ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಬಿಜೆಪಿ ಯುವ ನಾಯಕಿಯೊಬ್ಬರನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.
ನಾಟಕೀಯ ಬೆಳವಣಿಗೆಯೊಂದರಲ್ಲಿ, ಬಂಗಾಳ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಹಾಗೂ ಆಕೆಯ ಗೆಳೆಯ, ಸಹೋದ್ಯೋಗಿ ಯುವ ಮೋರ್ಚಾದ ಪನ್ಬೀರ್ ಕುಮಾರ್ ದೇ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಸಂಚರಿಸುತ್ತಿದ್ದ ಕಾರಿನಲ್ಲಿ ಲಕ್ಷಾಂತರ ಮೌಲ್ಯದ ಕೊಕೇನ್ ಇರುವುದನ್ನು ಪೊಲೀಸರು ಧೃಡಪಡಿಸಿದ್ದಾರೆ. ಪಮೇಲಾ ಗೋಸ್ವಾಮಿ ಅವರ ಪರ್ಸಿನಲ್ಲೂ 100 ಗ್ರಾಂ ಕೋಕೇನ್ ಇರುವುದನ್ನು ಪ್ರತ್ಯೇಕವಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎನ್ಆರ್ ಅವೆನ್ಯೂ ಅಲ್ಲಿರುವ ಕೆಫೆಯೊಂದರ ಬಳಿ ಪೊಲೀಸರು ಬಿಜೆಪಿ ನಾಯಕರು ಸಂಚರಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದು, ತ್ವರಿತ ಶೋಧ ನಡೆಸಿದ ಪೊಲೀಸರಿಗೆ 100 ಗ್ರಾಂ ಕೊಕೇನ್ ಪಮೇಲಾ ಗೋಸ್ವಾಮಿ ಪರ್ಸ್ನಿಂದ ಲಭ್ಯವಾಗಿದೆ, ಹಾಗೂ ಲಕ್ಷಾಂತರ ಮೌಲ್ಯದ ಕೊಕೇನ್ ಅವರು ಸಂಚರಿಸುತ್ತಿದ್ದ ಕಾರಿನಲ್ಲಿ ಪತ್ತೆಯಾಗಿದೆ. ತಕ್ಷಣವೇ ಕಾರಿನಲ್ಲಿದ್ದ ಪಮೇಲಾ ಗೋಸ್ವಾಮಿ, ಪನ್ಬೀರ್ ಕುಮಾರ್ ದೇ ಹಾಗೂ ಪಮೇಲಾ ಗೋಸ್ವಾಮಿಯ ಭದ್ರತಾ ಸಿಬ್ಬಂಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಒಂದು ನಿರ್ದಿಷ್ಟ ಕೆಫೆಯೊಂದರ ಬಳಿಗೆ ಪಮೇಲಾ ಗೋಸ್ವಾಮಿ ಹಾಗೂ ಪನ್ಬೀರ್ ಕುಮಾರ್ ದೇ ಅವರು ನಿಯಮಿತವಾಗಿ ಭೇಟಿ ಕೊಡುತ್ತಿದ್ದರು. ಪಾರ್ಕಿಂಗ್ನಲ್ಲಿ ಕಾರು ನಿಲ್ಲಿಸಿ ಬೈಕ್ನಲ್ಲಿ ಬರುವ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ನಡೆಸುತ್ತಿರುವುದನ್ನು ಸಿಸಿಟಿವಿ ಮೂಲಕ ಗಮನಿಸಲಾಗಿತ್ತು. ಬಳಿಕ ಆಕೆ ಅಲ್ಲಿಂದ ನಿರ್ಗಮಿಸುತ್ತಿದ್ದರು. ಡ್ರಗ್ಸ್ ವ್ಯವಹಾರ ಶಂಕೆಯಲ್ಲಿ ಪೊಲೀಸರು ಆಕೆ ಹಾಗೂ ಆಕೆಯ ಸಹವರ್ತಿ ಮೇಲೆ ನಿರಂತರ ಕಣ್ಣಿಟ್ಟಿಇದ್ದು, ಶುಕ್ರವಾರ ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಈ ವೇಳೆ ರೆಡ್ ಹ್ಯಾಂಡಾಗಿ ಅವರು ಸಿಕ್ಕಿದ್ದಾರೆ.
ಬಿಜೆಪಿಗೂ ಸೇರುವ ಮೊದಲು ಪಮೇಲಾ ಗಗನಸಖಿ, ಮಾಡೆಲ್ ಹಾಗೂ ಕಿರುತೆರೆ ನಟಿಯಾಗಿ ಅಭಿನಯಿಸುತ್ತಿದ್ದರು. 2019 ರಲ್ಲಿ ಬಿಜೆಪಿ ಸೇರಿದ ಅವರನ್ನು ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿತ್ತು.