ಅಂಬಾನಿಗೂ ತಟ್ಟಿತು ರೈತ ಹೋರಾಟದ ಬಿಸಿ: ಲಕ್ಷಾಂತರ ಗ್ರಾಹಕರನ್ನು ಕಳೆದುಕೊಂಡ ಜಿಯೊ

ಪಂಜಾಬಿನಲ್ಲಿ ಜಿಯೋ ತನ್ನ 15 ಲಕ್ಷ ಗ್ರಾಹಕರನ್ನು ಕಳೆದಿಕೊಂಡಿದೆ. ಚಂದಾದಾರರ ಸಂಖ್ಯೆ 2020 ನವೆಂಬರ್‌ನಲ್ಲಿ 1.4೦ ಕೋಟಿಯಷ್ಟಿತ್ತು. ಡಿಸೆಂಬರ್‌ನಲ್ಲಿ 1.25 ಕೋಟಿಗೆ ಇಳಿಕೆಯಾಗಿದೆ ಎಂದು ಅಂಕಿ ಅಂಶದಲ್ಲಿ ತೋರಿಸಲಾಗಿದೆ.
ಅಂಬಾನಿಗೂ ತಟ್ಟಿತು ರೈತ ಹೋರಾಟದ ಬಿಸಿ: ಲಕ್ಷಾಂತರ ಗ್ರಾಹಕರನ್ನು ಕಳೆದುಕೊಂಡ ಜಿಯೊ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗಳು ರೈತನಿಗೆ ಮರಣಶಾಸನವಾಗಿದೆ. ಬಂಡವಾಳ ಶಾಹಿಗಳಿಗೆ, ದೊಡ್ಡ-ದೊಡ್ಡ ಕಂಪನಿಗಳಿಗೆ ಲಾಭ ಮಾಡುವ ಹುನ್ನಾರವಿದು ಎಂದು ಆರೋಪಿಸಿರುವ ರೈತರು ದೆಹಲಿ ಗಡಿಭಾಗಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜೀವದ ಹಂಗುತೊರೆದು, ಸಾವು ನೋವುಗಳ ಮಧ್ಯೆಯೂ ನೂತನ ಕೃಷಿ ಕಾನೂನು ಹಿಂಪಡೆಯುವವರಿಗೂ ನಮ್ಮ ಮನೆಗಳಿಗೆ ಮರಳುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

2020 ನವೆಂಬರ್‌ ನಿಂದ ಆರಂಭವಾದ ಪ್ರತಿಭಟನೆ ಈವರೆಗೂ ನಿರಂತರವಾಗಿ ಮುಂದುವರೆದಿದ್ದು, ಈ ನಡುವೆ, ಕೃಷಿ ಕಾನೂನುಗಳು ಅಂಬಾನಿ ಕಂಪೆನಿ ಪರವಾಗಿದೆಯೆಂದು ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ, ಉತ್ಪನ್ನಗಳನ್ನು ಬಳಸದಂತೆ ಪ್ರತಿಭಟನಾ ನಿರತ ರೈತರು ಕರೆಕೊಟ್ಟಿದ್ದರು. ಈ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಿಲಾಯನ್ಸ್‌ ಜಿಯೊ ಊಹಿಸದಷ್ಟು ಗ್ರಾಹಕರನ್ನು ಕಳೆದುಕೊಂಡಿದೆ.

20 ಲಕ್ಷ ಗ್ರಾಹಕರನ್ನು ಕಳೆದುಕೊಂಡ ರಿಲಯನ್ಸ್‌ ಜಿಯೋ

“ಟೆಲಿಕಾಂ ರೆಗ್ಯುಲೇಟರ್ ಅಥಾರಿಟಿ ಆಫ್‌ ಇಂಡಿಯಾ” ಡಿಸೆಂಬರ್‌ ತಿಂಗಳ ಅಂಕಿ ಅಂಶವನ್ನು ಫೆಬ್ರವರಿ 18 ರಂದು ಬಿಡುಗಡೆಗೊಳಿಸಿದ್ದು, ಡಿಸೆಂಬರ್‌ನಲ್ಲಿ ಪಂಜಾಬ್‌ ಮತ್ತು ಹರಿಯಾಣ ರಾಜ್ಯದಲ್ಲಿ ರಿಲಯನ್ಸ್‌ ಜಿಯೋ ಗ್ರಾಹಕರ ಸಂಖ್ಯೆಯಲ್ಲಿ ಸಾಕಷ್ಟು ಕುಸಿತಕಂಡಿದೆ ಎಂದು ಅಂಕಿ ಅಂಶ ಹೇಳಿವೆ.

ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಮಾಡುತ್ತಿರುವ ಪ್ರತಿಭಟನೆ ಹಿನ್ನಲೆ ಪಂಜಾಬಿನಲ್ಲಿ ಜಿಯೋ ತನ್ನ 15 ಲಕ್ಷ ಗ್ರಾಹಕರನ್ನು ಕಳೆದಿಕೊಂಡಿದೆ. ಚಂದಾದಾರರ ಸಂಖ್ಯೆ 2020 ನವೆಂಬರ್‌ನಲ್ಲಿ 1.4೦ ಕೋಟಿಯಷ್ಟಿತ್ತು. ಡಿಸೆಂಬರ್‌ನಲ್ಲಿ 1.25 ಕೋಟಿಗೆ ಇಳಿಕೆಯಾಗಿದೆ ಎಂದು ಅಂಕಿ ಅಂಶದಲ್ಲಿ ತೋರಿಸಲಾಗಿದೆ.

ಹರಿಯಾಣದಲ್ಲಿ ನವೆಂಬರ್‌ ತಿಂಗಳಲ್ಲಿ ಬಳಕೆದಾರರ ಸಂಖ್ಯೆ 94.48 ಲಕ್ಷವಿತ್ತು. ಡಿಸೆಂಬರ್‌ನಲ್ಲಿ 89.07 ಲಕ್ಷಕ್ಕೆ ಇಳಿದಿದೆ. ಒಟ್ಟಾರೆಯಾಗಿ ಕಂಪನಿಯು ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿಭಟನೆಯ ಮುಂಚೂಣಿಯಲ್ಲಿ ಪಂಜಾಬ್‌, ಹರಿಯಾಣ ರಾಜ್ಯಗಳು

2020 ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ಮಾಡುವ ರಾಜ್ಯಗಳಲ್ಲಿ ಉತ್ತರದ ಪಂಜಾಬ್‌ ಮತ್ತು ಹರಿಯಾಣ ಮುಂಚೂಣಿಯಲ್ಲಿದ್ದವು. ದೆಹಲಿಯ ಸಿಂಘು, ಟಿಕ್ರಿ ಗಡಿಭಾಗಗಳಲ್ಲಿ 2020 ನವೆಂಬರ್‌ನಿಂದ ಪ್ರತಿಭಟನೆಯನ್ನು ನಡೆಸಲಾಗುತ್ತಿದ್ದು, ಹೊಸ ಕೃಷಿ ಕಾನೂನುಗಳು ಮುಕೇಶ್‌ ಅಂಬಾನಿಯ ಒಡೆತನದ ರಿಲಯನ್ಸ್‌, ಜಿಯೋ ನಂತಹ ದೊಡ್ಡ-ದೊಡ್ಡ ಕಾರ್ಪೋರೇಟ್‌ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ರೈತನಿಗಿದು ಮರಣ ಶಾಸನವೆಂದು ತೀವ್ರವಾಗಿ ಟೀಕಿಸಿ ಜಿಯೋ, ರಿಲಯನ್ಸ್‌ ನಿಂದ ಉತ್ಪನ್ನ ಬಳಸದಂತೆ ನೊಂದ ಪ್ರತಿಭಟನಾಕಾರರು ಕರೆ ನೀಡಿದ್ದರು.

ಬಳಕೆದಾರರ ಸಂಖ್ಯೆಯಲ್ಲಿ ಕುಂಠಿತ

2020 ನವೆಂಬರ್‌ನಲ್ಲಿ ದೇಶದಲ್ಲಿ ವೈರ್‌ಲೆಸ್‌ ಬಳಕೆದಾರರ ಸಂಖ್ಯೆ 115.52 ಕೋಟಿ ಇದ್ದು, 2020 ಡಿಸೆಂಬರ್‌ನಲ್ಲಿ 115.37 ಕೋಟಿಗೆ ಇಳಿದಿದೆ. ಪ್ರಸ್ತುತ ಜಿಯೋ 4.78 ಲಕ್ಷ ಗ್ರಾಹಕರನ್ನು ಸೆಳೆದುಕೊಂಡಿದೆ. ಜಿಯೋ ಪ್ರತಿಸ್ಪರ್ಧಿ ಭಾರತಿ ಏರ್‌ಟೆಲ್‌ 40 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಸೆಳೆದರೆ, ವೊಡಾಫೋನ್‌ ಐಡಿಯಾ ಸುಮಾರು 57 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ಪಂಜಾಬಿನಲ್ಲಿ 2019 ಕ್ಕೆ ಹೋಲಿಸಿದರೆ 2020 ಡಿಸೆಂಬರ್‌ ಅತ್ಯಂತ ಕಡಿಮೆ ಚಂದಾದಾರರನ್ನು ಹೊಂದಿದೆ ಎಂದು ಇಂಡಿಯನ್‌ ಎಕ್ಸ್‌ಪ್ರಸ್‌ ವರದಿ ಮಾಡಿದೆ. ಸೆಪ್ಟೆಂಬರ್‌ 2016 ರಲ್ಲಿ ಟೆಲಿಕಾಂ ಸಂಸ್ಥೆ ಸ್ಥಾಪನೆಯಾದಾಗಿನಿಂದ ಹರಿಯಾಣದಲ್ಲಿ ಚಂದಾದಾರರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು ಇದೇ ಮೊದಲು.

ಟವರ್‌ಗಳ ಧ್ವಂಸ: ರೈತರ ಮೇಲೆ ಆರೋಪ ಹೊರಿಸಿದ ಜಿಯೋ

ಡಿಸೆಂಬರ್‌ನಲ್ಲಿ ಹೊತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿದ ಪ್ರತಿಭಟನಾಕಾರರು ಪಂಜಾಬ್‌, ಹರಿಯಾಣ ಭಾಗಗಳಲ್ಲಿ ಸುಮಾರು 1500 ಜಿಯೋ ಮೊಬೈಲ್‌ ಟವರ್‌ಗಳನ್ನು ದ್ವಂಸಗೊಳಿಸಿದ್ದಾರೆಂದು ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರತಿಭಟನಾ ನಿರತ ರೈತರು ʼಇಂತಹ ಸಮಾಜ ವಿರೋಧಿ ಕಾರ್ಯಗಳಲ್ಲಿ ನಾವು ಭಾಗಿಯಾಗಿಲ್ಲ ಎಂದು ಹೇಳಿದ್ದರು ಹಾಗೂ ಇಂತಹ ಕೃತ್ಯಗಳಲ್ಲಿ ಜನರು ಭಾಗಿಯಾಗಬಾರದೆಂದು ಕೇಳಿಕೊಂಡಿದ್ದರು.

ಟವರ್‌ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್‌ ಇಂಡಸ್ಟ್ರೀಯಲ್ ಲಿಮಿಟೆಡ್‌ ಸರ್ಕಾರದ ಹಸ್ತಕ್ಷೇಪ ಕೋರಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮತ್ತು ನಾವು ಗುತ್ತಿಗೆ ಕೃಷಿ ಮಾಡುವುದಿಲ್ಲ, ಹೊಸ ಕೃಷಿ ಕಾಯ್ದೆಗಳಿಂದ ನಮಗೆ ಲಾಭವಿಲ್ಲ, ಗುತ್ತಿಗೆ ಕೃಷಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆ ಮಾಡಿಲ್ಲ ಎಂದು ರೈತರ ಮನವೊಲಿಸುವುದರ ಜೊತೆಗೆ ಟವರ್‌ ಧ್ವಂಸದ ಹಿಂದೆ ಪ್ರತಿಸ್ಪರ್ಧಿಗಳ ಕೈವಾಡವಿದೆ ಎಂದು ರಿಲಯನ್ಸ್‌ ಮುಖ್ಯಸ್ಥ ಅಂಬಾನಿ ದೂರಿದ್ದರು.

ಇದೀಗ ಅಧಿಕ ಸಂಖ್ಯೆಯಲ್ಲಿ ರಿಲಯನ್ಸ್‌, ಜಿಯೋ ತನ್ನ ಚಂದಾದಾರರನ್ನು ಕಳೆದುಕೊಳ್ಳುವುದರ ಮುಖೇನ ಪರೋಕ್ಷವಾಗಿ ರೈತರ ಪ್ರತಿಭಟನೆಯ ಕಾವು ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಗೆ ಬಿಸಿಮುಟ್ಟಿಸಿದಂತಿದೆ. ಅನ್ನದಾತ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದರೆ ಬಂಡವಾಳ ಶಾಹಿಗಳ ಜೇಬಿಗೆ ಕತ್ತರಿ ಬಿದ್ದಂತೆ ಎಂಬುವುದಕ್ಕೆ ಈ ಮೇಲಿನ ಅಂಶಗಳು ಉದಾಹರಣೆಯಾಗಿವೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com