ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಸೇರಿದಂತೆ ನಾಲ್ವರು ಸದಸ್ಯರಿಗೆ ಇಂದು ಸದನದಿಂದ ವಿದಾಯ ಹೇಳಲಾಗಿದೆ. ಈ ವೇಳೆ ವಿದಾಯ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗುಲಾಂ ನಬಿ ಆಝಾದರನ್ನು ಹಾಡಿ ಹೊಗಳಿದ್ದಾರೆ.
ಗುಲಾಂ ನಬಿ ಆಝಾದರನ್ನು ʼನಿಜವಾದ ಗೆಳೆಯʼ ಎಂದು ಸಂಬೋಧಿಸಿದ ಮೋದಿ, ಆಝಾದರು ಓರ್ವ ಉತ್ತಮ ಸಂಸದೀಯ ಪಟು, ವಿಪಕ್ಷ ನಾಯಕ ಹಾಗೂ ಓರ್ವ ಸಂಸದರಾಗಿ ಉನ್ನತ ಗುಣಮಟ್ಟ ಕಾಪಾಡಿಕೊಂಡು ಬಂದಿದ್ದಾರೆ. ಅಧಿಕಾರ ಬರುತ್ತದೆ, ಹುದ್ದೆಗಳು ಬರುತ್ತವೆ ಅದನ್ನು ಹೇಗೆ ನಿಭಾಯಿಸಬೇಕೆಂದು ಆಝಾದರಿಂದ ಕಲಿಯಬೇಕು. ನಾನು ಅವರನ್ನು ಓರ್ವ ನಿಜವಾದ ಸ್ನೇಹಿತ ಎಂದು ಪರಿಗಣಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ವೇಳೆ ಭಾವುಕರಾಗಿ ಮಾತನಾಡಿದ, ಗುಲಾಮ್ ನಬಿ ಆಜಾದ್ ಅವರು ಸಂಸತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರಿಗೆ ಅವರ ಪಕ್ಷದ ಚಿಂತೆ ಮಾತ್ರವಲ್ಲದೆ ದೇಶದ ಚಿಂತೆಯನ್ನೂ ಮಾಡುತ್ತಿದ್ದರು. ಭಾರತದ ಅಭಿವೃದ್ಧಿಯ ಬಗ್ಗೆ ಇದೇ ರೀತಿಯ ಉತ್ಸಾಹವನ್ನು ಹೊಂದಿದ್ದರು. ಅವರ ಕಾರ್ಯವು ಮುಂದಿನ ತಲೆಮಾರಿನ ಸಂಸದರಿಗೆ ಪ್ರೇರಣೆ ನೀಡಬಲ್ಲದು ಎಂದು ಮೋದಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಗುಜರಾತಿನ ತೀರ್ಥಯಾತ್ರಿಗಳ ಮೇಲೆ ನಡೆದಿದ್ದ ಉಗ್ರ ದಾಳಿ ಕುರಿತಾಗಿ ಮಾತನಾಡಿದ ಮೋದಿ, ಕಾಶ್ಮೀರದಲ್ಲಿ ಗುಜರಾತಿ ಯಾತ್ರಿಕರು ಉಗ್ರಗಾಮಿ ದಾಳಿಗೆ ಒಳಗಾದಾಗ ಆಝಾದ್ ಹಾಗೂ ಪ್ರಣಬ್ ಮುಖರ್ಜಿಯವರ ಪ್ರಯತ್ನಗಳನ್ನು ಮರೆಯಲು ಸಾಧ್ಯವಿಲ್ಲ. ದಾಳಿಯಲ್ಲಿ ಸಿಲುಕಿಕೊಂಡವರ ಬಗ್ಗೆ ಗುಲಾಂ ನಬಿ ಆಝಾದ್ ತಮ್ಮ ಸ್ವಂತ ಕುಟುಂಬದವರಂತೆ ಕಾಳಜಿ ವಹಿಸಿದ್ದರು. ಗುಲಾಂ ನಬಿ ಆಜಾದ್ ನನ್ನನ್ನು ಈ ಘಟನೆ ಬಗ್ಗೆ ಮಾಹಿತಿ ನೀಡಲು ಕರೆ ಮಾಡಿದ್ದರು. ಆ ಘಟನೆ ಬಗ್ಗೆ ಅದು ನನಗೆ ಬಂದಿದ್ದ ಮೊದಲ ಕರೆಯಾಗಿತ್ತು. ಅದು ಕೇವಲ ಮಾಹಿತಿ ನೀಡುವ ಕರೆಯಾಗಿರಲಿಲ್ಲ. ಅಂದು ಅವರ ಧ್ವನಿಯಲ್ಲಿ ಅಲ್ಲಿ ಮಡಿದವರ ಬಗ್ಗೆ ಕಾಳಜಿ, ಚಿಂತೆ ಇತ್ತು. ತಮ್ಮದೇ ಕುಟುಂಬದವರೆಂಬಂತೆ ಕಾಳಜಿ ಅವರಲ್ಲಿ ಕಂಡೆ. ಅಲ್ಲದೇ ಎರಡು ಬಾರಿ ನನ್ನನ್ನು ಕರೆ ಮಾಡಿದ್ದ ಅವರು ಅವರು ಈ ಘಟನೆಯಲ್ಲಿ ಹತ್ಯೆಗೀಡಾಗಿದ್ದ ಜನರ ಮೃತದೇಹ ರವಾನಿಸಲು ಸಹಾಯ ಮಾಡಿದ್ದರು ಎಂದು ಅವರು ಭಾಷಣದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ನಾನು ಹಲವಾರು ವರ್ಷಗಳಿಂದ ಗುಲಾಮ್ ನಬಿ ಆಜಾದ್ ಅವರನ್ನು ಬಲ್ಲೆ. ನಾವು ಒಟ್ಟಿಗೆ ಮುಖ್ಯಮಂತ್ರಿಗಳಾಗಿದ್ದೆವು. ನಾನು ಸಿಎಂ ಆಗುವ ಮೊದಲೇ ನಾವು ಮಾತುಕತೆ ನಡೆಸಿದ್ದೆವು, ಆಜಾದ್ ಅವರು ಆವಾಗ ಸಕ್ರಿಯ ರಾಜಕಾರಣದಲ್ಲಿದ್ದರು. ಅವರು ತೋಟಗಾರಿಕೆ ಬಗ್ಗೆ ಇರುವ ಉತ್ಸಾಹದ ಬಗ್ಗೆ ಅನೇಕರಿಗೆ ತಿಳಿದಿಲ್ಲ, " ಎಂದು ಮೋದಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದೇ ವೇಳೆ ದೇಶಕ್ಕಾಗಿ ಗುಲಾಮ್ ನಬಿ ಆಜಾದ್ ನೀಡಿರುವ ಕೊಡುಗೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಲ್ಯೂಟ್ ಹೊಡೆದು ಧನ್ಯವಾದ ತಿಳಿಸಿದ್ದಾರೆ.