ವಿ. ನಾರಾಯಣಸ್ವಾಮಿ ನೇತೃತ್ವದ ಪುದುಚೇರಿ ಕಾಂಗ್ರೆಸ್-ಡಿಎಂಕೆ ಸರ್ಕಾರ ಪತನಗೊಂಡಿದೆ. ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿಯೇ ಕಾಂಗ್ರೆಸ್–ಡಿಎಂಕೆ ಮೈತ್ರಿಕೂಟದ ಇಬ್ಬರು ಶಾಸಕರು ಭಾನುವಾರ ರಾಜೀನಾಮೆ ನೀಡಿರುವುದರಿಂದ ಬಹುಮತ ಸಾಬೀತುಪಡಿಸಲು ಸರ್ಕಾರ ವಿಫಲಗೊಂಡಿದೆ.
ಕಾಂಗ್ರೆಸ್ನ ಕೆ. ಲಕ್ಷ್ಮೀನಾರಾಯಣನ್ ಮತ್ತು ಡಿಎಂಕೆಗೆ ಸೇರಿದ ವೆಂಕಟೇಶನ್ ರಾಜೀನಾಮೆ ನೀಡಿರುವ ಶಾಸಕರು. ಇಬ್ಬರ ರಾಜೀನಾಮೆಯಿಂದಾಗಿ, ಆಡಳಿತಾರೂಢ ಕಾಂಗ್ರೆಸ್–ಡಿಎಂಕೆ ಮೈತ್ರಿಕೂಟದ ಶಾಸಕರ ಬಲ 12ಕ್ಕೆ ಕುಸಿದಿದ್ದು, ಅದರಲ್ಲಿ ಒಬ್ಬರು ಪಕ್ಷೇತರ ಶಾಸಕರು.
ಮೂವರು ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 33 ಮಂದಿ ಬಲಾಬಲದ ವಿಧಾನಸಭೆಯಲ್ಲಿ, ಆರು ಮಂದಿಯ ರಾಜೀನಾಮೆಯಿಂದಾಗಿ ಹಾಗೂ ಓರ್ವ ಶಾಸಕರ ಅನರ್ಹತೆಯಿಂದಾಗಿ ಸಂಖ್ಯಾಬಲ 26 ಕ್ಕೆ ಕುಸಿದಿತ್ತು, ಬಹುಮತ ಸಾಬೀತು ಪಡಿಸಲು 14 ಸಂಖ್ಯಾಬಲ ಬೇಕಿದ್ದು, ಕಾಂಗ್ರೆಸ್ ಅಲ್ಪಮತ ಹೊಂದಿದೆ.
ಬಹುಮತ ಸಾಬೀತುಪಡಿಸಲು ವಿಫಲರಾದ್ದರಿಂದ ವಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಆದರೆ, ವಿರೋಧ ಪಕ್ಷ 14 ಶಾಸಕರನ್ನು ಹೊಂದಿದೆ. ಏಳು ಸ್ಥಾನಗಳು ಖಾಲಿ ಉಳಿದಿವೆ. ಮಾಜಿ ಸಚಿವರಾದ ಎ.ನಮಶಿವಾಯಂ ಮತ್ತು ಮಲ್ಲಾಡಿ ಕೃಷ್ಣರಾವ್ ಸೇರಿದಂತೆ ನಾಲ್ವರು ಕಾಂಗ್ರೆಸ್ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನಮಶಿವಯಂ ಈಗಾಗಲೇ ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಶಾಸಕರನ್ನು ಈ ಮೊದಲೇ ಅನರ್ಹಗೊಳಿಸಲಾಗಿತ್ತು.