ಪ್ರತಿಭಟನಾ ಸ್ಥಳಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ಮುಂದಾದ ಪ್ರತಿಭಟನಾ ನಿರತ ರೈತರು

ಸಿಂಘು ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲು 100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಹಾಕಲಾಗಿದೆ ಹಾಗೂ ಸರ್ಕಾರ ಮತ್ತೆ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇರುವುದರಿಂದ, ಪ್ರತ್ಯೇಕ ಆಪ್ಟಿಕಲ್‌ ಕೇಬಲ್‌ ಅಳವಡಿಸಿ ವೈಫೈ ವ್ಯವಸ್ಥೆ ಕೂಡಾ ಮಾಡಲಾಗುವುದು
ಪ್ರತಿಭಟನಾ ಸ್ಥಳಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ಮುಂದಾದ ಪ್ರತಿಭಟನಾ ನಿರತ ರೈತರು

ಗಣರಾಜ್ಯೋತ್ಸವ ದಿನದಂದು ನಡೆದ ಅಹಿತಕರ ಘಟನೆಗಳಿಂದಾಗಿ ರೈತರ ಹೋರಾಟ ಅರ್ಧಕ್ಕೆ ನಿಲ್ಲುತ್ತದೆ ಎಂಬಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ, ಈ ಘಟನೆಗಳ ಹಿಂದಿನ ರಾಜಕೀಯ ಕೈವಾಡ ಬಯಲಿಗೆ ಬಂದ ನಂತರ ರೈತರ ಆಂದೋಲನಕ್ಕೆ ಮತ್ತಷ್ಟು ಬಲ ಬಂದಿದೆ. ಇನ್ನೇನು ಮುಗಿದೇ ಹೋಯ್ತು ಎಂಬ ಸ್ಥಿತಿಯಲ್ಲಿದ್ದ ಪ್ರತಿಭಟನೆ ಈಗ ಮತ್ತಷ್ಟು ದೀರ್ಘವಾಗಿ ನಡೆಯುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ರೈತರು ಕೂಡಾ ಪ್ರತಿಭಟನಾ ಸ್ಥಳಗಳಲ್ಲಿ ʼಮೂಲಸೌಕರ್ಯʼ ಅಭಿವೃದ್ದಿಯತ್ತ ತಮ್ಮ ಗಮನವನ್ನು ಹರಿಸುತ್ತಿದ್ದಾರೆ.

ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಾಸ್‌ ಪಡೆಯುವವರೆಗೂ ಪ್ರತಿಭಟನೆಯನ್ನು ವಾಪಾಸ್‌ ಪಡೆಯಲಾಗುವುದಿಲ್ಲ ಎಂಬುದನ್ನು ಸಂಯುಕ್ತ ಕಿಸಾನ್‌ ಮೋರ್ಚಾ ಸ್ಪಷ್ಟವಾಗಿ ಹೇಳಿದೆ. ಕೃಷಿ ಕಾಯ್ದೆಗಳನ್ನು ವಾಪಾಸ್‌ ಪಡೆಯುವುದರೊಂದಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಅಧಿಕೃತಗೊಳಿಸುವ ಕಾನೂನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇನ್ನೂ ದೀರ್ಘ ಕಾಲ ಈ ಪ್ರತಿಭಟನೆಯನ್ನು ಮುಂದುವರೆಸುವ ಸಲುವಾಗಿ ಸಿಂಘು ಗಡಿಯ ಬಳಿ ಸಂವಹನ ಹಾಗೂ ಇತರ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಪ್ರತಿಭಟನಾನಿರತ ರೈತ ಮುಖಂಡರಲ್ಲಿ ಒಬ್ಬರಾದ ದೀಪ್ ಖತ್ರಿ ಅವರು ಹೇಳಿದ್ದಾರೆ.

ಸಿಂಘು ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲು 100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಹಾಕಲಾಗಿದೆ. ಮುಖ್ಯ ವೇದಿಕೆಯ ಹಿಂಭಾಗದಲ್ಲಿ ಈ ಕ್ಯಾಮೆರಾಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನು ಕೂಡಾ ಅಳವಡಿಸಲಾಗುವುದು. ವೇದಿಕೆಯ ಸುತ್ತಮುತ್ತ ಹಾಗೂ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ಸುಮಾರು 600 ಜನ ಸ್ವಯಂಸೇವಕರು ಪ್ರತಿಭಟನಾ ಸ್ಥಳಗಳಲ್ಲಿ ಸರದಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಅವರಿಗೆ ಗುರುತಿನ ಚೀಟಿಯನ್ನೂ ನೀಡಲಾಗಿದೆ. ಹತ್ತು ಸ್ಥಳಗಳಲ್ಲಿ ಬೃಹತ್‌ LCD ಪರದೆಗಳನ್ನು ಕೂಡ ಅಳವಡಿಸಲಾಗುವುದು. ಮುಖ್ಯ ವೇದಿಕೆಯಲ್ಲಿ ನಡೆಯುವ ಘಟನೆಗಳನ್ನು ಗಮನಿಸಲು ಈ ಪರದೆಗಳನ್ನು 700-800 ಮೀಟರ್‌ಗಳಿಗೊಂದರಂತೆ ಅಳವಡಿಸಲಾಗುವುದು.

ಸರ್ಕಾರ ಮತ್ತೆ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವ ಹುನ್ನಾರ ಮಾಡುವ ಸಂಭವವಿರುವುದರಿಂದ, ಪ್ರತ್ಯೇಕ ಆಪ್ಟಿಕಲ್‌ ಕೇಬಲ್‌ ಅಳವಡಿಸಿ ವೈಫೈ ವ್ಯವಸ್ಥೆ ಕೂಡಾ ಮಾಡಲಾಗುವುದು, ಎಂದು ಖತ್ರಿ ಹೇಳಿದ್ದಾರೆ.

“ನಾವು ಹಲವು ತಿಂಗಳುಗಳ ಕಾಲ ಈ ಪ್ರತಿಭಟನೆಯನ್ನು ಮಾಡಲು ಸಿದ್ದರಾಗಿ ಬಂದಿದ್ದೇವೆ. ನಮ್ಮಲ್ಲಿ ಜನರ ಹಾಗೂ ಸಂಪನ್ಮೂಲಗಳ ಕೊರತೆ ಇಲ್ಲ,” ಎಂದಿದ್ದಾರೆ.

ಕಳೆದ ನವೆಂಬರ್‌ನಿಂದ ರೈತರು ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದು ದೆಹಲಿಯ ಗಡಿ ಭಾಗಗಳಾದ ಸಿಂಘು, ಟಿಕ್ರಿ ಹಾಗೂ ಗಾಜೀಪುರಗಳಲ್ಲಿ ಬೀಡು ಬಿಟ್ಟಿದ್ದಾರೆ. ಕೃಷಿ ಕಾನೂನುಗಳನ್ನು ವಾಪಾಸ್‌ ಪಡೆಯುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com