ಇಂಧನ ಬೆಲೆ ಏರಿಕೆಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ; ನಿರ್ಮಲಾ ಸೀತಾರಾಮನ್

ಪೆಟ್ರೋಲ್‌, ಡಿಸೆಲ್ ಬೆಲೆಯಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ. ಬೆಲೆ ಏರಿಕೆಯಿಂದ ಒಂದು ರೀತಿಯ ಧರ್ಮಸಂಕಟದ ಪರಿಸ್ಥಿತಿ ಎದುರಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ
ಇಂಧನ ಬೆಲೆ ಏರಿಕೆಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ; ನಿರ್ಮಲಾ ಸೀತಾರಾಮನ್

ಪೆಟ್ರೋಲ್‌, ಡೀಸೆಲ್ ಮೊದಲಾದ ಇಂಧನಗಳ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ, ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ತೈಲ ಕಂಪನಿಗಳು ನಿರ್ಧರಿಸುತ್ತವೆ, ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್ ಬೆಲೆಯಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ. ಬೆಲೆ ಏರಿಕೆಯಿಂದ ಒಂದು ರೀತಿಯ ಧರ್ಮಸಂಕಟದ ಪರಿಸ್ಥಿತಿ ಎದುರಾಗಿದೆ. ಗ್ರಾಹಕರಿಗೆ ಇಂಧನವನ್ನು (ಪೆಟ್ರೋಲ್‌, ಡೀಸೆಲ್, ಅಡುಗೆ ಅನಿಲ) ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚೆ ನಡೆಸಬೇಕಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ಬಜೆಟ್​ ಕುರಿತು ಚರ್ಚೆ ಮಾಡಲು ಚೆನ್ನೈನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿರ್ಮಲಾ ಅವರು, ಕಾರ್ಯಕ್ರಮ ಪೂರ್ಣಗೊಂಡ ನಂತರದಲ್ಲಿ ಮಾಧ್ಯಮದ ಜತೆ ಮಾತನಾಡಿದ್ದಾರೆ. ʼಪೆಟ್ರೋಲ್​ ದರ ಏರುತ್ತಿರುವುದು ತುಂಬಾ ದುಃಖಕರ ವಿಷಯ. ಬೆಲೆ ಕಡಿಮೆ ಮಾಡುವುದನ್ನು ಹೊರತುಪಡಿಸಿ ಯಾವುದೇ ಉತ್ತರವೂ ಜನರಿಗೆ ಸಮಾಧಾನ ತರುವುದಿಲ್ಲʼ ಎಂದಿದ್ದಾರೆ.

ತೈಲ ಕಂಪೆನಿಗಳು ಬೆಲೆಗಳನ್ನು ಕಡಿತಗೊಳಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತವೆ. ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಕಂಪನಿಗಳು, ಅದನ್ನು ಪರಿಷ್ಕರಿಸಿ, ವಿತರಿಸುವ ಕಾರ್ಯವನ್ನು ಅವೇ ಮಾಡುತ್ತವೆ. ಇದರ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ ಎಂದು ಹೇಳುವ ಮೂಲಕ ಪೆಟ್ರೋಲ್​ ದರ ಏರಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎನ್ನುವುದನ್ನು ಒತ್ತಿ ಹೇಳಿದರು.

ಪೆಟ್ರೋಲಿಯಂ ಅನ್ನು ಜಿಎಸ್​ಟಿ ಅಡಿಯಲ್ಲಿ ತರುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ​ ಪೆಟ್ರೋಲಿಯಂಅನ್ನು ಈವರೆಗೆ ಜಿಎಸ್​ಟಿ ಅಡಿಯಲ್ಲಿ ತಂದಿಲ್ಲ. ಈ ಬಗ್ಗೆ ಮಾತನಾಡಿರುವ ಅವರು, ಪೆಟ್ರೋಲ್​ ಅನ್ನು ಜಿಎಸ್​​ಟಿ ಅಡಿ ತರಲು ಜಿಎಸ್​ಟಿ ಕೌನ್ಸಿಲ್​ನಲ್ಲಿ ಸಮಗ್ರ ಚರ್ಚೆ ಮತ್ತು ರಾಜ್ಯಗಳ ನಡುವೆ ಸಮಾಲೋಚನೆ ನಡೆಸುವ ಅಗತ್ಯವಿದೆ. ಇದಕ್ಕಾಗಿ, ಸಂಸತ್ತಿನಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ಪೆಟ್ರೋಲ್​ ಬೆಲೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇಬ್ಬರೂ ಸೇರಿ ಮಾತುಕತೆ ನಡೆಸಬೇಕು. ತೈಲ ಉತ್ಪಾದನೆ ಮುಂದಿನ ದಿನಗಳಲ್ಲಿ ಕಡಿಮೆ ಆಗಬಹುದು ಎನ್ನುವ ಎಚ್ಚರಿಕೆಯನ್ನು ಒಪೆಕ್​ (Organization Of The Petroleum Exporting Countries) ರಾಷ್ಟ್ರಗಳು ನೀಡಿವೆ. ಇದರಿಂದ ತೈಲದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಿರ್ಮಲಾ ಆತಂಕ ಹೊರಹಾಕಿದ್ದಾರೆ.

ಪೆಟ್ರೋಲ್​ ಬೆಲೆ ಹಲವು ರಾಜ್ಯಗಳಲ್ಲಿ ಈಗಾಗಲೇ 100 ರೂಪಾಯಿಯ ಗಡಿ ದಾಟಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್​ ದರ 100 ರೂಪಾಯಿ ಗಡಿ ಸಮೀಪಿಸುತ್ತಿದೆ. ಇದರಿಂದ ದಿನ ನಿತ್ಯ ಬಳಕೆ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಕಾಣುತ್ತಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಈ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದು, ಈ ಪರಿಸ್ಥಿತಿ ನನ್ನನ್ನು ಧರ್ಮ ಸಂಕಟಕ್ಕೆ ನೂಕಿದೆ ಎಂದು ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com