ತರೂರ್ ಮತ್ತು ಆರು ಪತ್ರಕರ್ತರನ್ನು ಈಗ ಬಂಧಿಸುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ

ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ತರೂರ್ ಮತ್ತು ಪತ್ರಕರ್ತರ ರಿಟ್ ಅರ್ಜಿಗಳ ಬಗ್ಗೆ ನೋಟಿಸ್ ನೀಡುವಾಗ ಈ ಆದೇಶವನ್ನು ಅಂಗೀಕರಿಸಿತು
ತರೂರ್ ಮತ್ತು ಆರು ಪತ್ರಕರ್ತರನ್ನು ಈಗ ಬಂಧಿಸುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ

ಜನವರಿ 26 ರಂದು ರೈತರ ಟ್ರಾಕ್ಟರ್ ರ‍್ಯಾಲಿಯಲ್ಲಿ ಪ್ರತಿಭಟನಾಕಾರರ ಸಾವಿನ ಬಗ್ಗೆ ಪರಿಶೀಲಿಸದೆ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಶಶಿ ತರೂರ್ ಮತ್ತು ಆರು ಜನ ಪತ್ರಕರ್ತರ ವಿರುದ್ಧ ದಾಖಲಾದ ಎಫ್ಐಆರ್ ವಿರುದ್ಧದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಅವರ ಬಂಧನವನ್ನು ತಡೆಹಿಡಿದಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ತರೂರ್ ಮತ್ತು ಪತ್ರಕರ್ತರ ರಿಟ್ ಅರ್ಜಿಗಳ ಬಗ್ಗೆ ನೋಟಿಸ್ ನೀಡುವಾಗ ಈ ಆದೇಶವನ್ನು ಅಂಗೀಕರಿಸಿತು. ಎರಡು ವಾರಗಳ ನಂತರ ಅರ್ಜಿಯನ್ನು ನ್ಯಾಯಪೀಠ ವಿಚಾರಣೆಗೆ ಪರಿಗಣಿಸಲಿದೆ.

ತರೂರ್ ಮತ್ತು ಇಂಡಿಯಾ ಟುಡೆ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಫೆಬ್ರವರಿ 3 ರಂದು ನ್ಯಾಯಾಲಯಕ್ಕೆ ತೆರಳಿದ್ದರು. 'ನ್ಯಾಷನಲ್ ಹೆರಾಲ್ಡ್‌'ನ ಹಿರಿಯ ಸಲಹಾ ಸಂಪಾದಕ ಮೃಣಾಲ್ ಪಾಂಡೆ, 'ಕೌಮಿ ಆವಾಝ್' ಸಂಪಾದಕ ಜಾಫರ್ ಆಘಾ, 'ಕಾರವಾನ್' ನಿಯತಕಾಲಿಕದ ಸಂಪಾದಕ ಮತ್ತು ಸಂಸ್ಥಾಪಕ ಪರೇಶ್ ನಾಥ್, ಕಾರವಾನ್ ಸಂಪಾದಕರಾದ ಅನಂತ್ ನಾಥ್ ಮತ್ತು ವಿನೋದ್ ಕೆ ಜೋಸ್ ಎಫ್ಐಆರ್‌ಗಳ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅವರ ವಿರುದ್ಧ ನೋಂದಾಯಿಸಲಾದ ಎಫ್ಐ‌ಆರ್‌ಗಳಲ್ಲಿ ರೈತ ಪ್ರತಿಭಟನೆಯನ್ನು 'ತಪ್ಪಾಗಿ ವರದಿ ಮಾಡುವ' ಮೂಲಕ ದೇಶದ್ರೋಹ ಮತ್ತು ಕೋಮು ಗಲಭೆ ಹರಡುವ ಷಡ್ಯಂತ್ರ ಆರೋಪಗಳು ಸೇರಿವೆ. ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ‍್ಯಾಲಿಯಲ್ಲಿ ಪ್ರತಿಭಟನಾಕಾರ ನವನೀತ್ ಸಿಂಗ್ ಸಾವನ್ನಪ್ಪಿದ್ದರು. ಅವರ ಟ್ರಾಕ್ಟರ್ ಪಲ್ಟಿಯಾಗಿ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಾರಣಾಂತಿಕವಾಗಿ ಗುಂಡು ಹಾರಿಸಲಾಗಿದೆ ಎಂದು ನವನೀತ್ ಸಿಂಗ್ ಕುಟುಂಬ ಆರೋಪಿಸಿದೆ.

ಮಂಗಳವಾರ ನಡೆದ ವಿಚಾರಣೆಯ ವೇಳೆ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅರ್ಜಿದಾರರ ಮಧ್ಯಂತರ ರಕ್ಷಣೆ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ನ್ಯಾಯಪೀಠ ಆರಂಭದಲ್ಲಿ ಇದಕ್ಕೆ ಒಪ್ಪರಲಿಲಲ್ಲ. ಆದರೆ ಸಿಬಲ್ ನ್ಯಾಯಾಲಯದ ಮನವೊಲಿಸಿ, "ವಿವಿಧ ರಾಜ್ಯಗಳ ಪೊಲೀಸರು ಅವರನ್ನು ಬಂಧಿಸಲು ಅರ್ಜಿದಾರರ ಮನೆಯಲ್ಲೇ ಇಳಿಯಬಹುದು" ಎಂದು ಆತಂಕ ವ್ಯಕ್ತಪಡಿಸಿದರು.

ಸಿಜೆಐ ಬೊಬ್ಡೆ‌ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು "ನೀವು ಅವರನ್ನು ಬಂಧಿಸಲಿದ್ದೀರಾ?" ಎಂದು ಕೇಳಿದರು.

ದೆಹಲಿ ಪೊಲೀಸರ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ಈ ವಿಷಯವನ್ನು ಬುಧವಾರ ವಿಚಾರಣೆಗೆ ಒಳಪಡಿಸುವಂತೆ ಮನವಿ ಮಾಡಿದರು. "ನಾಳೆ ಅಲ್ಲ" ಸಿಜೆಐ ಪ್ರತಿಕ್ರಿಯಿಸಿತು. "ನಾವು ಎರಡು ವಾರಗಳ ನಂತರ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿದ್ದೇವೆ. ಮತ್ತು ಅವರ ಬಂಧನಕ್ಕೆ ಈಗ ತಡೆಯಾಜ್ಞೆ ನೀಡುತ್ತೇವೆ" ಎಂದಿತು.

ತರೂರ್ ಮತ್ತು ಆರು ಪತ್ರಕರ್ತರನ್ನು ಈಗ ಬಂಧಿಸುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ
ದೆಹಲಿ ಟ್ರ್ಯಾಕ್ಟರ್‌ ಮೆರವಣಿಗೆ: ತರೂರ್‌ ಸೇರಿ 6 ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ

'ದಿ ಕಾರವಾನ್'ನ ಸಂಪಾದಕ ವಿನೋದ್ ಕೆ ಜೋಸ್ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಎಫ್ಐಆರ್‌ಗಳು ಆಧಾರರಹಿತವಾಗಿವೆ ಎಂದು ಅರ್ಜಿ ಸಲ್ಲಿಸಿದರು. "ಅಪರಾಧದ ಬಗೆಗಿನ ವರದಿ ಎಲ್ಲಿದೆ? ಧಾರ್ಮಿಕ ಭಾವನೆಗಳಿಗೆ ಎಲ್ಲಿ ನೋವುಂಟಾಗಿದೆ" ಎಂದು‌ ಪ್ರಶ್ನಿಸಿದರು.

ಈ ಸಮಯದಲ್ಲಿ, ಸಾಲಿಸಿಟರ್ ಜನರಲ್ "ಲಕ್ಷಾಂತರ ಅನುಯಾಯಿಗಳಿರುವವರ ಇಂತಹ ಟ್ವೀಟ್ ಯಾವ ಭಯಾನಕ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ನಾನು ನಿಮಗೆ ತೋರಿಸಬಲ್ಲೆ" ಎಂದು ಹೇಳಿರುವುದಾಗಿ 'bar and bench' ವರದಿ ಮಾಡಿದೆ. ಅದಾಗ್ಯೂ ಸುಪ್ರೀಂ ಕೋರ್ಟ್ ಅಂತಿಮವಾಗಿ ಅರ್ಜಿದಾರರ ಬಂಧನವನ್ನು ತಡೆಯಲು ನಿರ್ಧರಿಸಿತು.

ಜನವರಿ 30 ರಂದು ದೆಹಲಿ ಪೊಲೀಸರು ತರೂರ್ ಮತ್ತು ಆರು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿ ಅವರ ವಿರುದ್ಧ ಕೇಸು ದಾಖಲಿಸಿದ ಐದನೇ ರಾಜ್ಯದವರಾದರು.ಆದರೆ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ದೆಹಲಿ ಪೊಲೀಸರು ಸಲ್ಲಿಸಿದ ಮೊದಲ ಮಾಹಿತಿ ವರದಿಯಲ್ಲಿ ದೇಶದ್ರೋಹದ ಆರೋಪಗಳಿರಲಿಲ್ಲ.

ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಕೀಲ ವಕೀಲ ಚಿರಂಜೀವ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಜನವರಿ 26 ರಂದು ದೆಹಲಿಯಲ್ಲಿ ರೈತನ ಸಾವಿನ ಬಗ್ಗೆ ಆರೋಪಿಗಳು, ದೆಹಲಿ ಪೊಲೀಸರನ್ನು ದೂಷಿಸುವ ಮೂಲಕ ನಕಲಿ ಸುದ್ದಿ ಹರಡಿದ್ದಾರೆ ಎಂದು ಕುಮಾರ್ ಅವರ ದೂರು‌ ನೀಡಿದ್ದಾರೆ.

ಆರೋಪಿಗಳ ಟ್ವೀಟ್‌ಗಳನ್ನು ಇತರರು ರಿಟ್ವೀಟ್ ಮಾಡಿದ್ದಾರೆ, ಅದು "ಆ ಟ್ವೀಟ್‌ಗಳು ದಂಗೆಯನ್ನು ಪ್ರಚೋದಿಸಬಹುದು, ಭೀತಿ ಮತ್ತು ಹಿಂಸಾತ್ಮಕ ದಂಗೆಗೆ ಕಾರಣವಾಗಬಹುದು, ಇದರಿಂದಾಗಿ ನಾಗರಿಕರು ರಾಜ್ಯದ ವಿರುದ್ಧ ಅಥವಾ ಸಾರ್ವಜನಿಕ ಶಾಂತಿಗೆ ವಿರುದ್ಧವಾಗಿ ಅಪರಾಧಗಳನ್ನು ಮಾಡಲು ಪ್ರೇರೇಪಣೆಗೊಳ್ಳುತ್ತಾರೆ" ಎಂದು ಪೊಲೀಸರು ಹೇಳಿದ್ದಾರೆ.

ಈ ಏಳು ಮಂದಿಯ ವಿರುದ್ಧ ದೇಶದ್ರೋಹದ ಆರೋಪಗಳನ್ನು ಒಳಗೊಂಡು ಉತ್ತರ ಪ್ರದೇಶ ಪೊಲೀಸರು ನೋಯ್ಡಾದಲ್ಲಿ ಮೊದಲು ಎಫ್‌ಐಆರ್ ದಾಖಲಿಸಿದ್ದು, ನಂತರ ಮಧ್ಯಪ್ರದೇಶದಲ್ಲಿ ಪೊಲೀಸರು ಇದೇ ರೀತಿಯ ಪ್ರಕರಣ ದಾಖಲಿಸಿದ್ದಾರೆ. ಕಳೆದ ವಾರ, ಗಣರಾಜ್ಯೋತ್ಸವದದು ಟ್ರಾಕ್ಟರ್ ರ‌್ಯಾಲಿಯಲ್ಲಿ ಸಾವನ್ನಪ್ಪಿದ ರೈತ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನವನ್ನು ಟ್ವೀಟ್ ಮಾಡಿದ್ದಕ್ಕಾಗಿ 'ದಿ ವೈರ್‌'ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ವಿರುದ್ಧ ರಾಜ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಇತರ ಎಫ್‌ಐಆರ್‌ಗಳನ್ನು ಜನವರಿ 29 ರಂದು ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ ಮತ್ತು ಜನವರಿ 28 ರಂದು ನೋಯ್ಡಾದಲ್ಲಿ ನೋಂದಾಯಿಸಲಾಗಿದೆ.

ದೆಹಲಿ ಪೊಲೀಸರು ಪ್ರತಿಭಟನಾ ನಿರತ ರೈತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂಬ ತಪ್ಪು ಮಾಹಿತಿ ಹರಡುವ ಅಭಿಯಾನವನ್ನು ಆರೋಪಿಗಳು 'ಸಮನ್ವಯ'ದಿಂದ ಮತ್ತು ಒಂದು 'ನಿರ್ದಿಷ್ಟ ಸಮಯ'ದಲ್ಲಿ ಪ್ರಾರಂಭಿಸಿದರು ಎಂದು ಎಫ್ಐಆರ್‌ಗಳು ಹೇಳುತ್ತವೆ. ಅವುಗಳಲ್ಲಿ ಹೆಚ್ಚಿನವು ದೇಶದ್ರೋಹ, ಕ್ರಿಮಿನಲ್ ಬೆದರಿಕೆ, ದ್ವೇಷವನ್ನು ಉತ್ತೇಜಿಸುವುದು, ಸಾರ್ವಜನಿಕ ಶಾಂತಿಯನ್ನು ಮುರಿಯಲು ಪ್ರಚೋದನೆ, ಕ್ರಿಮಿನಲ್ ಪಿತೂರಿ, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಮುಂತಾದ ಭಾರತೀಯ ದಂಡ ಸಂಹಿತೆಯ ವಿಭಾಗಗಳಲ್ಲಿ ಕೇಸ್ ದಾಖಲಾಗಿವೆ.

ಹಲವಾರು ಮಾಧ್ಯಮ ಸಂಸ್ಥೆಗಳ ಟೀಕೆಗಳ ನಡುವೆಯೂ ಎಫ್‌ಐಆರ್ ದಾಖಲಿಸಲಾಗಿದೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಈ ಕ್ರಮವನ್ನು "ಮಾಧ್ಯಮಗಳನ್ನು 'ನಿಗ್ರಹಿಸುವ ಮತ್ತು ಕಿರುಕುಳ ನೀಡುವ' ಒಂದು ಏಕೀಕೃತ ಪ್ರಯತ್ನ" ಎಂದು ಬಣ್ಣಿಸಿದೆ. ಶನಿವಾರ, ಪತ್ರಕರ್ತರು ದೆಹಲಿಯ 'ಪ್ರೆಸ್ ಕ್ಲಬ್ ಆಫ್ ಇಂಡಿಯಾ'ದಲ್ಲಿ ಎಫ್‌ಐಆರ್ ವಿರುದ್ಧ ಪ್ರತಿಭಟಿಸಿದರು. ಈ ಸಭೆಯನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಮತ್ತು ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ ಸೇರಿದಂತೆ ಹಲವಾರು ಮಾಧ್ಯಮ ಸಂಸ್ಥೆಗಳು ಆಯೋಜಿಸಿದ್ದವು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com