ಫೆಬ್ರವರಿ 13, ಶನಿವಾರದಂದು ಬೆಂಗಳೂರಿನ 21 ವರ್ಷದ ದಿಶಾ ರವಿ ಎಂಬ ಪರಿಸರ ಹೋರಾಟಗಾರ್ತಿಯನ್ನು ದೇಶದ ವಿರುದ್ದ ಪಿತೂರಿ ನಡೆಸುವ 'ಟೂಲ್ಕಿಟ್' ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಪೊಲೀಸರು ಬಂಧಿಸಿದ್ದರು. ಈ ಘಟನೆಯು ಅಂತರರಾಷ್ಟ್ರೀಯ ಗಮನ ಸೆಳೆದಿದ್ದು ಇತ್ತೀಚಿನ ಎಲ್ಲಾ ಬಂಧನಗಳ ಮೇಲೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ.
ಪತ್ರಕರ್ತರು, ಕವಿಗಳು, ಶಾಂತಿಯುತ ಪ್ರತಿಭಟನಾಕಾರರು, ಕಾರ್ಮಿಕ ಕಾನೂನುಗಳ ವಿರುದ್ಧ ಹೋರಾಡುವವರು ಮುಂತಾದವರನ್ನು ಕಳೆದ ಮೂರು ತಿಂಗಳುಗಳಿಂದ ಅವ್ಯಾಹತವಾಗಿ ಬಂಧಿಸಲಾಗುತ್ತಿದೆ. ಹಲವು ಸಂದರ್ಭಗಳಲ್ಲಿ ಆರೋಪಿಗಳ ಕುಟುಂಬಸ್ಥರಿಗೂ ಯಾವುದೇ ಮಾಹಿತಿ ನೀಡಲಾಗಿಲ್ಲ.
ಒಂದು ತಿಂಗಳುಗಳ ಕಾಲ ಜೈಲಿನಲ್ಲಿ ಕಳೆದ ಬಳಿಕ ಕಾಮಿಡಿಯನ್ ಮುನವ್ವರ್ ಫರೂಕಿ ಅವರಿಗೆ ಫೆಬ್ರವರಿ ಆರರಂದು ಜಾಮೀನು ದೊರಕಿದೆ. ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಫಾರೂಕಿ ಜೊತೆಗೆ ಅವರ ಕೆಲವು ಸ್ನೇಹಿತರನ್ನು ಸಹ ಬಂಧಿಸಲಾಗಿತ್ತು. ಅವರ ಪೈಕಿ ನಳಿನ್ ಯಾದವ್ ಮತ್ತು ಸದಾಕತ್ ಖಾನ್ ಇನ್ನೂ ಜೈಲಿನಲ್ಲಿದ್ದಾರೆ.
ಈ ನಡುವೆ, ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರೊಂದಿಗೆ ಪ್ರತಿಭಟಿಸುತ್ತಿರುವ ಅನೇಕ ಕಾರ್ಮಿಕ ಸಂಘಟನೆಗಳಲ್ಲಿ ಒಂದಾದ ದಲಿತ ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ಮತ್ತು ಮಜ್ದೂರ್ ಅಧಿಕಾರ ಸಂಘಥನ್ (ಎಂಎಎಸ್) ಸದಸ್ಯೆ ನೋದೀಪ್ ಕೌರ್ (24) ಒಂದು ತಿಂಗಳುಗಳಿಗಿಂತಲೂ ಹೆಚ್ಚು ಜೈಲಿನಲ್ಲಿದ್ದಾರೆ. ಜನವರಿ 12 ರಂದು ಸಿಂಗು ಗಡಿಯಿಂದ ಅವರನ್ನು ಬಂಧಿಸಲಾಗಿತ್ತು ಮತ್ತು ಫೆಬ್ರವರಿ 2 ರಂದು ಅವರ ಜಾಮೀನು ತಿರಸ್ಕರಿಸಲ್ಪಟ್ಟಿತು. ಆಕೆಯೊಂದಿಗೆ ಶಿವ ಕುಮಾರ್ ಅವರನ್ನೂ ಬಂಧಿಸಲಾಗಿತ್ತು.
ಗ್ರೇಟಾ ಥನ್ಬರ್ಗ್ ಭಾರತದ ರೈತ ಹೋರಾಟಗಾರರನ್ನು ಬೆಂಬಲಿಸಿ ಶೇರ್ ಮಾಡಿಕೊಂಡಿದ್ದ 'ಟೂಲ್ಕಿಟ್' ಭಾರತದ ವಿರುದ್ಧದ ಜಾಗತಿಕ ಪಿತೂರಿಗೆ ಸಾಕ್ಷಿಯಾಗಿದೆ ಎಂದು ಕೆಲವು ಸರ್ಕಾರದ ಪರವಾದ ಟ್ವಿಟರ್ ಹ್ಯಾಂಡಲ್ಗಳು ಮತ್ತು ಕೇಂದ್ರ ಮಂತ್ರಿಗಳು ಆರೋಪಿಸುತ್ತಿರುವುದರಿಂದ ದೆಹಲಿ ಪೊಲೀಸರು ಆ ಟೂಲ್ಕಿಟ್ ಸೃಷ್ಟಿಸಿದವರ ವಿರುದ್ಧ ಮೊಕದ್ದಮೆ ಹೂಡಿದ್ದರು. ದಿಶಾ ರವಿ ಅವರನ್ನು 'ಟೂಲ್ಕಿಟ್'ನ್ನು 'ಹಂಚಿದ್ದಾರೆ' ಮತ್ತು'ವಿತರಿಸಿದ್ದಾರೆ' ಎನ್ನುವ ಆರೋಪದ ಮೇಲೆ ಬಂಧಿಸಿದ್ದಾರೆ. ದೆಹಲಿ ಪೊಲೀಸರು "ದಿಶಾ ಅವರು ಟೂಲ್ಕಿಟ್ ಸೃಷ್ಟಿಸುವಲ್ಲಿ ಸಹಭಾಗಿಯಾಗಿದ್ದಾರೆ ಮತ್ತು ಖಾಲಿಸ್ತಾನದ ಪರ ನಿಂತಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.