ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ದೂರು ನೀಡದಂತೆ ʼಕಾಲಿಗೆ ಬಿದ್ದʼ ಡಿಜಿಪಿ

ಪ್ರಕರಣದ ಕುರಿತು ಚೆನ್ನೈ ನ್ಯಾಯಾಲಯವೇ ತನಿಖೆಯ ಮೇಲ್ವಿಚಾರಣೆ ನಡೆಸುತಿದ್ದು ಈ ಪ್ರಕರಣ ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಯೇ ಆರೋಪಿ ಸ್ಥಾನದಲ್ಲಿರುವುದರಿಂದ ಇಲಾಖೆಗೆ ಕಪ್ಪು ಚುಕ್ಕಿ ಆಗಿದೆ.
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ದೂರು ನೀಡದಂತೆ ʼಕಾಲಿಗೆ ಬಿದ್ದʼ ಡಿಜಿಪಿ

ದೇಶದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಿದೆ. 5 ನಿಮಿಷಕ್ಕೊಂದು ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ವರದಿ ಅಗುತ್ತಿವೆ. ಇದಲ್ಲದೆ ಉದ್ಯೋಗ ಸ್ಥಳದಲ್ಲಿ ಕೂಡ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು ರಕ್ಷಣೆ ಮಾಡುವ ಮಹಿಳಾ ಅಧಿಕಾರಿಗಳಿಗೂ ಈ ಕಿರುಕುಳ ತಪ್ಪಿಲ್ಲ ಎಂದರೆ ಈ ಸಮಸ್ಯೆಯ ಆಳ ಅರಿವಾಗುತ್ತದೆ. ರಕ್ಷಕರೇ ಭಕ್ಷಕರಾಗ ಹೊರಟರೆ ರಕ್ಷಿಸುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ತಮಿಳುನಾಡಿನ ವಿಶೇಷ ಪೊಲೀಸ್ ಮಹಾ ನಿರ್ದೇಶಕರೊಬ್ಬರು (ಡಿಜಿಪಿ) ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರ ಅಧೀನದ ಮಹಿಳಾ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಈ ಹಿರಿಯ ಐಪಿಎಸ್ ಅಧಿಕಾರಿಯು ಮಹಿಳಾ ಅಧಿಕಾರಿಯು ದೂರು ದಾಖಲಿಸುವುದನ್ನು ತಡೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಆಕೆಯನ್ನು ಬೆದರಿಸಲು ಸರ್ಕಾರಿ ಯಂತ್ರವನ್ನೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅಧಿಕಾರಿಯ ದೂರಿನ ಮೇರೆಗೆ ಚೆನ್ನೈನಲ್ಲಿ ಎಫ್ಐಆರ್ ದಾಖಲಾಗಿದೆ. ಡಿಜಿಪಿ ಪದೇ ಪದೇ ತನ್ನ ಕಾಲುಗಳ ಮೇಲೆ ಬಿದ್ದು ತನ್ನ ಕಾರ್ಯಕ್ಕೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾಗಿ ಅಧಿಕಾರಿ ಆರೋಪಿಸಿದ್ದಾರೆ.

ಕಳೆದ ಮಾರ್ಚ್ 1 ರಂದು ಎಫ್ಐಆರ್ ದಾಖಲಿಸಲಾಗಿದ್ದು ಅದರಲ್ಲಿ, ವಿಶೇಷ ಡಿಜಿಪಿಯ ಜತೆ ಕಾರಿನಲ್ಲಿ ಹೋಗುತಿದ್ದಾಗ ಮಹಿಳಾ ಅಧಿಕಾರಿಯ ಕೈ ಹಿಡಿದು ಚುಂಬಿಸಿದ್ದಲ್ಲದೆ ಅವರನ್ನು ಹಾಡುವಂತೆ ಒತ್ತಾಯಿಸಿದರು ಎಂದು ಅಧಿಕಾರಿ ಆರೋಪಿಸಿದ್ದಾರೆ. ಎಫ್ಐಆರ್ ಪ್ರಕಾರ, ಕಳೆದ ಫೆಬ್ರವರಿ 21 ರಂದು ಮುಖ್ಯಮಂತ್ರಿ ಎಡಪಾಡಿ ಪಳನಿಸಾಮಿಯ ಭೇಟಿಯ ಅಂಗವಾಗಿ ಕರೂರು ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿ ಕರ್ತವ್ಯದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯ ಒಂದು ದಿನದ ನಂತರ ಚೆನ್ನೈನ ಪೊಲೀಸ್ ಮುಖ್ಯಸ್ಥರ ಬಳಿ ದೂರು ನೀಡಲಿದ್ದೇನೆಂದು ತಿಳಿದಾಗ ವಿಶೇಷ ಡಿಜಿಪಿ ಕ್ಷಮೆ ಕೋರಿದ್ದಾರೆ ಎಂದು ಎಫ್ಐಆರ್ನಲ್ಲಿ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ. ತಾವು ಕರೂರಿನಿಂದ ಚೆನ್ನೈಗೆ ಹಿಂತಿರುಗುವಾಗ ಪತಿಯು ಕರೆ ಮಾಡಿ ಯಾರೋ ಹಿರಿಯ ಅಧಿಕಾರಿ ತನ್ನ ಮಾವನೊಂದಿಗೆ ಕರೆ ಮಾಡಿ ಮಾತಾಡಿರುವುದಾಗಿಯೂ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅವರು ನನ್ನ ಕಾಲುಗಳ ಮೇಲೆ ಬಿದ್ದು ಕ್ಷಮೆಯಾಚಿಸಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು ಎಂದು ಹೇಳಿದ್ದಾರೆ. ಕರೆ ಸ್ವೀಕರಿಸಿದ ನನ್ನ ಮಾವನಿಗೆ ಅಸಹ್ಯವಾಯಿತು ಮತ್ತು ಫೋನ್ ಕರೆಯನ್ನು ಕಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಿರುಕುಳದ ಆರೋಪದ ಬಗ್ಗೆ ಮದ್ರಾಸ್ ಹೈಕೋರ್ಟ್ ಸು ಮೋಟು ಗಮನಿಸಿದ್ದು ಇದೀಗ ಈ ಪ್ರಕರಣವನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದೆ, ಪೋಲೀಸ್ ಅಪರಾಧ ವಿಭಾಗವು ಈ ಪ್ರಕರಣವನ್ನ ತನಿಖೆ ನಡೆಸುತ್ತಿದೆ. ಇಬ್ಬರು ಅಧಿಕಾರಿಗಳ ಹೆಸರನ್ನು ಪ್ರಕಟಿಸುವುದಕ್ಕೆ ನ್ಯಾಯಾಲಯವು ಮಾಧ್ಯಮಗಳಿಗೆ ನಿರ್ಬಂಧಿಸಿದೆ. ತಾನು ದೂರು ದಾಖಲಿಸುವುದನ್ನು ತಡೆಯಲು ಡಿಜಿಪಿ ಪ್ರಯತ್ನಿಸಿದರೆಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ. ಮಹಿಳಾ ಅಧಿಕಾರಿ ಎರಡು ದೂರುಗಳನ್ನು ಸಲ್ಲಿಸಿದ್ದರು, ಮೊದಲನೆಯ ದೂರು ಘಟನೆಯ ಬಗ್ಗೆ ಆಗಿದ್ದು ಎರಡನೆಯ ದೂರಿನಲ್ಲಿ ತಾವು ಚೆನ್ನೈನ ಪೋಲೀಸ್ ಪ್ರಧಾನ ಕಚೇರಿಗೆ ತೆರಳದಂತೆ ತಲುಪದಂತೆ ತಡೆದಿದ್ದರ ಬಗ್ಗೆ ವಿವರಿಸಲಾಗಿದೆ. ಅಲ್ಲದೆ ವಿಶೇಷ ಡಿಜಿಪಿಯು ತನ್ನ ಸಮಾನ ಶ್ರೇಣಿಯ ಮೂವರು ಐಪಿಎಸ್ ಅಧಿಕಾರಿಗಳ ಮೂಲಕ ತನ್ನ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ. ಡಿಜಿಪಿ ನನಗೆ ಸತತ ಕರೆ ಮಾಡುತ್ತಲೇ ಇದ್ದರು ಆದರೆ ನಾನು ಅವರ ಕರೆಗಳನ್ನು ತೆಗೆದುಕೊಳ್ಳಲಿಲ್ಲ. ಅವರು ನನಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾರೆ, ದಯವಿಟ್ಟು ನನಗೆ ಕರೆ ಮಾಡಿ ಎಂದು ಹೇಳಿರುವ ಕುರಿತು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.

ಎಫ್ ಐ ಆರ್ ಪ್ರಕಾರ ಆರೋಪಿ ವಿಶೇಷ ಡಿಜಿಪಿಯು ಸ್ಟ್ರೈಕಿಂಗ್ ಫೋರ್ಸ್ ನ ವಾಹನವನ್ನು ಸಂತ್ರಸ್ಥೆಯ ಅಧಿಕೃತ ಕಾರಿನ ಮುಂದೆ ನಿಲ್ಲಿಸಿ ತಾವು ಮುಂದುವರಿಸುವುದನ್ನು ತಡೆಯಲು ಪ್ರಯತ್ನಿಸಿದರು. ಪೋಲೀಸರು ನನ್ನ ಕಾರಿನ ಕೀಲಿಗಳನ್ನು ತೆಗೆದುಕೊಂಡರು ಮತ್ತು ನಾನು ಕಾರಿನೊಳಗೆ ಏಕಾಂಗಿಯಾಗಿ ಕುಳಿತಿದ್ದೆ, ನನ್ನ ಪ್ರಾಣಕ್ಕೆ ಬೆದರಿಕೆ ಇದೆ . ಅವರು ನನ್ನ ಕಾರನ್ನು ತಡೆಯಲು ವಿಶೇಷ ಡಿಜಿಪಿ ಸೂಚಿಸಿದ್ದಾರೆ ಎಂದು ಪೋಲೀಸರು ನನಗೆ ಹೇಳಿದರು. ನಾನು ಹೋಗಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದೆ ಆದರೆ ಅವರು ದಾರಿ ಬಿಡಲಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಅದಿಕಾರಿಯು ಡಿಜಿಪಿ ತನ್ನೊಂದಿಗೆ ಮಾತನಾಡಲು ಬಯಸಿದ್ದಾರೆ ಎಂದು ಹೇಳಿದರು ಎಂದು ಮಹಿಳೆ ಹೇಳಿದ್ದಾರೆ.

ಘಟನೆಯನ್ನು ತಾವು ಪೋಲೀಸ್ ಪ್ರಧಾನ ಕಚೇರಿಗೆ ವರದಿ ಮಾಡಲು ನಿರ್ಧರಿಸಿದೆ ಮತ್ತು ಅದನ್ನು ಅಧಿಕಾರಿಗೆ ತಿಳಿಸಿದೆ ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ. ಎಫ್ಐಆರ್ನಲ್ಲಿ, ಫೆಬ್ರವರಿ 21 ರಂದು ನಡೆದ ಮುಖ್ಯಮಂತ್ರಿಯವರ ಸಭೆಗಳಲ್ಲಿ ವಿಶೇಷ ಡಿಜಿಪಿ ತಮ್ಮ ಕಾರಿನಲ್ಲಿ ಅವರೊಂದಿಗೆ ಹೋಗಬೇಕೆಂದು ಹೇಳಿದ್ದಾಗಿ ಅಧಿಕಾರಿ ಆರೋಪಿಸಿದ್ದಾರೆ. ಕಾರಿನಲ್ಲಿ, ಹಿರಿಯ ಅಧಿಕಾರಿ ಅವರ ಕೈಯನ್ನು ಹಿಡಿದು ಸುಮಾರು 20 ನಿಮಿಷಗಳ ಕಾಲ ಹಾಡಲು ಪ್ರಾರಂಭಿಸಿದರು ಎಂದು ಎಫ್ಐಆರ್ ದಾಖಲಿಸಿದೆ. ನಂತರ ಅವರು ಕೈಯನ್ನು ಎತ್ತಿ ಚುಂಬಿಸಿದರು ಎಂದು ಆರೋಪಿಸಲಾಗಿದೆ. ತಾವು ಕೈಯನ್ನು ಹಿಂತೆಗೆದುಕೊಂಡು ಅವರ ವರ್ತನೆಯನ್ನು ಖಂಡಿಸಿದೆ. ಆದರೆ ಅವರು 5 ನಿಮಿಷಗಳ ನಂತರ ಪುನಃ ನನ್ನ ಕೈಯನ್ನು ಹಿಡಿದುಕೊಂಡರು ಎಂದು ಹೇಳಿದ್ದಾರೆ.

ಈ ಪ್ರಕರಣದ ಕುರಿತು ಚೆನ್ನೈ ನ್ಯಾಯಾಲಯವೇ ತನಿಖೆಯ ಮೇಲ್ವಿಚಾರಣೆ ನಡೆಸುತಿದ್ದು ಈ ಪ್ರಕರಣ ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಯೇ ಆರೋಪಿ ಸ್ಥಾನದಲ್ಲಿರುವುದರಿಂದ ಇಲಾಖೆಗೆ ಕಪ್ಪು ಚುಕ್ಕಿ ಆಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com