ಭೀಮ್ ಆರ್ಮಿ ಸ್ಥಾಪಕ ಚಂದ್ರಶೇಖರ್ ಆಝಾದ್ ರಾವಣ ಸೇರಿದಂತೆ ಭಾರತದ ಐದು ಮಂದಿ TIME ನಿಯತಕಾಲಿಕೆಯ ವಾರ್ಷಿಕ ʼಭವಿಷ್ಯ ರೂಪಿಸುವ 100 ನಾಯಕರುʼ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
TIME ನಿಯತಕಾಲಿಕೆಯ 2021 ರ ಪಟ್ಟಿಯು ಬುಧವಾರ ಬಿಡುಗಡೆಗೊಂಡಿದ್ದು, ಆಝಾದ್ ಜೊತೆಗೆ ವಕೀಲ ವಿಜಯ್ ಗದ್ದೆ, ಯುಕೆಯ ಹಣಕಾಸು ಸಚಿವ ರಿಷಿ ಸುನಕ್, ಇನ್ಸ್ಟಾಕಾರ್ಟ್ ಸಂಸ್ಥಾಪಕ ಮತ್ತು ಸಿಇಒ ಅಪೂರ್ವ ಮೆಹ್ತಾ, ವೈದ್ಯರುಗಳಾದ ಶಿಖಾ ಗುಪ್ತಾ, ರೋಹನ್ ಪಾವುಲೂರಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಇನ್ನಿತರರು.
ಈ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ಇತಿಹಾಸ ಬರೆಯಲಿದ್ದಾರೆ. ಈಗಾಗಲೇ ಕೆಲವರು ಬರೆದಾಗಿದೆ ಎಂದು TIME100 ನ ಸಂಪಾದಕ ನಿರ್ದೇಶಕ ಡ್ಯಾನ್ ಮ್ಯಾಕ್ಸೈ ಹೇಳಿದ್ದಾರೆ.
ಚಂದ್ರಶೇಖರ್ ಆಝಾದ್ ಈ ಮೊದಲೇ ಭರವಸೆಯ ನಾಯಕರಾಗಿ ಹೊರಹೊಮ್ಮಿದ್ದ, ಭೀಮ್ ಆರ್ಮಿಯ ಮುಖಾಂತರ ಉತ್ತರ ಭಾರತದಲ್ಲಿ ಈಗಾಗಲೇ ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿದ್ದಾರೆ. ತನ್ನ ಆಕರ್ಷಕ ರಾಜಕೀಯ ನಿಲುವಿನಿಂದ ದೇಶಾದ್ಯಂತ ಅಭಿಮಾನಿಗಳನ್ನು ಪಡೆಯುತ್ತಿರುವ ಚಂದ್ರಶೇಖರ್ ಆಝಾದ್, ತಾನೊಬ್ಬ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಕಾನ್ಶಿರಾಮ್ರವರ ಆಶಯಗಳನ್ನು ಈಡೇರಿಸುವ ಒಬ್ಬ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಾರೆ.
ದಲಿತ ಅಸ್ಮಿತಾವಾದ ರಾಜಕಾರಣವನ್ನು ಮುಂದಿಡುವ ಚಂದ್ರಶೇಖರ್, ಸಿಎಎ ವಿರೋಧಿ ಹೋರಾಟದ ಸಂಧರ್ಭದಲ್ಲಿ ಪ್ರತಿಭಟನಾಕಾರರಿಂದ ʼಇಮಾಮ್ʼ ಎಂದು ಕರೆಸಿಕೊಂಡವರು.