ಗುಲಾಂ ನಬಿ ಆಜಾದ್‌ ವಿದಾಯ: ವಿರೋಧಿಗಳು ಹೊಗಳಿದರೂ ಕಾಂಗ್ರೆಸ್ ಮೌನಕ್ಕೆ ಶರಣಾಗಲು ಕಾರಣವೇನು?

ಗಾಂಧಿ ಕುಟುಂಬದ ನಿಷ್ಠಾವಂತ ಆಗಿರುವ ಗುಲಾಮ್ ನಬಿ ಆಜಾದ್ 1973 ರಲ್ಲಿ ಯೂತ್ ಕಾಂಗ್ರೆಸ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಇಂದಿರಾ ಗಾಂಧಿಯವರ ಆಪ್ತ ವರ್ಗದಲ್ಲಿ ಗುರುತಿಸಿಕೊಂಡರು, ನಂತರ ಅವರ ನಿಷ್ಠೆ ರಾಜೀವ್ ಗಾಂಧಿಯವರವರೆಗೂ ಮುಂದುವರೆಯಿತು
ಗುಲಾಂ ನಬಿ ಆಜಾದ್‌ ವಿದಾಯ: ವಿರೋಧಿಗಳು ಹೊಗಳಿದರೂ ಕಾಂಗ್ರೆಸ್ ಮೌನಕ್ಕೆ ಶರಣಾಗಲು ಕಾರಣವೇನು?

ಮಂಗಳವಾರ ರಾಜ್ಯಸಭೆಯು ಭಾವನಾತ್ಮಕ ಘಟನೆಯೊಂದಕ್ಕೆ ಸಾಕ್ಷಿ ಆಯಿತು. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರ ನಿವೃತ್ತಿಯ ದಿನದಂದು ಪ್ರಧಾನ ಮಂತ್ರಿ ನರೇಂಧ್ರ ಮೋದಿ ಅವರು ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆದುಕೊಂಡು ಕಾಶ್ಮೀರದ ಕಾಂಗ್ರೆಸ್ ನಾಯಕನಿಗೆ ಆಶ್ಚರ್ಯಕರವಾದ ಭಾವನಾತ್ಮಕ ವಿದಾಯ ಹೇಳಿದರು, ನನ್ನ ಬಾಗಿಲುಗಳು ಯಾವಾಗಲೂ ನಿಮಗಾಗಿ ತೆರೆದಿರುತ್ತವೆ ಎಂದು ಹೇಳಿದರು.ನಂತರ, ಆಜಾದ್ ಅವರು ಪಕ್ಷೇತರ, ರಾಜಕಾರಣಿ ರೀತಿಯಲ್ಲಿ ಭಾಷಣ ಮಾಡಿ ಇಂದಿರಾ ಗಾಂಧಿಯಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿವರೆಗಿನ ಹಲವಾರು ನಾಯಕರನ್ನು ಶ್ಲಾಘಿಸಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2019 ರಲ್ಲಿ ಆರ್ಟಿಕಲ್ 370 ರ ಅಡಿಯಲ್ಲಿ ಮೋದಿ ಸರ್ಕಾರವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಅಜಾದ್ ಅವರು ಬಿಜೆಪಿಯು ಸಂವಿಧಾನವನ್ನು ಕೊಲೆ ಮಾಡಿದೆ ಎಂದು ಆರೋಪಿಸಿದ್ದರು. ಆದರೆ ಅವರ ಇಂದಿನ ಭಾಷಣ ಬಹಳ ಅಚ್ಚರಿ ಮೂಡಿಸಿದ್ದು ಅವರು ರಾಜ್ಯಸಭೆಗೆ ಮರು ಆಯ್ಕೆ ಆಗುವ ಸಾದ್ಯತೆ ಇಲ್ಲ ಎಂದೇ ಭಾವಿಸಿ ಮಾತನಾಡಿದ್ದಾರೆ. ಆದರೆ ಕಾಂಗ್ರೆಸ್ ಅವರಿಗೆ ಪುನರಾಯ್ಕೆ ಕಲ್ಪಿಸಿಕೊಡುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ, ಆದರೆ ಲೋಕಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯರಾದಾಗಿನಿಂದಲೂ, ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಗುಲಾಂ ನಬಿ ಆಜಾದ್‌ ವಿದಾಯ: ವಿರೋಧಿಗಳು ಹೊಗಳಿದರೂ ಕಾಂಗ್ರೆಸ್ ಮೌನಕ್ಕೆ ಶರಣಾಗಲು ಕಾರಣವೇನು?
ಗುಜರಾತಿಗರು ಕಾಶ್ಮೀರದಲ್ಲಿ ಸಿಲುಕಿದಾಗ ಆಝಾದರ ಪ್ರತಿಕ್ರಿಯೆ ಮರೆಯಲು ಸಾಧ್ಯವಿಲ್ಲ: ಭಾವುಕರಾದ ಮೋದಿ


ಗಾಂಧಿ ಕುಟುಂಬದ ನಿಷ್ಠಾವಂತ ಆಗಿರುವ ಗುಲಾಮ್ ನಬಿ ಆಜಾದ್ 1973 ರಲ್ಲಿ ಯೂತ್ ಕಾಂಗ್ರೆಸ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಇಂದಿರಾ ಗಾಂಧಿಯವರ ಆಪ್ತ ವರ್ಗದಲ್ಲಿ ಗುರುತಿಸಿಕೊಂಡರು, ನಂತರ ಅವರ ನಿಷ್ಠೆ ರಾಜೀವ್ ಗಾಂಧಿಯವರವರೆಗೂ ಮುಂದುವರೆಯಿತು. ಆದರೆ ಕಳೆದ ವರ್ಷದ ಆಗಸ್ಟ್ ನಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಕಾಂಗ್ರೆಸ್ ನ 23 ನಾಯಕರು ಸೇರಿ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ ಕಾಂಗ್ರೆಸ್ ನ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಿಂದ ಕೇಂದ್ರದ ವರೆಗಿನ ಸಮಿತಿಗಳಿಗೆ ಚುನಾವಣೆಗಳನ್ನು ನಡೆಸಬೇಕೆಂದು ಒತ್ತಾಯಿಸಲಾಗಿತ್ತು. ಈ ಪತ್ರ ಬರೆದ ನಂತರ ಕಾಂಗ್ರೆಸ್ ನಾಯಕತ್ವ ಇವರ ನಿಷ್ಠೆಯ ಬಗ್ಗೆ ಅನುಮಾನದಿಂದ ನೋಡಲು ಆರಂಭಿಸಿತು. ಶೀಘ್ರದಲ್ಲೇ, 2018 ರ ಆಜಾದ್ ಅವರ ವೀಡಿಯೊವೊಂದು ವೈರಲ್ ಅಯಿತು. ದೆಹಲಿಯ ತಲ್ಕಟೋರ ಕ್ರೀಡಾಂಗಣದಲ್ಲಿ ನಡೆದ 84 ನೇ ಎಐಸಿಸಿ ಅಧಿವೇಶನದಲ್ಲಿ, ಆಜಾದ್ ಅವರು ಸಿಡಬ್ಲ್ಯುಸಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡುವ ಪ್ರಸ್ತಾಪವನ್ನು ಮಂಡಿಸಿದ್ದು ಅದು ಅಂಗೀಕರಿಸಲ್ಪಟ್ಟಿತ್ತು. ನಂತರ ಅಜಾದ್ ಅವರು ಸಾಕಷ್ಟು ಸಂದರ್ಭಗಳಲ್ಲಿ ಪಕ್ಷದ ನಾಯಕತ್ವವನ್ನೇ ಟೀಕಿಸಿದ್ದು ಫೈವ್ ಸ್ಟಾರ್ ಸಂಸ್ಕೃತಿ ಎಂದು ಕರೆದಿದ್ದರು.

ಪಕ್ಷ ಮತ್ತು ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಆಜಾದ್ ಅವರ ಹೇಳಿಕೆಗಳು ಅನೇಕ ಕಾಂಗ್ರೆಸ್ ನಾಯಕರಿಗೆ ಆಘಾತವನ್ನುಂಟು ಮಾಡಿದೆ. ಏಐಸಿಸಿ ನಾಯಕರಾಗಿ ದೇಶದ ಎಲ್ಲಾ ರಾಜ್ಯಗಳ ಉಸ್ತುವಾರಿ ಆಗಿದ್ದರು ಎಂಬ ಹೆಗ್ಗಳಿಕೆಗೆ ಆಜಾದ್ ಅವರು ಪಾತ್ರರಾಗಿದ್ದಾರೆ ಮತ್ತು 18 ವರ್ಷಗಳಿಂದ ಎಲ್ಲ ಪ್ರಮುಖ ಸಿಡಬ್ಲ್ಯೂಸಿಯಲ್ಲಿ ಸದಸ್ಯರಾಗಿದ್ದಾರೆ. ಅವರು ಎರಡು ಬಾರಿ ಕೇಂದ್ರ ಸಚಿವರಾಗಿದ್ದಾರೆ ಮತ್ತು ಜಮ್ಮು ಕಾಶ್ಮೀರದ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.

ಆಜಾದ್ ಅವರ ಭಾವನಾತ್ಮಕ ಭಾಷಣದ ಕುರಿತು ಕಾಂಗ್ರೆಸ್ ನ ಬಹುತೇಕ ನಾಯಕರು ಮಾತನಾಡಲು ಇಚ್ಚಿಸಿಲ್ಲ, ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ನಾಯಕ ಶಶಿ ತರೂರ್ ಅವರು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ನನ್ನ ಉತ್ತಮ ಸ್ನೇಹಿತ ಮತ್ತು ಹಿರಿಯ ಸಹೋದ್ಯೋಗಿ ಗುಲಾಮ್ ನಬಿ ಆಜಾದ್ ಅವರು ರಾಜ್ಯಸಭೆಯಿಂದ ಔಪಚಾರಿಕವಾಗಿ ನಿವೃತ್ತಿಯಾಗುವ ಮುನ್ನಾದಿನದಂದು ನನಗೆ ಕರೆ ಮಾಡಿದ್ದರು. ಪ್ರಧಾನ ಮಂತ್ರಿಯನ್ನು ಕಣ್ಣೀರು ಹಾಕಿಸಿದ ಏಕೈಕ ಕಾಂಗ್ರೆಸ್ಸಿಗ! ರಾಷ್ಟ್ರಕ್ಕಾಗಿ 44 ವರ್ಷಗಳ ಸೇವೆ ಸಲ್ಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಅವರು ಪುನಃ ರಾಜ್ಯಸಭೆಗೆ ಹಿಂತಿರುಗುತ್ತಾರೆಂದು ಆಶಿಸುತ್ತೇನೆ ಎಂದರು.

ಗುಲಾಮ್ ನಬಿ ಆಜಾದ್ ಫೆಬ್ರವರಿ 9 ರ ತಮ್ಮ ವಿದಾಯ ಭಾಷಣದಲ್ಲಿ ‘ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತ ಜನರಲ್ಲಿ ನಾನೂ ಇದ್ದೇನೆ. ಪಾಕಿಸ್ತಾನದ ಸನ್ನಿವೇಶಗಳ ಬಗ್ಗೆ ನಾನು ಓದಿದಾಗ, ನಾನು ಹಿಂದೂಸ್ತಾನಿ ಮುಸ್ಲಿಂ ಎಂದು ಹೆಮ್ಮೆಪಡುತ್ತೇನೆ ಎಂದು ಆಜಾದ್ ಹೇಳಿದರು. ಇದಲ್ಲದೆ ಕೇವಲ ಎರಡು ವರ್ಷಗಳ ಹಿಂದೆ, 2018 ರಲ್ಲಿ, ಕಾಂಗ್ರೆಸ್ನಲ್ಲಿ ತನ್ನ ಹಿಂದೂ ಸಹೋದ್ಯೋಗಿಗಳ ವರ್ತನೆಯ ಬದಲಾವಣೆಯ ಬಗ್ಗೆ ಆಜಾದ್ ಮಾತನಾಡಿದ್ದರು. ಸುಮಾರು ವರ್ಷಗಳಿಂದ ನಾನು ಅಂಡಮಾನ್ನಿಂದ ಲಕ್ಷದ್ವೀಪದವರೆಗೆ ದೇಶಾದ್ಯಂತ ಪ್ರಚಾರ ಮಾಡುತ್ತಿದ್ದೇನೆ ಮತ್ತು ನನ್ನನ್ನು ಕರೆಯುತ್ತಿದ್ದವರಲ್ಲಿ 95 ಪ್ರತಿಶತ ಜನರು ಹಿಂದೂ ಸಹೋದರರು ಮತ್ತು ನಾಯಕರಾಗಿದ್ದರು. ಕೇವಲ 5 ಪ್ರತಿಶತದಷ್ಟು ಮುಸ್ಲಿಂ ಸಹೋದರರಾಗಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಹಿಂದೂ ಸಹೋದರರ ಆಹ್ವಾನ 95 ರಿಂದ ಕೇವಲ 20 ಕ್ಕೆ ಇಳಿದಿದೆ ಎಂದು ನಾನು ಗಮನಿಸಿದ್ದೇನೆ ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಆಜಾದ್ ಹೇಳಿದ್ದಾರೆ. ಆದರೆ ಇದನ್ನು ಕಾಂಗ್ರೆಸ್ಸಿನ ಹಲವಾರು ಸದಸ್ಯರು ಖಂಡಿಸಿದ್ದು ಪ್ರಚಾರಕರನ್ನು ಆಯ್ಕೆಮಾಡುವಲ್ಲಿ ಧರ್ಮವು ಪಾತ್ರ ವಹಿಸುವುದಿಲ್ಲ ಎಂದು ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾಂಗ್ರೆಸ್ ಉಪಾಧ್ಯಕ್ಷ ಗುಲಾಮ್ ನಬಿ ಮೊಂಗಾ ಅವರು ಪ್ರತಿಕ್ರಿಯಿಸಿ 1970 ರ ದಶಕದಲ್ಲಿ ಯೂತ್ ಕಾಂಗ್ರೆಸ್ನಲ್ಲಿ ನಾನು ಮತ್ತು ಆಜಾದ್ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ವಿಶಾಲ ಮನೋಭಾವದ ಸ್ನೇಹ ಜೀವಿ ಎಂದು ಹೇಳಿದರು. ಅವರು ಕಾಶ್ಮೀರದ ಮುಖ್ಯಮಂತ್ರಿಯಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದನ್ನು ಇಲ್ಲಿನ ಜನರು ಬಹಳ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಅಜಾದ್‌ ಅವರು ಉತ್ತಮವಾದ ರೀತಿಯಲ್ಲಿ ಪಕ್ಷವನ್ನು ಮುನ್ನಡೆಸಲು ಪ್ರಯತ್ನಿಸಿದರು, ಮತ್ತು ಯಾವುದೇ ವಿಪಕ್ಷದ ವಿರುದ್ಧ ಕೆಟ್ಟ ಭಾಷೆಯನ್ನು ಬಳಸಲಿಲ್ಲ, ಅದಕ್ಕಾಗಿಯೇ ಅವರನ್ನು ಇಂದಿಗೂ ವಿಪಕ್ಷಗಳು ಗೌರವಿಸುತ್ತಿವೆ ಎಂದು ಅವರು ಹೇಳಿದರು.

2008 ರಲ್ಲಿ ಕೇಂದ್ರ ಸರ್ಕಾರ ಮತ್ತು ಜಮ್ಮು ಕಾಶ್ಮೀರ ಸರ್ಕಾರವು 99 ಎಕರೆ ಅರಣ್ಯ ಭೂಮಿಯನ್ನು ಹಿಂದೂ ಯಾತ್ರಿಕರಿಗಾಗಿ ಕಣಿವೆಯಲ್ಲಿರುವ ಶ್ರೀ ಅಮರನಾಥಜಿ ದೇಗುಲ ಮಂಡಳಿಗೆ (ಎಸ್ಎಎಸ್ಬಿ) ಮಂಜೂರು ಮಾಡುವ ಒಪ್ಪಂದಕ್ಕೆ ಬಂದಿತ್ತು. ಆದರೆ ಇದು ಕಣಿವೆಯಲ್ಲಿ ಭಾರಿ ಪ್ರತಿಭಟನೆಗಳನ್ನು ಸೃಷ್ಟಿಸಿದ್ದು ಅಂತಿಮವಾಗಿ ಭೂ ಮಂಜೂರಾತಿಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಪಿಡಿಪಿ ವಾಪಸ್ ಪಡೆದಾಗ ಅಜಾದ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇತ್ತ ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಕಾಶ್ಮೀರದಲ್ಲಿ ಭಯೋತ್ಪಾದಕ ಧಾಳಿಯಲ್ಲಿ ಗುಜರಾತ್ ನ ನಾಗರಿಕರು ಹತ್ಯೆ ಆಗಿದ್ದರು. ಆಗ ಆಜಾದ್ ಅವರು ಮೋದಿ ಅವರಿಗೆ ಈ ಘಟನೆಯ ಕುರಿತು ಕರೆ ಮಾಡಿ ತಿಳಿಸುವಾಗ ಗದ್ಗದಿತರಾಗಿದ್ದರು ಎಂದು ಮೋದಿ ನೆನಪಿಸಿಕೊಂಡರು. ಒಟ್ಟಿನಲ್ಲಿ ಪ್ರಬುದ್ಧ ರಾಜಕಾರಣಿಯೊಬ್ಬರು ಗೌರವಪೂರ್ವಕವಾಗಿ ನಿರ್ಗಮಿಸಿರುವುದಕ್ಕೆ ಆಜಾದ್ ಉದಾಹರಣೆ ಆಗಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com