ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ, ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸುವ ಪಿತೂರಿಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಎ ಕೆ ಪಟ್ನಾಯಕ್ ವಿಚಾರಣಾ ಸಮಿತಿ ನೀಡಿದ ವರದಿ ಹೇಳಿದೆಯೆಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ನ್ಯಾಯಾಂಗ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಅಂದು ಗೊಗೊಯ್ ಅವರು ಕೈಗೊಂಡ ಕಠಿಣ ನಿಲುವಿನಿಂದಾಗಿ ಈ ಪಿತೂರಿ ನಡೆದಿರಬಹುದು ಎಂದು ವರದಿ ಹೇಳಿರುವುದಾಗಿ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠ ಹೇಳಿದೆ.
ಎ.ಕೆ.ಪಟ್ನಾಯಕ್ ಅವರ ವರದಿಯನ್ನು ಆಧರಿಸಿ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ನಂತರ ಆರಂಭಿಸಲಾಗಿದ್ದ ತನಿಖೆಯನ್ನು ಸುಪ್ರಿಂ ಕೋರ್ಟ್ ಮುಕ್ತಾಯಗೊಳಿಸಿದೆ. ಗೊಗೊಯ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿಂದೆ ಪಿತೂರಿಯ ಸಾಧ್ಯತೆಯನ್ನು ಎತ್ತಿದ ನಂತರ ಮಾಜಿ ನ್ಯಾಯಮೂರ್ತಿ ಪಟ್ನಾಯಕ್ ಅವರಿಗೆ ಈ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಿತ್ತು.
ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಸಮಿತಿಯು ಈಗಾಗಲೇ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಾಜಿ ನ್ಯಾಯಮೂರ್ತಿ ಗೊಗೊಯ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರಿಂದ ಪಿತೂರಿ ತನಿಖೆ ನಡೆಸುವ ಆದೇಶ ತನಗೆ ಇಲ್ಲ ಎಂದು ನ್ಯಾಯಮೂರ್ತಿ ಪಟ್ನಾಯಕ್ ಸಮಿತಿ ಹೇಳಿದೆ.
ಮುಖ್ಯ ನ್ಯಾಯಾಧೀಶರ ವಿರುದ್ಧದ ಆರೋಪಗಳನ್ನು ವಿಚಾರಿಸಲು ಸಮಿತಿಯನ್ನು ರಚಿಸಲಾಗಿರಲಿಲ್ಲ. ಆದರೆ ನ್ಯಾಯಾಧೀಶರನ್ನು ಸಿಕ್ಕಿಸುವ ದೊಡ್ಡ ಪಿತೂರಿಯ ಬಗ್ಗೆ ಮಾತ್ರ ತನಿಖೆ ನಡೆಸಲು ಸೂಚಿಸಲಾಗಿತ್ತು ಎಂದು ನ್ಯಾಯಾಧೀಶರು ಕೂಡಾ ಸ್ಪಷ್ಟಪಡಿಸಿದ್ದಾರೆ.
“ನ್ಯಾಯಮೂರ್ತಿ ಪಟ್ನಾಯಕ್ ವರದಿಯು ಮಾಜಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಪಿತೂರಿ ಅಸ್ತಿತ್ವದಲ್ಲಿತ್ತು ಎಂದು ಒಪ್ಪಿಕೊಂಡಿದೆ ಮತ್ತು ಅದನ್ನು ತಳ್ಳಿಹಾಕಲಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಈ ಸಮಿತಿಯು ಎಲೆಕ್ಟ್ರಾನಿಕ್ ದಾಖಲೆಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಪಟ್ನಾಯಕ್ ಸಮಿತಿಗೆ ಸಲ್ಲಿಸಿದ ಇಂಟೆಲಿಜೆನ್ಸ್ ಬ್ಯೂರೋ ವರದಿಯು ನ್ಯಾಯಮೂರ್ತಿ ಗೊಗೊಯ್ ಅವರ ಬಗ್ಗೆ ಎನ್ಆರ್ಸಿ ಕಠಿಣ ನಿಲುವಿನಿಂದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಅವರು ಸಿಜೆಐಗೆ ಮಾನಹಾನಿ ಮಾಡುವ ಪಿತೂರಿಯ ಭಾಗವಾಗಬಹುದೆಂದು ಸುಪ್ರೀಂ ಕೋರ್ಟ್ ಹೇಳಿದೆ.
“ಎನ್ಆರ್ಸಿ ನೋಂದಾವಣೆ (ರಿಜಿಸ್ಟ್ರಿ)ಯಲ್ಲಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೆಲವು ಕಠಿಣ ಆಡಳಿತಾತ್ಮಕ ನಿರ್ಧಾರಗಳನ್ನು ಗೊಗೊಯ್ ತೆಗೆದುಕೊಂಡಿದ್ದರು’ ಎಂದು ಸುಪ್ರೀಂ ಹೇಳಿದೆ.
ಎನ್ಆರ್ಸಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಮೂರ್ತಿ ಗೊಗೊಯ್ ಗಂಭೀರ ದೃಷ್ಟಿಕೋನವನ್ನು ತೆಗೆದುಕೊಂಡಿದ್ದಾರೆ ಮತ್ತು “ಕೆಲವರು ಈ ನಿರ್ಧಾರದಿಂದ ಅಸಮಾಧಾನ ಹೊಂದಿದ್ದಾರೆಂದು ನಂಬಲು ಬಲವಾದ ಕಾರಣಗಳಿವೆ” ಎಂದು ಗುಪ್ತಚರ ಬ್ಯೂರೋ ನಿರ್ದೇಶಕರು ವರದಿಯಲ್ಲಿ ಹೇಳಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಏಪ್ರಿಲ್ 19, 2019 ರಂದು ಕಿರಿಯ ನ್ಯಾಯಾಲಯದ ಮಾಜಿ ಅಧಿಕಾರಿಣಿಯೊಬ್ಬರು ಭಾರತದ (ಅಂದಿನ) ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಅವರು ತಮ್ಮ ಅಪಾದನೆಗಳನ್ನು ದೃಢಿಕರಿಸುವ ದಾಖಲೆಗಳನ್ನು ಸಲ್ಲಿಸಿ, ಏ. 22 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.