ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಪುದುಚೆರಿಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಹುಮತವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ, ನಾಲ್ವರು ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಿದ್ದು, ಸರ್ಕಾರ ಉರುಳುವ ಸಂಕಷ್ಟದಲ್ಲಿದೆ.
ಪುದುಚೆರಿ ವಿಧಾನಸಭೆಯ ಒಟ್ಟು ಸದಸ್ಯ ಬಲ 33 ಇದ್ದು, ಇವರಲ್ಲಿ ಮೂವರು ನಾಮ ನಿರ್ದೇಶಿತ ಸದಸ್ಯರಿರುತ್ತಾರೆ. ಉಳಿದ 30 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಸದ್ಯದ ಮಟ್ಟಿಗೆ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದರಿಂದ ಬಹುಮತಕ್ಕೆ ಬೇಕಾಗಿರುವ ಸ್ಥಾನಗಳ ಸಂಖ್ಯೆ 15. ಆದರೆ, ಸರ್ಕಾರದ ಪರ ಇರುವ ಶಾಸಕರ ಸಂಖ್ಯೆ 14. ಬಹುಮತಕ್ಕಾಗಿ ಇನ್ನೂ ಒಂದು ಸ್ಥಾನದ ಅಗತ್ಯವಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. ಇದರೊಂದಿಗೆ 3 DMK ಸದಸ್ಯರು ಹಾಗೂ ಓರ್ವ ಪಕ್ಷೇತರ ಸದಸ್ಯರ ನೆರವಿನೊಂದಿಗೆ ಸರ್ಕಾರವನ್ನು ರಚಿಸಿತ್ತು. ಅಲ್ಪ ಬಹುಮತದೊಂದಿಗೆ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್, ಈಗ ಬಹುಮತ ಕಳೆದುಕೊಂಡಿದೆ.
ಕಾಂಗ್ರೆಸ್ನ ಎ ನಾಮಸ್ಸಿವಾಯಂ ಮತ್ತು ಇ ಥೀಪಯ್ಯನ್ ಅವರು ಜನವರಿ 25ರಂದು ರಾಜಿನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದರು. ಇದೇ ಸೋಮವಾರದಂದು ಮಲ್ಲಾಡಿ ಕೃಷ್ಣ ರಾವ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇವರೊಂದಿಗೆ ಜಾನ್ ಕುಮಾರ್ ಅವರು ಕೂಡಾ ಕೈಜೋಡಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಕ್ಕೆ ಕಳೆದ ವರ್ಷ ಎನ್ ಧನವೇಲು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಕಳೆದ ವಿಧಾನಸಭೆ ಚುನಾವಣೆಯ ನಂತರ ನಾಮಸ್ಸಿವಾಯಂ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಎಲ್ಲರೂ ನಂಬಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ನಾರಾಯಣ ಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಘೊಷಿಸಲಾಗಿತ್ತು. ಇದರಿಂದ ನಾಮಸ್ಸಿವಾಯಂ ಅವರು ಮನನೊಂದಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪುದುಚೆರಿಯಲ್ಲಿ ಬಿಜೆಪಿಯ ನೆಲೆ ಅಷ್ಟಕಷ್ಟೇ. ಈಗ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿರುವುದರಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರೀ ಹೊಡೆತ ಬೀಳುವುದು ಖಚಿತ ಎಂದು ಹೇಳಲಾಗಿದೆ.