ಭಾರತ ವಿಶ್ವಗುರುವಾಗಿದೆ. ಭಾರತೀಯರು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ!
ಹೌದು, ಪೆಟ್ರೋಲ್ ಬೆಲೆ ಲೀಟರಿಗೆ ನೂರು ರೂಪಾಯಿ(98 ರೂ.) ಸಮೀಪಿಸುವ ಮೂಲಕ ವಿಶ್ವದ ಅತಿ ದುಬಾರಿ ಪೆಟ್ರೋಲ್ ಬೆಲೆಯ ಟಾಪ್ 30 ದೇಶಗಳಲ್ಲಿ(ಬಹುತೇಕ ಯುರೋಪ್) ಭಾರತ ಸ್ಥಾನ ಪಡೆದಿದೆ. ಆ ಮೂಲಕ ಇಂಧನ ಬೆಲೆಯಲ್ಲಿ ಭಾರತ ಪ್ರಧಾನಿ ಮೋದಿಯವರ ಕನಸನ್ನು ನನಸು ಮಾಡಿ ವಿಶ್ವಗುರುವಾಗಿದೆ.
ಆದರೆ, ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಗೆ ದುಬಾರಿ ಬೆಲೆ ತೆರುವ ಭಾರತೀಯರ ಆದಾಯ ಸೋರಿ ಹೋಗುತ್ತಿದೆ. ಇಂಧನ ಬೆಲೆ ಏರಿಕೆ ಎಂದರೆ ಕೇವಲ ಪೆಟ್ರೋಲ್ ಪಂಪಿನ ಬೋರ್ಡಿನ ಅಂಕಿಗಳ ಬದಲಾವಣೆಯಷ್ಟೇ ಅಲ್ಲ; ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಪ್ರತಿ ಪೈಸೆ ಏರಿಕೆಯೂ ನಿತ್ಯ ಬಳಕೆಯ ಕೊತ್ತಂಬರಿ, ಟೊಮ್ಯಾಟೋದಿಂದ ಐಷಾರಾಮಿ ವಸ್ತುಗಳ ವರೆಗೆ ಪ್ರತಿಯೊಂದರ ಬೆಲೆ ಏರಿಕೆ ಎಂಬುದನ್ನು ಬಲ್ಲವರಿಗೆ, ಪ್ರಧಾನಿಗಳ ಭಾರೀ ಭರವಸೆಯ ಈ ಅಚ್ಛೇದಿನಗಳು ಎಷ್ಟು ದುಬಾರಿ ಎಂಬುದು ಅರಿವಾಗದೇ ಇರದು.
ಅದರಲ್ಲೂ ಕರೋನಾ ಸಂಕಷ್ಟ ಮತ್ತು ಲಾಕ್ ಡೌನ್ ಹಾಹಾಕಾರದ ನಡುವೆ ಇಂತಹದ್ದೊಂದು ಆಘಾತಕಾರಿ ಬೆಲೆ ಏರಿಕೆಗೆ ಕೊರಳೊಡ್ಡಿರುವ ಭಾರತೀಯ ಬಾಯಿಗೆ ಎಟುಕದಂತೆ ಗಾಣದ ಮುಂದೆ ಕಟ್ಟಿರುವ ಹುಲ್ಲಿನ ಆಸೆಗೆ ಗಾಣ ಎಳೆಯುತ್ತಾ ಸುತ್ತು ಹಾಕುವ ಗಾಣದೆತ್ತಿನಂತೆ ‘ಅಚ್ಛೇದಿನ’ಗಳ ಬರ್ಬರತೆಗೆ ಬಸವಳಿಯತೊಡಗಿದ್ದಾನೆ. ಹಾಗಾಗಿ ಈಗ ಪೆಟ್ರೋಲ್-ಡೀಸೆಲ್ ವಾಹನ ಬಿಟ್ಟು ಸೈಕಲ್ ಬಳಕೆಗೆ, ಕೈಗೆಟುಕದ ವಸ್ತುಗಳನ್ನು ಬಿಟ್ಟು ಸದ್ಯಕ್ಕೆ ಕಾಲ ತಳ್ಳುವ ಮಟ್ಟಿಗೆ ಆತ್ಮನಿರ್ಭರನಾಗಿದ್ದಾನೆ!
ಏಕೆಂದರೆ, ಕರೋನಾ ಮತ್ತು ಲಾಕ್ ಡೌನ್ ನಡುವೆ ದೇಶದ ಜನಸಾಮಾನ್ಯರ ದುಡಿಮೆ ಹಳ್ಳ ಹಿಡಿದು, ದಿಕ್ಕೆಟ್ಟು ಕೂತಿರುವ ಹೊತ್ತಿನಲ್ಲಿ ಜನರ ನೆರವಿಗೆ ಧಾವಿಸಬೇಕಾದ ಸರ್ಕಾರ, ಒಂದು ಕಡೆ ಐಷಾರಾಮಿ ಸಂಸತ್ ಭವನ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ಸುರಿಯುತ್ತಿದ್ದರೆ, ಮತ್ತೊಂದು ಕಡೆ ಕಡುಬಡವರ ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ಕರೋನಾ ಆರ್ಥಿಕ ಸಂಕಷ್ಟದ ನೆಪವೊಡ್ಡಿ ತಡೆ ಹಿಡಿಯಿತು. ಅದು ಸಾಲದು ಎಂಬಂತೆ ಕಳೆದ ಒಂದು ವರ್ಷದ ಸಂಕಷ್ಟದ ನಡುವೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ತಗ್ಗಿಸಿ, ಅವುಗಳ ಮೇಲಿನ ತೆರಿಗೆ ಕಡಿತ ಮಾಡಿ ಜನಸಾಮಾನ್ಯರ ಹೊರೆ ಕಡಿಮೆ ಮಾಡುವ ಬದಲು, ಹಿಂದೆಂದೂ ಕಂಡು ಕೇಳಿರದ ಪ್ರಮಾಣದ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯಿತು.
ಹಾಗಾಗಿ ಕಳೆದ ವರ್ಷದ ಫೆಬ್ರವರಿಯಲ್ಲಿ; ಕರೋನಾ ಲಾಕ್ ಡೌನ್ ಗೆ ಮುಂಚೆ ಲೀಟರಿಗೆ 75.66ರೂ ಇದ್ದ ಪೆಟ್ರೋಲ್ ಬೆಲೆ, ಈಗ ಲೀಟರಿಗೆ 98 ರೂ.ಗೆ ಏರಿದೆ. ಅಂದರೆ, ಬರೋಬ್ಬರಿ ಒಂದು ವರ್ಷದಲ್ಲಿ ಲೀಟರಿಗೆ 23 ರೂ.ಗಳಷ್ಟು ಬೆಲೆ ಏರಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆಯಲ್ಲಿ ಅಂತಹ ಮಹತ್ವದ ಬದಲಾವಣೆಯಾಗದೇ ಇದ್ದರೂ(2020ರ ಫೆಬ್ರವರಿಯಲ್ಲಿ 55 ಡಾಲರ್/ಬ್ಯಾರಲ್, ಈಗ 60 ಡಾಲರ್/ ಬ್ಯಾರಲ್ ), ಈ ಮಟ್ಟದ ಆಘಾತಕಾರಿ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಲು ಕಾರಣ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಹೆಚ್ಚಳ. ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ ಮೇಲಿನ ಸುಂಕವನ್ನು 19.98 ರೂ.ನಿಂದ 32.98 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ, ಸುಮಾರು 13 ರೂಪಾಯಿಯಷ್ಟು ಒಂದೇ ವರ್ಷದಲ್ಲಿ ಸುಂಕ ಹೆಚ್ಚಳ ಮಾಡಲಾಗಿದೆ. ಡೀಸೆಲ್ ಮೇಲಿನ ತೆರಿಗೆ ಪ್ರಮಾಣವಂತೂ ಕಳೆದ ಒಂದು ವರ್ಷದಲ್ಲಿ ದುಪ್ಪಟ್ಟಾಗಿದೆ(15.83 ರೂ.ನಿಂದ 31.83ಕ್ಕೆ ಏರಿಕೆ!). ಅಂದರೆ; ಜನರ ಕ್ಷಾಮವನ್ನೇ ಸರ್ಕಾರಿ ಬೊಕ್ಕಸ ತುಂಬಿಸಿಕೊಳ್ಳುವ ಆದಾಯ ಮೂಲ ಮಾಡಿಕೊಳ್ಳುವ ಮಟ್ಟಿನ ಜನದ್ರೋಹಿ ನಡೆ ಇದು!
ದುರ್ದಿನಗಳ ಹೊತ್ತಲ್ಲೂ ಜನರ ನೆತ್ತರು ಹೀರುವ ಆಡಳಿತದ ಈ ವರಸೆ, ಕಳೆದ ಒಂದು ವರ್ಷದ ಆತ್ಮನಿರ್ಭರ ಅವಧಿಗೆ ಮಾತ್ರ ಸೀಮಿತವಾಗೇನೂ ಇಲ್ಲ. 2014ರಿಂದಲೂ ದೇಶದಲ್ಲಿ ಜಾರಿಗೆ ಬಂದಿರುವ ಅಚ್ಛೇದಿನದ ಸರ್ಕಾರದ ಅವಧಿಯಲ್ಲಿ ಉದ್ದಕ್ಕೂ ಇಂತಹ ಲೂಟಿಯನ್ನು ಚಾಲ್ತಿಯಲ್ಲಿಡಲಾಗಿದೆ. 2014ರಲ್ಲಿ ಲೀಟರ್ ಪೆಟ್ರೋಲ್ ಮೇಲಿನ ಕೇಂದ್ರ ಸರ್ಕಾರದ ತೆರಿಗೆ ಕೇವಲ 10.39 ರೂ. ಇದ್ದರೆ, ಈಗ ಆ ಪ್ರಮಾಣ 32.98 ರೂ. ಗೆ ಏರಿಕೆಯಾಗಿದೆ! ಅಂದರೆ, ಈ ಆರು ವರ್ಷಗಳಲ್ಲಿ ಮೋದಿಯವರ ಸರ್ಕಾರ ಲೀಟರಿಗೆ ಬರೋಬ್ಬರಿ 20.61 ರೂ.ನಷ್ಟು ತೆರಿಗೆ ಹೇರಿದೆ. ಇನ್ನು ಇದೇ ಅವಧಿಯಲ್ಲಿ ಡೀಸೆಲ್ ಮೇಲಿನ ತೆರಿಗೆ ಹೊರೆಯನ್ನು ಕೇಳಿದರೆ, ಆಘಾತಕಾರಿ ಅಚ್ಚೇದಿನದ ಬದಲಾವಣೆಗೆ ಬೆಚ್ಚಿಬಿದ್ದು ಎದೆಯೊಡೆಯದೇ ಇರಲಾರದು. 2014ರಲ್ಲಿ ಕೇವಲ 3.56 ರೂ.ನಷ್ಟಿದ್ದ ಡೀಸೆಲ್ ಮೇಲಿನ ಕೇಂದ್ರ ಸುಂಕ, ಈಗ 31.83 ರೂ. ಆಗಿದೆ! ಅಂದರೆ, ಹತ್ತು ಪಟ್ಟು ಹೆಚ್ಚಳ!
ಕೇಂದ್ರ ಸರ್ಕಾರ ದೇಶದ ಜನತೆಯ ಬದುಕನ್ನು ಸುಲಲಿತಗೊಳಿಸುತ್ತಿರುವ ಇಂತಹ ಘನ ಕಾರ್ಯಕ್ಕೆ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳೂ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿವೆ! ಸಂಸ್ಕರಣೆ ಶುಲ್ಕ, ಡೀಲರ್ ಕಮೀಷನ್ ಮತ್ತಿತರ ಮೂಲ ವೆಚ್ಛ ಸೇರಿ ಪೆಟ್ರೋಲ್ ಮೂಲ ದರ ಈಗ 35 ರೂ. ಆಸುಪಾಸಿನಲ್ಲಿದೆ. ಆದರೆ, ಅದಕ್ಕೆ ಕೇಂದ್ರ ತೆರಿಗೆ 32.98 ರೂ., ಕರ್ನಾಟಕದ ರಾಜ್ಯ ತೆರಿಗೆ 23.49 ರೂ., ಸೇರಿ ಸದ್ಯ 92-93 ರೂ. ಆಸುಪಾಸಿಗೆ ಲೀಟರ್ ಪೆಟ್ರೋಲ್ ಮಾರಾಟವಾಗುತ್ತಿದೆ. ಅಂದರೆ, ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ವಿಧಿಸುವ ತೆರಿಗೆ ಶೇ.125ರಷ್ಟಾದರೆ, ರಾಜ್ಯ ವಿಧಿಸುವ ತೆರಿಗೆ ಪ್ರಮಾಣ ಶೇ.89 ರಷ್ಟು!
ಈ ಪ್ರಮಾಣದ ಇಂಧನ ಬೆಲೆ ಏರಿಕೆಯ ಪರಿಣಾಮ ಕೇವಲ ವಾಹನ ಬಳಕೆದಾರರ ಮೇಲೆ, ಸರಕು ಸಾಗಣೆ ಮತ್ತು ಸಾರಿಗೆ ವಾಹನಗಳ ನಿರ್ವಹಣೆಗಾರರ ಮೇಲೆ ಮಾತ್ರ ಆಗುತ್ತದೆ. ಕರೋನಾ ಸಂಕಷ್ಟದಿಂದ ಕುಸಿದಿರುವ ದೇಶದ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸಲು ಹೀಗೆ ತೆರಿಗೆ ವಿಧಿಸುವುದು ಅನಿವಾರ್ಯ. ತೆರಿಗೆ ಹಣವನ್ನು ದೇಶದ ಅಭಿವೃದ್ದಿಗೇ ಬಳಸಲಾಗುತ್ತಿದೆ ಎಂಬುದು ಕೇಂದ್ರ ಸರ್ಕಾರದ ಬೆಲೆ ಹೆಚ್ಚಳ ಸಮರ್ಥಕರ ವಾದ. ಆದರೆ, ಭಾರತ್ ಮಾಲಾ, ಸಾಗರ್ ಮಾಲಾ, ಸೇತುಭಾರತ್, ಚಾರ್ ಧಾಮ್ ಹೈವೇ, ಶಿವಾಜಿ ಮೆಮೋರಿಯಲ್ ನಂತಹ ತೀರಾ ತುರ್ತಿಲ್ಲದ, ಅವು ನಿಂತು ಹೋದರೂ ಕೆಲ ವರ್ಷಗಳ ಮಟ್ಟಿಗೆ ಭಾರತದ ಬಡವರ ಬದುಕಿನ ಮೇಲೆ ಯಾವ ಪರಿಣಾಮವೂ ಆಗದ ಸುಮಾರು 25 ಲಕ್ಷ ಕೋಟಿ ಮೊತ್ತದ ವಿವಿಧ ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಕರೋನಾ ಸಂಕಷ್ಟದ ಹೊತ್ತಲ್ಲೂ ಜನರ ತೆರಿಗೆ ಹಣ ಸುರಿಯುವ ಜರೂರು ಏನಿತ್ತು ಎಂಬುದು ಜನಸಾಮಾನ್ಯರ ಪ್ರಶ್ನೆ.
ಆದರೆ, ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಬೃಹತ್ ಅಭಿವೃದ್ಧಿ ಯೋಜನೆಗಳು ಅಧಿಕಾರಸ್ಥ ರಾಜಕಾರಣಿಗಳು ಮತ್ತು ಆಡಳಿತಶಾಹಿಯ ಪಾಲಿಗೆ ಕಾಮಧೇನುವಿನಂತೆ. ಜನರ ಬದುಕು ನರಕವಾದರೂ, ಕೆಲಸವಿಲ್ಲದೆ, ಹೊತ್ತಿನ ಅನ್ನವಿಲ್ಲದೆ ಬಡವರು ಜೀವ ಬಿಟ್ಟರೆ ಆಳುವವರಿಗೆ ಯಾವ ನಷ್ಟವಿಲ್ಲ. ಆದರೆ, ಒಂದೇ ಒಂದು ಬೃಹತ್ ಯೋಜನೆಗೆ ಸರ್ಕಾರದ ಅನುದಾನದ ಹರಿವು ನಿಂತರೆ, ಅದರ ಅಂತಿಮ ಪರಿಣಾಮವಾಗಿ ಗುತ್ತಿಗೆದಾರರ ಮೂಲಕ ರಾಜಕೀಯ ನಾಯಕರು ಮತ್ತು ಆಡಳಿತಶಾಹಿಗೆ ತಲುಪುವ ಕಮೀಷನ್ ಹರಿವು ಕಡಿತವಾಗುತ್ತದೆ. ಆ ಹರಿವಿನಲ್ಲಿ ಒಂದಿಷ್ಟು ಏರುಪಾರಾದರೂ ಅದರು ಆ ನಾಯಕರು, ಅವರ ಪಕ್ಷದ ಭವಿಷ್ಯಕ್ಕೆ ಪೆಟ್ಟು ಕೊಡುತ್ತದೆ. ಹಾಗಾಗಿ ಜನ ದುಬಾರಿ ತೆರಿಗೆಯಿಂದ ಜೀವ ಬಿಟ್ಟರೂ ಸರಿ, ತೆರಿಗೆ ಹೆಚ್ಚಳ ನಿಲ್ಲದು, ಜನರ ಲೂಟಿ ನಿಲ್ಲದು; ನಾಯಕರು ಮತ್ತು ಅವರ ಆಪ್ತೇಷ್ಟರ ಅಭಿವೃದ್ಧಿಯೂ ನಿಲ್ಲದು!
ಆದರೆ, ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಎಂದರೆ; ಅದು ಪೆಟ್ರೋಲ್ ಪಂಪಿನ ಮುಂದೆ ನಿಂತು ಕಿಸೆಯಿಂದ ತೆಗೆದು ಕೊಡುವ ನೋಟಿನ ಸಂಖ್ಯೆಯ ಏರಿಕೆ ಮಾತ್ರವಲ್ಲ. ಏಕೆಂದರೆ; ದೇಶದ ಸರಕು-ಸರಂಜಾಮುಗಳು ಬೆಲೆ ನಿಂತಿರುವುದು ಬಹುತೇಕ ಅವುಗಳ ಉತ್ಪಾದನಾ ವೆಚ್ಚದಷ್ಟೇ ಪಾತ್ರ ವಹಿಸುವ ಸಾಗಣೆ ವೆಚ್ಚದ ಮೇಲೆ. ಇನ್ನು ನಿತ್ಯ ಬಳಕೆಯ ಅಗತ್ಯವಸ್ತುಗಳು ಮತ್ತು ಆಹಾರೋತ್ಪನ್ನಗಳಾದ ತರಕಾರಿ, ಹಣ್ಣು, ದವಸ ಧಾನ್ಯಗಳ ವಿಷಯದಲ್ಲಂತೂ ಅವುಗಳ ಬೆಲೆಯ ಬಹುಪಾಲು ಸಾಗಣೆ ವೆಚ್ಚವೇ ಆಗಿರುತ್ತದೆ. ಹಾಗಾಗಿ ಪೆಟ್ರೋಲ್ –ಡೀಸೆಲ್ ಬೆಲೆಯಲ್ಲಿ ಒಂದು ರೂಪಾಯಿ ಆಚೀಚೆಯಾದರೂ, ಅದರ ನೇರ ಪರಿಣಾಮ ಜನರ ಊಟದ ತಟ್ಟೆಯ ಮೇಲಾಗುತ್ತದೆ. ಅದರಲ್ಲೂ ಬಡವರ ಬಟ್ಟಲು ಬರಿದಾಗುತ್ತದೆ. ಈಗಾಗಲೇ ಕಳೆದ ಒಂದು ವಾರದಲ್ಲಿ ಬಜೆಟ್ ಬಳಿಕ ಪೆಟ್ರೋಲ್ ಬೆಲೆ ನಾಗಾಲೋಟದ ನಡುವೆ ಹಣ್ಣು, ತರಕಾರಿ, ಕಾಳು ಬೇಳೆಯ ಬೆಲೆ ಗಗನಕ್ಕೇರಿದೆ.
ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ, ಇಂಧನ ಮೇಲಿನ ಸುಂಕ ಕಡಿತ ಮಾಡುವ ಮೂಲಕ ಪೆಟ್ರೋಲ್- ಡೀಸೆಲ್ ಬೆಲೆ ಇಳಿಕೆ ಮಾಡಬೇಕು. ಇಲ್ಲವಾದಲ್ಲಿ ದೇಶದಲ್ಲಿ ಜನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಲಿವೆ. ಪರಿಣಾಮವಾಗಿ ಹಣದುಬ್ಬರ ಪ್ರಮಾಣ ಹಿಡಿತಕ್ಕೆ ಸಿಗದ ಮಟ್ಟಿಗೆ ಜಿಗಿಯಲಿದೆ. ಈಗಾಗಲೇ ನೋಟ್ ರದ್ದತಿ, ಜಿಎಸ್ ಟಿ, ಕರೋನಾ ಲಾಕ್ ಡೌನ್ ಮುಂತಾದ ಕಾರಣಗಳಿಂದ ಸಂಕಷ್ಟದಲ್ಲಿರುವ ದೇಶದ ಆರ್ಥಿಕತೆಗೆ ಇದು ಮತ್ತೊಂದು ಪೆಟ್ಟು ಕೊಡಲಿದೆ ಎಂದು ಈಗಾಗಲೇ ಆರ್ ಬಿಐ ಕೇಂದ್ರ ಸರ್ಕಾರವನ್ನ ಎಚ್ಚರಿಸಿದೆ. ಆದರೆ, ಅಂತಹ ಎಚ್ಚರಿಕೆ ಮತ್ತು ಸಲಹೆಗಳಿಗೆ ಕಿವಿಗೊಡುವ ವಿವೇಕವಾಗಲೀ, ವಿವೇಚನೆಯಾಗಲೀ ಸದ್ಯಕ್ಕೆ ದಿಲ್ಲಿಯ ದರ್ಬಾರ್ ನಲ್ಲಿ ಕಾಣುತ್ತಿಲ್ಲ.
ಹಾಗಾಗಿ, ದುರ್ದಿನಗಳ ಜೊತೆಗೆ ದುಬಾರಿ ದಿನಗಳಿಗೂ ದೇಶದ ಜನಸಾಮಾನ್ಯರು ಸಜ್ಜಾಗಬೇಕಿದೆ. ಅರೆಬರೆ ಹೊಟ್ಟೆ, ಅರೆ ಬಟ್ಟೆಯಲ್ಲಿಯೂ ಅಭೂತಪೂರ್ವ ‘ಅಚ್ಚೇದಿನ’ಗಳನ್ನು ಸಂಭ್ರಮಿಸುವುದನ್ನು ಕಲಿಯಬೇಕಿದೆ!