ಕರೋನಾ ಸೋಂಕಿನ ಪ್ರಸರಣ ತಡೆಯಲು ವಿಶ್ವದಾದ್ಯಂತ ಲಾಕ್ಡೌನ್ ಎಂಬ ಹೊಸ ಪದ್ಧತಿ ಪರಿಚಯವಾಗಿ ಅದಾಗಲೇ ಒಂದು ವರ್ಷವಾಗುತ್ತಾ ಬಂದಿದೆ. ಆದರೆ, ಇನ್ನೂ ಕರೋನಾ ಸೋಂಕು ಸಂಪೂರ್ಣ ಮುಕ್ತವಾಗಿಲ್ಲ. ಭಾರತದಲ್ಲಿ ಈಗಾಗಲೇ ಕರೋನಾ ಲಸಿಕೆ ನೀಡಲು ಪ್ರಾರಂಭಿಸಿಯಾಗಿದೆ. ಕರೋನಾ ಭೀತಿ ಮೆಲ್ಲನೆ ಇಳಿಮುಖವಾಗಿ ಜನಜೀವನ ಹಿಂದಿನಂತೆ ಪ್ರಾರಂಭವಾಗಿ ತಿಂಗಳುಗಲೇ ಕಳೆದಿವೆ. ಅದಾಗ್ಯೂ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ಡೌನ್ಗೆ ಸರ್ಕಾರ ನಿರ್ಧರಿಸಿದೆ.
ಮಹಾರಾಷ್ಟ್ರದ ಅಮ್ರಾವತಿಯಲ್ಲಿ ಕರೋನಾ ಸೋಂಕು ಪ್ರಕರಣಗಳ ಸಂಖ್ಯೆ ವಿಪರೀತ ಏರುತ್ತಿದ್ದು, ಅಮ್ರಾವತಿಯಲ್ಲಿ ವಾರಾಂತ್ಯದ ಲಾಕ್ಡೌನ್ ಹೇರಲು ಸ್ಥಳೀಯ ಆಡಳಿತ ಸಂಸ್ಥೆ ನಿರ್ಧರಿಸಿದೆ. ಫೆಬ್ರವರಿ 20 ರ 8 ಗಂಟೆ ರಾತ್ರಿ ಲಾಕ್ಡೌನ್ ಆರಂಭವಾಗಿ ಫೆಬ್ರವರಿ 22 ರ ಬೆಳಿಗ್ಗೆ 7 ರವರೆಗೆ ಅಮ್ರಾವತಿ ಜಿಲ್ಲೆಯಲ್ಲಿ ಲಾಕ್ಡೌನ್ ಹೇರಲಾಗುವುದು ಎಂದು ಅಮ್ರಾವತಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ದಿಲೀಪ್ ರನ್ಮಾಲೆ ತಿಳಿಸಿದ್ದಾರೆ. ಶನಿವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆ ತನಕ ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ. ಸದ್ಯಕ್ಕೆ ಇದನ್ನು ಒಂದು ದಿನದ ಮಟ್ಟಿಗೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳವರೆಗೆ ದಿನಕ್ಕೆ 70 ಹೊಸ ಪ್ರಕರಣದಂತೆ ಅಮ್ರಾವತಿಯಲ್ಲಿ ವರದಿಯಾಗುತ್ತಿದ್ದು, ಇದೀಗ ಏಕಾಏಕಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿವೆ.
ಕಳೆದ ಭಾನುವಾರ 430 ಹೊಸ ಪ್ರಕರಣಗಳು ಜಿಲ್ಲೆಯೊಂದರಲ್ಲೇ ಕಂಡುಬಂದಿದ್ದು, ಈ ವರ್ಷದ ಅತೀ ಹೆಚ್ಚಿನ ದಾಖಲೆಯಾಗಿದೆ.
ಯವತ್ಮಾಲ್ ಜಿಲ್ಲೆಯಲ್ಲಿ 10 ದಿನಗಳ ಲಾಕ್ಡೌನ್!
ಈ ನಡುವೆ, ಕರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಪೂರ್ವ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ 10 ದಿನಗಳ ಲಾಕ್ಡೌನ್ ವಿಧಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಫೆಬ್ರವರಿ 1 ರಿಂದ ಜಿಲ್ಲೆಯಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಬುಧವಾರದ ವೇಳೆಗೆ ಜಿಲ್ಲೆಯಲ್ಲಿ 606 ಸಕ್ರಿಯ ಪ್ರಕರಣಗಳಿವೆ ಎಂದು ಯವತ್ಮಾಲ್ ಜಿಲ್ಲಾಧಿಕಾರಿ ಎಂ ಡಿ ಸಿಂಗ್ ಹೇಳಿದ್ದಾರೆ.
ಕರೋನಾ ಭೀತಿ ಇನ್ನೂ ಮಹಾರಾಷ್ಟ್ರದಲ್ಲಿ ಕಡಿಮೆಯಾಗಿಲ್ಲ. ಕೇರಳದಲ್ಲೂ ವಿಪರೀತವಾಗಿ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಿರುವುದರಿಂದ, ಕೇರಳದಿಂದ ಬರುವವರ ಮೇಲೆ ಕರ್ನಾಟಕ ಸರ್ಕಾರ ತೀವ್ರ ನಿಗಾ ವಹಿಸಿದೆ. ಒಟ್ಟಾರೆ, ಲಾಕ್ಡೌನ್ ಸಂಸ್ಕೃತಿ ಬಂದು ವರ್ಷವಾದರೂ ದೇಶದಲ್ಲಿ ಇದು ಇನ್ನೂ ಉಳಿದಿರುವುದು ಆತಂಕಕಾರಿ ವಿಚಾರವೇ ಸರಿ!