ಭಾರತದ ರೈತರ ಹೋರಾಟಕ್ಕೆ ಮತ್ತಷ್ಟು ಬಲ: ಅಮೇರಿಕಾದ 87 ರೈತ ಸಂಘಗಳಿಂದ ಬೆಂಬಲ

ರೈತರ ಗಮನಕ್ಕೆ ತರದೆ ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸದೆ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬುವುದು ಭಾರತದ ರೈತರ ಬೇಡಿಕೆಯಾಗಿದೆ. ತಮ್ಮ ಹಕ್ಕು ಮತ್ತು ಘನತೆಗಾಗಿ ಹೋರಾಡುತ್ತಿರುವ ಅಸಂಖ್ಯಾತ ರೈತರಿಗೆ ಬೆಂಬಲ ಸೂಚಿಸಿ, ನಮ್ಮ ಒಗ್ಗಟ್ಟಿನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆಂದು ಅಮೇರಿಕಾ ರೈತ ಸಂಘಟನೆಗಳು ಪತ್ರದಲ್ಲಿ ಉಲ್ಲೇಖಿಸಿವೆ.
ಭಾರತದ ರೈತರ ಹೋರಾಟಕ್ಕೆ ಮತ್ತಷ್ಟು ಬಲ: ಅಮೇರಿಕಾದ 87 ರೈತ ಸಂಘಗಳಿಂದ ಬೆಂಬಲ

ಭಾರತದ ರೈತರ ಹೋರಾಟಕ್ಕೆ ವಿಶ್ವದಾದ್ಯಂತ ಬೆಂಬಲ ಸಿಕ್ಕಿದ್ದು, ಇದೀಗ ಅಮೇರಿಕಾದ ಕೃಷಿ-ಪರಿಸರ ವಿಜ್ಞಾನ, ಕೃಷಿ ಮತ್ತು ಆಹಾರ ನ್ಯಾಯ ಸಂಘಟನೆ ಸೇರಿದಂತೆ 87 ರೈತ ಸಂಘಟನೆಗಳು ಭಾರತದ ರೈತರ ಪ್ರತಿಭಟನೆಗೆ ಬೆಂಬಲನೀಡಿದ್ದು, ಇದರಿಂದ ರೈತ ಹೋರಾಟಕ್ಕೆ ಮತ್ತಷ್ಟು ಬಲಸಿಕ್ಕಂತಾಗಿದೆ.

ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಆಧುನಿಕ ಇತಿಹಾಸದಲ್ಲಿಯೇ ವಿಶ್ವದ ರೋಮಾಂಚನಕಾರಿ ಪ್ರತಿಭಟನೆಯಾಗಿದೆ ಎಂದು ಬೆಂಬಲ ಸೂಚಿಸಿದ ರೈತ ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಅಮೇರಿಕಾ ರೈತರಿಗೆ ಸರಿಪಡಿಸಲಾಗದ ಹಾನಿಗೆ ಕಾರಣವಾದ ರೇಗನ್ ಯುಗದ ನೀತಿಗಳ ಕೆಟ್ಟ ಉದಾಹರಣೆಗಳನ್ನು ಉಲ್ಲೇಖಿಸಿ, ಅಮೇರಿಕಾ ರೈತ ಸಂಘಗಳು ಭಾರತದ ಪ್ರತಿಭಟನಾನಿರತ ರೈತರಿಗೆ ಬೆಂಬಲ ನೀಡಿವೆ ಎಂದು ದಿ ವೈರ್ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ನವ ಉದಾರೀಕರಣದ ಶಕ್ತಿಗಳಿಂದ” ಕೃಷಿ ಹೇಗೆ ಸಂಕಷ್ಟಕ್ಕೆ ಸಿಲುಕಿದೆ ಹಾಗು ಅವುಗಳ ನಡುವಿರುವ ನಿಕಟ ಸಂಬಂಧವನ್ನು ಉಲ್ಲೇಖಿಸಿ ಪತ್ರಬರೆದು, ಕೃಷಿಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಭಾರತದ ರೈತರಿಗೆ ಅಮೇರಿಕಾದ ರೈತರು ನಾವು ಕೂಡ ನಿಮ್ಮ ಹೋರಾಟಕ್ಕೆ ಬೆಂಬಲಿಸುತ್ತೇವೆಂಬ ಸಂದೇಶ ಕೊಟ್ಟಿದ್ದಾರೆ.

ರೈತರ ಗಮನಕ್ಕೆ ತರದೆ ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸದೆ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬುವುದು ಭಾರತದ ರೈತರ ಬೇಡಿಕೆಯಾಗಿದೆ. ತಮ್ಮ ಹಕ್ಕು ಮತ್ತು ಘನತೆಗಾಗಿ ಹೋರಾಡುತ್ತಿರುವ ಅಸಂಖ್ಯಾತ ರೈತರಿಗೆ ಬೆಂಬಲ ಸೂಚಿಸಿ, ನಮ್ಮ ಒಗ್ಗಟ್ಟಿನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆಂದು ಅಮೇರಿಕಾ ರೈತ ಸಂಘಟನೆಗಳು ಪತ್ರದಲ್ಲಿ ಉಲ್ಲೇಖಿಸಿವೆ. ಹೋರಾಟದ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೆಲವು ಬೆಳೆಗಳಿಗೆ ಮಾತ್ರ ಲಭ್ಯವಿದೆ. ತರಕಾರಿ ಸೇರಿದಂತೆ ಎಲ್ಲಾ ಉತ್ಪನ್ನಗಳಿಗೂ ಎಂಎಸ್‌ಪಿ ಯನ್ನು ನಿಗದಿಪಡಿಸಬೇಕೆಂದು ಆಗ್ರಹಿಸಲಾಗಿದೆ.

ಎಲ್ಲಾ ದೇಶಗಳಿಗೆ ಹೋಲಿಸಿದರೆ ಅಮೇರಿಕಾದ ಕೃಷಿ ಕ್ಷೇತ್ರವು ದೊಡ್ಡಮಟ್ಟದ ಬೆಂಬಲ ಪಡೆದರೂ ಅಸಮಾನತೆ ಉಳಿದಿದೆ. ಸುರಕ್ಷಿತ ಭೂಮಿಯ ಅಧಿಕಾರ ಹೊಂದಿರದ, ತರಕಾರಿ ಮತ್ತು ಸಣ್ಣ-ಪ್ರಮಾಣದ ಜಾನುವಾರು ಕ್ಷೇತ್ರಗಳಲ್ಲಿ ಕೇಂದ್ರೀಕೃತವಾಗಿರುವ ಕಪ್ಪು, ಸ್ಥಳೀಯ, ಲ್ಯಾಟಿನೋ, ಏಷಿಯನ್-ಪೆಸಿಫಿಕ್ ಜನರನ್ನು ಇದರಿಂದ ಹೊರಗಿಡಲಾಗಿದೆ. ಇಲ್ಲಿ ರೈತರ ಬದಲು ದೊಡ್ಡ ಕೃಷಿ ವ್ಯವಹಾರ, ಕೃಷಿ ಕಾರ್ಯಾಚರಣೆಗಳಿಗೆ ಬೆಂಬಲ ಸಿಗುತ್ತಿದೆ ಎಂದು ಅಮೇರಿಕಾ ರೈತ ಸಂಘಗಳು ದೂರಿವೆ. ಭಾರತದ ರೈತರು ಅನುಭವಿಸುತ್ತಿರುವ ಈಗಿನ ಸಮಸ್ಯೆಯನ್ನು ನಾವು 40 ವರ್ಷಗಳ ಹಿಂದೆ ಅನುಭವಿಸಿದ್ದೆವು ಎಂದು ಅಮೇರಿಕಾ ರೈತಸಂಘಟನೆಗಳು ಅಭಿಪ್ರಾಯಪಟ್ಟಿವೆ.

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಯಲ್ಲಿ ಭಾರತದ ಎಂಎಸ್‌ಪಿ ವ್ಯವಸ್ಥೆಗೆ ಅಮೇರಿಕಾ ಪ್ರಮುಖ ಎದುರಾಳಿಯಾಗಿದೆ. ಆಸ್ಟ್ರೇಲಿಯಾ, ಕೆನಡಾ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳೊಂದಿಗೆ ಸೇರಿ ಅಮೆರಿಕವು, ಭಾರತದ ಎಂಎಸ್‌ಪಿ ವ್ಯಾಪಾರವನ್ನು ವಿರೂಪಗೊಳಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸ್ವತಂತ್ರ ರೈತರನ್ನು ಮತ್ತು ಸ್ಥಳೀಯ ಆಹಾರ ವ್ಯವಸ್ಥೆಯನ್ನು ಬೆಂಬಲಿಸುವ ಮುಖೇನ ಕೃಷಿ ಕಾನೂನುಗಳನ್ನು ರೈತರಿಗೆ ಅನುಕೂಲವಾಗುವಂತೆ ರೂಪಿಸಬೇಕೆಂದು ಅಮೇರಿಕಾ ಮತ್ತು ಭಾರತ ಸರ್ಕಾರವನ್ನು ಅಮೇರಿಕಾದ ರೈತ ಸಂಘಟನೆಗಳು ಒತ್ತಾಯಿಸಿವೆ.

ಭಾರತದ ಸಂಯುಕ್ತ ಕಿಸಾನ್‌ ಮೋರ್ಚಾ ಸೇರಿದಂತೆ, ಇತರೆ ರೈತ ಸಂಘಟನೆಗಳ, ಕೃಷಿಕರ ಏಕೀಕೃತ ಹೋರಾಟಕ್ಕೆ ನಾವು ಗೌರವ ಕೊಡುತ್ತೇವೆ ಮತ್ತು ನಾವೂ ಅವರೊಂದಿಗೆ ಕೈಜೋಡಿಸುತ್ತೇವೆಂದು ಅಮೇರಿಕಾದ 87 ರೈತ ಸಂಘಟನೆಗಳು ಘೋಷಿಸಿವೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com