ಬಡವರ ಬಡ್ಡಿ ಮನ್ನಾ ಮಾಡದ ಸರ್ಕಾರ, ಶ್ರೀಮಂತರ ಸಾವಿರಾರು ಕೋಟಿ ಮನ್ನಾ ಮಾಡಿತು!

ಬ್ಯಾಂಕಿಂಗ್ ವಂಚನೆಯನ್ನೇ ಚುನಾವಣಾ ಅಸ್ತ್ರವಾಗಿ ಬಳಸಿ ಗೆದ್ದು ಬಂದು ಅಧಿಕಾರ ಹಿಡಿದವರ ಆಪ್ತರೇ ಲಕ್ಷಾಂತರ ಕೋಟಿ ಬ್ಯಾಂಕಿಂಗ್ ವಂಚನೆಯಲ್ಲಿ ಮುಳುಗಿರುವಾಗ, ದೇಶದ ಬಡವರು, ಕೂಲಿಕಾರ್ಮಿಕರ ಚಿಲ್ಲರೆ ಕಾಸಿನ ಸಾಲದ ವಸೂಲಾತಿಗೆ ಕಾನೂನು ಕತ್ತಿ ಝಳಪಿಸಲಾಗುತ್ತಿದೆ. ಮತ್ತೊಂದು ಕಡೆ ಸಾವಿರಾರು ಕೋಟಿ ಎನ್ ಪಿಎ ಮನ್ನಾ ಮಾಡಲಾಗುತ್ತಿದೆ!
ಬಡವರ ಬಡ್ಡಿ ಮನ್ನಾ ಮಾಡದ ಸರ್ಕಾರ, ಶ್ರೀಮಂತರ ಸಾವಿರಾರು ಕೋಟಿ ಮನ್ನಾ ಮಾಡಿತು!

ಕರೋನಾ ಸಂಕಷ್ಟದ ನಡುವೆ, ದೇಶದ ಮುಂಚೂಣಿ ಸಾರ್ವಜನಿಕ ಬ್ಯಾಂಕ್ ಎಸ್ ಬಿಐ ಸೇರಿದಂತೆ ಒಟ್ಟು 18 ಬ್ಯಾಂಕುಗಳು ಬರೋಬ್ಬರಿ 25 ಸಾವಿರ ಕೋಟಿ ರೂ. ನಷ್ಟು ಭಾರೀ ಮೊತ್ತದ ವಸೂಲಾಗದ ಸಾಲ(ಎನ್ ಪಿಎ)ವನ್ನು ಮನ್ನಾ ಮಾಡಿವೆ.

ದೇಶದ ಸಾರ್ವಜನಿಕ ಮತ್ತು ಖಾಸಗೀ ಬ್ಯಾಂಕುಗಳ ವಸೂಲಾಗದ ಸಾಲಗಳ ಭಾರ ಕಡಿಮೆ ಮಾಡಿ, ಅವುಗಳನ್ನು ಮುಳುಗಡೆಯಿಂದ ಪಾರು ಮಾಡುವ ಉದ್ದೇಶದಿಂದ ಕಳೆದ ಐದು ವರ್ಷಗಳಲ್ಲಿ ಸರ್ಕಾರ ಸಾಲುಸಾಲು ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಅಲ್ಲದೆ, ಲಕ್ಷಾಂತರ ಕೋಟಿ ವಸೂಲಾಗದ ಸಾಲಗಳನ್ನು ಮನ್ನಾ ಮಾಡಲಾಗಿದೆ. ಆದಾಗ್ಯೂ ದೇಶದ ಬ್ಯಾಂಕುಗಳನ್ನು ನಷ್ಟದಿಂದ ಪಾರುಮಾಡುವುದು ಸಾಧ್ಯವಾಗಿಲ್ಲ.

ಇದೀಗ ಕರೋನಾ ಸಂಕಷ್ಟದ ನೆಪ ಹೇಳಿ ಒಂದು ಕಡೆ ಪ್ರಧಾನಿ ಮೋದಿಯವರ ಸರ್ಕಾರ, ದೇಶದ ವಯೋವೃದ್ಧರ ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಿಕ ಗೌರವಧನ, ವಿಧವಾ ವೇತನದಂತಹ ಕನಿಷ್ಟ ಸಾಮಾಜಿಕ ಭದ್ರತಾ ಯೋಜನೆಗಳ ಹಣವನ್ನೇ ಬಿಡುಗಡೆ ಮಾಡದೆ ತಿಂಗಳುಗಳೇ ಕಳೆದಿವೆ. ಆದರೆ, ಒಂದು ಕಡೆ ಹೀಗೆ ಬಡವರ ಐದು ನೂರು- ಸಾವಿರ ರೂಪಾಯಿ ನೀಡಲೂ ಕರೋನಾ ಸಂಕಷ್ಟದ ನೆಪ ಹೇಳುತ್ತಿರುವಾಗಲೇ, ದೇಶದ 18 ಬೃಹತ್ ಬ್ಯಾಂಕುಗಳು ಶ್ರೀಮಂತರ ಸಾವಿರಾರು ಕೋಟಿ ರೂ. ಸಾಲವನ್ನು ಮನ್ನಾ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಡಿಸೆಂಬರ್ ತ್ರೈಮಾಸಿಕದಲ್ಲಿ ಎಸ್ ಬಿಐ ಸೇರಿದಂತೆ ಒಟ್ಟು 18 ಬ್ಯಾಂಕುಗಳು 25,539 ಕೋಟಿ ರೂ. ಮೊತ್ತದ ವಸೂಲಾಗದ ಸಾಲ(ಎನ್ ಪಿಎ) ಮನ್ನಾ ಮಾಡಿವೆ. ಆ ಮೂಲಕ ನಿರಂತರ ಏರಿಕೆಯಲ್ಲೇ ಇರುವ ಎನ್ ಪಿಎ ಪ್ರಮಾಣವನ್ನು ತಗ್ಗಿಸುವ ಪ್ರಯತ್ನ ಬ್ಯಾಂಕುಗಳಿಂದ ನಡೆದಿದೆ. ಸಾಲ ಮನ್ನಾ ಮಾಡುವಾಗ ಸಾಮಾನ್ಯವಾಗಿ ಬ್ಯಾಂಕುಗಳು ಎರಡು ವಿಧಾನಗಳನ್ನು ಅನುಸರಿಸುತ್ತವೆ. ಸಾಲ ವಸೂಲಿ ಪ್ರಯತ್ನಗಳನ್ನು ಮುಂದುವರಿಸುತ್ತಲೇ, ಆ ಸಾಲವನ್ನು ತನ್ನ ವಸೂಲಾಗದ ಸಾಲದ ಖಾತೆಗಳ ಪಟ್ಟಿಯಿಂದ ಇಡಿಯಾಗಿನಿರ್ದಿಷ್ಟ ಖಾತೆಯನ್ನು ತೆಗೆದುಹಾಕುವ ಮೂಲಕ ಎನ್ ಪಿಎ ಭಾರ ಕಡಿತ ಮಾಡುವುದು ಒಂದು ಕ್ರಮವಾದರೆ; ಮತ್ತೊಂದು, ಬಾಕಿ ಸಾಲ ವಸೂಲಿ ಸಾಧ್ಯವೇ ಇಲ್ಲ ಎಂದು ಅಂತಿಮವಾಗಿ ತೀರ್ಮಾನಿಸಿ ಅದನ್ನು ಶಾಶ್ವತವಾಗಿ ವಸೂಲಾಗದ ಸಾಲ ಎಂದು ಪರಿಗಣಿಸಿ ಮನ್ನಾ ಎಂದು ಘೋಷಿಸುವುದು. ಈಗ ಮನ್ನಾ ಮಾಡಿರುವ 25 ಸಾವಿರ ಕೋಟಿ ಮೊತ್ತದಲ್ಲಿ ಈ ಎರಡೂ ಬಗೆಯ ಸಾಲಗಳು ಸೇರಿವೆ ಎಂದು ‘ಫೈನಾನ್ಷಿಯಲ್ ಎಕ್ಸ್ ಪ್ರೆಸ್’ ಹೇಳಿದೆ.

18 ಬ್ಯಾಂಕುಗಳ ಪೈಕಿ ಎಸ್ ಬಿಐ ಒಂದರಿಂದಲೇ 9,986 ಕೋಟಿ ರೂ. ಮೊತ್ತದ ಎನ್ ಪಿಎ ಮನ್ನಾ ಮಾಡಲಾಗಿದೆ. ಯೂನಿಯನ್ ಬ್ಯಾಂಕ್ 5,850 ಕೋಟಿ, ಬ್ಯಾಂಕ್ ಆಫ್ ಬರೋಡಾ 4,708 ಕೋಟಿ, ಆಕ್ಸಿಸ್ ಬ್ಯಾಂಕ್ 4,242 ಕೋಟಿ ಹಾಗೂ ಐಡಿಬಿಐ 2,809 ಕೋಟಿ ರೂ. ಎನ್ ಪಿಎ ಮನ್ನಾ ಮಾಡಿವೆ. ಆದರೆ, ಹೀಗೆ ಮನ್ನಾ ಆಗಿರುವ ಸಾರ್ವಜನಿಕರ ತೆರಿಗೆ ಹಣವನ್ನು ಮುಳುಗಿಸಿದ ಉದ್ಯಮಿಗಳು, ಕಾರ್ಪೊರೇಟ್ ಕಂಪನಿಗಳು ಯಾರು ಎಂಬ ವಿವರಗಳು ಮಾತ್ರ ಬಹಿರಂಗವಾಗಿಲ್ಲ.

ಈ ನಡುವೆ, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ-1 ಮತ್ತು 2ರ ಸರ್ಕಾರಗಳು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ದಿವಾಳಿ ಮಾಡಿವೆ. ಕಾಂಗ್ರೆಸ್ ಅಧ್ಯಕ್ಷೆ ಮತ್ತು ಅವರ ಕುಟಂಬದ ಆಪ್ತರಿಗೆಲ್ಲಾ ದೇಶದ ಬ್ಯಾಂಕುಗಳಲ್ಲಿದ್ದ ಸಾರ್ವಜನಿಕ ಹಣವನ್ನು ಮನಸೋಇಚ್ಛೆ ದಾನ ಮಾಡಿವೆ. ಒಂದು ಫೋನ್ ಕರೆಯಲ್ಲಿ ಯಾವುದೇ ಆಧಾರವಿಲ್ಲದೆ ಸಾವಿರಾರು ಕೋಟಿ ರೂ. ಸಾಲ ನೀಡಿದ ಪರಿಣಾಮ ದೇಶದ ಬ್ಯಾಂಕುಗಳು ಮುಳುಗುತ್ತಿವೆ ಎಂಬುದನ್ನೇ ಚುನಾವಣಾ ಘೋಷಣೆ ಮಾಡಿಕೊಂಡು ಗೆದ್ದು ಅಧಿಕಾರ ಹಿಡಿದ ಬಿಜೆಪಿ, ಕಳೆದ ಏಳು ವರ್ಷಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಸುಧಾರಣೆಗೆ ಏನು ಕ್ರಮ ಕೈಗೊಂಡಿದೆ ಎಂಬುದಕ್ಕೆ ನಿರಂತರ ಏರುತ್ತಲೇ ಇರುವ ವಸೂಲಾಗದ ಸಾಲ(ಎನ್ ಪಿಎ) ಮತ್ತು ಅದರ ಭಾರದಲ್ಲಿ ಮುಚ್ಚುತ್ತಿರುವ ಸಾಲು ಸಾಲು ಬ್ಯಾಂಕುಗಳ ಪತನವೇ ನಿದರ್ಶನ.

ಪ್ರಧಾನಿ ಮೋದಿಯರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಏಳು ವರ್ಷಗಳಲ್ಲಿ ದೇಶದ 12 ಪ್ರಮುಖ ಸಾರ್ವಜನಿಕ ಬ್ಯಾಂಕುಗಳು ಮನ್ನಾ ಮಾಡಿರುವ ಬೃಹತ್ ಉದ್ಯಮಿಗಳ ಕನಿಷ್ಟ 100 ಕೋಟಿ ರೂ.ಗಳಿಗಿಂತ ಅಧಿಕ ಮೊತ್ತದ ಸಾಲದ ಒಟ್ಟು ಪ್ರಮಾಣ ಬರೋಬ್ಬರಿ 6.32 ಲಕ್ಷ ಕೋಟಿ ರೂ., ಆ ಪೈಕಿ ಕಳೆದ ನಾಲ್ಕು ವರ್ಷಗಳಲ್ಲಿ ಮನ್ನಾ ಮಾಡಲಾದ ಬೃಹತ್ ಸಾಲದ ಮೊತ್ತವೇ ಸುಮಾರು ಐದು ಲಕ್ಷ ಕೋಟಿ ರೂ. ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯೊಂದು ಹೇಳಿದೆ. ಹೀಗೆ ಸಾರ್ವಜನಿಕ ಹಣವನ್ನು ಲೂಟಿ ಹೊಡೆದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದು ಮೋದಿಯವರ ತವರು ರಾಜ್ಯ ಗುಜರಾತಿನ ವಂಚಕ ಮೆಹೂಲ್ ಚೋಕ್ಸಿ ಎಂಬಾತ ಮತ್ತು ಆತ ಇದೇ ಸರ್ಕಾರದ ಅವಧಿಯಲ್ಲೇ ದೇಶ ಬಿಟ್ಟು ಪರಾರಿಯಾಗಿದ್ದಾನೆ!

ಈ ನಡುವೆ, ಪ್ರಧಾನಿ ಮೋದಿಯವರ ಪರಮ ಮಿತ್ರ ಅದಾನಿ ಕೂಡ ದೇಶದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಸಂಗತಿಯನ್ನು ಆಡಳಿತರೂಢ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರೇ ಕಳೆದ ತಿಂಗಳು ಬಹಿರಂಗಪಡಿಸಿದ್ದರು. ಆ ಕುರಿತು ಅವರು ಟ್ವೀಟ್ ಮಾಡಿ, “ಚಮತ್ಕಾರಿ ಕಲಾಕಾರ ಅದಾನಿ ಸದ್ಯ ಬ್ಯಾಂಕುಗಳಿಗೆ ಬರೋಬ್ಬರಿ 4.5 ಲಕ್ಷ ಕೋಟಿ ರೂ. ಬಾಕಿ(ಎನ್ ಪಿಎ) ಉಳಿಸಿಕೊಂಡಿದ್ದಾರೆ. ಈ ಮಾಹಿತಿ ತಪ್ಪಿದ್ದರೆ ಸರಿಪಡಿಸಿ. 2016ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ತನ್ನ ಆದಾಯ ದುಪ್ಪಟ್ಟು ಮಾಡಿಕೊಳ್ಳುತ್ತಿರುವ ಈ ಕಲಾಕಾರನಿಗೆ ಬ್ಯಾಂಕ್ ಬಾಕಿ ಪಾವತಿಗೆ ಏನು ಸಮಸ್ಯೆ? ಬಹುಶಃ ಆರು ವಿಮಾನ ನಿಲ್ದಾಣಗಳನ್ನು ಖರೀದಿಸಿದಂತೆಯೇ ಕೆಲವೇ ದಿನಗಳಲ್ಲಿ ತಾನು ಬಾಕಿದಾರನಾಗಿರುವ ಬ್ಯಾಂಕುಗಳನ್ನು ಖರೀದಿಸುವ ಯೋಜನೆ ಇರಬಹುದು” ಎಂದು ಕಾಲೆಳೆದಿದ್ದರು.

ಇನ್ನು ಮೋದಿಯವರ ಮತ್ತೊಬ್ಬ ಮಿತ್ರರಾದ ಅನಿಲ್ ಅಂಬಾನಿಯ ಮೂರು ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಕಳೆದ ತಿಂಗಳಷ್ಟೇ ಎಸ್ ಬಿಐ ಬ್ಯಾಂಕ್ ವಂಚನೆ ಖಾತೆಗಳೆಂದು ಘೋಷಿಸಿದೆ. ಕೇವಲ ಎಸ್ ಬಿಐ ಒಂದಕ್ಕೇ ಅನಿಲ್ ಅಂಬಾನಿ ಎಸಗಿರುವ ವಂಚನೆಯ ಒಟ್ಟು ಮೊತ್ತ ಬರೋಬ್ಬರಿ 50 ಸಾವಿರ ಕೋಟಿ ರೂ.! ಈ ಮಾಹಿತಿಯನ್ನು ಸ್ವತಃ ಎಸ್ ಬಿಐ, ದೆಹಲಿ ಹೈಕೋರ್ಟಿಗೆ ನೀಡಿದೆ!

ಹೀಗೆ, ಬ್ಯಾಂಕಿಂಗ್ ವಂಚನೆಯನ್ನೇ ಚುನಾವಣಾ ಅಸ್ತ್ರವಾಗಿ ಬಳಸಿ ಗೆದ್ದು ಬಂದು ಅಧಿಕಾರ ಹಿಡಿದವರ, ಸರ್ಕಾರದ ಚುಕ್ಕಾಣಿ ಹಿಡಿದವರ ಆಪ್ತರೇ ಲಕ್ಷಾಂತರ ಕೋಟಿ ಬ್ಯಾಂಕಿಂಗ್ ವಂಚನೆಯಲ್ಲಿ ಮುಳುಗಿರುವಾಗ, ದೇಶದ ಬಡವರು, ಕೂಲಿಕಾರ್ಮಿಕರ ಚಿಲ್ಲರೆ ಕಾಸಿನ ಸಾಲದ ವಸೂಲಾತಿಗೆ ಕಾನೂನು ಕತ್ತಿ ಝಳಪಿಸಲಾಗುತ್ತಿದೆ. ಕರೋನಾ ಸಂಕಷ್ಟದ ನಡುವೆಯೂ ಕನಿಷ್ಟ ಬಡ್ಡಿ ಮನ್ನಾವನ್ನೂ ಮಾಡದೆ, ಸಣ್ಣ ವ್ಯಾಪಾರಿಗಳು, ಉದ್ಯಮಿಗಳು, ಗೃಹ ಉದ್ಯಮಿಗಳ ಮೇಲೆ ಬಡ್ಡಿ ಮೇಲೆ ಬಡ್ಡಿ ಬರೆ ಎಳೆಯಲಾಗುತ್ತಿದೆ! ಇದು ಬಿಜೆಪಿ 2014ಕ್ಕೆ ಮುನ್ನ ನೀಡಿದ್ದ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆಯ ವರಸೆ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com