ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸರ್ಕಾರ ಪತನಗೊಂಡಿದೆ. ಸದ್ಯ ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಹೇಗಾದರೂ ಪುದುಚೇರಿಯಲ್ಲಿ ಭದ್ರವಾಗಿ ಊರಲು ಹವಣಿಸುತ್ತಿರುವ ಬಿಜೆಪಿಗೆ ಇದು ಸುಸಂಧರ್ಭ. ಯಾಕೆಂದರೆ ಪುದುಚೇರಿಯನ್ನು ಭದ್ರಪಡಿಸಿಕೊಳ್ಳುವುದು, ತಮಿಳುನಾಡಿಗೆ ಬಿಜೆಪಿ ಪ್ರವೇಶಿಸಲು ರಹದಾರಿಯಾಗಬಹುದು ಎಂಬುದು ರಾಜಕೀಯ ತಜ್ಞರ ಅಂಬೋಣ. ಹಾಗಾಗಿ, ಈ ಅವಕಾಶವನ್ನು ಕೈ ಚೆಲ್ಲಲು ಬಿಜೆಪಿ ತಯಾರಿಲ್ಲ. ಇದು ಪ್ರಧಾನಿ ಮೋದಿ ಪುದುಚೇರಿಯಲ್ಲಿ ಗುರುವಾರ ಮಾಡಿದ ಭಾಷಣದಲ್ಲೂ ವ್ಯಕ್ತವಾಗುತ್ತದೆ.
ಪುದುಚೇರಿಯಲ್ಲಿ ಪೂರ್ಣಗೊಂಡ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಹಲವು ಯೋಜನೆಗಳಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಮೋದಿ ಕಾಂಗ್ರೆಸ, ರಾಹುಲ್ ಗಾಂಧಿ ವಿರುದ್ಧ ಸಾಕಷ್ಟು ತೀಕ್ಷ್ಣ ಟೀಕೆಗಳನ್ನು ಮಾಡಿದ್ದಾರೆ. ಜೊತೆಗೆ ಕೇಂದ್ರದ ಆರ್ಥಿಕ ನೆರವು ನೀಡುವುದಾಗಿಯೂ ಘೋಷಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೆರವು ನೀಡುವುದು ಎಂದು ಪ್ರಧಾನಿ ಘೋಷಿಸಿದ್ದು, ದೇಶದ ಅಭಿವೃದ್ಧಿಗೆ ಉತ್ತಮ ರಸ್ತೆ ಸೇರಿದಂತೆ ಸಂಪರ್ಕ ಜಾಲ ಅಗತ್ಯ. ಉತ್ತಮ ಸಂಪರ್ಕ ರಸ್ತೆಗಳ ನಿರ್ಮಾಣದಿಂದ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯೂ ಲಭಿಸುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 45ಎ ಪೈಕಿ ಸತ್ಯನಾಥಪುರಂ–ನಾಗಪಟ್ಟಿನಂ ನಡುವಿನ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗಲಿದೆ. ಪುದುಚೇರಿ ಅಗಾಧ ಮಾನವ ಸಂಪನ್ಮೂಲ ಹೊಂದಿದೆ. ಪ್ರವಾಸೋದ್ಯಮಕ್ಕೂ ಇಲ್ಲಿ ವಿಪುಲ ಅವಕಾಶಗಳಿವೆ. ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವುದರಿಂದ ಉದ್ಯಮಗಳು ಬೆಳೆಯುತ್ತವೆ. ಆ ಮೂಲಕ ಉದ್ಯೋಗಾವಕಾಶಗಳು ಹೆಚ್ಚಗಲಿವೆ ಎಂದು ಭಾಷಣ ಮಾಡಿದ್ದಾರೆ.
‘ದೇಶವನ್ನಾಗಳಿದ ಬ್ರಿಟಿಷರು ವಿಭಜಿಸಿ ಆಳುವ ನೀತಿ ಅನುಸರಿಸುತ್ತಿದ್ದರು. ಈಗಿನ ಕಾಂಗ್ರೆಸ್ ಜನರನ್ನು ವಿಭಜಿಸಿ, ಸುಳ್ಳು ಹೇಳಿ, ಆಡಳಿತ ನಡೆಸುವ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ನ ಕೆಲವು ಮುಖಂಡರು ಒಂದು ಪ್ರದೇಶದ ವಿರುದ್ಧ ಮತ್ತೊಂದು ಪ್ರದೇಶವನ್ನು, ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದಾರೆ.
ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ‘ಉತ್ತರ ಭಾರತದ ಬೇರೆ ರೀತಿಯ ರಾಜಕಾರಣವನ್ನು ಗಮನಿಸಿರುವ ನನಗೆ, ದಕ್ಷಿಣ ಭಾರತದಲ್ಲಿನ ರಾಜಕಾರಣ ಚೇತೋಹಾರಿ ಎನಿಸುತ್ತದೆ’ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ನೆನಪಿಸಬಹುದು.
ಅಲ್ಲಿಗೆ ನಿಲ್ಲಿಸದ ಮೋದಿ, ಮೀನುಗಾರಿಕೆಗೆ ಸಂಬಂಧಿಸಿ ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯವನ್ನು 2019ರಲ್ಲಿ ಎನ್ಡಿಎ ಸರ್ಕಾರ ರಚಿಸಿದೆ. ಅಲ್ಲಿಯವರೆಗೂ ಇಂಥ ಸಚಿವಾಲಯವೇ ಇರಲಿಲ್ಲ ಎಂದರೆ ಅಚ್ಚರಿ ಎನಿಸುತ್ತದೆ’ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಸ್ತುತ ಮೀನುಗಾರರೊಂದಿಗೆ ಸಮಯ ಕಳೆಯುತ್ತಿರುವ ರಾಹುಲ್ ಗಾಂಧಿ ಅವರ ವಿರುದ್ಧವೇ ಈ ಅಂಶವನ್ನು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
ಚುನಾವಣೆ ಹೊಸ್ತಿಲಲ್ಲಿರುವ ಪುದುಚೇರಿಯಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಏಕಕಾಲಕ್ಕೆ ಆಶ್ವಾಸನೆಗಳನ್ನೂ ಅದೇ ವೇಳೆ ರಾಜಕೀಯ ವಿರೋಧಿಗಳನ್ನು ಹಣಿಯುವ ಮೋದಿ ಉದ್ದೇಶ ಏನು ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಆದರೆ ಯಾವ ಆಶ್ವಾಸನೆ ನೀಡುವ ಮೊದಲು, ತಾನು ಈ ಮೊದಲು ನೀಡಿದ್ದ ಆಶ್ವಾಸನೆಗಳನ್ನು ಪ್ರಧಾನಿ ಮೋದಿಯವರು ಮರೆಯಕೂಡದು..