ಶ್ರೀನಗರದ ಬಾರ್ಜುಲ್ಲಾ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆಗೀಡಾದ ಇಬ್ಬರು ಪೊಲೀಸರ ಕುಟುಂಬಸ್ಥರನ್ನು ಭೇಟಿಯಾದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕಣಿವೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವನ್ನು ಉಲ್ಲೇಖಿಸಿ ಸ್ಥಳೀಯ ಜನರೊಂದಿಗೆ ಅಥವಾ ಪಾಕಿಸ್ತಾನದೊಂದಿಗೆ ಸಂವಾದವನ್ನು ಪ್ರಾರಂಭಿಸಲು ಕೇಂದ್ರಕ್ಕೆ ಕರೆ ನೀಡಿದ್ದಾರೆ.
ಯುದ್ಧ ಅಥವಾ ಬಂದೂಕು ಎರಡೂ ಪರಿಹಾರವಲ್ಲ, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಕೇಂದ್ರವು ಕೇಂದ್ರಾಡಳಿತ ಪ್ರದೇಶದ ಜನರನ್ನು ಕೂಡ ಮಾತುಕತೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ವರ್ಷಗಳಿಂದ ಹಲವರು ಪ್ರಾಣ ಕಳೆದುಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. 'ಕೇಂದ್ರ ಸರ್ಕಾರವು ಇದರ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಅತ್ಯಂತ ದುರದೃಷ್ಟಕರ' ಎಂದು ಹೇಳಿದ್ದಾರೆ.
ಭಾರತಕ್ಕೆ ಚೀನಾದೊಂದಿಗೆ ಮಾತನಾಡಲು ಸಾಧ್ಯವಾದರೆ, ಪಾಕಿಸ್ತಾನದೊಂದಿಗೂ ಮಾತುಕತೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಚೀನಾ ನಮ್ಮ ಪ್ರದೇಶಕ್ಕೆ ಪ್ರವೇಶಿಸಿ ನಮ್ಮ 20ಕ್ಕೂ ಹೆಚ್ಚು ಸೈನಿಕರನ್ನು (ಸೇನಾ ಸಿಬ್ಬಂದಿ) ಕೊಂದಿತು. ಆದರೆ, ಅದರ ಹೊರತಾಗಿಯೂ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿರುವುದು ಒಳ್ಳೆಯದು. ಅವರೊಂದಿಗೆ ಸುಮಾರು ಹತ್ತಕ್ಕೂ ಹೆಚ್ಚು ಬಾರಿ ಮಾತುಕತೆ ನಡೆಸಲಾಗಿದೆ. ಹಾಗಾದರೆ ಪಾಕಿಸ್ತಾನದೊಂದಿಗೂ ಮಾತುಕತೆ ನಡೆಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಿನ 'ಯುದ್ಧಭೂಮಿ'ಯಾಗಿ ಮಾರ್ಪಟ್ಟಿದೆ ಮತ್ತು ಪೊಲೀಸರು, ಸಾಮಾನ್ಯ ಜನರು ಮತ್ತು ಭದ್ರತಾ ಸಿಬ್ಬಂದಿ ಎರಡೂ ಕಡೆಗಳಲ್ಲೂ ಕೊಲ್ಲಲ್ಪಡುತ್ತಿದ್ದಾರೆ. ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಬಂದೂಕಿನ ಮೂಲಕ ಯಾವುದೇ ಸಮಸ್ಯೆಯನ್ನು ಬಗೆಹರಿಸಲಾಗುವುದಿಲ್ಲ. ಅದು ಉಗ್ರರು ಅಥವಾ ಭದ್ರತಾ ಪಡೆಗಳದ್ದಾಗಿರೂ ಅಷ್ಟೆ. ಆದ್ದರಿಂದ, ಜಗತ್ತಿನಾದ್ಯಂತ ಮಾತುಕತೆಯ ಮೂಲಕವೇ ಯಾವುದೇ ಸಮಸ್ಯೆಯನ್ನು ಬಗೆಹರಿಸಿದಂತೆ, ಪಾಕಿಸ್ತಾನದೊಂದಿಗೂ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಮಾತುಕತೆ ನಡೆಸುವ ಅವಶ್ಯಕತೆಯಿದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಜನರು ಹತ್ಯೆಯಾಗುತ್ತಿರುವ ಬಗ್ಗೆ ಕೇಂದ್ರವು ಚಿಂತಿಸುತ್ತಿಲ್ಲ' ಎಂದು ಹೇಳಿದ ಅವರು, ಈ ಬಗ್ಗೆ ಅವರು ಕಾಳಜಿ ವಹಿಸುವುದಿಲ್ಲ ಮತ್ತು ಸತ್ತರೆ ಸಾಯಲಿ ಎನ್ನುವ ಧೋರಣೆ ಅನುಸರಿಸುತ್ತಿದ್ದಾರೆ. ಯಾವಾಗೆಲ್ಲ ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಮಾತುಕತೆ ನಡೆದಿದೆಯೋ ಅಥವಾ 2003-04ರಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಉಪ ಪ್ರಧಾನಿಯಾಗಿದ್ದಾಗ, ಮಾಜಿ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಮಾತುಕತೆ ನಡೆಸಿದಾಗಲೆಲ್ಲ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವು ಗಮನಾರ್ಹವಾಗಿ ಕಡಿಮೆಯಾಗಿದೆ, ಭಯೋತ್ಪಾದನೆಯು ಕಡಿಮೆಯಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.