ಮತ್ತೆ ಎನ್‌ಆರ್‌ಸಿ- ಸಿಎಎ ಆರಂಭ: ಕೆಲವೇ ದಿನಗಳಲ್ಲಿ ಪ್ರಾಯೋಗಿಕ ಸಮೀಕ್ಷೆ ಆರಂಭ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫೆಬ್ರವರಿ 1ರ ತಮ್ಮ ಬಜೆಟ್ ಮಂಡನೆಯ ವೇಳೆ 2021-22ನೇ ಸಾಲಿನ ಬಜೆಟ್ ನಲ್ಲಿ ಜನಗಣತಿಗಾಗಿಯೇ ಬರೋಬ್ಬರಿ 3,768 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಇದೀಗ ಮತ್ತೆ ಎನ್ ಪಿಆರ್ ಮಾಹಿತಿ ಸಂಗ್ರಹ ಪ್ರಾಯೋಗಿಕ ಸಮೀಕ್ಷೆಗೆ ಸಿದ್ಧತೆ ನಡೆದಿದೆ.
ಮತ್ತೆ ಎನ್‌ಆರ್‌ಸಿ- ಸಿಎಎ ಆರಂಭ: ಕೆಲವೇ ದಿನಗಳಲ್ಲಿ ಪ್ರಾಯೋಗಿಕ ಸಮೀಕ್ಷೆ ಆರಂಭ!

ಕಳೆದ ವರ್ಷ ಕೋವಿಡ್ ವೈರಸ್ ದಾಳಿಯಿಂದಾಗಿ ಮುಂದೂಡಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ಕಾರ್ಯವನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಹಾಗಾಗಿ ಕೆಲ ಕಾಲ ತಣ್ಣಗಾಗಿದ್ದ ಸಿಎಎ-ಎನ್ ಆರ್ ಸಿ ವಿವಾದ ಮತ್ತೆ ಭುಗಿಲೇಳುವ ಹಂತದಲ್ಲಿದೆ.

ದೇಶದ ನಾಗರಿಕರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಬಿಜೆಪಿ ಸರ್ಕಾರದ ಕ್ರಮ ವಿರೋಧಿಸಿ ಕಳೆದ ವರ್ಷ ನಡೆದ ಸಿಎಎ-ಎನ್ ಆರ್ ಸಿ ವಿರೋಧಿ ಹೋರಾಟ ಕೂಡ ಮತ್ತೆ ಆರಂಭವಾಗುವ ಸಾಧ್ಯತೆಗಳಿದ್ದು, ಈಗಾಗಲೇ ಕಳೆದ ಮೂರು ತಿಂಗಳುಗಳಿಂದ ನಡೆಯುತ್ತಿರುವ ದೇಶವ್ಯಾಪಿ ರೈತ ಚಳವಳಿಯೊಂದಿಗೆ ಮತ್ತೊಂದು ವ್ಯಾಪಕ ಹೋರಾಟ ದೇಶಾದ್ಯಂತ ಪುನರಾರಂಭವಾಗಲಿದೆ ಎನ್ನಲಾಗುತ್ತಿದೆ.

ರಿಜಿಸ್ಟರ್ ಜನರಲ್ ಆಫ್ ಇಂಡಿಯಾ(ಆರ್ ಜಿಐ) ಮೊಬೈಲ್ ಆ್ಯಪ್ ಮೂಲಕ ಜನಗಣತಿಯೊಂದಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಪ್ರಾಯೋಗಿಕವಾಗಿ ದೇಶದ ಎಲ್ಲಾ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ನೋಂದಣಿ ಕಾರ್ಯಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ನೀಡಲಿದೆ. ಈಗಾಗಲೇ ಈ ಕಾರ್ಯಕ್ಕೆ ಬೇಕಾದ ಸಿಬ್ಬಂದಿ ಮತ್ತು ಸೌಕರ್ಯಗಳನ್ನು ಕ್ರೋಡೀಕರಿಸಿದ್ದು, ಯುವ ಶಿಕ್ಷಕರಿಗೆ ಆ್ಯಪ್ ಬಳಕೆಯ ಕುರಿತು ತರಬೇತಿಯನ್ನೂ ನೀಡಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬರಲಿರುವ ದಿನಗಳಲ್ಲಿ ನಡೆಯಲಿರುವ ನೈಜ ಎನ್ ಪಿಆರ್ ಮತ್ತು ಎನ್ ಆರ್ ಸಿ ಸಮೀಕ್ಷೆಯ ಪೂರ್ವತಯಾರಿಯಾಗಿ ಈ ಮೊದಲ ಹಂತದ ಪ್ರಾಯೋಗಿಕ ನೋಂದಣಿ ನಡೆಯುತ್ತಿದ್ದು, ತರಬೇತಾದ ಸಿಬ್ಬಂದಿ ನಿಗದಿತ ಆ್ಯಪ್ ಬಳಕೆಯಲ್ಲಿ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಅನುಭವ ಪಡೆಯಲು ಮತ್ತು ಆ್ಯಪ್ ಮತ್ತು ಇಡೀ ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ತಾಂತ್ರಿಕ ಮತ್ತು ಪ್ರಾಯೋಗಿಕ ತೊಡಕುಗಳನ್ನು ಅರಿತು ಸರಿಪಡಿಸಿಕೊಳ್ಳಲು ಈ ಹಂತದ ನೋಂದಣಿ ಮಾಡಲಾಗುತ್ತಿದೆ. ಈಗಾಗಲೇ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಈ ಸಂಬಂಧ ಸೂಚನೆ ನೀಡಿದೆ. ಆರ್ ಜಿಐ ಕೂಡ ರಾಜ್ಯಮಟ್ಟದ ನೋಂದಣಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಪ್ರಾಯೋಗಿಕ ನೋಂದಣಿಗೆ ಮಾಡಿಕೊಂಡಿರುವ ತಯಾರಿಗಳ ಪರಿಶೀಲನೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯ ಆಯ್ದ ಒಂದು ತಾಲೂಕಿನಲ್ಲಿ ಪ್ರಾಯೋಗಿಕ ನೋಂದಣಿ ನಡೆಯಲಿದ್ದು, ತಾಲೂಕಿನ ಸುಮಾರು 50-60 ಮನೆಗಳಲ್ಲಿ ಮಾತ್ರ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಮನೆ ಮನೆ ಸಮೀಕ್ಷೆ ನಡೆಸಿ ಜನಗಣತಿ ಮತ್ತು ಎನ್ ಪಿಆರ್ ಮಾಹಿತಿಯನ್ನೂ ಸಿಬ್ಬಂದಿಗಳು ಸಂಗ್ರಹಿಸಲಿದ್ದಾರೆ. ಕಳೆದ ವರ್ಷದ ಜನವರಿಯಲ್ಲಿ ಆರ್ ಜಿಐ ಹೊರಡಿಸಿದ ಅಧಿಸೂಚನೆಯ ಪ್ರಕಾರ ಎನ್ ಪಿಆರ್ ನೋಂದಣಿಗಾಗಿ ಸಮೀಕ್ಷಕರು ಪ್ರತಿ ಮನೆಗೆ ಸಂಬಂಧಿಸಿದಂತೆ ಒಟ್ಟು 31 ಮಾಹಿತಿಗಳನ್ನು ಸಂಗ್ರಹಿಸಿ ದಾಖಲಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಾರಿಯ ಪ್ರಾಯೋಗಿಕ ಸಮೀಕ್ಷೆಯಲ್ಲಿ ಸಂಗ್ರಹಿಸಲಿರುವ ಕರಾರುವಾಕ್ಕು ಮಾಹಿತಿಯ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಮಾಹಿತಿಯ ಬದಲಾಗಿ ಆ್ಯಪ್ ಮತ್ತು ಸಿಬ್ಬಂದಿ ಕಾರ್ಯಕ್ಷಮತೆಯನ್ನು ಅಂದಾಜಿಸುವ ಭಾಗವಾಗಿ ಈ ಪ್ರಾಯೋಗಿಕ ನೋಂದಣಿ ನಡೆಯುತ್ತಿರುವುದರಿಂದ ಮಾಹಿತಿಯ ಮತ್ತು ಕೋಷ್ಟಕದ ಕುರಿತು ಹೆಚ್ಚಿನ ಆದ್ಯತೆ ನೀಡಿಲ್ಲ ಎಂದು ‘ದ ಹಿಂದೂ’ ವರದಿ ಮಾಡಿದೆ.

ಕಳೆದ ವರ್ಷದ ಜನವರಿಯಲ್ಲಿ ಆರ್ ಜಿಐ ಹೊರಡಿಸಿದ್ದ ಅಧಿಸೂಚನೆಯಲ್ಲಿ, ಅಡುಗೆ ಅನಿಲ ಸಂಪರ್ಕ, ರೇಡಿಯೋ, ಟಿವಿ, ಕಂಪ್ಯೂಟರ್, ಲ್ಯಾಪ್ ಟಾಪ್, ಟೆಲಿಫೋನ್, ಮೊಬೈಲ್, ಸ್ಮಾರ್ಟ್ ಫೋನ್, ಇಂಟರ್ ನೆಟ್ ಸೇರಿದಂತೆ ಹಲವು ಮಾಹಿತಿಯನ್ನು ಜನಗಣತಿಯ ಭಾಗವಾಗಿ ಪಡೆಯಲಾಗುವುದು ಎಂದು ಹೇಳಲಾಗಿತ್ತು. ಹಾಗೇ ಕಳೆದ ವರ್ಷ 2019ರಲ್ಲಿ ನಡೆದ ಎನ್ ಪಿಆರ್ ಕುರಿತ ಪ್ರಾಯೋಗಿಕ ಮಾಹಿತಿ ಸಂಗ್ರಹ ಸಮೀಕ್ಷೆಯಲ್ಲಿ ವ್ಯಕ್ತಿಯ ಜನ್ಮ ದಿನಾಂಕ, ಜನ್ಮ ಸ್ಥಳ, ತಂದೆ ಮತ್ತು ತಾಯಿಯ ಜನ್ಮ ದಿನಾಂಕ ಮತ್ತು ಜನ್ಮಸ್ಥಳ, ಈ ಹಿಂದಿನ ಮತ್ತು ಹಾಲಿ ವಾಸ ಸ್ಥಳ, ಮಾತೃಭಾಷೆ, ಆಧಾರ್ ಸಂಖ್ಯೆ(ಐಚ್ಛಿಕ), ಮತದಾರರ ಗುರುತಿನ ಚೀಟಿ ಸಂಖ್ಯೆ, ಮೊಬೈಲ್ ಫೋನ್ ನಂಬರ್, ಡ್ರೈವಿಂಗ್ ಲೈಸೆನ್ಸ್ ನಂಬರ್ ಮತ್ತಿತರ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು.

ಆದರೆ, “ಈ ಬಾರಿ ವಾಸ್ತವವಾಗಿ ನೋಂದಣಿ ಸಮೀಕ್ಷೆ ಯಾವಾಗ ಆರಂಭವಾಗಲಿದೆ ಎಂಬುದರ ಕುರಿತು ಖಚಿತ ದಿನಾಂಕವನ್ನು ನಿಗದಿ ಮಾಡಿಲ್ಲ. ಆದರೂ ಸಮೀಕ್ಷೆದಾರರ ತರಬೇತಿ ಮತ್ತು ತಾಂತ್ರಿಕ ತೊಡಕುಗಳ ಪರಿಶೀಲನೆಗಾಗಿ ಪ್ರಾಯೋಗಿಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ಬಾರಿ ಮೊದಲ ಬಾರಿಗೆ ಕಾಗದರಹಿತವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಹಾಗಾಗಿ ಹೊಸ ತಲೆಮಾರಿನ ಯುವ ಶಿಕ್ಷಕರನ್ನೇ ಹೆಚ್ಚಾಗಿ ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದ್ದು, ಮೊಬೈಲ್ ಆ್ಯಪ್ ಬಳಕೆಯಲ್ಲಿ ಪರಿಣತಿ ಹೊಂದಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದಾರೆ. ಅವರಿಗೆ ಈ ನಿರ್ದಿಷ್ಟ ಆ್ಯಪ್ ಬಳಕೆಯ ಅನುಭವ ಮತ್ತು ತಾಂತ್ರಿಕ ತೊಡಕು ನಿವಾರಣೆಯ ಅಭ್ಯಾಸಕ್ಕೆ ಈ ಪ್ರಾಯೋಗಿಕ ಹಂತದ ಸಮೀಕ್ಷೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ “ ಎಂದು ಆರ್ ಜಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.

ಈ ಆ್ಯಪ್ ನಲ್ಲಿ ಜನಗಣತಿಯ ಮಾಮೂಲಿ ನೋಂದಣಿಯ ಜೊತೆಗೆ ಎನ್ ಪಿಆರ್ ಕುರಿತ ಮಾಹಿತಿ ಕೋಷ್ಟಕಗಳೂ ಇರಲಿದ್ದು, ಆ ಕುರಿತ ಮಾಹಿತಿಯನ್ನೂ ಸಂಗ್ರಹಿಸಿ ನೋಂದಾಯಿಸಲಾಗುವುದು ಎಂದೂ ಆ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಆರ್ ಜಿ ಐ ಮತ್ತು ಭಾರತೀಯ ಜನಗಣತಿ ಆಯುಕ್ತರೂ ಆದ ವಿವೇಕ್ ಜೋಷಿ, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನಗಣತಿ ನಿರ್ದೇಶಕರೊಂದಿಗೆ ಆನ್ ಲೈನ್ ಸಮಾಲೋಚನೆ ನಡೆಸಿದ್ದು, ಸಮೀಕ್ಷೆಯ ಪೂರ್ವತಯಾರಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಈ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫೆಬ್ರವರಿ 1ರ ತಮ್ಮ ಬಜೆಟ್ ಮಂಡನೆಯ ವೇಳೆ 2021-22ನೇ ಸಾಲಿನ ಬಜೆಟ್ ನಲ್ಲಿ ಜನಗಣತಿಗಾಗಿಯೇ ಬರೋಬ್ಬರಿ 3,768 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಇದೀಗ ಮತ್ತೆ ಎನ್ ಪಿಆರ್ ಮಾಹಿತಿ ಸಂಗ್ರಹ ಪ್ರಾಯೋಗಿಕ ಸಮೀಕ್ಷೆಗೆ ಸಿದ್ಧತೆ ನಡೆದಿದೆ.

2019ರಲ್ಲಿ ಈ ಹಿಂದಿನ 2003ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ ಆರ್ ಐಸಿ) ಅಥವಾ ಎನ್ ಆರ್ ಸಿ ನೋಂದಣಿಗೆ ಬಿಜೆಪಿ ಸರ್ಕಾರ ಮುಂದಾಗಿತ್ತು. ಜೊತೆಗೆ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ-2019ಕ್ಕೆ(ಸಿಎಎ) ಅನುಮೋದನೆ ನೀಡುವ ಮೂಲಕ ತರಾತುರಿಯಲ್ಲಿ ಸಿಎಎ-ಎನ್ ಆರ್ ಸಿ ನೋಂದಣಿಗೆ ದೇಶವ್ಯಾಪಿ ಚಾಲನೆ ನೀಡಕು ಸರ್ಕಾರ ಮುಂದಾಗಿತ್ತು. ಪಾಕಿಸ್ತಾನ, ಆಘ್ಫಾನಿಸ್ಥಾನ ಮತ್ತು ಬಾಂಗ್ಲಾದೇಶದ ಮುಸ್ಲಿಮರನ್ನು ಹೊರತುಪಡಿಸಿ ಉಳಿದ ನಾಗರಿಕರಿಗೆ ಮಾತ್ರ ಪೌರತ್ವ ನೀಡುವ ಹಾಗೂ ದೇಶದಲ್ಲಿ ನೆಲೆಸಿರುವ ಮುಸ್ಲಿಮರು ತಮ್ಮ ಮೂಲ ನೆಲೆಯ ಕುರಿತು ದಾಖಲೆಸಹಿತ ಮಾಹಿತಿ ನೀಡುವಂತೆ ಮಾಡುವ ಮೂಲಕ ಅವರ ಪೌರತ್ವದ ಬಗ್ಗೆ ಶಂಕೆ ಹುಟ್ಟಿಸುವಂತಹ ಕ್ರಮಗಳನ್ನು ಈ ತಿದ್ದುಪಡಿ ಕಾಯ್ದೆಗಳು ಮತ್ತು ಸರ್ಕಾರದ ಉದ್ದೇಶಿತ ಎನ್ ಆರ್ ಸಿ-ಸಿಎಎ ಒಳಗೊಂಡಿದೆ ಎಂಬ ಕಾರಣಕ್ಕೆ ದೇಶವ್ಯಾಪಿ ವ್ಯಾಪಕ ಹೋರಾಟ ಭುಗಿಲೆದ್ದಿತ್ತು.

ಹೋರಾಟನಿರತರ ಮೇಲೆ ಸರ್ಕಾರ ಪೊಲೀಸ್ ಮತ್ತು ಸೇನೆಯನ್ನು ಬಳಸಿ ನಡೆಸಿದ ದಮನ ಕ್ರಮಗಳಿಂದಾಗಿ ಸುಮಾರು 70ಕ್ಕೂ ಹೆಚ್ಚು ಮಂದಿ ಸಾವು ಕಂಡಿದ್ದರು, ಹಲವು ಮಂದಿ ಹೋರಾಟಗಾರರನ್ನು ಬಂಧಿಸಿ, ಅವರ ಮೇಲೆ ದೇಶದ್ರೋಹದಂತಹ ಗಂಭೀರ ಪ್ರಕರಣಗಳನ್ನು ಹೂಡಲಾಗಿತ್ತು. ಆ ಪೈಕಿ ಹಲವರು ಈಗಲೂ ವರ್ಷದ ಬಳಿಕವೂ ಜೈಲಿನಲ್ಲಿದ್ದಾರೆ. ಈ ನಡುವೆ, ಸಿಎಎ-ಎನ್ ಆರ್ ಸಿ ಹೋರಾಟಗಾರರು ದೆಹಲಿಯಲ್ಲಿ ನಡೆಸುತ್ತಿದ್ದ ನಿರಂತರ ಹೋರಾಟವನ್ನು ಹತ್ತಿಕ್ಕುವ ಯತ್ನವಾಗಿ ದೆಹಲಿ ಗಲಭೆಯಂತಹ ಹೇಯ ಕೃತ್ಯಗಳೂ ನಡೆದಿದ್ದವು ಮತ್ತು ಅಂತಹ ಕೃತ್ಯಗಳಿಗೆ ಆಡಳಿತರೂಢ ಬಿಜೆಪಿಯ ಸಚಿವರು, ಶಾಸಕರ ಕುಮ್ಮಕ್ಕು ಇರುವುದು ಕೂಡ ಜಗಜ್ಜಾಹೀರಾಗಿತ್ತು. ಜೊತೆಗೆ ಹೋರಾಟಗಾರರ ಮೇಲೆ ಮೂರ್ನಾಲ್ಕು ಬಾರಿ ಪೊಲೀಸರ ಕಣ್ಣೆದುರೇ ಗುಂಡಿನ ದಾಳಿಗಳೂ ನಡೆದಿದ್ದವು. ಅಂತಹ ದಾಳಿಕೋರರು ಕೆಲವು ತಿಂಗಳ ಬಳಿಕ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು ಕೂಡ!

ಆದರೆ, ಒಂದು ಕಡೆ ದೆಹಲಿ ಗಲಭೆ ಮತ್ತು ಮತ್ತೊಂದು ಕಡೆ ಕರೋನಾ ದಾಳಿಯ ಹಿನ್ನೆಲೆಯಲ್ಲಿ ಹೋರಾಟವನ್ನು ಕಳೆದ ವರ್ಷದ ಮಾರ್ಚ್ ಹೊತ್ತಿಗೆ ಸ್ಥಗಿತಗೊಳಿಸಲಾಗಿತ್ತು. ಅದೇ ವೇಳೆ ಆ ವರ್ಷದ ಏಪ್ರಿಲ್ ಹೊತ್ತಿಗೆ ಆರಂಭವಾಗಬೇಕಿದ್ದ ದೇಶವ್ಯಾಪಿ ಎನ್ ಆರ್ ಸಿ ಮತ್ತು ಸಿಎಎ ಜಾರಿ ಮತ್ತು ಜನಗಣತಿಯೊಂದಿಗೇ ಆರಂಭವಾಗಬೇಕಿದ್ದ ನೋಂದಣಿ ಕಾರ್ಯವನ್ನು ಕೂಡ ಕರೋನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com