ಅಕ್ರಮ ಗಣಿಗಾರಿಕೆಗಾಗಿ 250 ಕೇಸು ದಾಖಲಿಸಿರುವ ಮೇಘಾಲಯ

"ಅಕ್ರಮ ಕಲ್ಲಿದ್ದಲು ಗಣಿಗಾರಿಕೆಗಾಗಿ ಸಿಮೆಂಟ್ ಮತ್ತು ವಿದ್ಯುತ್ ಕಂಪನಿಗಳ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ"
ಅಕ್ರಮ ಗಣಿಗಾರಿಕೆಗಾಗಿ 250 ಕೇಸು ದಾಖಲಿಸಿರುವ ಮೇಘಾಲಯ

2014 ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿಧಿಸಿದ ನಿಷೇಧದ ಹೊರತಾಗಿಯೂ ಮೇಘಾಲಯದಲ್ಲಿ ಅಕ್ರಮ ಗಣಿಗಾರಿಕೆ ಮುಂದುವರಿಯುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರವು ಹೊಣೆಗಾರಿಕೆಯಿಂದ ಜಾರಲು‌ ಪ್ರಯತ್ನಿಸಿದೆ. ಆದರೆ ಅಂತಹ ಅಪರಾಧಗಳ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಇದೇ ಸಂದರ್ಭದಲ್ಲಿ ಒಪ್ಪಿಕೊಂಡಿದೆ.

ಬಿಜೆಪಿ ರಾಜ್ಯಸಭಾ ಸಂಸದ ರಾಕೇಶ್ ಸಿನ್ಹಾ ಅವರು ಕಲ್ಲಿದ್ದಲು ಸಚಿವಾಲಯವನ್ನು "ನಿಷೇಧದ ಹೊರತಾಗಿಯೂ ಮೇಘಾಲಯದಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ಮುಂದುವರೆದಿದೆಯಾ?" ಎಂದು ಕೇಳಿದ್ದರು. ಅಂತಹ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಪಟ್ಟಿಯನ್ನೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ‌ ಕೇಳಿದೆ.

ಈ ಪ್ರಶ್ನೆಗೆ ಸಚಿವ ಪ್ರಹ್ಲಾದ್ ಜೋಶಿ ಅವರು ಯಾವುದೇ ಉತ್ತರ ನೀಡಲಿಲ್ಲ. ಬದಲಾಗಿ, 'ರಾಜ್ಯದಲ್ಲಿ ಯಾವುದೇ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಲು' ಸರ್ಕಾರ ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಲು ಮುಂದಾದರು.

ಈ ಕ್ರಮಗಳಲ್ಲಿ ಮಾರ್ಚ್ 2019 ರಿಂದ ಅಕ್ರಮ ಗಣಿಗಾರಿಕೆ ಕಾರ್ಯಾಚರಣೆಗೆ ದಂಡ ವಿಧಿಸುವ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 21 ರ ಅಡಿಯಲ್ಲಿ “250 ಪ್ರಕರಣಗಳು ದಾಖಲಾಗಿವೆ” ಎಂಬುವುದೂ ಸೇರಿದೆ. ನಿಷೇಧದ ಹೊರತಾಗಿಯೂ ಮೇಘಾಲಯದಲ್ಲಿ ಅಕ್ರಮ ಗಣಿಗಾರಿಕೆ ಮುಂದುವರೆದಿದೆ ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ರಾಜ್ಯದೊಳಗಿನ ಅನೇಕರಿಗೆ ಇದರಿಂದ ಆಶ್ವರ್ಯವನ್ನೇನೂ ತಂದಿಲ್ಲ.

ಯಾಕೆಂದರೆ ಅಲ್ಲಿ ಗಣಿಗಾರಿಕೆ ನಡೆಯುತ್ತಲೇ ಇದೆ ಮತ್ತು ಆಗಾಗ ಜೀವ ಹಾನಿ ಸಂಭವಿಸುತ್ತಲೇ ಇದೆ. ಜನವರಿ 21 ರಂದು ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಆರು ಜನರು ಗಣಿಯೊಳಗೆ ಸಾವನ್ನಪ್ಪಿರುವ ಘಟನೆ ಇನ್ನೂ ಹಸಿಯಾಗಿಯೇ ಇದೆ. ಈ ಘಟನೆಯಲ್ಲೂ ಎಂಎಂಡಿಆರ್ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ ಎಂದು ಸಿನ್ಹಾ ಕೇಳಿದ್ದಾರೆ. ಇದಕ್ಕೆ ನೇರವಾಗಿ ಉತ್ತರಿಸದ ಸಚಿವರು 675 ರೂ.ಗಳ ರಾಯಧನವನ್ನು ಮತ್ತು 300 ರೂ.ನಷ್ಟು ಸೆಸ್ ಪ್ರತಿ ಮೆಟ್ರಿಕ್ ಟನ್ ಕಾನೂನುಬಾಹಿರ ಕಲ್ಲಿದ್ದಲ್ಲಿನಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ ಅಂದರು. "ಅಕ್ರಮ ಕಲ್ಲಿದ್ದಲು ಗಣಿಗಾರಿಕೆಗಾಗಿ ಸಿಮೆಂಟ್ ಮತ್ತು ವಿದ್ಯುತ್ ಕಂಪನಿಗಳ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ" ಎಂದೂ ಅವರು ಹೇಳಿದರು.

ಅಕ್ರಮವಾಗಿ ಗಣಿಗಾರಿಕೆ ಮಾಡಿದ ಕಲ್ಲಿದ್ದಲನ್ನು ಬಳಸಿದ ವಿದ್ಯುತ್ ಮತ್ತು ಸಿಮೆಂಟ್ ಉತ್ಪಾದನಾ ಘಟಕಗಳಿಗೆ ಎನ್‌ಜಿಟಿ (ಹಸಿರು ನ್ಯಾಯ ಮಂಡಳಿ) 614 ಕೋಟಿ ರೂ.ಗಳನ್ನು ಮೇಘಾಲಯ ಪರಿಸರ ಸಂರಕ್ಷಣೆ ಮತ್ತು ಪುನಃಸ್ಥಾಪನೆ ನಿಧಿಗೆ ಜಮಾ ಮಾಡಲು ಆದೇಶ ನೀಡಿದೆ ಎಂದು ಸಚಿವರು ಹೇಳಿದರು. ಕಂಪೆನಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.

ಎನ್‌ಜಿಟಿಯು ಮೇಘಾಲಯದಲ್ಲಿ 2014 ರಲ್ಲಿ ಏಪ್ರಿಲ್‌ನಲ್ಲಿ ಇಲಿ ರಂಧ್ರ ಕಲ್ಲಿದ್ದಲು ಗಣಿಗಾರಿಕೆಗೆ ನಿಷೇಧ ಹೇರಿದೆ. ಡಿಸೆಂಬರ್ 13, 2018 ರಂದು ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಲುಮ್ತಾರಿ ಗ್ರಾಮದಲ್ಲಿ 370 ಅಡಿ ಆಳದ ಅಕ್ರಮ ಇಲಿ ರಂಧ್ರ ಕಲ್ಲಿದ್ದಲು ಗಣಿಯಲ್ಲಿ 15 ಗಣಿಗಾರರು ಸಿಕ್ಕಿಬಿದ್ದ ಪ್ರಕರಣದಲ್ಲಿ 2019 ರ ಜನವರಿಯಲ್ಲಿ ನ್ಯಾಯಮಂಡಳಿ ಅಕ್ರಮ ಗಣಿಗಾರಿಕೆಯನ್ನು ತಡೆಯುವಲ್ಲಿ ವಿಫಲವಾದ ಕಾರಣದಿಂದ ರಾಜ್ಯ ಸರ್ಕಾರಕ್ಕೆ 100 ಕೋಟಿ ರೂ ದಂಡ ವಿಧಿಸಿತ್ತು.

ಸಂಬಂಧಪಟ್ಟ ಅಧಿಕಾರಿಗಳ ಅನುಮತಿಗೆ ಒಳಪಟ್ಟು ಖಾಸಗಿ ಮತ್ತು ಸಮುದಾಯ ಸ್ವಾಮ್ಯದ ಜಮೀನುಗಳಲ್ಲಿ ಗಣಿಗಾರಿಕೆ ಕಾರ್ಯಾಚರಣೆಯನ್ನು ಮುಂದುವರಿಸಲು 2019 ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಸುಪ್ರೀಂ ಕೋರ್ಟ್‌ನ ಆದೇಶವು ಮೇಘಾಲಯದಲ್ಲಿನ ಸಂಪನ್ಮೂಲಗಳ ಮತ್ತು ಭೂಮಿಯ ಮೇಲಿನ ಬುಡಕಟ್ಟು ಜನರ ಮಾಲೀಕತ್ವವನ್ನು ಎತ್ತಿಹಿಡಿದಿದೆ. ಇದು ‘ಆರನೇ ಶೆಡ್ಯೂಲ್’ ಅಡಿಯಲ್ಲಿ ಸಾಂವಿಧಾನಿಕ ಸುರಕ್ಷತೆಗಳನ್ನು ಹೊಂದಿದೆ. "ಪರಿಸರ ಇಲಾಖೆಯ ಅನುಮತಿಗೆ ಒಳಪಟ್ಟು, ಖನಿಜಗಳ (ರಿಯಾಯಿತಿ) ನಿಯಮಗಳು 1960 ಮತ್ತು ಗಣಿ ಕಾಯ್ದೆ 1960 ರ ಅಡಿಯಲ್ಲಿ ಗಣಿಗಾರಿಕೆ ಗುತ್ತಿಗೆ ಪಡೆಯುವುದು ಮತ್ತು ಕಲ್ಲಿದ್ದಲು ಗಣಿ ನಿಯಮಗಳು 2017 ರ ಅಡಿಯಲ್ಲಿ ವಿಧಿಸಲಾದ ನಿಯಮಗಳಡಿಯಲ್ಲಿ ಮಾತ್ರ ಗಣಿಗಾರಿಕೆ ಮಾಡಬಹುದಯ" ಎಂದು ಅದು ಅಭಿಪ್ರಾಯಪಟ್ಟಿದೆ.

ವಿಚಾರಣೆಯ ಸಮಯದಲ್ಲಿ, ಈಶಾನ್ಯ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಗಣಿಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯಸರ್ಕಾರ ಒಪ್ಪಿಕೊಂಡಿತ್ತು. ಆದರೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಷರತ್ತುಗಳನ್ನು ಅನುಸರಿಸಲು ರಾಜ್ಯ ಸರ್ಕಾರ ಇನ್ನೂ ಗಣಿಗಾರಿಕೆ ಯೋಜನೆಯನ್ನು ರೂಪಿಸಿಲ್ಲ. ಆದ್ದರಿಂದ, ರಾಜ್ಯದಲ್ಲಿ ಎಲ್ಲಾ ಗಣಿಗಾರಿಕೆ ಚಟುವಟಿಕೆಗಳನ್ನು ಇನ್ನೂ ಕಾನೂನುಬಾಹಿರವೆಂದೇ ಪರಿಗಣಿಸಲಾಗುತ್ತದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com