ಕೃಷಿ ತಿದ್ದುಪಡಿ ಕಾಯ್ದೆಯ ವಿರುದ್ಧದ ರೈತರ ಪ್ರತಿಭಟನೆ ಬೆಂಬಲಿಸುವುದು ದೇಶದ್ರೋಹವಾಗಿದ್ದರೆ ನಾನು ಜೈಲಿನಲ್ಲಿರುವುದೇ ಉತ್ತಮ ಎಂದು ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರು ತಮ್ಮ ವಕೀಲರ ಮೂಲಕ ದೆಹಲಿ ಕೋರ್ಟ್ ಗೆ ತಿಳಿಸಿದ್ದಾರೆ.
ದಿಶಾ ರವಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಆರೋಪಿ ಪರ ವಾದ ಮಂಡಿಸಿದ ವಕೀಲರು, ಜನವರಿ 26 ರಂದು ನಡೆದ ಹಿಂಸಾಚಾರಕ್ಕೆ ಟೂಲ್ಕಿಟ್ ಕಾರಣ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
'ದಿಶಾ ರವಿ ಅವರು ಯಾವುದೇ ಪಿತೂರಿಯ ಭಾಗವಾಗಿಲ್ಲ. ಅವರು ಉದ್ದೇಶಗಳೆಲ್ಲವೂ ಪರಿಸರ ಮತ್ತು ರೈತರ ಒಳಿತಿಗಾಗಿ ಇವೆ. ಖಲಿಸ್ತಾನಿ ಚಳುವಳಿಗೂ, ಅವರಿಗೂ ಯಾವುದೇ ಸಂಬಂಧವಿಲ್ಲ' ಎಂದು ದಿಶಾ ಪರ ವಕೀಲ ಸಿದ್ದಾರ್ಥ ಅಗರ್ವಾಲ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
ಇದಕ್ಕೆ ಪ್ರತಿವಾದ ಮಂಡಿಸಿರುವ ದೆಹಲಿ ಪೊಲೀಸರ ಪರ ವಕೀಲರು, 'ಭಾರತದ ಹೆಸರಿಗೆ ಮಸಿ ಬಳಿಯುವ ನಿಟ್ಟಿನಲ್ಲಿ ಹೆಣೆಯಲಾದ ಜಾಗತಿಕ ಪಿತೂರಿಯ ಭಾಗವಾಗಿ ದಿಶಾ ರವಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಜಾಮೀನು ನೀಡುವುದು ಸಮಂಜಸವಲ್ಲ, ಆರೋಪಿ ದಿಶಾ ರವಿ ಖಲಿಸ್ತಾನಿ ಪರವಾದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ (ಪಿಜೆಎಫ್) ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಭಾರತವನ್ನು ಅವಹೇಳನ ಮಾಡಲು ಮತ್ತು ರೈತರ ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿಯನ್ನು ಉಂಟುಮಾಡುವ ಜಾಗತಿಕ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
"ರೈತರ ಪ್ರತಿಭಟನೆಯನ್ನು ಜಾಗತಿಕವಾಗಿ ಎತ್ತಿ ತೋರಿಸುವುದು ದೇಶದ್ರೋಹವಾಗಿದ್ದರೆ, ನಾನು ಜೈಲಿನಲ್ಲಿರುವುದೇ ಉತ್ತಮ" ಎಂದು ದಿಶಾ ರವಿ ಅವರು ತಮ್ಮ ವಕೀಲರ ಮೂಲಕ ಕೋರ್ಟ್ ಗೆ ತಿಳಿಸಿದ್ದಾರೆ.
ದೆಹಲಿ ಪೊಲೀಸರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ದಿಶಾ ರವಿ ಪರ ವಕೀಲರು, ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ನೊಂದಿಗೆ ನಂಟು ಹೊಂದಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ.
"ರೈತರ ಪ್ರತಿಭಟನಾ ಮೆರವಣಿಗೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ ನಂತರ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಜನರಲ್ಲಿ ಮನವಿ ಮಾಡುವುದು ಹೇಗೆ ದೇಶದ್ರೋಹವಾಗುತ್ತದೆ? ಎಂದು ವಕೀಲರು ನ್ಯಾಯಾಲಯವನ್ನು ಪ್ರಶ್ನಿಸಿದ್ದಾರೆ.
"ಇದು ಕೇವಲ ಟೂಲ್ ಕಿಟ್ ಮಾತ್ರ ಅಲ್ಲ. ಭಾರತವನ್ನು ಕೆಣಕುವುದು ಮತ್ತು ಇಲ್ಲಿ ಅಶಾಂತಿ ಸೃಷ್ಟಿಸುವುದು ಆರೋಪಿಯ ನಿಜವಾದ ಉದ್ದೇಶ" ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರ ಮುಂದೆ ಪೊಲೀಸರು ತಿಳಿಸಿದ್ದಾರೆ.
ದಿಶಾ ರವಿ ಜಾಮೀನು ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಆದೇಶವನ್ನು ಮಂಗಳವಾರಕ್ಕೆ (ಫೆಬ್ರವರಿ 23ಕ್ಕೆ) ಕಾಯ್ದಿರಿಸಿದೆ.
ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವ ‘ಟೂಲ್ಕಿಟ್’ ಹಂಚಿಕೊಂಡ ಆರೋಪದ ಮೇಲೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನವಾಗಿತ್ತು.
ಇದಕ್ಕೂ ಮೊದಲು ತನಿಖೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಪೊಲೀಸರು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ತಡೆಯಲು ದಿಶಾ ರವಿ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ತನ್ನ ಮತ್ತು ಮೂರನೇ ವ್ಯಕ್ತಿಗಳ ನಡುವೆ ನಡೆದಿರುವ ವಾಟ್ಸ್ಆ್ಯಪ್ ಸಂದೇಶ ಸೇರಿದಂತೆ ಯಾವುದೇ ಖಾಸಗಿ ಚಾಟ್ಗಳ ವಿಷಯಗಳನ್ನು ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ತಡೆ ಹೇರುವಂತೆಯೂ ಅರ್ಜಿಯಲ್ಲಿ ಕೋರಲಾಗಿತ್ತು.