ಲಾಕರ್‌ಗಳಲ್ಲಿ ಸ್ಥಳಾವಕಾಶ ಕೊರತೆ: ಬೆಳ್ಳಿ ಇಟ್ಟಿಗೆ ಕೊಡಬೇಡಿ ಎಂದ ರಾಮ ಮಂದಿರ ನಿರ್ಮಾಣ ಸಮಿತಿ

ದೇವಾಲಯಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯರು ತಮ್ಮ ಬ್ಯಾಂಕ್ ಲಾಕರ್‌ಗಳಲ್ಲಿ ಶೇಖರಿಸಿಡಲು ಸ್ಥಳವಿಲ್ಲದ ಕಾರಣ ಬೆಳ್ಳಿ ಇಟ್ಟಿಗೆಗಳನ್ನು ದಾನ ಮಾಡದಂತೆ ದಾನಿಗಳಿಗೆ ಮನವಿ ಮಾಡಿದ್ದಾರೆ
ಲಾಕರ್‌ಗಳಲ್ಲಿ ಸ್ಥಳಾವಕಾಶ ಕೊರತೆ: ಬೆಳ್ಳಿ ಇಟ್ಟಿಗೆ ಕೊಡಬೇಡಿ ಎಂದ ರಾಮ ಮಂದಿರ ನಿರ್ಮಾಣ ಸಮಿತಿ

ಕಳೆದ ಮೂರು ದಶಕಗಳಿಂದಲೂ ರಾಮನ ಹೆಸರು ಭಾರತದಲ್ಲಿ ವಿಪರೀತವಾಗಿ ಬಳಕೆ ಆಗುತ್ತಿದೆ. ದೇಶದ ಕೋಟ್ಯಾಂತರ ಹಿಂದೂಗಳ ಆರಾಧ್ಯ ದೈವ ರಾಮನ ಹೆಸರು ರಾಜಕೀಯ ಕಾರಣಗಳಿಗೂ ಬಳಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಮಾಜವನ್ನು ಒಂದುಗೂಡಿಸಬೇಕಾದ ದೇವರ ನಾಮವು ಇಂದು ವಿಭಜನೆಗೆ ಕಾರಣ ಆಗುತ್ತಿರುವುದು ವಿಷಾದನೀಯ. 1992 ರಂದು ಬಾಬ್ರೀ ಮಸೀದಿ ಧ್ವಂಸ ಮತ್ತು ಅದಕ್ಕೂ ಮೊದಲು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ದೇಶಾದ್ಯಂತ ನಡೆಸಿದ ರಥ ಯಾತ್ರೆ ಹಲವಷ್ಟು ಹಿಂಸೆಗೆ ಕಾರಣ ಆಯಿತು. ನಂತರ ಅಲ್ಲಲ್ಲಿ ಒಂದಷ್ಟು ಹಿಂಸಾ ಘಟನೆಗಳು ನಡೆಯುತಿದ್ದವು. ದೇಶದ ಆಡಳಿತ ಪಕ್ಷವಾದ ಬಿಜೆಪಿಯು ರಾಮ ಮಂದಿರ ನಿರ್ಮಾಣವನ್ನು ತನ್ನ ಪ್ರಣಾಳಿಕೆಯಲ್ಲೇ ಘೋಷಿಸಿಕೊಂಡಿತು. ನಂತರ ಪ್ರತೀ ಚುನಾವಣೆಯಲ್ಲೂ ರಾಮನ ಹೆಸರು ಬಳಕೆ ಆಗತೊಡಗಿತು. ಕಳೆದ ವರ್ಷವಷ್ಟೇ ಸುಪ್ರೀಂ ಕೋರ್ಟು ಬಾಬ್ರಿ ಮಸೀದಿ ವಿವಾದದ ಅಂತಿ ತೀರ್ಪು ನೀಡಿದ್ದು ದಶಕಗಳ ಭೂ ವಿವಾದ ಕೊನೆಗೊಂಡಿತು. ಇದಾದ ನಂತರ ಈಗ ರಾಮ ಮಂದಿರ ನಿರ್ಮಾಣಕ್ಕೆ ಸಂಘ ಪರಿವಾರವು ದೇಶಾದ್ಯಂತ ನಿಧಿ ಸಂಗ್ರಹಣೆಯಲ್ಲಿ ತೊಡಗಿಕೊಂಡಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನವು ಭರದಿಂದ ಸಾಗಿರುವ ಮದ್ಯೆಯೇ ದೇವಾಲಯದ ನಿರ್ಮಾಣಕ್ಕಾಗಿ ರಚಿಸಲಾಗಿರುವ ಟ್ರಸ್ಟ್ ಈಗ ಒಂದು ವಿಶಿಷ್ಟ ಸವಾಲನ್ನು ಎದುರಿಸುತ್ತಿದೆ. ದೇವಾಲಯಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯರು ತಮ್ಮ ಬ್ಯಾಂಕ್ ಲಾಕರ್ಗಳಲ್ಲಿ ಶೇಖರಿಸಿಡಲು ಸ್ಥಳವಿಲ್ಲದ ಕಾರಣ ಬೆಳ್ಳಿ ಇಟ್ಟಿಗೆಗಳನ್ನು ದಾನ ಮಾಡದಂತೆ ದಾನಿಗಳಿಗೆ ಮನವಿ ಮಾಡಿದ್ದಾರೆ. ಈವರೆಗೆ ದಾನಿಗಳಿಂದ 400 ಕೆಜಿಗಿಂತ ಹೆಚ್ಚು ಬೆಳ್ಳಿ ಇಟ್ಟಿಗೆಗಳನ್ನು ದಾನ ಹರಿದು ಬಂದಿದೆ. ದೇವಾಲಯದ ನಿರ್ಮಾಣದಲ್ಲಿ ಬಳಸಲು ದೇಶಾದ್ಯಂತದ ಜನರು ಬೆಳ್ಳಿ ಇಟ್ಟಿಗೆಗಳನ್ನು ಕಳುಹಿಸುತ್ತಿದ್ದಾರೆ. ನಾವು ಈಗ ಹಲವಾರು ಬೆಳ್ಳಿ ಇಟ್ಟಿಗೆಗಳನ್ನು ಹೊಂದಿದ್ದೇವೆ, ಅವುಗಳನ್ನು ಹೇಗೆ ಸುರಕ್ಷಿತವಾಗಿ ಸಂಗ್ರಹಿಸಿ ಇಡಬಹುದು ಎಂಬುದರ ಕುರಿತು ನಾವು ಹೆಚ್ಚು ಯೋಚಿಸಬೇಕು ಎಂದು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ತಿಳಿಸಿದರು. ಟ್ರಸ್ಟ್ ಈಗ ಹೊಂದಿರುವ ಎಲ್ಲಾ ಬ್ಯಾಂಕ್ ಗಳ ಸೇಫ್ ಡಿಪಾಸಿಟ್ ಲಾಕರ್ ಗಳು ಸಂಪೂರ್ಣ ಬೆಳ್ಳಿ ಹಾಗೂ ಚಿನ್ನದ ಕಾಣಿಕೆಗಳೊಂದಿಗೆ ತುಂಬಿ ಹೋಗಿವೆ. ಆದ್ದರಿಂದ ಟ್ರಸ್ಟ್ ಈಗ ದಾನಿಗಳಿಗೆ ಬೆಳ್ಳಿ ದಾನ ಮಾಡದಂತೆ ಮನವಿ ಮಾಡುತ್ತಿದೆ ಎಂದು ಅವರು ಹೇಳಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಾವು ಶ್ರೀ ರಾಮನ ಭಕ್ತರ ಭಾವನೆಗಳನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ, ಆದರೆ ಅವರು ಇನ್ನು ಮುಂದೆ ಬೆಳ್ಳಿ ಇಟ್ಟಿಗೆಗಳನ್ನು ಕಳುಹಿಸಬಾರದು ಎಂಬುದು ನಮ್ಮ ವಿನಮ್ರ ವಿನಂತಿಯಾಗಿದೆ. ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ಇಡಲು ನಾವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಿದೆ ಎಂದ ಅವರು ದೇವಾಲಯದ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಬೆಳ್ಳಿಯ ಅಗತ್ಯವಿದ್ದರೆ, ನಾವು ಮುಂದಿನ ದಿನಗಳಲ್ಲಿ ಖಂಡಿತ ಭಕ್ತರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತೇವೆ ಎಂದು ಮಿಶ್ರಾ ಹೇಳಿದರು.

ಕಳೆದ ಫೆಬ್ರುವರಿ 1 ರಿಂದ ನಡೆಯುತ್ತಿರುವ ವಂತಿಗೆ ಸಂಗ್ರಹ ಅಭಿಯಾನದಲ್ಲಿ ದೇವಾಲಯ ನಿರ್ಮಾಣಕ್ಕೆ ಈಗಾಗಲೇ ಈ ಮಧ್ಯೆ 1,600 ಕೋಟಿ ರೂಪಾಯಿಗಳಿಗಿಂತ ಹೆಚ್ಚು ನಗದು ದೇಣೀಗೆ ಹರಿದು ಬಂದಿದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ. ವಿಶ್ವ ಸಿಂಧಿ ಸೇವಾ ಸಂಘಟನ್ ಮತ್ತು ಅಂಬೇಡ್ಕರ್ ಮಹಾಸಭಾ ಟ್ರಸ್ಟ್ ಸೇರಿದಂತೆ ಹಲವಾರು ಸಂಸ್ಥೆಗಳ ಪ್ರತಿನಿಧಿಗಳು ಕಳೆದ ವಾರ ಬೆಳ್ಳಿ ಇಟ್ಟಿಗೆಗಳನ್ನು ಟ್ರಸ್ಟ್ ಕಚೇರಿಗೆ ತಂದಿದ್ದರು ಎಂದು ಟ್ರಸ್ಟ್ ಅಧಿಕಾರಿಯೊಬ್ಬರು ತಿಳಿಸಿದರು. ಟ್ರಸ್ಟ್ ಆ ಇಟ್ಟಿಗೆಗಳನ್ನು ಸ್ವೀಕರಿಸಿದರೂ ನಂತರ ಬೆಳ್ಳಿಯ ದಾನವನ್ನು ಸ್ವೀಕರಿಸದಿರಲು ನಿರ್ಧರಿಸಲಾಯಿತು. ಭಕ್ತರು ತಮ್ಮ ದೇಣಿಗೆಗಳನ್ನು ನಗದು ಅಥವಾ ಆನ್ಲೈನ್ ವಹಿವಾಟಿನ ಮೂಲಕ ಸಲ್ಲಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಪ್ರಸ್ತುತ, ದೇವಾಲಯದ ಸಂಕೀರ್ಣದ ಆವರಣದಲ್ಲಿ ಅಗೆಯುವ ಕೆಲಸ ಪ್ರಗತಿಯಲ್ಲಿದೆ ಎಂದು ಅನಿಲ್ ಮಿಶ್ರಾ ಹೇಳಿದರು.ಈಗ ಸುಮಾರು 9 ಮೀಟರ್ ಆಳದವರೆಗೆ ಅಡಿಪಾಯ ಅಗೆಯುವ ಕಾರ್ಯ ಪೂರ್ಣಗೊಂಡಿದೆ. ಸಂಪೂರ್ಣ ಮಣ್ಣಿನ ಅಗೆಯುವಿಕೆಯನ್ನು 70 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತದೆ. ಈ ತಿಂಗಳ ಅಂತ್ಯದ ವೇಳೆಗೆ, ಇಲ್ಲಿಯವರೆಗೆ ಮಾಡಿದ ಕಾರ್ಯಗಳನ್ನು ಪರಿಶೀಲಿಸಲು ಟ್ರಸ್ಟ್ನ ಸಭೆ ನಡೆಯಲಿದೆ ಎಂದು ಅವರು ಹೇಳಿದರು. ‘ನಿಧಿ ಸಂಕಲ್ಪ ಸಂಗ್ರಾಹ್ ’ ಎಂಬ ಘೋಷಣೆಯ ಅಡಿಯಲ್ಲಿ ದೇಣಿಗೆ ಸಂಗ್ರಹ ಅಭಿಯಾನವು ದೇಶದ ಐದು ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ 12 ಕೋಟಿಗೂ ಹೆಚ್ಚು ಕುಟುಂಬಗಳನ್ನು ತಲುಪುವ ಗುರಿ ಹೊಂದಿದೆ. ಮುಂದಿನ ಫೆಬ್ರವರಿ 27 ರವರೆಗೆ ನಡೆಯಲಿರುವ ಈ ಅಭಿಯಾನವನ್ನು ಪ್ರತಿದಿನವೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಅಭಿಯಾನವನ್ನು ನಡೆಸಲು ಟ್ರಸ್ಟ್ ರಚಿಸಿರುವ ವಿವಿಧ ಗುಂಪುಗಳು ಮತ್ತು ಸಂಘಟನೆಗಳು ಹಣವನ್ನು ಟ್ರಸ್ಟ್ ಖಾತೆಗೆ ವರ್ಗಾಯಿಸಲು ಅಥವಾ ದೇಣಿಗೆಗಳನ್ನು ಚೆಕ್ ಆಗಿ ಸ್ವೀಕರಿಸಲು ತಿಳಿಸಲಾಗಿದೆ.

ಈ ನಿಧಿಸಂಗ್ರಹ ಅಭಿಯಾನದಲ್ಲಿ ಒಂದು ಲಕ್ಷ 50 ಸಾವಿರ ಗುಂಪುಗಳು ತೊಡಗಿಕೊಂಡಿವೆ ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ಹಿಂದೆ ಹೇಳಿದ್ದಾರೆ. ಮುಂದಿನ 39 ತಿಂಗಳಲ್ಲಿ ಇಡೀ ದೇವಾಲಯವನ್ನು ನಿರ್ಮಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ಆದರೆ ಮೊದಲಿನಿಂದಲೂ ರಾಜಕೀಯ ಕಾರಣಕ್ಕೆ ಬಳಕೆ ಆಗುತ್ತಿರುವ ರಾಮ ನಾಮ ಮುಂದಿನ ಚುನಾವಣಾ ಸಂದರ್ಭದಲ್ಲಿ ಹೇಗೆ ಬಳಕೆ ಆಗುವುದೋ ಕಾದು ನೋಡಬೇಕಷ್ಟೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com