ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಟೂಲ್ಕಿಟ್ ಸಂಪಾದಿಸಿದ ಪ್ರಕರಣ ಹಿನ್ನಲೆ, ದೆಹಲಿ ಪೊಲೀಸರು ಬೆಂಗಳೂರು ಮೂಲದ ದಿಶಾ ಬಂಧನದ ಬೆನ್ನಲ್ಲೆ ಮುಂಬೈ ಮೂಲದ ವಕೀಲೆ ಹಾಗೂ ಪರಿಸರ ಕಾರ್ಯಕರ್ತೆ ನಿಖಿತಾ ಜಾಕೋಬ್ ಮತ್ತು ಸಾಮಾಜಿಕ ಹೋರಾಟಗಾರ ಶಾಂತನು ಮುಕುಲ್ ಬಂಧನಕ್ಕೆ ಪೊಲೀಸರು ಹೊರಡಿಸಿದ್ದ ಅರೆಸ್ಟ್ ವಾರೆಂಟ್ ಗೆ ಬಾಂಬೆ ಹೈಕೋರ್ಟ್ ತಡೆಹಿಡಿದಿದೆ.
ದೆಹಲಿ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ ಬೆನ್ನಲ್ಲೆ ವಕೀಲೆ ನಿಖಿತಾ ಜಾಕೋಬ್, ಮಧ್ಯಂತರ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಫೆಬ್ರವರಿ 17 ರಂದು ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರು ವಿಚಾರಣೆ ನಡೆಸಿ ಮೂರು ವಾರಗಳವರೆಗೆ ಬಂಧನವನ್ನು ತಡೆಹಿಡಿದು ನಿರೀಕ್ಷಣಾ ಜಾಮೀನು ನೀಡಿದೆ.
ಹೋರಾಟಗಾರ ಶಾಂತನು ಮುಕುಲ್ ಕೂಡ ಬಾಂಬೆ ಹೈಕೋರ್ಟ್ನ ಔರಂಗಬಾದ್ ನ್ಯಾಯಪೀಠಕ್ಕೆ ಜಾಮೀನು ನೀಡುವಂತೆ ಮೇಲ್ಮನವಿ ಸಲ್ಲಿಸಿದ್ದರು. ಫೆಬ್ರವರಿ 16 ರಂದು ನ್ಯಾಯಮೂರ್ತಿ ವಿಭಾ ಕಂಕಣವಾಡಿ ನೇತೃತ್ವದ ನ್ಯಾಯಪೀಠ 10 ದಿನಗಳವರೆಗೆ ನಿರೀಕ್ಷಣಾ ಜಾಮೀನು ನೀಡಿದೆ.
ಸ್ವೀಡಿಷ್ ದೇಶದ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಫೆಬ್ರವರಿ 3 ರಂದು ಭಾರತದ ರೈತರ ಪ್ರತಿಭಟನೆಯ “ಟೂಲ್ ಕಿಟ್” ಹಂಚಿಕೊಂಡಿದ್ದರು. ಇದು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ ಎಂದು ದೆಹಲಿ ಪೊಲೀಸರು ದೇಶದ್ರೋಹದ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.