕಾಂಚನ್ ಗುಪ್ತಾ ಅವರು "ವಿದೇಶಿ ಮಾಧ್ಯಮ ಮತ್ತು ಭಾರತೀಯ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಸಂಪರ್ಕವನ್ನು ಕಾಪಾಡಿಕೊಳ್ಳಬೇಕು. ಪಕ್ಷದ ಪ್ರಭಾವಿಗಳ ಪಟ್ಟಿಯನ್ನು ನಿಯಮಿತವಾಗಿ ಸಂಪರ್ಕಿಸಬಹುದಾದ ಪತ್ರಕರ್ತರಿಗೆ ನೀಡಬೇಕು" “ಆನ್‌ಲೈನ್ ಸುದ್ದಿ ವೇದಿಕೆಗಳಾದ ಪ್ರಿಂಟ್, ವೈರ್, ಸ್ಕ್ರಾಲ್, ಹಿಂದೂ, ಇತ್ಯಾದಿಗಳ ಸುದ್ದಿಗಳನ್ನು ಗೂಗಲ್ ಪ್ರಮೋಟ್ ಮಾಡುತ್ತಿದೆ. ಇದನ್ನು ಹೇಗೆ ನಿಭಾಯಿಸುವುದು ಎಂಬುದಕ್ಕೆ ಪ್ರತ್ಯೇಕ ಚರ್ಚೆಯ ಅಗತ್ಯವಿದೆ ಮತ್ತು ಅದನ್ನು ಪರಿಶೀಲಿಸಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂತ್ರಿಗಳ ಗುಂಪಿನ ವರದಿಯ ಪ್ರಕಾರ, ನಿತಿನ್ ಗೋಖಲೆ ಅವರು “ಪತ್ರಕರ್ತರನ್ನು ಬಣ್ಣಗಳಿಂದ ಕೋಡ್ ಮಾಡಬಹುದು, ಹಸಿರು – ಬೇಲಿ ಮೇಲೆ ಕುಳಿತವರು, ಕಪ್ಪು – ಸರ್ಕಾರಕ್ಕೆ ವಿರುದ್ಧವಾಗಿರುವವರು ಮತ್ತು ಬಿಳಿ – ಸರ್ಕಾರನ್ನು ಬೆಂಬಲಿಸುವ ಪತ್ರಕರ್ತರು. ನಾವು ಸರ್ಕಾರಕ್ಕರ ಅನುಕೂಲಕರವಾಗಿರುವ ಪತ್ರಕರ್ತರನ್ನು ಬೆಂಬಲಿಸಬೇಕು ಮತ್ತು ಉತ್ತೇಜಿಸಬೇಕು” ಎಂದು ಹೇಳಿದ್ದಾರೆ ಎಂಬುವುದಾಗಿ ವರದಿಗಳಿವೆ.

ಸ್ವತಂತ್ರ ಮಾಧ್ಯಮಗಳ ನಿಯಂತ್ರಣಕ್ಕೆ ಹೊರಟ ಕೇಂದ್ರ ಸರ್ಕಾರ: ಸೋರಿಕೆಯಾದ ವರದಿಯಲ್ಲಿವೆ ಗಂಭಿರ ವಿಚಾರಗಳು!
ಅನ್ನದಾತರ ಆಕ್ರೋಶದ ಮುಂದೆ ಬೆತ್ತಲಾದ ‘ಗೋದಿ ಮೀಡಿಯಾ’

"ಡಿಜಿಟಲ್ ಮೀಡಿಯಾ ವ್ಯಾಖ್ಯಾನಗಳಿಗೆ ಪ್ರತಿಯಾಗಿ ಮಾಧ್ಯಮವನ್ನು ನಿರ್ವಹಿಸಲು ಪಕ್ಷದ ವಕ್ತಾರರು ಅಥವಾ ಅಧಿಕಾರಿಗಳಿಗೆ ತರಬೇತಿ ನೀಡಬೇಕು" ಎಂದು ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಸೂರ್ಯ ಪ್ರಕಾಶ್ ಸಲಹೆ ನೀಡಿದ್ದಾರೆ‌.

"ವರದಿಗಳನ್ನು ತಿರುಚಲು ಮತ್ತು ಹಿನ್ನೆಲೆ ಮಾಹಿತಿಗಳನ್ನು ಒದಗಿಸಲು ವಕ್ತಾರರನ್ನು ಹೊಂದಬೇಕು" ಎಂದು ರಾಷ್ಟ್ರಪತಿಗಳ ಮಾಜಿ ಪತ್ರಿಕಾ ಕಾರ್ಯದರ್ಶಿ ಅಶೋಕ್ ಮಲಿಕ್ ಹೇಳಿದ್ದಾರೆ. "ಸಾಮಾಜಿಕ ಸಮಸ್ಯೆಗಳಿಗೆ ಒತ್ತು ನೀಡಿ ಪ್ರಕಟಿಸುವ ವಿದೇಶಿ ಮಾಧ್ಯಮಗಳು ಮತ್ತು ದಿ ಪ್ರಿಂಟ್, ದಿ ವೈರ್‌ನಂತಹ ದೇಸಿ ಮಾಧ್ಯಮಗಳನ್ನು ನಿಭಾಯಿಸಬೇಕು" ಎಂದೂ ಅವರು ಹೇಳಿರುವುದಾಗಿ ವರದಿಗಳಿವೆ.

ಸ್ಮೃತಿ ಇರಾನಿಯ ಸಭೆಯಲ್ಲಿ ಭಾಗವಹಿಸಿದವರು ವಿರೋಧಿ ಮಾಧ್ಯಮವನ್ನು ನಿಭಾಯಿಸಲು ಹಿಂದುತ್ವ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುನ್ನಡೆಸುವುದು ಸೂಕ್ತವೆಂದು ಭಾವಿಸಿದ್ದಾರೆ.

ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿನ ವೈಫಲ್ಯ, ಭಾರತದ ಆರ್ಥಿಕತೆಯನ್ನು ಸ್ಥಿರಗೊಳಿಸುವಲ್ಲಿನ ಅಸಮರ್ಥತೆ ಮತ್ತು ಅಪಾರ ನಿರುದ್ಯೋಗ ಸಮಸ್ಯೆ ಕುರಿತು ಕೇಂದ್ರ ಸರ್ಕಾರ ನಿರಂತರ ಟೀಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಸಭೆಗಳು ನಡೆದಿದ್ದವು. ವಿಮರ್ಶಾತ್ಮಕ ಪತ್ರಿಕೋದ್ಯಮವನ್ನು ಹತ್ತಿಕ್ಕುವ ಮತ್ತು ಅನುಕೂಲಕರ ಮಾಧ್ಯಮಗಳನ್ನು ಪ್ರೋತ್ಸಾಹಿಸುವ ಕಾರ್ಯತಂತ್ರ ರೂಪಿಸುವುದು ಈ ಸಭೆಗಳ ಉದ್ದೇಶವಾಗಿತ್ತು.

ಸ್ವತಂತ್ರ ಮಾಧ್ಯಮಗಳ ನಿಯಂತ್ರಣಕ್ಕೆ ಹೊರಟ ಕೇಂದ್ರ ಸರ್ಕಾರ: ಸೋರಿಕೆಯಾದ ವರದಿಯಲ್ಲಿವೆ ಗಂಭಿರ ವಿಚಾರಗಳು!
‘ಮೀಡಿಯಾ ಟ್ರಯಲ್’ ಹಿಂದಿರುವುದು ಕೇವಲ TRP ಹಪಾಹಪಿಯಲ್ಲ!

ಇದಕ್ಕಾಗಿಯೇ ಐ ಬಿ ಸಚಿವಾಲಯಕ್ಕೆ 'ಒಪಿಇಂಡಿಯಾದಂತಹ ಸರ್ಕಾರಿ ಬೆಂಬಲಿತ ಆನ್‌ಲೈನ್ ಪೋರ್ಟಲ್‌ಗಳನ್ನು ಉತ್ತೇಜಿಸುವ ಕಾರ್ಯವನ್ನು ವಹಿಸಲಾಗಿದೆ. ಏಕೆಂದರೆ “ಅಸ್ತಿತ್ವದಲ್ಲಿರುವ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಹೆಚ್ಚಿನವು [ಸರ್ಕಾರವನ್ನು] ಟೀಕಿಸುತ್ತವೆ” ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ಸರ್ಕಾರವನ್ನು ಟೀಕಿಸುವ '50 ನಕಾರಾತ್ಮಕ ಪ್ರಭಾವಶಾಲಿ ಮಾಧ್ಯಮಗಳನ್ನು' ಪತ್ತೆಹಚ್ಚಲು ಸಚಿವಾಲಯಕ್ಕೆ ಸೂಚಿಸಲಾಗಿದೆ.ಮತ್ತು ಸರ್ಕಾರದ ಕೆಲಸವನ್ನು ಸಕಾರಾತ್ಮಕವಾಗಿ ಯೋಜಿಸುವ ಕನಿಷ್ಠ 50 ಮಾಧ್ಯಮಗಳಿಗರ ಸಚಿವಾಲಯವು “ಪ್ರೋತ್ಸಾಹಿಸಬೇಕು” ಮತ್ತು ಅವರಿಗೆ “ಅಗತ್ಯವಾದ ಮಾಹಿತಿಯನ್ನು ಒದಗಿಸಬೇಕು” ಎಂದು ವರದಿ ಹೇಳುತ್ತದೆ.

“ಒಂದೇ ಸತ್ಯವನ್ನು ವಿಭಿನ್ನ ನಿರೂಪಣೆಗಳೊಂದಿಗೆ ಪ್ರಸ್ತುತಪಡಿಸಬಹುದು. ಆದ್ದರಿಂದ, ಸರ್ಕಾರದ‌‌ ಪರವಾಗಿ ಇದನ್ನು ಮಾಡಬಲ್ಲವರನ್ನು ಗುರುತಿಸಿ ಬಳಸಿಕೊಳ್ಳಬೇಕು” ಎಂದು ಐ&ಬಿ ಸಚಿವಾಲಯಕ್ಕೆ ಜವಾಬ್ದಾರಿ ವಹಿಸಲಾಗಿದೆ. ಕೇಂದ್ರ ಸರ್ಕಾರದ ಮಂತ್ರಿಗಳು ಈ ಸಂಬಂಧ‌ ಮೊದಲ ಪ್ರೆಸೆಂಟೇಶನ್ ಅನ್ನು ಪಿಎಂ ಮೋದಿಯವರಿಗೆ ಸಲ್ಲಿಸಲಾಗಿದೆ ಎಂದು ವರದಿ ಹೇಳುತ್ತದೆ.

ಆದರೆ ಈ‌ ಎಲ್ಲಾ ಪತ್ರಕರ್ತರು ಇದಕ್ಕೆ ಸಂಬಂಧಿಸಿದ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಕಾರವಾನ್ ನಿಯತಕಾಲಿಕದ ಜೊತೆ ಮಾತಾಡಿರುವ ಜಯಂತ್ ಘೋಶಲ್, ರಿಜು ಅವರ ನಿವಾಸದಲ್ಲಿ ಜೈ ಶಂಕರ್ ಅವರು‌ ಸಭೆ ಆಯೋಜಿಸಿದ್ದರು ಎಂದರೆ ನಿತಿನ್ ಗೋಖಲೆ ಕಾರವಾನ್ ವರದಿ ಸಂಪೂರ್ಣ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ. ಈ ಕುರಿತು ಪತ್ರಿಕೆಗಳ ಮತ್ತು ಟಿವಿ ಚಾನೆಲ್ ಸಂಪಾದಕರನ್ನು 'ದಿ ವೈರ್' ಸಂಪರ್ಕಿಸಿದಾಗ ಅವರೂ ಸಹ ಇಂತಹ ಚರ್ಚೆ ನಡೆದಿರುವುದನ್ನೇ ನಿರಾಕರಿಸಿದ್ದಾರೆ.

ಮೂಲ: ದಿ ವೈರ್‌

ಅನುವಾದ: ಫಾತಿಮಾ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com