ತಮ್ಮ ತಂದೆ ರಾಜೀವ್ ಗಾಂಧಿಯನ್ನು ಹತ್ಯೆಗೈದದ್ದು ತೀವ್ರ ನೋವು ತಂದಿದೆ. ಆದರೆ ಅದಕ್ಕೆ ಕಾರಣರಾದವರ ಬಗ್ಗೆ ಯಾವುದೇ ಕೋಪ ಅಥವಾ ದ್ವೇಷ ಇಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಪುದುಚೇರಿಯ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿಯವರು ಫೆಬ್ರವರಿ 17 ರಂದು ಸಂವಾದ ನಡೆಸುವ ವೇಳೆ ವಿದ್ಯಾರ್ಥಿನಿಯೊಬ್ಬಳು ರಾಹುಲ್ ಗಾಂಧಿ ಬಳಿ ತಂದೆ ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ಕೇಳಿದಾಗ ಅವರು ಭಾವನಾತ್ಮಕವಾಗಿ ಉತ್ತರಿಸಿದ್ದಾರೆ.
ನಿಮ್ಮ ತಂದೆಯನ್ನು ಎಲ್ಟಿಟಿಇ(ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ) ಹತ್ಯೆ ಮಾಡಿತು. ಈ ಜನರ ಬಗ್ಗೆ ನಿಮ್ಮ ಭಾವನೆಗಳೇನು ಎಂದು ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, "ಹಿಂಸಾಚಾರದಿಂದ ಏನನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ, ಖಂಡಿತವಾಗಿಯೂ ನನಗೆ ಯಾರ ಬಗ್ಗೆ ಕೋಪ ದ್ವೇಷವಿಲ್ಲ, ನಾನು ನನ್ನ ತಂದೆಯನ್ನು ಕಳೆದುಕೊಂಡೆ ಹಾಗು ಅದು ನನಗೆ ತುಂಬಾ ಕಷ್ಟದ ಸಮಯವಾಗಿತ್ತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಅಪರಾಧಿಗಳನ್ನು ಬಿಡುಗಡೆಗೊಳಿಸಲು ಎಲ್ಲಾ ಪಕ್ಷಗಳು ಬೆಂಬಲ ಸೂಚಿಸಿದ್ದವು ಆದರೆ ತಮಿಳುನಾಡಿನ ಕಾಂಗ್ರೆಸ್ (TNCC) ಮಾತ್ರ ವಿರೋಧಿಸಿತ್ತು.
ಮೇ 21 1991 ರಲ್ಲಿ ಚೆನ್ನೈನ ಪೆರುಂಬುದೂರ್ ನ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿಯವರನ್ನು ಎಲ್ಟಿಟಿಇಗೆ ಸೇರಿದ ಮಹಿಳಾ ಆತ್ಮಾಹುತಿ ಬಾಂಬರ್ ಮೂಲಕ ಹತ್ಯೆ ಮಾಡಲಾಗಿತ್ತು.
ತನ್ನ ತಂದೆ ಹಾಗೂ ಅಜ್ಜಿಯ ಹಂತಕರನ್ನು ಕ್ಷಮಿಸಿರುವುದಾಗಿ ರಾಹುಲ್ ಗಾಂಧಿ ಈ ಹಿಂದೆಯೂ ಹಲವು ಬಾರಿ ಹೇಳಿದ್ದರು.