ದೇಶಾದ್ಯಂತ ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ ಫೆಬ್ರವರಿ 20 ರಂದು ಪೆಟ್ರೋಲಿಯಂ ಸಚಿವಾಲಯ ಮುಂಭಾಗ ಪ್ರತಿಭಟನೆ ನಡೆಸಿದೆ.
ಸತತ ಹನ್ನೊಂದು ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. 2014 ರಿಂದ ಇದುವರೆಗೂ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡುವ ಮೂಲಕ ದೇಶದ ಜನರಿಂದ 21 ಲಕ್ಷದ 50 ಸಾವಿರ ಕೋಟಿ ರೂಗಳನ್ನು ಲೂಟಿ ಮಾಡಲಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.
ದೇಶದ ಹಲವೆಡೆ ಪೆಟ್ರೋಲ್ ಬೆಲೆ 100 ರೂ ದಾಟಿದರೆ, ಡೀಸೆಲ್ 90 ರೂ ದಾಟಿದೆ. ಇದೀಗ ಸತತವಾಗಿ 11 ನೇ ದಿನವು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಆರ್ಎಸ್ಎಸ್ ಮತ್ತು ಬಿಜೆಪಿಯ ಜನವಿರೋಧಿ, ರಾಷ್ಟ್ರವಿರೋಧಿ ತಂತ್ರಗಳು ಹೊರಸೂಸುತ್ತಿವೆ. ದೇಶವನ್ನು ಅಭಿವೃದ್ಧಿಯತ್ತ ಸಾಗಿಸುತ್ತಾರೆಂದು ನಂಬಿ ಮೋದಿಯವರನ್ನು ಜನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ ನರೇಂದ್ರ ಮೋದಿ ಜನರ ನಂಬಿಕೆಗೆ ದ್ರೋಹ ಬಗೆದಿದ್ದಾರೆಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಸಾಮಾನ್ಯ ಜನರ ಪರ ಧ್ವನಿಯೆತ್ತಲಾಗುತ್ತಿದೆ. ಪ್ರತಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕಚ್ಚಾ ತೈಲಗಳ ಬೆಲೆಯೇರಿಕೆ ಕುರಿತು ಗಂಭೀರವಾಗಿ ಪರಿಗಣಿಸಬೇಕು, ಇಲ್ಲದಿದ್ದರೆ ಪೆಟ್ರೋಲಿಯಂ ಸಚಿವರಾದ ದರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಬಿ.ವಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ರಾಹುಲ್ ರಾವ್ ಮಾತನಾಡಿ ಸರ್ಕಾರಕ್ಕೆ ಆರ್ಥಿಕತೆಯ ಬಗ್ಗೆ ತಿಳುವಳಿಕೆ ಕಡಿಮೆಯಿದೆ. ಹಣದುಬ್ಬರ ಈಗಾಗಲೇ ಹೆಚ್ಚಿದೆ. ಇದರ ಮಧ್ಯೆ ಪೆಟ್ರೋಲ್,ಡೀಸೆಲ್, ಅಡುಗೆ ಅನಿಲಗಳ ಬೆಲೆ ಹೆಚ್ಚುತ್ತಿದೆ. ಇದು ಜನ ಸಾಮಾನ್ಯರನ್ನು ಮತ್ತಷ್ಟು ತೊಂದರೆಗೀಡು ಮಾಡುತ್ತಿದೆ. ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತವನ್ನು ಸರಿಪಡಿಸಲು ಜೊತೆಗೆ ಜನಸಾಮಾನ್ಯರ ಸಮಸ್ಯೆಯನ್ನು ಪರಿಹರಿಸಲು ಅಬಕಾರಿ ಸುಂಕವನ್ನು ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆ ಭಾರತೀಯ ಯುವ ಕಾಂಗ್ರೆಸ್ ಮತ್ತು ದೆಹಲಿ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬೈಯಾ ಪವರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ದೀಪಕ್ ಚೋಟಿವಾಲ, ದೆಹಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಣವಿಜಯ್ ಲೋಚವ್ ಸೇರಿದಂತೆ ಪ್ರತಿಭಟನೆಯಲ್ಲಿ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.