ಎಸ್ಸಿ/ಎಸ್ಟಿ ಕಾಯ್ದೆಯಡಿ ನೀಡಿದ್ದ ದೂರನ್ನು ಹಿಂಪಡೆಯದ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬರನ್ನು ಮೇಲ್ಜಾತಿಗೆ ಸೇರಿದ ಮಂದಿ ಬರ್ಬರವಾಗಿ ಕೊಂದ ಘಟನೆ ಗುಜರಾತಿನ ಭಾವನಗರ ಜಿಲ್ಲೆಯಲ್ಲಿ ನಡೆದಿದೆ.
ದಲಿತ ಹಕ್ಕುಗಳ ಕಾರ್ಯಕರ್ತ 50 ವರ್ಷದ ಅಮ್ರಾಭಾಯ್ ಬೋರಿಚಾ ಕೊಲೆಗೀಡಾದ ದುರ್ದೈವಿ. 2013ರಲ್ಲಿ ನೀಡಿದ ದೂರಿನ ಸಂಬಂಧವಾಗಿ ಈಗ ಕೊಲೆಯಾಗಿದ್ದಾರೆಂದು ದಿ ಕ್ವಿಂಟ್ ವರದಿ ಮಾಡಿದೆ.
ಹತ್ತು ಕೊಲೆ ಆರೋಪಿಗಳಲ್ಲಿ ಮೂವರ ವಿರುದ್ಧ 2013 ರಲ್ಲಿ ಜಾತಿನಿಂದನೆ ದೂರನ್ನು ಅಮ್ರಾಭಾಯ್ ನೀಡಿದ್ದರು. ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆರೋಪಿತರು ಅಮ್ರಾಭಾಯ್ಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಅಮ್ರಾಭಾಯ್ ಪುತ್ರಿ ಆರೋಪಿಸಿದ್ದಾರೆ. ಇತ್ತೀಚೆಗೆ ಅವರ ಕಿರುಕುಳ ಹೆಚ್ಚಾಗಿದ್ದು, ಪ್ರಕರಣ ಹಿಂಪಡೆಯುವಂತೆ ಅಮ್ರಾಭಾಯ್ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಆಕೆ ಆರೋಪಿಸಿದ್ದಾರೆ.
ಕ್ವಿಂಟ್ ವರದಿ ಪ್ರಕಾರ, ಇದು ಮೃತ ಅಮ್ರಾಭಾಯ್ ಮೇಲೆ ನಡೆದ ಮೂರನೆ ದಾಳಿ. ಈ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ. ಪೊಲೀಸರ ನಿರ್ಲಕ್ಷ್ಯವೇ ಅವರ ಸಾವಿಗೆ ನೇರ ಕಾರಣವೆಂದು ಆರೋಪಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಹಿಂದೆಯೂ ಎರಡು ಬಾರಿ ಅಮ್ರಾಬಾಯ್ ಮೇಲೆ ದಾಳಿ ನಡೆದಿದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋದಾಗ ಸರಿಯಾದ ಪ್ರತಿಕ್ರಿಯೆ ದೊರೆತಿರಲಿಲ್ಲ ಎಂದು NGO ಕಾರ್ಯಕರ್ತ ಅರವಿಂದ್ ಮಖ್ವಾನ ತಿಳಿಸಿದ್ದಾರೆ. ಹಾಗಾಗಿ ಆತ್ಮರಕ್ಷಣೆಗೆ ಆಯುಧ ಇಟ್ಟುಕೊಳ್ಳಲು ಕೇಳಿದ ಮನವಿಯನ್ನೂ ನಿರ್ಲಕ್ಷಿಸಲಾಗಿತ್ತೂ ಎಂದು ಅವರು ಆರೋಪಿಸಿದ್ದಾರೆ.
ತಂದೆಯ ಮೇಲೆ ಎರಡು ಬಾರಿ ದಾಳಿಯಾದರೂ ಪೊಲೀಸರು ಏನೂ ಕ್ರಮ ಕೈಗೊಂಡಿಲ್ಲ. ಇದು ಅವರಿಗೆ (ಆರೋಪಿಗಳಿಗೆ) ಇನ್ನಷ್ಟು ಧೈರ್ಯ ನೀಡಿದೆ. ಹಾಗಾಗಿ ಅವರು ರಾಜಾರೋಷವಾಗಿ ಮನೆಗೆ ನುಗ್ಗಿ ದಾಳಿ ಮಾಡಿ ಕೊಂದಿದ್ದಾರೆ ಎಂದು ಅಮ್ರಾಭಾಯ್ ಪುತ್ರಿ ನಿರ್ಮಲಾ ಆರೋಪಿಸಿದ್ದಾರೆ.
ಎರಡು ವಿಫಲ ದಾಳಿಯ ಬಳಿಕ, ಮಾರ್ಚ್ 2 ರಂದು ದರ್ಬಾರ್ (ಕ್ಷತ್ರಿಯ) ಸಮುದಾಯಕ್ಕೆ ಸೇರಿದ ದುಷ್ಕರ್ಮಿಗಳ ಗುಂಪು, ಡಿಜೆ ಹಾಡಿನೊಂದಿಗೆ ಮನೆಗೆ ನುಗ್ಗಿದ್ದು, ಮನೆ ಹೊರಗಡೆ ನಿಂತಿದ್ದ ತಂದೆ ( ಅಮ್ರಾಭಾಯ್) ಮೇಲೆ ಕಲ್ಲು, ರಾಡ್ಗಳಿಂದ ದಾಳಿ ನಡೆಸಿದ್ದಾರೆಂದು ಅಮ್ರಾಭಾಯ್ ಪುತ್ರಿ ನಿರ್ಮಲಾ ದಾಳಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ದಾಳಿಯಲ್ಲಿ ನಿರ್ಮಲಾ ಅವರಿಗೂ ಗಾಯಗಳಾಗಿವೆ. ಇಬ್ಬರನ್ನೂ ಭಾವನಗರ ಜಿಲ್ಲೆಯ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರೂ ಅಮ್ರಾಭಾಯ್ ದಾಳಿಯ ತೀವೃತೆಗೆ ಅಸುನೀಗಿದ್ದಾರೆ.
NGO ಕಾರ್ಯಕರ್ತ ಅರವಿಂದ್ ಮಖ್ವಾನ ನೀಡಿರುವ ಮಾಹಿತಿ ಪ್ರಕಾರ, ಸದ್ಯ ಕೊಲೆ ಆರೋಪಿಗಳ ಮೇಲೆ ಹಾಗೂ ಇನ್ನೊಂದು ರಕ್ಷಣೆ ನೀಡಲು ವಿಫಲವಾದ ಪೊಲೀಸರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.
ಎರಡು ಬಾರಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಠಾಣೆಗೆ ದೂರು ನೀಡಲಾಗಿತ್ತು. ಅದಾಗ್ಯೂ ಪೊಲೀಸರು ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರು. ಅದಾದ ಬಳಿಕ ಸ್ವರಕ್ಷಣೆಗೆ ಆಯುಧ ಅನುಮತಿ ಕೋರಿ ಅರ್ಜಿ ಹಾಕಲಾಗಿತ್ತು. ಅದಕ್ಕೂ ಪೊಲೀಸರು ನಿರಾಕರಿಸಿದ್ದರು ಎಂದು ಮಖ್ವಾನ ಹೇಳಿದ್ದಾರೆ.
ಅಮ್ರಾಭಾಯ್ ಕುಟುಂಬಕ್ಕೆ ಅಪಾಯ ಇದ್ದುದನ್ನು ಒಪ್ಪಿರುವ ಭಾವನಗರ ಪೊಲೀಸರು, ಅವರಿಗೆ ಹೋಮ್ ಗಾರ್ಡ್ಸ್ ಇದ್ದುದರಿಂದ ಪ್ರತ್ಯೇಕವಾಗಿ ಆಯುಧ ಹೊಂದಲು ಅನುಮತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಅದಾಗ್ಯೂ, ಪೊಲೀಸರ ನಿರ್ಲಕ್ಷ್ಯದ ಆರೋಪವನ್ನು ನಿರಾಕರಿಸಿರುವ ಭಾವನಗರ ಎಸ್ಪಿ, ಈ ಕುರಿತಂತೆ ಯಾವುದೇ ಲಿಖಿತ ರೂಪದ ದೂರು ಠಾಣೆಗೆ ಬಂದಿರಲಿಲ್ಲ. ಆದರೂ, ಮೌಖಿಕ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸದ ಕುರಿತು ಆಂತರಿಕ ತನಿಖೆ ನಡೆಯಲಿದೆಯೆಂದು ತಿಳಿಸಿದ್ದಾರೆ.