ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರು ಸಲ್ಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಪತ್ರಕರ್ತೆ ಪ್ರಿಯಾ ರಮಣಿಯವರನ್ನು ಖುಲಾಸೆಗೊಳಿಸಿದೆ. 2018 ರಲ್ಲಿ #MeToo ಆಂದೋಲನದ ಹಿನ್ನೆಲೆಯಲ್ಲಿ ಅಕ್ಬರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ರಮಣಿ ಆರೋಪಿಸಿದ್ದರು.
2017 ರಲ್ಲಿ, ರಮಣಿ ಒಂದು ಲೇಖನವನ್ನು ಬರೆದಿದ್ದು, ಅಲ್ಲಿ ಅವರು ಉದ್ಯೋಗ ಸಂದರ್ಶನದಲ್ಲಿ ಮಾಜಿ ಬಾಸ್ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಬಗ್ಗೆ ಉಲ್ಲೇಖಿಸಿದ್ದರು.
ಒಂದು ವರ್ಷದ ನಂತರ,(2018ರಲ್ಲಿ) ಲೇಖನದಲ್ಲಿ ಕಿರುಕುಳಗೊಳಪಡಿಸಿದ ವ್ಯಕ್ತಿ ಎಂದು ಉಲ್ಲೇಖಿಸಿದ್ದು ಎಂ.ಜೆ.ಅಕ್ಬರ್ ಎಂದು ಅವರು ಬಹಿರಂಗಪಡಿಸಿದ್ದರು. ಪ್ರಿಯಾ ಮಾತ್ರವಲ್ಲದೆ #MeToo ಆಂದೋಲನದ ಸಮಯದಲ್ಲಿ ಹಲವಾರು ಮಹಿಳೆಯರು ಅಕ್ಬರ್ ಅವರ ಮೇಲೆ ಲೈಂಗಿಕ ದುರುಪಯೋಗದ ಆರೋಪ ಹೊರಿಸಿದ್ದರು.
ಆದರೆ, ಪ್ರಿಯಾ ಅವರ ಆರೋಪವನ್ನು ನಿರಾಕರಿಸಿರುವ ಎಂ ಜೆ ಅಕ್ಬರ್, 2018 ರ ಅಕ್ಟೋಬರ್ 15 ರಂದು ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅದೇ ತಿಂಗಳ 17 ರಂದು ತನ್ನ ಸಚಿವ ಸ್ಥಾನಕ್ಕೂ ರಾಜಿನಾಮೆ ನೀಡಿದ್ದರು.
ಪ್ರಿಯಾ ಅವರ ಆರೋಪ ಸಂಪೂರ್ಣ ಕಾಲ್ಪನಿಕವೆಂದ ಅಕ್ಬರ್, ತನ್ನ ವಿರುದ್ಧ ಬಂದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ತನ್ನ ಖ್ಯಾತಿಗೆ ಮಸಿ ಬಳಿಯಲು ಸುಳ್ಳು ಆರೋಪ ಹೊರಿಸಲಾಗಿದೆಯೆಂದಯ ಅವರು ನ್ಯಾಯಾಲಯಕ್ಕೆ ಹೇಳಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಮಾನನಷ್ಟ ಮೊಕದ್ದಮರೆ ಪ್ರಕರಣದಲ್ಲಿ ಪ್ರಿಯಾ ರಮಣಿ ಅವರನ್ನು ಖುಲಾಸೆಗೊಳಿಸಿದೆ.
ಈ ವೇಳೆ, "ಲೈಂಗಿಕ ಕಿರುಕುಳದಿಂದ ಸತ್ರಸ್ತರ ಮೇಲಾಗುವ ಪರಿಣಾಮವನ್ನು ಸಮಾಜ ಅರ್ಥಮಾಡಿಕೊಳ್ಳಬೇಕು. ದಶಕಗಳ ನಂತರವೂ ಮಹಿಳೆಗೆ ತನ್ನ ನೋವನ್ನು ಹೇಳಿಕೊಳ್ಳುವ ಹಕ್ಕಿದೆ” ಎಂದು ತೀರ್ಪು ಹೇಳಿದೆ.