ದಿಶಾ ರವಿ ಅವರ ಬಂಧನದ ನಂತರ ಅವರು ದೇಶದ್ರೋಹಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡಲು, ಅವರ ಹೆಸರು ಮತ್ತು ಧರ್ಮವನ್ನೇ ಬದಲಾಯಿಸಲಾಗಿದೆ. #DishaRaviJoseph ಎಂಬ ಹ್ಯಾಶ್ಟ್ಯಾಗ್ ಅನ್ನು ಟ್ರೆಂಡ್ ಮಾಡುವ ವ್ಯವಸ್ಥಿತ ಪಿತೂರಿಯೂ ನಡೆದಿದೆ. ಆದರೆ, ದಿಶಾ ರವಿ ಅವರ ಕುಟುಂಬಸ್ಥರು ನೀಡಿದ ಹೇಳಿಕೆಯು ಈ ಎಲ್ಲಾ ಷಡ್ಯಂತ್ರಗಳ ಮೇಲೆ ತಣ್ಣೀರೆರಚಿದೆ.
ದಿಶಾ ಅವರ ಸಂಪೂರ್ಣ ಹೆಸರು ದಿಶಾ ರವಿ ಜೋಸೆಫ್. ಅವರೊಬ್ಬರು ಸಿರಿಯನ್ ಕ್ರಿಶ್ಚಿಯನ್, ಎಂಬ ಟ್ವೀಟ್ಗಳು ಹರಿದಾಡಿದ್ದವು. ಈ ವಿಚಾರ ಸಾಕಷ್ಟು ವೈರಲ್ ಕೂಡಾ ಆಗಿತ್ತು. ಕ್ರೈಸ್ತ ಸಮುದಾಯದವರು ಏಕೆ ದೇಶ ಒಡೆಯುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಪ್ರಶ್ನಿಸಲಾಗಿತ್ತು.
ಈ ಕುರಿತು The News Minute ಮಾಡಿದ ಫ್ಯಾಕ್ಟ್ ಚೆಕ್ ವರದಿಯು, ಸುಳ್ಳು ಸುದ್ದಿಯ ಹಿಂದಿನ ಅಸಲಿಯತ್ತನ್ನು ಬಯಲು ಮಾಡಿದೆ. ದಿಶಾ ಅವರ ಕುಟುಂಬಸ್ಥರು ಹೇಳಿರುವ ಪ್ರಕಾರ ಅವರ ಸಂಪೂರ್ಣ ಹೆಸರು, ದಿಶಾ ಅಣ್ಣಪ್ಪ ರವಿ. ತಾಯಿಯ ಹೆಸರು ಮಂಜುಳಾ ನಂಜಯ್ಯ ಹಾಗೂ ತಂದೆಯ ಹೆಸರು ರವಿ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಕುಟುಂಬವಿದು ಎಂದು ನ್ಯೂಸ್ ಮಿನಟ್ ವರದಿ ಮಾಡಿದೆ.
ದಿಶಾ ಕುಟುಂಬಕ್ಕೆ ಆಪ್ತರಾಗಿರುವ ವಕೀಲರಾದ ಪ್ರಸನ್ನ ಅವರು, “ಈ ಪ್ರಕರಣದಲ್ಲಿ ದಿಶಾ ಅವರ ಧರ್ಮ ಪರಿಗಣಿಸುವ ಅಗತ್ಯವೇ ಇಲ್ಲ. ಲಿಂಗಾಯತ ಕುಟುಂಬದಲ್ಲಿ ಬೆಳೆದಿದ್ದರೂ, ಪರಿಸರದ ಕುರಿತ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಳು. ಅವಳ ಧರ್ಮದ ಕುರಿತು ಹಬ್ಬಿರುವ ಸುಳ್ಳು ಸುದ್ದಿಗಳನ್ನು ಬಯಲಿಗೆಳೆಯುವ ಘಟನೆಯೇ ನಡೆಯಬಾರದಿತ್ತು,” ಎಂದಿದ್ದಾರೆ.
ಇನ್ನು ಕನ್ನಡ ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿರುವ ವರದಿಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಪ್ರಸನ್ನ ಅವರು, ದಿಶಾಗೆ ಅಂತರಾಷ್ಟ್ರೀಯ ಮೂಲಗಳಿಂದ ಹಣ ಬರುತ್ತಿತ್ತು ಎಂದು ಸುಳ್ಳು ಸುದ್ದಿಯನ್ನು ಕನ್ನಡ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ, ಎಂದು ಹೇಳಿದ್ದಾರೆ.
ಬುಧವಾರ ಮುಂಜಾನೆಯಿಂದ ಸುಮಾರು 10,000ಕ್ಕೂ ಹೆಚ್ಚು ಟ್ವೀಟ್ಗಳನ್ನು ದಿಶಾ ಹೆಸರಿನಲ್ಲಿ ಮಾಡಲಾಗಿವೆ. ಇವುಗಳಲ್ಲಿ ದಿಶಾ ಅವರ ಧರ್ಮದ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಟ್ವೀಟ್ಗಳೇ ಹೆಚ್ಚಾಗಿದ್ದವು. ಈ ನಿಟ್ಟಿನಲ್ಲಿ ಈ ಫ್ಯಾಕ್ಟ್ಚೆಕ್ ನಡೆಸಲಾಗಿತ್ತು.