ಇಂಧನ ಬೆಲೆ ವಿಪರೀತ ಏರಿಕೆಯಾದರೂ ಭಾರತವೇಕೆ ʼವಿಚಿತ್ರʼ ಮೌನ ವಹಿಸಿದೆ?

ಇಂಧನ ಬೆಲೆ ಏರಿಕೆ ವಿರುದ್ದ ಯಾಕೆ ಪ್ರತಿಭಟಿಸುತ್ತಿಲ್ಲ ಎಂದು ನೀವು ವಿರೋಧ ಪಕ್ಷದ ನಾಯಕನನ್ನು ಕೇಳಿದರೆ, ಅವರು ಮಾಧ್ಯಮದವರು ನಮ್ಮ ಪ್ರತಿಭಟನೆಯ ಸುದ್ದಿಯನ್ನು ಪ್ರಕಟಿಸುವುದಿಲ್ಲ ಸುಮ್ಮನೆ ಏಕೆ ಪ್ರತಿಭಟನೆ ಮಾಡೋದು ಎನ್ನುತ್ತಾರೆ
ಇಂಧನ ಬೆಲೆ ವಿಪರೀತ ಏರಿಕೆಯಾದರೂ ಭಾರತವೇಕೆ ʼವಿಚಿತ್ರʼ ಮೌನ ವಹಿಸಿದೆ?

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಏರುಮುಖವಾಗಿದೆ. ಅದರಲ್ಲೂ ಅಡುಗೆ ಎಣ್ಣೆ ಮತ್ತು ಇಂಧನ ಬೆಲೆಗಳು ಕಳೆದ 6 ತಿಂಗಳಿನಿಂದ ಮುಗಿಲು ಮುಟ್ಟುತ್ತಿವೆ. 2014 ರಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿದ್ದಾಗ, ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 71 ರೂಪಾಯಿ ಆಗಿದ್ದರೆ ಇಂದು ಇದರ ಬೆಲೆ 90 ರೂಪಾಯಿ ಮೀರಿದೆ. ಡೀಸೆಲ್ ಇನ್ನೂ ತೀವ್ರವಾಗಿ ಹೆಚ್ಚಳವಾಗಿದೆ. ದೆಹಲಿಯಲ್ಲಿ 2014 ರ ಮೇ ತಿಂಗಳಿನಲ್ಲಿ 57 ರೂಪಾಯಿಗಳಿಂದ ಈಗ ದೆಹಲಿಯಲ್ಲಿ ಸುಮಾರು 80 ರೂಪಾಯಿ ಮೀರಿದೆ. ಗಮನಾರ್ಹ ಸಂಗತಿಯೆಂದರೆ ಈ ಹೆಚ್ಚಳವು ಕಳೆದ ಒಂದು ವರ್ಷದಲ್ಲಿ ಮಾತ್ರ ಸಂಭವಿಸಿದೆ. ಈ ಒಂದು ವರ್ಷದಲ್ಲಿ ಜನರು ಉದ್ಯೋಗ ಮತ್ತು ಆದಾಯವನ್ನು ಕಳೆದುಕೊಂಡಿದ್ದಾರೆ ಮತ್ತು ಹಣದುಬ್ಬರವು ಗಗನಕ್ಕೇರಿದೆ. ಜನರು ಕಡಿಮೆ ಹಣವನ್ನು ಹೊಂದಿರುವಾಗ ಇಂಧನ ದುಬಾರಿಯಾಗುತ್ತದೆ. ದೇಶದ ಆರ್ಥಿಕ ಬೆಳವಣಿಗೆಯ ದರವು ಶೇಕಡಾ 7.5 ಕ್ಕೆ ಇಳಿಕೆಯಾಗಿದ್ದು ಇಂದನ ದರ ಏರಿಕೆ ಸಾರ್ವಜನಿಕರಿಗೆ ಆಕ್ರೋಶ ಮೂಡಿಸಬೇಕಿತ್ತು.

ಆದರೆ ಭಾರತೀಯರು ಇಂಧನ ದರ ಏರಿಕೆಯನ್ನು ಲಘುವಾಗಿ ಪರಿಗಣಿಸಿದ್ದು ನಿಜಕ್ಕೂ ಅಚ್ಚರಿಯ ಸಂಗತಿ ಆಗಿದ್ದು ಜನರೆಲ್ಲ ತುಂಬಾ ಶಾಂತಿಯಿಂದ ಇದ್ದಾರೆ. ಕಳೆದ 6-7 ವರ್ಷಗಳ ಹಿಂದೆ, ಜನರು ಇಂಧನ ಬೆಲೆಗಳ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದಾರೆನ್ನುವುದು ಎಲ್ಲರಿಗೂ ಗೊತ್ತು. ವಾಸ್ತವವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ -2 ಸರ್ಕಾರವನ್ನು 2014 ರಲ್ಲಿ ಅಧಿಕಾರದಿಂದ ಕೆಳಗಿಳಿಸಲು ಇದು ಒಂದು ಕಾರಣವಾಗಿತ್ತು. ಆಗ ಜನರನ್ನು ಕೋಪಗೊಳಿಸಿದ್ದ ಇದೇ ಇಂಧನ ದರವು ಈಗ ಜನರನ್ನೇಕೆ ಕೋಪಗೊಳಿಸುತ್ತಿಲ್ಲ? ಸಾರ್ವಜನಿಕ ಅಭಿಪ್ರಾಯವು ಶೇರು ಮಾರುಕಟ್ಟೆಯಂತೆಯೇ ಚಂಚಲವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಏರಿದ ಇಂಧನ ಬೆಲೆಗಳು ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿರಬೇಕು ಅಥವಾ ಇಲ್ಲ. ಸಾರ್ವಜನಿಕ ಅಭಿಪ್ರಾಯವು 2014 ರಲ್ಲಿ ಸುಳ್ಳು ಅಗಿತ್ತು ಎನ್ನಬಹುದು. 2014 ರಲ್ಲಿ ಇಂಧನ ಬೆಲೆಗಳು ದೊಡ್ಡ ಸಮಸ್ಯೆ ಎಂಬ ಅಭಿಪ್ರಾಯವನ್ನು ರೂಪಿಸಿದ್ದು ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು. ಈಗ ಇಬ್ಬರೂ ಮೌನಕ್ಕೆ ಶರಣಾಗಿದ್ದಾರೆ, ಮಾಧ್ಯಮಗಳು ಸರ್ಕಾರದ ಒತ್ತಡ ಎಂಬ ಕಾರಣ ನೀಡಬಹುದು ಆದರೆ ವಿಪಕ್ಷಗಳಿಗೇನಾಗಿದೆ ?

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ2014 ಕ್ಕಿಂತ ಮೊದಲು, ಭಾರತೀಯ ಜನತಾ ಪಕ್ಷವು ಕೈಗೆತ್ತಿಕೊಂಡ ಪ್ರಬಲ ವಿಷಯವೆಂದರೆ ಇಂಧನ ಬೆಲೆ ಏರಿಕೆ. ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ 2013 ರಲ್ಲಿ ಬಿಜೆಪಿಯ ದೆಹಲಿ ಘಟಕವು ಬೈಕ್ ರ್ಯಾಲಿಯನ್ನು ಆಯೋಜಿಸಿತ್ತು, ಅದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ನಿವಾಸಕ್ಕೆ ತೆರಳಿತು. ಅಲ್ಲಿ ಪಕ್ಷದ ಕಾರ್ಯಕರ್ತರು ಅಡೆತಡೆಗಳನ್ನು ಮುರಿದು ಸಿಎಂ ಅವರ ನಿವಾಸಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು . ಆಗ ಪೋಲೀಸರು ಜಲ ಫಿರಂಗಿಗಳನ್ನು ಬಳಸಿ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಿದರು.

ಇಂದು, ಇಂಧನ ಬೆಲೆ ಏರಿಕೆ ವಿರುದ್ದ ಯಾಕೆ ಪ್ರತಿಭಟಿಸುತ್ತಿಲ್ಲ ಎಂದು ನೀವು ವಿರೋಧ ಪಕ್ಷದ ನಾಯಕನನ್ನು ಕೇಳಿದರೆ, ಅವರು ಮಾಧ್ಯಮದವರು ನಮ್ಮ ಪ್ರತಿಭಟನೆಯ ಸುದ್ದಿಯನ್ನು ಪ್ರಕಟಿಸುವುದಿಲ್ಲ ಸುಮ್ಮನೆ ಏಕೆ ಪ್ರತಿಭಟನೆ ಮಾಡೋದು ಎನ್ನುತ್ತಾರೆ. ಇದೇ ಪ್ರಶ್ನೆಯನ್ನು ಮಾಧ್ಯಮದವರಿಗೆ ಕೇಳಿದರೆ ಪ್ರಮುಖ ವಿಪಕ್ಷ ಕಾಂಗ್ರೆಸ್ ಎಲ್ಲೂ ಪ್ರತಿಭಟನೆ ಮಾಡುತ್ತಿಲ್ಲ ನಾವೇನು ಮಾಡುವುದು ಎನ್ನುತ್ತಾರೆ. ಇಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ನೀಡಿಲ್ಲ. ಏಕೆಂದರೆ ಇಂದು ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ಜನರೂ ಕೂಡ ತಮ್ಮ ದೈನಂದಿನ ಕೆಲಸದಂತೆಯೇ ಎಂದು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಸರ್ಕರಿ ಕೆಲಸ ಸಿಕ್ಕಿದರೆ ಸಾರ್ವಜನಿಕರೂ ಭ್ರಷ್ಟರೇ ಆಗುತ್ತಾರೆ. ಚುನಾವಣಾ ಸಂದರ್ಭಗಳಲ್ಲಿ ಮತದಾರರೂ ಭ್ರಷ್ಟರೇ ಅಗುತ್ತಾರೆ ಎಂಬುದು ಬಹಳ ಬಾರೀ ಸಾಬೀತಾಗಿದೆ. ದೇಶದಲ್ಲಿ, ಲೋಕಪಾಲ್ ಚಳುವಳಿಯು ಭ್ರಷ್ಟಾಚಾರವನ್ನು ಒಂದು ಸಮಸ್ಯೆಯನ್ನಾಗಿ ಬಿಂಬಿಸಿತ್ತು. ಅಂತೆಯೇ, ಇಂಧನ ಬೆಲೆಗಳು ಒಂದು ಸಮಸ್ಯೆ ಆಗಿದೆ. ಆದರೆ ಈ ಸಮಸ್ಯೆಯನ್ನು ಸ್ಫಟಿಕೀಕರಿಸಲಾಯಿತು, ಸಾರ್ವಜನಿಕರ ಗಮನವನ್ನು ಸೆಳೆಯುವ ದೃಶ್ಯಗಳೊಂದಿಗೆ ಪ್ರತಿಭಟನಾ ಘಟನೆಗಳಾಗಿ ಮಾರ್ಪಟ್ಟಿತು. ಹೀಗಾಗಿ ಯುಪಿಏ ಸರ್ಕಾರ ಇಂಧನ ಬೆಲೆ ಹೆಚ್ಚಳವನ್ನು ಹಿಂತೆಗೆದುಕೊಳ್ಳಬೇಕಾಯ್ತು.


ವಿರೋಧ ಪಕ್ಷವಾಗಿದ್ದಾಗ ಬಿಜೆಪಿಯ ಇಂಧನ ಬೆಲೆ ಏರಿಕೆ ಪ್ರತಿಭಟನೆಯಲ್ಲಿ ‘ಜೈಲು ಭರೋ’ ಮತ್ತು ಭಾರತ್ ಬಂದ್ ಪ್ರಮುಖ ಅಸ್ತ್ರಗಳಾಗಿದ್ದವು. ಅವರ ಭಾರತ್ ಬಂದ್ ಅಥವಾ ಅಖಿಲ ಭಾರತ ಮುಷ್ಕರಗಳು ಎಷ್ಟು ದೊಡ್ಡ ಪ್ರಮಾಣದಲ್ಲಿತ್ತೆಂದರೆ ಜಾಗತಿಕ ಮಾಧ್ಯಮಗಳು ಸಹ ಗಮನ ಸೆಳೆದವು. 2010 ರಲ್ಲಿ ಭಾರತ್ ಬಂದ್ ನ್ನು ವರದಿ ಮಾಡಿದ್ದ ವಿದೇಶಿ ವರದಿಗಾರರೊಬ್ಬರು ಪ್ರತಿಭಟನಾಕಾರರು ರೈಲು ಮತ್ತು ಬಸ್ಸುಗಳನ್ನು ತಡೆದಿದ್ದಾರೆ. ಟಯರ್ ಗಳನ್ನು ಸುಟ್ಟು ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ಘರ್ಷಣೆಗಾಗಿ ವಿರೋಧ ಪಕ್ಷದ ಕೆಲವು ನಾಯಕರನ್ನು ಬಂಧಿಸಲಾಯಿತು. ಹೆಚ್ಚುತ್ತಿರುವ ವಿತ್ತೀಯ ಕೊರತೆಗಳನ್ನು ನೀಗಿಸುವ ಕಾರಣದಿಂದ ಇಂಧನ ಮೇಲಿನ ಸಬ್ಸಿಡಿಗಳನ್ನು ತೆಗೆದು ಹಾಕಬೇಕಿದೆ ಎಂದು ಆಡಳಿತ ಕಾಂಗ್ರೆಸ್ ಪಕ್ಷ ಹೇಳಿದೆ ಎಂದು ವರದಿ ಮಾಡಿದ್ದರು. ಆಗ ಪ್ರತಿಭಟನೆಯು ತೀವ್ರವಾಗಿದ್ದುದರಿಂದ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಸಿಗುತಿತ್ತು. ಆದರೆ ಈಗ ಸೋಮಾರಿ ವಿರೋಧ ಪಕ್ಷಗಳಿರುವುದರಿಂದ ಪ್ರತಿಭಟನೆಯ ಸೊಲ್ಲೇ ಇಲ್ಲ.


ಇಂಧನ ದರ ಏರಿಕೆ ನೇರವಾಗಿ ಬಡ ಜನತೆಗೆ ಹೊರೆ ಆಗುವುದಿಲ್ಲ, ಆದರೆ ಮದ್ಯಮ ವರ್ಗದ ಮೇಲೆ ಭಾರೀ ಹೊರೆಯಾಗಿದೆ. ಆದರೆ ಇಂಧನ ಬೆಲೆಗಳ ಪರೋಕ್ಷ ಪರಿಣಾಮವು ಅಂತಿಮವಾಗಿ ಹಣದುಬ್ಬರದ ಮೂಲಕ ಬಡವರ ಮೇಲೆ ಪರಿಣಾಮ ಬೀರುತ್ತಿದೆ. ಈಗ ಇಂಧನ ಬೆಲೆಗಳನ್ನು ಕಡಿತಗೊಳಿಸಲು ಸರ್ಕಾರಕ್ಕೆ ಸಾಕಷ್ಟು ಅವಕಾಶವಿದೆ ಏಕೆಂದರೆ ಅದರಲ್ಲಿ ಮೂರನೇ ಎರಡರಷ್ಟು ತೆರಿಗೆಯಾಗಿದೆ. ಆರ್ಥಿಕ ಬೆಳವಣಿಗೆಯು ಆರ್ಥಿಕ ಹಿಂಜರಿತವಾಗಿ ಮಾರ್ಪಟ್ಟಿರುವುದರಿಂದ ಸರ್ಕಾರವು ತನ್ನ ಆದಾಯದ ನಷ್ಟವನ್ನು ಸರಿದೂಗಿಸಲು ಇಂಧನದ ಮೇಲಿನ ತೆರಿಗೆಯನ್ನು ಬಳಸುತ್ತಿದೆ. ಇದರರ್ಥ ಇಂಧನ ಬೆಲೆಗಳ ಬಗ್ಗೆ ವಿಪಕ್ಷಗಳು ಪ್ರತಿಭಟನೆ ಮಾಡಿದರೆ ಅವರಿಗೆ ಸಣ್ಣ ರಾಜಕೀಯ ಗೆಲುವು ಸಿಗುತ್ತದೆ. ಆ ಗೆಲುವನ್ನು ಅವರು ಅನುಭವಿಸಲಿ ಎಂದು ಆಡಳಿತಾರೂಢ ಬಿಜೆಪಿ ಅಭಿಪ್ರಾಯವಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com