ಏನು ಹೇಳುತ್ತೆ ಪಂಚರಾಜ್ಯ ಚುನಾವಣಾಪೂರ್ವ ಸಮೀಕ್ಷೆ? ಇಲ್ಲಿದೆ ವಿವರ

ಎಬಿಪಿ-ಸಿ-ವೋಟರ್ಸ್ ಸಂಸ್ಥೆ ನಡೆಸಿದ‌ ಚುನಾವಣಾ ಪೂರ್ವ ಸಮೀಕ್ಷೆಯ ಸಂಪೂರ್ಣ ವಿವರ ಇಲ್ಲಿದೆ.
ಏನು ಹೇಳುತ್ತೆ ಪಂಚರಾಜ್ಯ ಚುನಾವಣಾಪೂರ್ವ ಸಮೀಕ್ಷೆ? ಇಲ್ಲಿದೆ ವಿವರ

ದೇಶದಲ್ಲಿ ಪಂಚರಾಜ್ಯಗಳ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ, ಸಿ-ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆಯನ್ನು ಬಿಡುಗಡೆಗೊಳಿಸಿದೆ. ಈ ಸಮೀಕ್ಷೆಯ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನಡುವೆ ತೀವ್ರ ಹಣಾಹಣಿ ನಡೆಯಲಿದೆ.

ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಗೆಲ್ಲುವ ಪಕ್ಷಕ್ಕೆ ಅತೀ ಹೆಚ್ಚಿನ ಅಂತರವನ್ನು ನೀಡಿದೆ.

ಪಶ್ಚಿಮಬಂಗಾಳದ ಚುನಾವಣೆಯತ್ತ ಹೆಚ್ಚಿನ ಚಿತ್ತ

ದೇಶದ ಹಲವು ರಾಜ್ಯಗಳಲ್ಲಿ ತನ್ನ ಅಸ್ಥಿತ್ವವನ್ನು ಕಂಡುಕೊಂಡ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿಯೂ ಹೆಚ್ಚಿನ ಸ್ಥಾನ ಗೆಲುವ ಮೂಲಕ ಅಧಿಕಾರದ ಗದ್ದುಗೆಯೇರಲು ಹರಸಾಹಸ ಪಡುತ್ತಿದೆ. ಆದರೆ ಆಡಳಿತ ಪಕ್ಷದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮಾತ್ರ ರಾಜ್ಯದ ಆಡಳಿತ ಬಿಜೆಪಿ ಕೈಪಾಲಾಗಲು ಬಿಡುವುದಿಲ್ಲ ಎಂದು ಹಲವು ಚುನಾವಣಾ ರ್ಯಾಲಿಗಳಲ್ಲಿ ನೇರಾನೇರಾ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳ: ದೀದಿ ಸಾಮ್ರಾಜ್ಯದಲ್ಲಿ ಎಬಿಪಿ-ಸಿ-ವೋಟರ್‌‌ ಮತದಾರರ ಮನಸ್ಥಿತಿಯನ್ನು ಅಳೆಯಲು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದೆ. ಇದರಲ್ಲಿ ಟಿಎಂಸಿ ಪಕ್ಷದ ಮಮತಾ ಬ್ಯಾನರ್ಜಿ ಹ್ಯಾಟ್ರಿಕ್‌ ಜಯಗಳಿಸುವ ಸಾಧ್ಯತೆ ಹೆಚ್ಚಿದೆಯೆಂದು ಸಮಿಕ್ಷಾ ವರದಿ ತಿಳಿಸಿದೆ.

294 ವಿಧಾನಸಭಾ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) 148 ರಿಂದ 164 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ 92 ರಿಂದ 108 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ, ಕಾಂಗ್ರೆಸ್‌ ಮತ್ತು ಎಡಪಂಥೀಯ ಪಕ್ಷ ಹೀನಾಯ ಸೋಲನ್ನು ಅನುಭವಿಸುವ ಸಾಧ್ಯತೆಯಿದೆ. ಎಡ-ಕಾಂಗ್ರೆಸ್ ಮೈತ್ರಿಕೂಟವು ಕೇವಲ 31-39 ಸ್ಥಾನಗಳಿಗೆ ತೃಪ್ತಿ ಪಡಬೇಕಾದಿತು ಎಂದು ಸಮೀಕ್ಷೆ ಹೇಳುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪುದುಚೇರಿ : ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಇಲ್ಲಿ ಹಿಂದಿನ ಬಾರಿ ಸರ್ಕಾರ ರಚಿಸಿತ್ತು. ಆದರೆ, ಆ ನಂತರ ಕಾಂಗ್ರೆಸ್‌ನ ಹಿರಿಯ ನಾಯಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದರಿಂದ, ಈ ಬಾರಿ ಬಿಜೆಪಿಗೆ ವಿಜಯ ಮಾಲೆ ಲಭಿಸುವ ಸಾಧ್ಯತೆಗಳಿವೆ.

ಬಿಜೆಪಿ ಈ ಬಾರಿ 17-20 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್‌ಗೆ 12 ಸ್ಥಾನ ಮಾತ್ರ ಲಭಿಸುವ ಲಕ್ಷಣಗಳಿವೆ ಎಂದು ಸಮೀಕ್ಷೆಯ ಫಲಿತಾಂಶ ಹೇಳಿದೆ.

ಕೇರಳ : ಕೇರಳದ ರಾಜಕೀಯ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಒಂದು ಪಕ್ಷವು ಸತತ ಎರಡನೇ ಬಾರಿ ಅಧಿಕಾರದ ಗದ್ದುಗೆ ಏರುವ ಲಕ್ಷಣಗಳು ದಟ್ಟವಾಗಿ ಕಾಣುತ್ತಿವೆ. ಸಿಪಿಎಂ ನೇತೃತ್ವದ LDF ಈ ಬಾರಿ ಮತ್ತೆ ಜಯ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. LDFನ ಪ್ರಬಲ ಪ್ರತಿಸ್ಪರ್ಧಿಯಾಗಿರುವ UDF ಈ ಬಾರಿಯೂ ಪ್ರತಿಪಕ್ಷ ಸ್ಥಾನದಲ್ಲಿ ಕೂರಾಬೇಕಾಗಬಹುದು. UDF ಈ ಬಾರಿ 83-91 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ಸಿ-ವೋಟರ್‌ ಸಮೀಕ್ಷೆ ಹೇಳಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಸ್ಥಾನ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, ಈ ಬಾರಿ ಎರಡು ಸ್ಥಾನ ಪಡೆದು ತನ್ನ ಬಲ ವೃದ್ದಿಸಿಕೊಳ್ಳಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಅಸ್ಸಾಂ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರವು ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಒಟ್ಟು 126 ಸ್ಥಾನಗಳಲ್ಲಿ 68 ರಿಂದ 76 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ. ಇದರ ಒಟ್ಟು ಮತ ಪ್ರಮಾಣ ಶೇಕಡಾ 42 ರಷ್ಟು ಇರಬಹುದು ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್‌ ಮೈತ್ರಿಕೂಟವು 43 ರಿಂದ 51 ಸ್ಥಾನಗಳನ್ನು ಹಾಗು ಶೇಕಡಾ 31 ರಷ್ಟು ಮತಗಳನ್ನು ಪಡೆಯಬಹುದು ಮತ್ತು ಇತರರು 5 ರಿಂದ 10 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ತಮಿಳುನಾಡು : ಎಂ.ಕೆ.ಸ್ಟಾಲಿನ್ ನೇತೃತ್ವದ ದ್ರಾವೀಡ ಮುನ್ನೇತ್ರ ಕಳಗಂ (DMK) ಮತ್ತು ಕಾಂಗ್ರೆಸ್‌ ಮೈತ್ರಿಕೂಟವು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಸಿ - ವೋಟರ್ಸ್‌ ಅಭಿಪ್ರಾಯ ಸಂಗ್ರಹವು ಮುನ್ಸೂಚನೆ ನೀಡಿದೆ. 234 ಸ್ಥಾನಗಳಲ್ಲಿ ಡಿಎಂಕೆ ಪಕ್ಷ 154-162 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಆಲ್‌ ಇಂಡಿಯಾ ಅಣ್ಣಾ ದ್ರಾವೀಡ ಮುನ್ನೇತ್ರ ಕಳಗಂ (AIADMK) ಪಕ್ಷ 58 ರಿಂದ 66 ಸ್ಥಾನಗಳನ್ನು ಪಡೆದು ಪ್ರತಿಪಕ್ಷ ಸ್ಥಾನದಲ್ಲಿ ಕೂರಲಿದೆ. ಡಿಎಂಕೆ ಶೇಕಡಾ 41 ರಷ್ಟು ಮತ ಪಡೆದರೆ,( AIADMK)) ಶೇಕಡಾ 29 ರಷ್ಟು ಮತ ಪಡೆಯಲಿದೆ ಎಂದು ಎಬಿಪಿ ಸಿ- ವೋಟರ್ಸ್‌ ಸಮೀಕ್ಷೆಯಲ್ಲಿ ತಿಳಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com