ಮರೆಯಲಾಗದ, ಕ್ಷಮಿಸಲಾಗದ ಪುಲ್ವಾಮ ದಾಳಿಗೆ ಎರಡು ವರ್ಷ: ಇನ್ನೂ ಬಗೆಹರಿಯದ ಸಂದೇಹಗಳು..!

ಅಷ್ಟು ಪ್ರಬಲ ಭದ್ರತೆಯ ನಡುವೆಯೂ ಅಷ್ಟು ಪ್ರಮಾಣದ RDX ದೇಶದ ಗಡಿ ದಾಟಿ ಒಳಗೆ ಹೇಗೆ ಬಂತು? ಭದ್ರತಾ ಪಡೆಗಳು ಬಳಸುತ್ತಿದ್ದ ಹೆದ್ದಾರಿಗೆ ಸಾಮಾನ್ಯ ವಾಹನ ಪ್ರವೇಶಿಸಲು ಹೇಗೆ ಸಾಧ್ಯ ಆಯಿತು? ಭದ್ರತಾ ಪಡೆಗಳ‌ ವಾಹನಗಳು ಸಂಚರಿಸುವ ಮ್ಯಾಪ್ ಅನ್ನು ಭಯೋತ್ಪಾದಕರು ಅಷ್ಟು ಸುಲಭವಾಗಿ ಹೇಗೆ ಪಡೆದುಕೊಂಡರು?
ಮರೆಯಲಾಗದ, ಕ್ಷಮಿಸಲಾಗದ ಪುಲ್ವಾಮ ದಾಳಿಗೆ ಎರಡು ವರ್ಷ: ಇನ್ನೂ ಬಗೆಹರಿಯದ ಸಂದೇಹಗಳು..!

ದೇಶವನ್ನೇ ಬೆಚ್ಚಿ ಬೀಳಿಸಿದ ಪುಲ್ವಾಮಾ ಉಗ್ರರ ದಾಳಿಗೆ ಇಂದಿಗೆ ಎರಡು ವರ್ಷವಾಗಿದೆ. 2019ರ ಫೆಬ್ರವರಿ 14ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನದ ಮೇಲೆ ಪುಲ್ವಾಮಾದ ಬಳಿ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 40 ಯೋಧರು ಹುತ್ಮಾತರಾದರು. ಆ ಬಳಿಕ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಎಂ) ಹೊಣೆಯನ್ನು ಹೊತ್ತುಕೊಂಡಿತ್ತು.

ಭಾರತವು ಆ ಹೊತ್ತಿನಲ್ಲಿ 2019ರ ಸಾರ್ವತ್ರಿಕ ಚುನಾವಣೆಯ ಹೊಸ್ತಿಲಲ್ಲಿತ್ತು. ದೇಶ ಒಕ್ಕೂರಲಿನಿಂದ ಪುಲ್ವಾಮ ದಾಳಿಯನ್ನು ಖಂಡಿಸುತ್ತಿರುವಾಗ ಇಲ್ಲಿನ ಮಾಧ್ಯಮಗಳು ಪ್ರತಿಕಾರದ, ಯುದ್ಧದ ಮಾತಾಡುತ್ತಿತ್ತು. ದೇಶದೊಳಗೆ ಯುದ್ಧದ ವಾತಾವರಣವನ್ನು ಮಾಧ್ಯಮಗಳೇ ಸೃಷ್ಟಿಸಿದಂತಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಫೆಬ್ರವರಿ 26 ರಂದು ಭಾರತೀಯ ವಾಯುಪಡೆಯ ಹನ್ನೆರಡು ಮಿರಾಜ್ 2000 ಜೆಟ್‌ಗಳು ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ ಪಾಕಿಸ್ತಾನದ ಬಾಲಕೋಟ್‌ಗೆ ಬಾಂಬ್‌ಗಳನ್ನು ಹಾಕಿದವು. ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿ 300-350 ಭಯೋತ್ಪಾದಕರನ್ನು ಕೊಂದಿದೆ ಎಂದು ಭಾರತ ಹೇಳಿಕೊಂಡಿತ್ತು. ಈ ಮಧ್ಯೆ ಐಎಎಫ್ ಜೆಟ್‌ಗಳನ್ನು ತಡೆದು ಗಡಿ ನಿಯಂತ್ರಣ ರೇಖೆಗೆ ವಾಪಾಸು‌‌ ಕಳುಹಿಸಿದ್ದೇವೆ ಎಂದು‌ ಪಾಕಿಸ್ತಾನ ಹೇಳಿಕೊಂಡಿತ್ತು.

ಅಷ್ಟು ಪ್ರಬಲ ಭದ್ರತೆಯ ನಡುವೆಯೂ ಅಷ್ಟು ಪ್ರಮಾಣದ RDX ದೇಶದ ಗಡಿ ದಾಟಿ ಒಳಗೆ ಹೇಗೆ ಬಂತು? ಭದ್ರತಾ ಪಡೆಗಳು ಬಳಸುತ್ತಿದ್ದ ಹೆದ್ದಾರಿಗೆ ಸಾಮಾನ್ಯ ವಾಹನ ಪ್ರವೇಶಿಸಲು ಹೇಗೆ ಸಾಧ್ಯ ಆಯಿತು? ಭದ್ರತಾ ಪಡೆಗಳ‌ ವಾಹನಗಳು ಸಂಚರಿಸುವ ಮ್ಯಾಪ್ ಅನ್ನು ಭಯೋತ್ಪಾದಕರು ಅಷ್ಟು ಸುಲಭವಾಗಿ ಹೇಗೆ ಪಡೆದುಕೊಂಡರು? ಇಷ್ಟು ದೊಡ್ಡ ಮಟ್ಟದ ದಾಳಿ ನಡೆಯುವಾಗಲೂ ಇಂಟೆಲಿಜೆನ್ಸಿ ಸಂಸ್ಥೆಗಳಿಗೆ ಒಂದು ಸಣ್ಣ ಸುಳಿವೂ ಸಿಗಲಿಲ್ಲವೇ? ಎನ್ನುವ ಆವತ್ತಿನ ಪ್ರಶ್ನೆಗಳಿಗೆ ಎರಡು ವರ್ಷಗಳಾದರೂ ಇನ್ನೂ ಉತ್ತರ ಸಿಕ್ಕಿಲ್ಲ.

ನೋಟ್ ಬ್ಯಾನ್, ಆರ್ಥಿಕ ಕುಸಿತ,ಬೆಲೆ ಏರಿಕೆ, ಹಣದುಬ್ಬರ, ಅಂತರ್ ರಾಷ್ಟ್ರೀಯವಾಗಿ ಪೆಟ್ರೋಲ್ ಬೆಲೆ ಇಳಿದಿದ್ದರೂ ಭಾರತದಲ್ಲಿ ನಿರಂತರವಾಗಿ ಏರುತ್ತಿದ್ದ ಇಂಧನ ಬೆಲೆ, ಅಡುಗೆ ಅನಿಲ ಸಬ್ಸಿಡಿ ಕೊರತೆ ಹೀಗೆ ಜನಸಾಮಾನ್ಯರ ಬದುಕಿನ ಅಗತ್ಯಗಳು 2014-19ರ ಅವಧಿಯಲ್ಲಿ ತುಟ್ಟಿಯಾಗಿದ್ದವು. ಹಾಗಾಗಿ ಆವತ್ತು ಸರ್ಕಾರದ ವಿರುದ್ಧ, ವೈಫಲ್ಯದ ವಿರುದ್ದ ಆಡಳಿತ ವಿರೋಧಿ ಅಲೆ ಇತ್ತು.

ಒಂದು ಹಂತದಲ್ಲಿ ಮೋದಿ ಮತ್ತವರ ಸರ್ಕಾರ ಬಹುಮತ ಕಳೆದುಕೊಳ್ಳುವುದು ಮಾತ್ರವಲ್ಲ ನೂರಂಕಿಯ ಗಡಿ ದಾಟುವುದೇ ಅನುಮಾನ ಎಂದೂ ಹೇಳಲಾಗಿತ್ತು. ಆದ್ರೆ ಭಯೋತ್ಪಾದನಾ ದಾಳಿ ಇಡೀ ಚುನಾವಣೆಯ ಪ್ರಕ್ರಿಯೆಯನ್ನೇ ಬದಲಾಯಿಸಿತು.

ದೇಶ ಮತ್ತು ದೇಶದ ಗಡಿ ಅಪಾಯದಲ್ಲಿದೆ, ಇಲ್ಲಿನ ಬಹುಸಂಖ್ಯಾತರು ಅಪಾಯದಲ್ಲಿದ್ದಾರೆ, ಸೈನಿಕರು ಗಡಿಯಲ್ಲಿ ಜೀವ ತೆರುತ್ತಿದ್ದಾರೆ. ಇವೆಲ್ಲಾ ನಿಲ್ಲಬೇಕು ಎಂದರೆ ಪ್ರಬಲ ನಾಯಕನೇ ಮತ್ತೊಮ್ಮೆ ಗದ್ದುಗೆಗೆ ಏರಬೇಕು. ಮೋದಿ ಬಿಟ್ಟರೆ ಮತ್ತೊಬ್ಬ ನಾಯಕನೇ ಇಲ್ಲಿಲ್ಲ ಎನ್ನುವುದನ್ನು ಮತದಾರನ ತಲೆಯಲ್ಲಿ ತುಂಬಲಾಯಿತು.

ಹೀಗೆ ಮತದಾರನನ್ನು ನಂಬಿಸುವ ಹೊಣೆಯನ್ನು ಈ ದೇಶದ ಮಾಧ್ಯಮಗಳು, ಆಡಳಿತ ಪಕ್ಷದ ಐಟಿ ಸೆಲ್ ವಹಿಸಿಕೊಂಡಿತು. ಈ ಬಗ್ಗೆ ನೂರಾರು ಮೆಸೇಜ್ ಹರಿದು ಬಿಡಲಾಯಿತು. ಹಿಂದೆ ಈ ದೇಶವನ್ನಾಳಿದ ನಾಯಕರ ತೇಜೋವಧೆ ಮಾಡಲೆಂದೇ ಫೊಟೋಶಾಪ್ ಪರಿಣಿತರನ್ನು ನೇಮಿಸಿಕೊಳ್ಳಲಾಯಿತು. ಭಾರತದ ಸಮಸ್ಯೆಗಳು, ಗಡಿ ತಂಟೆ ಎಲ್ಲಕ್ಕೂ ಹಿಂದಿನ ಸರ್ಕಾರಗಳನ್ನೇ ಹೊಣೆಯಾಗಿಸಲಾಯಿತು.

ಒಂದು ಕಡೆ 2014 ರ ನಂತರ ಭಯೋತ್ಪಾದಕ ದಾಳಿಯೇ ನಡೆದಿಲ್ಲ ಎಂದು ಪ್ರತಿಪಾದಿಸುತ್ತಾ ಮತ್ತೊಂದೆಡೆ ಸ್ವಾತಂತ್ರ್ಯಾ ನಂತರದ ಅತಿ ದೊಡ್ಡ ದಾಳಿಯಾದ ಪುಲ್ವಾಮದ ವೈಫಲ್ಯವನ್ನು ವಿರೋಧ ಪಕ್ಷಗಳ ಕೊರಳಿಗೆ ಕಟ್ಟಿದರು. ಸರ್ಕಾರ ಹೇಳುವ ಪ್ರತಿಯೊಂದನ್ನೂ ಶಿರಸಾವಹಿಸಿ ಪಾಲಿಸುವ ಮಾಧ್ಯಮಗಳು ಈ ವಿಚಾರದಲ್ಲೂ ಸರ್ಕಾರದ ಪರವೇ ನಿಂತವು. ಒಂದು ರೀತಿಯಲ್ಲಿ ಇಡೀ ದೇಶ ಯುದ್ಧೋನ್ಮಾದಕ್ಕೆ ಒಳಗಾದದ್ದೇ ಮಾಧ್ಯಮಗಳಿಂದ ಅನ್ನಬಹುದು.

ಇತ್ತ ಭಾರತದ ಮಾಧ್ಯಮಗಳು ಸರ್ಕಾರವನ್ನು, ಸರ್ಕಾರದ ಕ್ರಮಗಳನ್ನೂ ವೈಭವೀಕರಿಸುತ್ತಿದ್ದರೆ ಬಿಬಿಸಿಯಂತಹ ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದ ಮಾಧ್ಯಮಗಳ ಕಾರ್ಯ ವೈಖರಿಯನ್ನೂ, ಸರ್ಕಾರದ ನಡಾವಳಿಯನ್ನೂ, ಭದ್ರತಾಲೋಪವನ್ನೂ‌ ಪ್ರಶ್ನಿಸುತ್ತಿತ್ತು.‌ ಯಡಿಯೂರಪ್ಪನವರು "ಬಾಲಕೋಟ್ ದಾಳಿ ಈ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷಕ್ಕೆ ಸಹಕಾರಿಯಾಗಲಿದೆ" ಎಂದು ಹೇಳಿದ್ದು ಪಾಕಿಸ್ತಾನದ ಮಾಧ್ಯಮದಲ್ಲೂ ಪ್ರಚಾರವಾಗಿತ್ತು.

ಇತ್ತೀಚಿಗೆ ಭಾರತದ ಪ್ರಮುಖ ಪತ್ರಕರ್ತರಾದ ಅರ್ನಬ್ ಗೋ ಸ್ವಾಮಿ ಅವರ ವಾಟ್ಸಪ್ ಚಾಟ್ ಲೀಕ್ ಆಗಿ, 40 ಭಾರತೀಯ‌ ಯೋಧರ ಪ್ರಾಣ ಹೋಗಿರುವುದನ್ನು ಸಂಭ್ರಮಿಸಿದ್ದುದು ಬಹಿರಂಗವಾಗಿತ್ತು. ರಾಷ್ಟ್ರೀಯತೆಯ ಹೆಸರಲ್ಲಿ ಚರ್ಚೆ ನಡೆಸುವ, ಹಲವು ರಾಜಕೀಯ ನಾಯಕರ, ವಿದ್ಯಾರ್ಥಿಗಳ ತೇಜೋವಧೆ ನಡೆಸುವ ಅರ್ನಬ್‌ರ ಅಸಲಿ ರಾಷ್ಟ್ರೀಯತೆ ಬಯಲಾದಾಗ ಪುಲ್ವಾಮಾ ದಾಳಿಯ ಹಿಂದಿನ ಶಕ್ತಿಗಳ ಬಗ್ಗೆ ಹೆಚ್ಚಿನ ವಿವರ ಸಿಗಬೇಕಾದರೆ ಅವರ ಅಮೂಲಾಗ್ರ ವಿಚಾರಣೆ ನಡೆಸಬೇಕು ಎಂಬ ಕೂಗು ಎದ್ದಿತ್ತು. ಆದರೆ ಅದಾದ ನಂತರವೂ ಅರ್ನಬ್‌ರ ಒಂದು ಕೂದಲೂ ಕೊಂಕಿಲ್ಲ ಅನ್ನುವುದು ನಮ್ಮ ನ್ಯಾಯ ವ್ಯವಸ್ಥೆಯ ದೊಡ್ಡ ವಿಡಂಬನೆ‌. ಪುಲ್ವಾಮಾ ದಾಳಿಗೆ ಎರಡು ವರ್ಷ ಸಂದ ಈ ಸಂದರ್ಭದಲ್ಲಿ ಭಾವನಾತ್ಮಕ ಭಾಷಣಗಳು, ಹೇಳಿಕೆಗಳಿಗಿಂತ ರಚನಾತ್ಮಕ ತನಿಖೆ ಕೈಗೆತ್ತಿಕೊಂಡರೆ ಸೈನಿಕರು ಹುತಾತ್ಮರಾದದ್ದೂ ಸಾರ್ಥಕವಾಗಬಹುದು‌.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com