ಮತ್ತೊಂದು ಸ್ಪೋಟ ದುರಂತ: ಸರ್ಕಾರದ ಆದ್ಯತೆ ಜನರೇ? ದಂಧೆಕೋರರೆ?

ಜನ, ಜಾನುವಾರು, ವನ್ಯಜೀವಿ, ನದಿ, ಕಣಿವೆ, ಅಣೆಕಟ್ಟುಗಳ ರಕ್ಷಣೆ ಎಂಬುದು ಈಗಿನ ಆಡಳಿತಕ್ಕೆ ಆದ್ಯತೆಯಾಗಿ ಉಳಿದಿಲ್ಲ. ಸ್ಫೋಟಕದಂತಹ ಅಪಾಯಕಾರಿ ದಂಧೆಕೋರ ಸಮಾಜಘಾತುಕರ ರಕ್ಷಣೆಗೆ ಇಡೀ ವ್ಯವಸ್ಥೆ ನಿಂತಿದೆ ಎಂಬುದಕ್ಕೆ ಮತ್ತೆ ಮತ್ತೆ ಸಂಭವಿಸುತ್ತಿರುವ ಆಘಾತಕಾರಿ ಘಟನೆಗಳೇ ನಿದರ್ಶನ.
ಮತ್ತೊಂದು ಸ್ಪೋಟ ದುರಂತ: ಸರ್ಕಾರದ ಆದ್ಯತೆ ಜನರೇ? ದಂಧೆಕೋರರೆ?

ಮುಖ್ಯಮಂತ್ರಿ ಯಡಿಯೂರಪ್ಪ ತವರು ಶಿವಮೊಗ್ಗ ನಗರ ಹೊರವಲಯದಲ್ಲಿ, ಆರು ಮಂದಿಯನ್ನು ಬಲಿತೆಗೆದುಕೊಂಡು ಇಡೀ ಮಲೆನಾಡನ್ನೇ ಬೆಚ್ಚಿಬೀಳಿಸಿದ್ದ ಭೀಕರ ಸ್ಫೋಟ ಘಟನೆ ನಡೆದು ತಿಂಗಳು ತುಂಬುವ ಹೊತ್ತಿಗೆ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಸ್ಫೋಟ ಘಟನೆ ನಡೆದಿದ್ದು ಆರು ಸಜೀವ ದಹನವಾಗಿದ್ದಾರೆ.

ಅಕ್ರಮ ಗಣಿಗಾಗಿಕೆ ಮತ್ತು ಸ್ಫೋಟಕ ದಂಧೆಯ ಪ್ರತಿಫಲವಾಗಿರುವ ಈ ಎರಡೂ ಭಯೋತ್ಪಾದನಾ ಕೃತ್ಯಗಳ ಹಿಂದೆ ಬಿಜೆಪಿಯ ಪ್ರಭಾವಿಗಳ ನೆರಳಿದೆ ಮತ್ತು ಆ ಕಾರಣಕ್ಕೆ ಪ್ರಕರಣಗಳಲ್ಲಿ ನಿಜವಾದ ಅಪರಾಧಿಗಳನ್ನು ರಕ್ಷಿಸಿ ನಾಮಕಾವಸ್ಥೆಗೆ ಯಾರನ್ನೋ ಪ್ರರಕಣದಲ್ಲಿ ಸಿಲುಕಿಸುವ ಸಾಧ್ಯತೆಗಳು ನಿಚ್ಛಳವಾಗಿವೆ. ಏಕೆಂದರೆ, ಈಗಾಗಲೇ ಕಳೆದ ಜನವರಿ 21ರಂದು ಸಂಭವಿಸಿದ್ದ ಶಿವಮೊಗ್ಗದ ಹುಣಸೋಡು ಸ್ಫೋಟದ ವಿಷಯದಲ್ಲಿ ಸ್ವತಃ ಮುಖ್ಯಮಂತ್ರಿ, ಗಣಿ ಸಚಿವರು ಸೇರಿದಂತೆ ಬಿಜೆಪಿ ಸರ್ಕಾರ, ಹೇಗೆ ಅಸಲೀ ತಪ್ಪಿತಸ್ಥರನ್ನು ಪಾರು ಮಾಡಿ, ಇನ್ನಾರನ್ನೋ ಫಿಕ್ಸ್ ಮಾಡಿದೆ ಮತ್ತು ಆ ಮೂಲಕ ಇಡೀ ಪ್ರಕರಣವನ್ನು ಬಹುತೇಕ ಈಗಾಗಲೇ ಮುಚ್ಚಿ ಹಾಕಿದೆ ಎಂಬುದು ಗುಟ್ಟೇನಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ ಹೋಬಳಿಯ ಹಿರೇನಾಗವಲ್ಲಿಯ ಸೋಮವಾರ ಮಧ್ಯರಾತ್ರಿ ಅಕ್ರಮ ಕಲ್ಲುಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರು ಮಂದಿ ಸಾವು ಕಂಡಿದ್ದಾರೆ. ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡ ತೀವ್ರತೆ ಎಷ್ಟಿತ್ತೆಂದರೆ ಸುತ್ತಮುತ್ತಲ ಹತ್ತಾರು ಕಿ.ಮೀವರೆಗೆ ಭೂಮಿ ಕಂಪಿಸಿದೆ. ರಾತ್ರೋರಾತ್ರಿ ಜನ ಬೆಚ್ಚಿಬಿದ್ದು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಸದ್ಯಕ್ಕೆ ಆರು ಮಂದಿ ಸಾವು ಕಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿಯೂ, ಅಕ್ರಮ ಚಟುವಟಿಕೆಯಲ್ಲಿ ಸ್ಥಳೀಯ ಪೊಲೀಸ್ ಮತ್ತು ಇತರೆ ಇಲಾಖೆಯ ಪಾತ್ರವೂ ಇರುವ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಘಟನೆಯ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿ, ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು, ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, “ಘಟನೆಗೆ ನೇರವಾಗಿ ರಾಜ್ಯ ಸರ್ಕಾರವೇ ಕಾರಣ. ಶಿವಮೊಗ್ಗದ ಜಿಲೆಟಿನ್ ಸ್ಪೋಟ ನಡೆದು ತಿಂಗಳ ಅವಧಿಯಲ್ಲೇ ಮತ್ತೊಂದು ಸ್ಫೋಟ ಸಂಭವಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಗಣಿ ಅಕ್ರಮದಲ್ಲಿ ಬಿಜೆಪಿ ಮತ್ತು ಬಿಜೆಪಿಯ ಸರ್ಕಾರವೇ ನೇರ ಭಾಗಿಯಾಗಿದೆ ಎಂಬುದಕ್ಕೆ ಈ ಸರಣಿ ಸ್ಫೋಟಗಳೇ ನಿದರ್ಶನ. ಆ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರೇ ನೀವು ಯಾರನ್ನು ರಕ್ಷಿಸುತ್ತಿದ್ದೀರಿ? ಜನರನ್ನೇ? ಅಥವಾ ಭ್ರಷಟರನ್ನೇ? “ ಎಂದು ಪ್ರಶ್ನಿಸಿದ್ದಾರೆ.

ಸರಿಯಾಗಿ ಒಂದು ತಿಂಗಳ ಹಿಂದೆ ಶಿವಮೊಗ್ಗ ನಗರದ ಅಂಚಿನಲ್ಲಿ ಸಂಭವಿಸಿದ್ದ ಸ್ಫೋಟದ ವೇಳೆಯೂ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷಗಳಿಂದ ಇಂತಹದ್ದೇ ಹೇಳಿಕೆಗಳು, ಖಂಡನೆ, ಸಂತಾಪ, ಆಗ್ರಹ, ಭರವಸೆಗಳ ಮಹಾಪೂರವೇ ಬಂದಿತ್ತು. ಆದರೆ, ಆ ಎಲ್ಲದರ ಹೊರತಾಗಿಯೂ ಒಂದು ತಿಂಗಳಲ್ಲಿ ನಗರವನ್ನೇ ಸ್ಮಶಾನ ಮಾಡಬಹುದಾಗಿದ್ದ ಭೀಕರ ಘಟನೆಯ ಕುರಿತ ತನಿಖೆ ಎಲ್ಲಿವರೆಗೆ ಬಂದಿದೆ ಎಂಬುದನ್ನು ನೋಡಿದರೆ ಈ ನಾಯಕರ ಕಾಳಜಿಯ ಅಸಲೀತನ ಬಯಲಾಗದೇ ಇರದು. ಜನಸಾಮಾನ್ಯರ ಹತ್ತಾರು ವರ್ಷಗಳ ಹೋರಾಟದ ಹೊರತಾಗಿಯೂ, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಜಿಲ್ಲಾ ಪೊಲೀಸ್, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಇಲಾಖೆ, ಅರಣ್ಯ ಇಲಾಖೆ ಮತ್ತು ನಗರಪಾಲಿಕೆಯ ಅಧಿಕಾರಿಗಳ ಪರೋಕ್ಷ ಸಹಕಾರ ಇತ್ತು.

ಅಧಿಕಾರಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ, ಕ್ರಷರ್ ಮತ್ತು ಸ್ಫೋಟಕ ಚಟುವಟಿಕೆ ನಗರದ ಜನರಷ್ಟೇ ಅಲ್ಲದೆ, ಸಮೀಪದ ಬೃಹತ್ ಜಲಾಶಯಗಳು, ಅಭಯಾರಣ್ಯದ ವನ್ಯಜೀವಿಗಳಿಗೂ ಅಪಾಯ ತಂದಿತ್ತು. ಆ ಬಗ್ಗೆ ಲೋಕಾಯುಕ್ತದ ವರೆಗೂ ದೂರು ಸಲ್ಲಿಕೆಯಾಗಿದ್ದವು. ಆದರೂ, ನಿರಾತಂಕವಾಗಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಸೇರಿದಂತೆ ಪ್ರಭಾವಿ ಬಿಜೆಪಿ ನಾಯಕರ ನೇರ ಬೆಂಬಲವಿತ್ತು. ಅಧಿಕಾರಿಗಳನ್ನು ದಂಧೆಕೋರರೊಂದಿಗೆ ಕೈಜೋಡಿಸುವಂತೆ ಸ್ವತಃ ಸಚಿವರೇ ಅಧಿಕೃತ ಸರ್ಕಾರಿ ಸಭೆಗಳಲ್ಲೇ ತಾಕೀತು ಮಾಡಿದ್ದರು ಕೂಡ! ಜೊತೆಗೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಎಸ್. ದತ್ತಾತ್ತಿ ಎಂಬವರೇ ಜಿಲ್ಲಾ ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದ ಮುಖ್ಯಸ್ಥರಾಗಿದ್ದರು ಮತ್ತು ಹಾಲಿ ಸಂಘದ ರಾಜ್ಯ ಗೌರವಾಧ್ಯಕ್ಷರಾಗಿಯೂ ಅವರೇ ಇದ್ದಾರೆ. ಅದೇ ನಾಯಕರನ್ನು ಬದಿಗಿಟ್ಟುಕೊಂಡೇ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗಣಿ ಸಚಿವ ಮುರುಗೇಶ್ ನಿರಾಣಿ, ಸ್ಫೋಟ ಸ್ಥಳದ ಪರಿಶೀಲನೆ ನಡೆಸುವ ಮಟ್ಟಿಗೆ ಬಿಜೆಪಿ ಸರ್ಕಾರ ಮತ್ತು ಅಕ್ರಮ ಮಾಫಿಯಾದ ನಡುವೆ ಬಿಡಿಸಲಾಗದ ನಂಟಿದೆ!

ಚಿಕ್ಕಬಳ್ಳಾಪುರ ಸ್ಫೋಟದಲ್ಲಿ ಕೂಡ ಬಿಜೆಪಿಯ ನೆರಳಿದ್ದು, ಅಕ್ರಮ ಧಂಧೆಯಲ್ಲಿ ತೊಡಗಿರುವ ವ್ಯಕ್ತಿಯೊಬ್ಬರ ಸ್ಥಳೀಯ ಬಿಜೆಪಿ ಪ್ರಭಾವಿ ನಾಯಕ ಎಂದು ವರದಿಗಳು ಹೇಳಿವೆ. ಹಾಗಾಗಿ, ಶಿವಮೊಗ್ಗ ಸ್ಫೋಟ ಘಟನೆಯಲ್ಲಿ ಘಟನೆಯ ಬೆನ್ನಲ್ಲೇ ಹಾಕಲಾದ ಎಫ್ ಐಆರ್ ನಿಂದ ಆರಂಭಿಸಿ ಜನರ ಕಣ್ಣೊರೆಸುವ ನಾಮಕಾವಸ್ಥೆಯ ಪೊಲೀಸ್ ತನಿಖೆಯವರೆಗೆ ಮತ್ತು ಭೀಕರ ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಹೆಜ್ಜೆಹೆಜ್ಜೆಗೂ ಲೋಪ ಎಸಗಿರುವ ಜಿಲ್ಲಾಡಳಿತದ ವಿರುದ್ಧಾವಾಗಲೀ, ಯಾವುದೇ ಚಪರಾಸಿ ಸಿಬ್ಬಂದಿಯ ವಿರುದ್ಧವಾಗಲೀ ಯಾವುದೇ ಕ್ರಮಕೈಗೊಳ್ಳದ ಸಿಎಂ ಯಡಿಯೂರಪ್ಪ ಅವರ ಸರ್ಕಾರದ ಅಕ್ರಮ ಮುಚ್ಚಿ ಹಾಕುವ ಪ್ರಯತ್ನಗಳವರೆಗೆ ಎಲ್ಲಾ ಹಂತದಲ್ಲೂ ಇಡೀ ವ್ಯವಸ್ಥೆ ಸಮಾಜಘಾತಕ, ಭಯೋತ್ಪಾದಕ ಶಕ್ತಿಗಳ ಪರವಿದೆ ಎಂಬುದು ಸಾಬೀತಾಗಿದೆ. ಆ ಹಿನ್ನೆಲೆಯಲ್ಲೇ ಮಾಜಿ ಶಿಕ್ಷಣ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರು, ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಘಟನೆಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ, ಶಿವಮೊಗ್ಗ ಸ್ಫೋಟ ಸ್ಥಳಕ್ಕೆ ತಿಂಗಳ ಬಳಿಕವೂ ಮಾಧ್ಯದವನ್ನು ನಿರ್ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮವೇ ಪ್ರಕರಣವನ್ನು ಮುಚ್ಚಿಹಾಕಲು ಇಡೀ ಸರ್ಕಾರವೇ ಟೊಂಕ ಕಟ್ಟಿ ನಿಂತಿದೆ ಎಂಬುದನ್ನು ಸಾರಿ ಹೇಳುತ್ತಿರುವಾಗ, ಮತ್ತು ವಾಸ್ತವವಾಗಿ ಅರ್ಧ ಕರ್ನಾಟಕಕ್ಕೆ ಸ್ಫೋಟಕ ಸರಬರಾಜು ಕೇಂದ್ರವಾಗಿದ್ದ ಹುಣಸೋಡು ಸ್ಫೋಟದ ಕ್ವಾರಿಯನ್ನು ಭಾರೀ ದಾಸ್ತಾನು ಮಳಿಗೆಯಂತೆ ಬಳಸಿಕೊಳ್ಳಲಾಗಿತ್ತು ಎಂಬುದು ಹೊರ ಜಗತ್ತಿಗೆ ಗೊತ್ತಾಗದಂತೆ ನೋಡಿಕೊಳ್ಳಲು ಸರ್ಕಾರವೇ ಶತಾಯಗತಾಯ ಪ್ರಯತ್ನಿಸುತ್ತಿರುವಾಗ, ಅಕ್ರಮ ಸ್ಫೋಟಕ ದಂದೆಯ ಕಿಂಗ್ ಪಿನ್ ಗೆ ಪಕ್ಷದ ಆಶ್ರಯ ಕೊಟ್ಟು ಪಂಚಾಯ್ತಿ ಅಧ್ಯಕ್ಷನನ್ನಾಗಿ ಮಾಡಿ ಸತ್ಕರಿಸುತ್ತಿರುವಾಗ, ಬಿಜೆಪಿ ಶಾಸಕರ ಬಲಗೈ ಬಂಟನೇ ಇಡೀ ಪ್ರಕರಣದ ಸೂತ್ರಧಾರನಾಗಿದ್ದರೂ ಆತನನ್ನು ವಿಚಾರಣೆಗೆ ಕರೆತಂದ ಎರಡೇ ದಿನದಲ್ಲಿ ಶಿವಮೊಗ್ಗ ಪೊಲೀಸರು ಆತನನ್ನು ಸಕಲ ಗೌರವಾದರದೊಂದಿಗೆ ಸದ್ದಿಲ್ಲದೆ ಮನೆಗೆ ಕಳಿಸಿರುವಾಗ.,.. ಯಾವ ತನಿಖೆಯಿಂದ ನ್ಯಾಯ ಸಿಗಲಿದೆ ಎಂಬುದು ಜನಸಾಮಾನ್ಯರ ಪ್ರಶ್ನೆ.

ಹಾಗೇ ಸಿದ್ದರಾಮಯ್ಯ ಕೇಳಿದಂತೆ, ಬಿಜೆಪಿ ಮತ್ತು ಅದರ ಸರ್ಕಾರಕ್ಕೆ ರಾಜ್ಯದ ಜನರ ಜೀವಕ್ಕಿಂತ ಪಕ್ಷದಲ್ಲೇ ಪ್ರಭಾವಿಗಳಾಗಿರುವ ದಂಧೆಕೋರರ ರಕ್ಷಣೆಯೇ ಮುಖ್ಯವಾಗಿದೆ. ಪಕ್ಷದ ಪ್ರಭಾವಿ ನಾಯಕರ ಹಿಂಬಾಲಕರೇ ರಾಜ್ಯದಲ್ಲಿ ಸ್ಫೋಟಕ ಮತ್ತು ಅಕ್ರಮ ಕ್ರಷರ್, ಕ್ವಾರಿ ದಂಧೆಯಲ್ಲಿ ಭಾಗಿಯಾಗಿರುವುದರಿಂದ ಮತ್ತು ಪರೋಕ್ಷವಾಗಿ ಬಿಜೆಪಿಯ ಪ್ರಭಾವಿ ಸಚಿವರೇ ದಂಧೆಯನ್ನು ನಿಯಂತ್ರಿಸುತ್ತಿರುವುದರಿಂದ ಯಾವ ತನಿಖೆ ನಡೆದರೂ ಸತ್ಯ ಹೊರಬರುವುದಿಲ್ಲ. ಬದಲಾಗಿ ಶಿವಮೊಗ್ಗ ಘಟನೆಯಲ್ಲಿ ಆದಂತೆ ನಿಜವಾದ ದಂಧೆಕೋರರಿಗೆ ರಕ್ಷಣೆ ನೀಡುವ ಉದ್ದೇಶದಿಂದ ತನಿಖೆ ಎಂಬ ಕಣ್ಣೊರೆಸುವ ತಂತ್ರ ಹೆಣೆಯಲಾಗುತ್ತದೆ ಎಂಬುದು ಅಷ್ಟೇ ನಿಜ.

ಹಾಗಾಗಿ, ಶಿವಮೊಗ್ಗ, ಚಿಕ್ಕಬಳ್ಳಾಪುರ,… ಹೀಗೆ ಸರಣಿ ಮುಂದುವರಿಯಲಿದೆ. ಜನ, ಜಾನುವಾರು, ವನ್ಯಜೀವಿ, ನದಿ, ಕಣಿವೆ, ಅಣೆಕಟ್ಟುಗಳ ರಕ್ಷಣೆ ಎಂಬುದು ಈಗಿನ ಆಡಳಿತಕ್ಕೆ ಆದ್ಯತೆಯಾಗಿ ಉಳಿದಿಲ್ಲ. ಸ್ಫೋಟಕದಂತಹ ಅಪಾಯಕಾರಿ ದಂಧೆಕೋರ ಸಮಾಜಘಾತುಕರ ರಕ್ಷಣೆಗೆ ಇಡೀ ವ್ಯವಸ್ಥೆ ನಿಂತಿದೆ ಎಂಬುದಕ್ಕೆ ಮತ್ತೆ ಮತ್ತೆ ಸಂಭವಿಸುತ್ತಿರುವ ಆಘಾತಕಾರಿ ಘಟನೆಗಳೇ ನಿದರ್ಶನ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com