ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ ಕ್ರಮವನ್ನು ಬಲವಾಗಿ ಸಮರ್ಥಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ʼಟೂಲ್ಕಿಟ್ ಪ್ರಕರಣದ ತನಿಖೆಯಲ್ಲಿ ಪರಿಸರ ಕಾರ್ಯಕರ್ತೆಯ ಬಂಧನವನ್ನು ಪೊಲೀಸರು ವಿವರಿಸಿದ್ದಾರೆ. ಅಪರಾಧ ನಿರ್ಣಯಿಸುವಲ್ಲಿ ಅಪರಾಧಿಯ ಲಿಂಗ, ವಯಸ್ಸು, ವೃತ್ತಿಯಂತಹ ಅಂಶಗಳು ಪ್ರಸ್ತುತವಾಗುವುದಿಲ್ಲʼ ಎಂದಿದ್ದಾರೆ.
ತನಿಖೆಯ ಪ್ರಗತಿಯನ್ನು ವಿವರಿಸಲು ನಿರಾಕರಿಸಿರುವ ಸಚಿವರು, ಲಿಂಗ, ವಯಸ್ಸು, ವೃತ್ತಿಯನ್ನು ಆಧರಿಸಿ ಅಪರಾಧವನ್ನು ನಿರ್ಣಯಿಸಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಅಪರಾಧ ಪ್ರಕರಣದ ಸ್ವರೂಪವನ್ನು ಬಾಹ್ಯ ಅಂಶಗಳ ಮೇಲೆ ನಿರ್ಣಯಿಸಬಾರದು. ಈ ಪ್ರಕರಣವನ್ನು ದೆಹಲಿ ಪೊಲೀಸರು "ನಿಖರವಾಗಿ" ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು ಎದುರಿಸಲು ದೆಹಲಿ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಅವರ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ ಮತ್ತು ಅವರಿಗೆ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುವ ಸ್ವಾತಂತ್ರ್ಯವಿದೆ, ಆದ್ದರಿಂದ ನಾನು ಪ್ರಕರಣದ ಅರ್ಹತೆಗಳ ಬಗ್ಗೆ ಮಾತನಾಡುವುದಿಲ್ಲ” ಎಂದು ಶಾ ಹೇಳಿರುವುದಾಗಿ ಟೈಮ್ಸ್ ನೌ ಮತ್ತು ಎಬಿಪಿ ನ್ಯೂಸ್ ವರದಿ ಮಾಡಿವೆ.
ದಿಶಾ ರವಿ ಬಂಧನ ಬಳಿಕ ಆಕೆಯ ವಯಸ್ಸನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ, ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಯಲ್ಲಿ ನೀವು ವಯಸ್ಸನ್ನು ಕೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ದೆಹಲಿ ಪೊಲೀಸರಿಂದ ತಪ್ಪು ನಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ. ಹಾಗೇನಾದರೂ ಆದರೆ ನ್ಯಾಯಾಲಯದ ಮೊರೆ ಹೋಗಿ ಪ್ರಕರಣವನ್ನು ರದ್ದುಗೊಳಿಸುವ ಅವಕಾಶವೂ ಇದೆ. ಅವರ ವಿರುದ್ಧ ಯಾವ ಪುರಾವೆಯೂ ಇಲ್ಲದಿದ್ದರೆ ನ್ಯಾಯಾಲಯದಿಂದ ಪರಿಹಾರ ಪಡೆಯಬಹುದು ಎಂದು ಹೇಳಿದ್ದಾರೆ.
ಬಂಧನದ ವಿರುದ್ಧ ಪ್ರಶ್ನೆಗಳನ್ನು ಎತ್ತುವುದು ಬಹಳ ಸುಲಭ. ಆದರೆ ಅಹಿತಕರ ಘಟನೆಗಳು ಸಂಭವಿಸಿದಾಗ ಅದರ ಜವಾಬ್ದಾರಿ ಹೊರಲು ಯಾರು ಇರುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.