1974ರ 'ಆಂದೋಲನ ಜೀವಿ' ಮೋದಿ ಮತ್ತು 2021ರ ಪ್ರತಿಭಟನೆಗಳು

ಶಾಂತಿಯುತವಾಗಿ ಪ್ರತಿಭಟಿಸುತ್ತಿರವವರನ್ನು ಕೆಣಕುವಂತಿರುವ ಈ ಮಾತುಗಳು 1974ರಲ್ಲಿ ಗುಜರಾತಿನಲ್ಲಿ ನಡೆದ 'ನವ ನಿರ್ಮಾಣ್ ಆಂದೋಲನ್'ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮೋದಿಯವರ ನಡೆಗೇ ಸಂಪೂರ್ಣ ವಿರೋಧವಾಗಿದೆ
1974ರ 'ಆಂದೋಲನ ಜೀವಿ' ಮೋದಿ ಮತ್ತು 2021ರ ಪ್ರತಿಭಟನೆಗಳು

ಸೋಮವಾರ ಸಂಸತ್ತಿನಲ್ಲಿ 'ಆಂದೋಲನ‌ ಜೀವಿ' ಎನ್ನುವ ಹೊಸ ಪದವನ್ನು ಹುಟ್ಟು ಹಾಕಿರುವ ಪ್ರಧಾನಮಂತ್ರಿ ಮೋದಿ "ಅವರು ಪ್ರತಿಭಟನೆಗಳಿಲ್ಲದೆ ಬದುಕಲಾರರು" ಎಂದಿದ್ದಾರೆ. ಅಲ್ಲದೆ ಅವರನ್ನು 'ಪರಾವಲಂಬಿ'ಗಳು ಎಂದೂ‌ ಕರೆದಿದ್ದಾರೆ.

ಪ್ರಧಾನಿಯಾಗಿ ನರೇಂದ್ರ ಮೋದಿಯವರ ಎರಡನೇ ಅವಧಿಯು ದೇಶಾದ್ಯಂತ‌ ಹಲವು ಪ್ರತಿಭಟನೆಗಳನ್ನು ಕಂಡಿದೆ. ಆ ಪೈಕಿ CAA ವಿರುದ್ಧದ ಮತ್ತು ಹೊಸ ಕೃಷಿ‌‌ ಕಾನೂನಿನ ವಿರುದ್ಧದ ಪ್ರತಿಭಟನೆಯು ಪ್ರತಿಭಟನೆಯ ಹಂತ ಕಳೆದು ಚಳವಳಿಯಾಗಿ ರೂಪುಗೊಂಡಿದೆ. ಸರ್ಕಾರ ಈ ಎಲ್ಲಾ ಚಳವಳಿ, ಪ್ರತಿಭಟನೆಗಳನ್ನು 'ವಿರೋಧ ಪಕ್ಷಗಳ ಕುಮ್ಮಕ್ಕು', 'ದೇಶದ್ರೋಹಿಗಳ" ಚಳವಳಿ ಎಂದೆಲ್ಲಾ ಕರೆದಿದೆ.

ಪ್ರಧಾನಿ ಪ್ರತಿಭಟನಾಕಾರರನ್ನು ಉದ್ದೇಶಿಸಿ "ಪ್ರತಿಭಟನೆ ಇರುವಲ್ಲೆಲ್ಲಾ ಈ ಸಮುದಾಯವನ್ನು (ಆಂದೋಲನ ಜೀವಿಗಳು) ಗುರುತಿಸಬಹುದು, ವಕೀಲರ, ವಿದ್ಯಾರ್ಥಿಗಳ ಅಥವಾ ಕಾರ್ಮಿಕರ ಆಂದೋಲನವಾಗಲಿ, ಕೆಲವೊಮ್ಮೆ ಅವರು ಮುಂಚೂಣಿಯಲ್ಲಿರಬಹುದು ಮತ್ತು ಕೆಲವೊಮ್ಮೆ ಹಿಂದಿನಿಂದಲೂ ಕಂಡುಬರುತ್ತಾರೆ. ಅವರು ಪ್ರತಿಭಟನೆಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ನಾವು ಅಂತಹ ಜನರನ್ನು ಗುರುತಿಸಬೇಕು ಮತ್ತು ಅವರಿಂದ ರಾಷ್ಟ್ರವನ್ನು ರಕ್ಷಿಸಬೇಕು” ಎಂದಿದ್ದಾರೆ.

ಶಾಂತಿಯುತವಾಗಿ ಪ್ರತಿಭಟಿಸುತ್ತಿರವವರನ್ನು ಕೆಣಕುವಂತಿರುವ ಈ ಮಾತುಗಳು 1974ರಲ್ಲಿ ಗುಜರಾತಿನಲ್ಲಿ ನಡೆದ 'ನವ ನಿರ್ಮಾಣ್ ಆಂದೋಲನ್'ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮೋದಿಯವರ ನಡೆಗೇ ಸಂಪೂರ್ಣ ವಿರೋಧವಾಗಿದೆ.

ಲೇಖಕ ರಘು ಕಾರ್ನಾಡ್ ಅವರು 'ದಿ ವೈರ್'ಗೆ ಬರೆದಿರುವ ಲೇಖನವೊಂದರಲ್ಲಿ ಮೋದಿಯವರ ವೈಯಕ್ತಿಕ ವೆಬ್‌ಸೈಟ್‌ನಲ್ಲಿ ಆಂದೋಲನಕ್ಕೆ‌ ಪುಟಗಳನ್ನೇ ಮೀಸಲಿಡಲಾಗಿದೆ. ಗುಜರಾತ್ ನವ ನಿರ್ಮಾಣ್ ಆಂದೋಲನವನ್ನು ಮೋದಿಯವರ 'ಸಾಮೂಹಿಕ ಪ್ರತಿಭಟನೆಯ ಮೊದಲ ಮುಖಾಮುಖಿ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಅವರ ವಿಶ್ವ ದೃಷ್ಟಿಕೋನವನ್ನು ಗಮನಾರ್ಹವಾಗಿ ವಿಸ್ತರಿಸಲು ಕಾರಣವಾದ ಘಟನೆ' ಎಂದು ವಿವರಿಸಲಾಗಿದೆ ಎಂದು ಗುರುತಿಸುತ್ತಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

"ಇದು ನರೇಂದ್ರ ಮೋದಿಯವರನ್ನು ಅವರ ರಾಜಕೀಯ ಜೀವನದ ಮೊದಲ ಹುದ್ದೆ ಪಡೆದುಕೊಳ್ಳುವಂತೆ ಮಾಡಿತು‌ 1975 ರಲ್ಲಿ ಗುಜರಾತ್‌ನಲ್ಲಿ ಲೋಕ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿಸಿತು" ಎಂದೂ ವೆಬ್ಸೈಟ್ ಹೇಳುತ್ತದೆ.

1973 ರ ಡಿಸೆಂಬರ್‌ನಲ್ಲಿ ಅಹಮದಾಬಾದ್‌ನ ಎಲ್‌ಡಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಶುಲ್ಕದಂತಹ ಕೊರತೆಗಳ ವಿರುದ್ಧ ಪ್ರತಿಭಟಿಸುವುದರೊಂದಿಗೆ ಈ ಚಳವಳಿ ಪ್ರಾರಂಭವಾಯಿತು. ಪೊಲೀಸರು ಅವರ ವಿರುದ್ಧ ಬಲಪ್ರಯೋಗಿಸಿದರು‌. ಹಾಗಾಗಿ 1974 ರ ಆರಂಭದ ವೇಳೆಗೆ ಈ ಪ್ರತಿಭಟನೆಗಳು ಇತರ ಕ್ಯಾಂಪಸ್‌ಗಳಿಗೆ ಹರಡಿತು. ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡು ರಾಜ್ಯವ್ಯಾಪಿ ಮುಷ್ಕರಗಳು, ಬೆಂಕಿ ದುರಂತ ಮತ್ತು ಲೂಟಿಗಳೂ ನಡೆದವು.

'ಅಹಮದಾಬಾದ್ ಮಿರರ್' ಪ್ರಕಾರ, ನವನಿರ್ಮಾಣ್ ಆಂದೋಲನವು ಗುಜರಾತ್ ಸರ್ಕಾರದ ವಜಾಕ್ಕೆ ಕಾರಣವಾಯಿತು ಮತ್ತು ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ "ರಾಷ್ಟ್ರೀಯ ಚಳವಳಿಯನ್ನು" ಪ್ರಚೋದಿಸಿತು.

ಅದೇ ಸಂದರ್ಭದಲ್ಲಿ ಮೋದಿ ಯುವಕರಿಗೆ ಬರೆದ ಸಂದೇಶವನ್ನು ನಂತರ 'ಸಂಘರ್ಷ ಮಾ ಗುಜರಾತ್' (ಸಂಘರ್ಷದ ಸಮಯದಲ್ಲಿ ಗುಜರಾತ್) ಎಂಬ ಪುಸ್ತಕದಲ್ಲಿ ಪ್ರಕಟಿಸಲಾಯಿತು. ಆ ಸಂದೇಶದಲ್ಲಿ ಮೋದಿ ಯುವಕರನ್ನು 'ಬೀದಿಗಿಳಿಯಿರಿ' ಮತ್ತು 'ಪ್ರಜಾಪ್ರಭುತ್ವ ಸಾಯಲು ಬಿಡಬೇಡಿ’ ಎಂದು ಒತ್ತಾಯಿಸುತ್ತಾರೆ.

'ಅಹಮದಾಬಾದ್ ಮಿರರ್' ಇಂಗ್ಲಿಷ್‌ಗೆ ಅನುವಾದಿಸಿರುವ ಈ ಸಂದೇಶವು ಇಂದಿನ ಪ್ರತಿಭಟನಾಕಾರರಿಗೆ ಅಮೂಲ್ಯವಾದ ಸಲಹೆಯನ್ನು ನೀಡುತ್ತದೆ. ಆದರೆ ಪ್ರತಿಭಟನೆಯ ಬಗ್ಗೆ ಪ್ರಧಾನ ಮಂತ್ರಿಯ ಅಭಿಪ್ರಾಯದಲ್ಲಿ ತೀವ್ರವಾದ ಬದಲಾವಣೆಯನ್ನು ಸಹ ಪ್ರತಿನಿಧಿಸುತ್ತದೆ.

"ಭಾರತ್ ಮಾತೆಯ ಮಕ್ಕಳೇ, ದೇಶವನ್ನು ಇಂದು ಯಾವ ದಿಕ್ಕಿಗೆ ತಳ್ಳಲಾಗುತ್ತಿದೆ ಎಂದು ಯೋಚಿಸಿ. ನೀವು ಇಂದು ಕೆಲಸ ಮಾಡದಿದ್ದರೆ, ನಾಳೆ ನೀವು ಎದುರಿಸಬೇಕಾದ ಪರಿಣಾಮಗಳನ್ನು ಆಲೋಚಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ನೀವು ಭಾರತದ ಭವಿಷ್ಯದ ಮುಂಚೂಣಿಯಲ್ಲಿದ್ದೀರಿ. ಏಕೆಂದರೆ ಇಂದಿನ ಯುವಕರು ನಾಳಿನ ನಾಯಕರು. ಈ ರಾಷ್ಟ್ರವನ್ನು ಹೊಳೆಯುವಂತೆ ಮಾಡುವ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಉತ್ತರ ಸ್ಪಷ್ಟ, ಈ ಜವಾಬ್ದಾರಿ ನಿಮ್ಮದಾಗಿದೆ ” ಎಂದು ಮೋದಿಯ ಸಂದೇಶ ಪ್ರಾರಂಭವಾಗುತ್ತದೆ.

"ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಲು ಇಂದು ದೇಶದಲ್ಲಿ ಪ್ರಜಾಪ್ರಭುತ್ವ ನಾಶವಾಗುತ್ತಿದೆ, ನೀವು ತಲೆ ಕೆಳಗೆ ಹಾಕಿ ನಡೆಯುವ ಕುರಿಗಳ ಹಿಂಡಿನಲ್ಲಿ ಒಬ್ಬರಾಗುತ್ತೀರಿ”ಎಂದೂ ಅವರು ಹೇಳಿದ್ದಾರೆ.

ಇಂದಿರಾ ಗಾಂಧಿ ವಿರುದ್ಧದ ಚಳವಳಿಯ ಆರಂಭ ಇದು. ಚಳವಳಿ ಹೆಚ್ಚು ಜನಪ್ರಿಯವಾಗುತ್ತಿದ್ದಂತೆ, ಅಂದಿನ ಪ್ರಧಾನ ಮಂತ್ರಿ ಜೂನ್ 25, 1975 ರಂದು ತುರ್ತು ಪರಿಸ್ಥಿತಿಯನ್ನು ಹೇರಿದರು.

ಬಿಜೆಪಿ ಮತ್ತು ಬಲಪಂಥೀಯ ಗುಂಪುಗಳು "ಮೋದಿಯವರು ಅತಿ ಹೆಚ್ಚಿನ ಪ್ರತಿಭಟನೆ, ಪ್ರಚೋದನೆಗಳು ಮತ್ತು ವಿಧ್ವಂಸಕತೆಯನ್ನು ಎದುರಿಸಿದ್ದಾರೆ" ಎಂದು ಪ್ರತಿಪಾದಿಸುತ್ತವೆ. ಆದರೆ ಸತ್ಯವು ಇದಕ್ಕೆ ವಿರುದ್ಧವಾಗಿದೆ, ಇಂದಿರಾ ಗಾಂಧಿಯ ಕಾಲದಲ್ಲಾದ ಪ್ರತಿಭಟನೆಗಳ ಹತ್ತಿರವೂ ಈಗಿನ ಪ್ರತಿಭಟನೆಗಳು ಸುಳಿಯುವುದಿಲ್ಲ ಎನ್ನುತ್ತಾರೆ ರಘು ಕಾರ್ನಾಡ್.

"ಬಿಜೆಪಿ ಸರ್ಕಾರವನ್ನು ಉರುಳಿಸಲು ವಿದ್ಯಾರ್ಥಿಗಳು ಬೀದಿಗಿಳಿದು, ಕೇಂದ್ರ ಸಚಿವರ ಮೇಲೆ ಹತ್ಯಾಪ್ರಯತ್ನ ನಡೆದು, ಕೋರ್ಟೂ ಮೋದಿಯವರನ್ನು ಸಂಸತ್ತಿನಿಂದ ವಜಾಗೊಳಿಸಿ, ಮುಂದಿನ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಿದರೆ ಏನಾಗಬಹುದೆಂದು ಕಲ್ಪಿಸಿಕೊಳ್ಳಿ. ತುರ್ತು ಪರಿಸ್ಥಿತಿ ಜಾರಿಗೆ ಬರಲು ಇವಿಷ್ಟೂ ಕಾರಣಗಳು ಪ್ರಚೋದನೆ ನೀಡಿದ್ದವು‌‌. ನಿಜ, ತುರ್ತು ಪರಿಸ್ಥಿತಿಯನ್ನು ಇವ್ಯಾವುದೂ ಸಮರ್ಥಿಸದು. ಆದರೆ, ಸತ್ಯವೆಂದರೆ ಕಳೆದ ನಾಲ್ಕು ವರ್ಷಗಳಲ್ಲಿ, ಕಾಶ್ಮೀರದ ಹೊರಗಿನ ಯಾವುದೇ ಪ್ರತಿಭಟನೆಗಳು ತುರ್ತುಪರಿಸ್ಥಿತಿಗೂ ಮುಂಚೆ ಎದುರಿಸಿದ ಸ್ಥಿತಿಯ ಹತ್ತಿರಕ್ಕೂ ಬಂದಿಲ್ಲ" ಎಂದು ಬರೆಯುತ್ತಾರೆ ಕಾರ್ನಾಡ್.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com