ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ದೆಹಲಿ ವಿಧಾನಸಭೆಗೆ ರೈತ ಮುಖಂಡರನ್ನು ಆಹ್ವಾನಿಸಿರುವ ಕೇಜ್ರಿವಾಲ್ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಕುರಿತು ಆಮ್ ಆದ್ಮಿ ಪಕ್ಷವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾಳೆ(ಭಾನುವಾರ) ದೆಹಲಿ ವಿಧಾನಸಭೆಯಲ್ಲಿ ಸಂವಾದ ನಡೆಸಲು ರೈತ ಮುಖಂಡರನ್ನು ಆಹ್ವಾನಿಸಿದ್ದಾರೆ. ಎಎಪಿ ರೈತರ ಪರವಾಗಿದೆ' ಎಂದು ಹೇಳಿದೆ.
ಆಪ್ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಪ್ರತಿಭಟನಾ ನಿರತ ರೈತರ ಬೆಂಬಲಕ್ಕೆ ನಿಲ್ಲುವುದು ಇದೇ ಮೊದಲಲ್ಲ. ರೈತ ಹೋರಾಟ ದೆಹಲಿಯ ಗಡಿ ಭಾಗದಲ್ಲಿ ಶುರುವಾದಗಿನಿಂದಲೂ ರೈತರಿಗೆ ಬೇಕಾದ ಸಹಾಯವನ್ನು ಆಪ್ ಕಾರ್ಯಕರ್ತರು ನಡೆಸಿಕೊಡುತ್ತಿದ್ದರು. ಅದಾಗ್ಯೂ, ರೈತ ವಿರೋಧಿ ಕಾನೂನೊಂದನ್ನು ಜಾರಿಗೊಳಿಸಿ ಅರವಿಂದ್ ಕೇಜ್ರಿವಾಲ್ ಸಂಪುಟ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದು ಎಎಪಿಯ ವಿಶ್ವಾಸರ್ಹತೆಯ ಮೇಲೆ ಅನುಮಾನ ಮೂಡಿಸಿತ್ತು.