ಸುದ್ದಿ ಹಂಚಿಕೆ: ಜಾಲತಾಣ ಕಾಯ್ದೆ ತಿದ್ದುಪಡಿಗೆ ಆಸ್ಟ್ರೇಲಿಯಾ ಅನುಮೋದನೆ

ತನ್ನ ಜಾಲತಾಣದಲ್ಲಿ ಆಸ್ಟ್ರೇಲಿಯಾದ ಸುದ್ದಿಗಳು, ಸಾರ್ವಜನಿಕ ಮಾಹಿತಿಯನ್ನು ನಿರ್ಬಂಧಿಸಿದ ಫೇಸ್ ಬುಕ್, ಆ ದೇಶದ ಒಳಗೆ ಮಾತ್ರವಲ್ಲದೆ, ಹೊರಗೂ ತನ್ನ ವೇದಿಕೆಗಳಲ್ಲಿ ಅಲ್ಲಿನ ಯಾವುದೇ ಸುದ್ದಿ ಮತ್ತು ಮಾಹಿತಿ ಕಾಣಿಸದಂತೆ ನಿರ್ಬಂಧ ಹೇರುವ ಮೂಲಕ, ಜಾಲತಾಣಗಳು ಸದ್ಯ ವ್ಯವಸ್ಥೆಯ ಮೇಲೆ ಹೊಂದಿರುವ ಹಿಡಿತವನ್ನು ತೋರಿಸಿಕೊಟ್ಟಿತ್ತು.
ಸುದ್ದಿ ಹಂಚಿಕೆ: ಜಾಲತಾಣ ಕಾಯ್ದೆ ತಿದ್ದುಪಡಿಗೆ ಆಸ್ಟ್ರೇಲಿಯಾ ಅನುಮೋದನೆ

ತಮ್ಮ ಜಾಲತಾಣ ವೇದಿಕೆಯಲ್ಲಿ ಹಂಚಿಕೆಯಾಗುವ ಸುದ್ದಿಗಳಿಗೆ ಪ್ರತಿಯಾಗಿ ಫೇಸ್ ಬುಕ್ ಮತ್ತು ಗೂಗಲ್ ಸಂಸ್ಥೆಗಳು ಆಯಾ ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿ ಮಾಡಬೇಕು ಎಂಬ ಕುರಿತ ತನ್ನ ಹೊಸ ಕಾನೂನನ್ನು ಆಸ್ಟ್ರೇಲಿಯಾ ಸರ್ಕಾರ ಕೊನೆಗೂ ಅನುಮೋದಿಸಿದೆ.

ಆ ಮೂಲಕ ಈ ಹೊಸ ಕಾನೂನು ಕುರಿತು ಆಸ್ಟ್ರೇಲಿಯಾ ಸರ್ಕಾರ ಮತ್ತು ಫೇಸ್ ಬುಕ್ ಸಂಸ್ಥೆ ನಡುವೆ ಕೆಲವು ದಿನಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಅಂತ್ಯ ಹಾಡಲಾಗಿದ್ದು, ಆ ವಿವಾದದ ಹಿನ್ನೆಲೆಯಲ್ಲಿ ತನ್ನ ಜಾಲತಾಣ ವೇದಿಕೆಯಲ್ಲಿ ಸುದ್ದಿ ಹಂಚಿಕೆಗೆ ವಿಧಿಸಿದ್ದ ನಿರ್ಬಂಧವನ್ನು ತೆರವು ಮಾಡುವುದಾಗಿ ಫೇಸ್ ಬುಕ್ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸುದ್ದಿಗಳಿಗೆ ಪ್ರತಿಯಾಗಿ ಮಾಧ್ಯಮ ಸಂಸ್ಥೆಗಳಿಗೆ ಜಾಲತಾಣ ಸಂಸ್ಥೆಗಳು ಹಣ ಪಾವತಿಸುವ ಕಾಯ್ದೆಯಲ್ಲಿ ಮಾಧ್ಯಮ ಸಂಸ್ಥೆ ಮತ್ತು ಜಾಲತಾಣ ಸಂಸ್ಥೆಗಳ ನಡುವೆ ವ್ಯವಹಾರದಲ್ಲಿ ಸರ್ಕಾರದ ಪರ ಮಧ್ಯಸ್ಥಿಕೆದಾರರ ಪಾತ್ರದ ಕುರಿತು ಈ ಮೊದಲು ಫೇಸ್ ಬುಕ್ ಸಾಕಷ್ಟು ವಿರೋಧ ವ್ಯಕ್ತಪಡಿಸಿತ್ತು. ವಿವಾದಿತ ಕಾಯ್ದೆಯನ್ನು ಅಲ್ಲಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನುಮೋದಿಸಿದ ಹಿನ್ನೆಲೆಯಲ್ಲಿ ಫೇಸ್ ಬುಕ್, ತನ್ನ ಆಸ್ಟ್ರೇಲಿಯಾದ ಬಳಕೆದಾರರು ಜಾಲತಾಣದಲ್ಲಿ ಸುದ್ದಿಗಳನ್ನು ಹಂಚಿಕೊಳ್ಳುವುದು ಮತ್ತು ವೀಕ್ಷಿಸುವುದಕ್ಕೆ ನಿರ್ಬಂಧ ಹೇರಿತ್ತು. ಅದರಿಂದಾಗಿ ಅಲ್ಲಿನ ಆರೋಗ್ಯ, ತುರ್ತುಸೇವೆ, ಅಪಘಾತ ಮಾಹಿತಿಯಂತಹ ನಿರ್ಣಾಯಕ ವಿಷಯಗಳಲ್ಲಿ ಆಡಳಿತ ಮತ್ತು ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು.

ಆ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಜಾಲತಾಣ ಸಂಸ್ಥೆಗಳ ನಡುವಿನ ಮಾತುಕತೆಗಳ ಬಳಿಕ, ವಿವಾದಾಸ್ಪದ ಅಂಶಗಳನ್ನು ಕೈಬಿಟ್ಟು ಹೊಸ ತಿದ್ದುಪಡಿಯೊಂದಿಗೆ ಹೊಸ ಕಾಯ್ದೆ ಜಾರಿಗೆ ಅನುಮೋದನೆ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸಂಸತ್ತಿನ ಸೆನೆಟ್ ನಲ್ಲಿ ಅಂತಿಮ ಚರ್ಚೆ ನಡೆದು ಕಾಯ್ದೆ ಜಾರಿಗೆ ಅಂತಿಮ ಹಸಿರು ನಿಶಾನೆ ತೋರಲಾಗಿದೆ.

ಈಗಾಗಲೇ ಗೂಗಲ್ ಸಂಸ್ಥೆ, ತನ್ನ ವೇದಿಕೆಗಳಲ್ಲಿ ಸುದ್ದಿಗಳನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಹಲವು ಸ್ಥಳೀಯ ಮತ್ತು ರಾಷ್ಟ್ರೀಯ ಸುದ್ದಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದೀಗ ತನ್ನ ಅಪೇಕ್ಷಿತ ತಿದ್ದುಪಡಿಗಳನ್ನು ಒಪ್ಪಿ ಸರ್ಕಾರ, ಕಾಯ್ದೆಯನ್ನು ಹೊಸ ತಿದ್ದುಪಡಿಗಳೊಂದಿಗೆ ಜಾರಿಗೆ ತರಲು ಮುಂದಾಗಿರುವ ಹಿನ್ನೆಲೆಯಲ್ಲಿ ಫೇಸ್ ಬುಕ್ ಕೂಡ, ಮಾಧ್ಯಮ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ಸುದ್ದಿ ಹಂಚಿಕೆಗೆ ಸಂಬಂಧಿಸಿದಂತೆ ಹಣ ಪಾವತಿಯ ಒಪ್ಪಂದ ಮಾಡಿಕೊಳ್ಳುವುದಾಗಿ ಹೇಳಿದೆ.

ಅಸ್ಟ್ರೇಲಿಯಾ ಮಾಧ್ಯಮ ಮತ್ತು ಎರಡು ಜಾಲತಾಣ ದೈತ್ಯ ಸಂಸ್ಥೆಗಳ ನಡುವಿನ ವ್ಯಾವಹಾರಿಕ ಬಿಕ್ಕಟ್ಟಾಗಿ ಆರಂಭವಾದ ಈ ವಿದ್ಯಮಾನ, ಕ್ರಮೇಣ ಅಲ್ಲಿನ ಸರ್ಕಾರ ಮತ್ತು ಫೇಸ್ ಬುಕ್ ಸಂಸ್ಥೆ ನಡುವಿನ ಕಗ್ಗಂಟಾಗಿ ಬದಲಾಗಿತ್ತು. ಜೊತೆಗೆ, ಡಿಜಿಟಲ್ ಯುಗದಲ್ಲಿ ಜಾಲತಾಣಗಳು ಹೇಗೆ ಚುನಾಯಿತ ಸರ್ಕಾರ, ಆಡಳಿತ ಮತ್ತು ಮಾಧ್ಯಮಗಳ ಮೇಲೆಯೂ ಸವಾರಿ ಮಾಡಬಲ್ಲವು ಎಂಬುದಕ್ಕೂ ನಿದರ್ಶನವಾಗಿತ್ತು. ತನ್ನ ಜಾಲತಾಣದಲ್ಲಿ ಆಸ್ಟ್ರೇಲಿಯಾದ ಸುದ್ದಿಗಳು, ಸಾರ್ವಜನಿಕ ಮಾಹಿತಿಯನ್ನು ನಿರ್ಬಂಧಿಸಿದ ಫೇಸ್ ಬುಕ್, ಆ ದೇಶದ ಒಳಗೆ ಮಾತ್ರವಲ್ಲದೆ, ಹೊರಗೂ ತನ್ನ ವೇದಿಕೆಗಳಲ್ಲಿ ಅಲ್ಲಿನ ಯಾವುದೇ ಸುದ್ದಿ ಮತ್ತು ಮಾಹಿತಿ ಕಾಣಿಸದಂತೆ ನಿರ್ಬಂಧ ಹೇರುವ ಮೂಲಕ, ಜಾಲತಾಣಗಳು ಸದ್ಯ ವ್ಯವಸ್ಥೆಯ ಮೇಲೆ ಹೊಂದಿರುವ ಹಿಡಿತವನ್ನು ತೋರಿಸಿಕೊಟ್ಟಿತ್ತು. ಆ ಹಿನ್ನೆಲೆಯಲ್ಲಿ ಈ ವಿವಾದ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.

ಈಗಲೂ ಕೂಡ, ಅಂತಿಮವಾಗಿ ನೂತನ ಕಾಯ್ದೆಯಲ್ಲಿ ತನ್ನ ನಿರೀಕ್ಷಿತ ತಿದ್ದುಪಡಿಗಳನ್ನು ತರುವಲ್ಲಿ ಜಾಲತಾಣ ದೈತ್ಯ ಸಂಸ್ಥೆ ಯಶಸ್ವಿಯಾಗಿದೆ. ಆ ಮೂಲಕ ಸರ್ಕಾರ, ಮಾಧ್ಯಮ, ಆಡಳಿತ ವ್ಯವಸ್ಥೆಗಳನ್ನು ಕೂಡ ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಲ್ಲ ಪ್ರಭಾವಿ ಮಟ್ಟಕ್ಕೆ ಈ ಹೊತ್ತಿನ ಜಾಗತಿಕ ಜಾಲತಾಣ ಸಂಸ್ಥೆಗಳು ಬೆಳೆದು ನಿಂತಿವೆ ಎಂಬುದು ನಿರೂಪಿತವಾದಂತಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com