ಕೇಂದ್ರ ಸರ್ಕಾರದ ಪಾರ್ಶ್ವ ನೇಮಕಾತಿಯ ವಿರುದ್ದ ಸಮರ ಸಾರಿದ ಚಂದ್ರಶೇಖರ ಅಜಾದ್

ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಸಾರ್ವಜನಿಕ ವಲಯವೇ ನಿರ್ಮೂಲನೆ ಆಗಲಿದೆ ಎಂದು ಆರೋಪಿಸಿರುವ ಚಂದ್ರಶೇಖರ ಆಜಾದ್ ಅವರು ಈಗ ಸರ್ಕಾರ ಖಾಸಗಿ ರಂಗದಲ್ಲೂ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಪಾರ್ಶ್ವ ನೇಮಕಾತಿಯ ವಿರುದ್ದ ಸಮರ ಸಾರಿದ ಚಂದ್ರಶೇಖರ ಅಜಾದ್

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಮೂಲಾಗ್ರ ಬದಲಾವಣೆಗಳನ್ನು ಮಾಡಲು ಹೊರಟಿದೆ. ಆದರೆ ಈ ಬದಲಾವಣೆಗಳನ್ನು ಸರ್ಕಾರ ಸುಧಾರಣೆ ಎಂದು ಹೇಳಿಕೊಳ್ಳುತ್ತಿದೆಯಾದರೂ ಇದಕ್ಕೆ ಜನತೆಯಿಂದ ತೀವ್ರ ಪ್ರತಿರೋಧವೂ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದಿರುವ ಸಿಏಏ ಮತ್ತು ಎನ್ ಅರ್ಸಿ ವಿರುದ್ದ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳೇ ನಡೆದಿದದ್ದವು. ಈಗ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ಎಪಿಎಂಸಿಗಳನ್ನೇ ಬಲಹೀನಗೊಳಿಸಿ ಖಾಸಗೀ ಕಂಪೆನಿಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುವ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಲಕ್ಷಾಂತರ ರೈತರು ಪ್ರತಿಭಟನೆಗೆ ಇಳಿದಿದ್ದಾರೆ.

ಈ ಪ್ರತಿಭಟನೆ ಸದ್ಯಕ್ಕೆ ಶಮನವಾಗುವ ಲಕ್ಷಣಗಳೂ ಕಾಣುತ್ತಿಲ್ಲ. ಕೃಷಿ ಕಾಯ್ದೆಗಳನ್ನು ಸಂಪೂರ್ಣ ಹಿಂಪಡೆದರೆ ಮಾತ್ರ ಮುಷ್ಕರ ಸ್ಥಗಿತಗೊಳಿಸುವುದಾಗಿ ರೈತ ಮುಖಂಡ ಟಿಕಾಯತ್‌ ಖಡಕ್ ಆಗಿ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೀಗ ಕೇಂದ್ರ ಸರ್ಕಾರವು ಸಚಿವಾಲಯಗಳಲ್ಲಿ ಖಾಲಿ ಇರುವ 27 ನಿರ್ದೆಶಕರ ಹುದ್ದೆಗಳು ಮತ್ತು ಮೂರು ಜಂಟಿ ಕಾರ್ಯದರ್ಶಿಗಳ ಹುದ್ದೆಗಳನ್ನು ಪಾರ್ಶ್ವ ನೇಮಕಾತಿಯ (Lateral Entry) ಮೂಲಕ ಭರ್ತಿ ಮಾಡಲು ಮುಂದಾಗಿದೆ. ಇದರಲ್ಲಿ ಖಾಸಗೀ ರಂಗ, ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಕೇಂದ್ರೋದ್ಯಮದ ಅಧಿಕಾರಿಗಳಿಗೆ ಮಾತ್ರ ನೇಮಕಾತಿಗೆ ಅವಕಾಶ ಇರುತ್ತದೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಮೋದಿ ಸರ್ಕಾರದ ಪಾರ್ಶ್ವ ಪ್ರವೇಶದ ನೇಮಕಾತಿ ನೀತಿಯ ವಿರುದ್ಧ ಮಾರ್ಚ್ 7 ರಂದು ಸಂಸತ್ತನ್ನು ಘೆರಾವ್ ಮಾಡುವುದಾಗಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.ಅಲ್ಲದೆ ಇದು ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಜಾದ್ ಅವರು ಸಂಸತ್ ಮುತ್ತಿಗೆ ಪಾರ್ಶ್ವ ಪ್ರವೇಶದ ವಿರುದ್ಧದ ಚಳವಳಿಯ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು. ಸರ್ಕಾರವು ನೀತಿಯನ್ನು ಹಿಂತೆಗೆದುಕೊಳ್ಳದಿದ್ದರೆ, ಚಳವಳಿಯ ಮುಂದಿನ ಹಂತಗಳನ್ನು ಕಾರ್ಯತಂತ್ರಗೊಳಿಸಲು ಭೀಮ್ ಆರ್ಮಿಯು ಬ್ಲಾಕ್, ಜಿಲ್ಲಾ ಮತ್ತು ರಾಜ್ಯಮಟ್ಟದ ಪಂಚಾಯಿತಿಗಳನ್ನು ಆಯೋಜಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದು ಸರ್ಕಾರದ ಬೆಂಬಲಿಗರಿಗೆ ಹಿಂದಿನ ಬಾಗಿಲಿನ ಮೂಲಕ ಅಧಿಕಾರಶಾಹಿಗೆ ಪ್ರವೇಶಿಸಲು ಒಂದು ಮಾರ್ಗವಾಗಿದೆ. ಇದು ಭಾರತೀಯ ಸಂವಿಧಾನದ ಅವಕಾಶದ ಸಮಾನತೆಯ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ, ಈಗಾಗಲೇ ನಾಗರಿಕ ಸೇವೆಗಳ ಭಾಗವಾಗಿರುವ ಮತ್ತು ಜಂಟಿ ಕಾರ್ಯದರ್ಶಿ ಮಟ್ಟವನ್ನು ತಲುಪಲು ಓರ್ವ ಅಧಿಕಾರಿ ಹಲವಾರು ವರ್ಷಗಳ ಸೇವೆ ಸಲ್ಲಿಸಬೇಕು. ಈ ನಿರ್ಧಾರದಿಂದ ಸೇವೆ ಸಲ್ಲಿಸಿದವರಿಗೆ ಅನ್ಯಾಯವಾಗಿದೆ ಎಂದು ಆಜಾದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರಲ್ಲದೆ ಈ ಪಾಶ್ವ ಪ್ರವೇಶ ಮೀಸಲಾತಿಯನ್ನೇ ಬೈಪಾಸ್ ಮಾಡುವ ವಿಧಾನವಾಗಿದೆ ಎಂದು ಅವರು ಹೇಳಿದರು.

2019 ರಲ್ಲಿ ಇದೇ ರೀತಿಯ ಪಾರ್ಶ್ವ ಪ್ರವೇಶದ ಮೂಲಕ ನೇಮಕಾತಿ ಮಾಡಿಕೊಂಡ ಅಭ್ಯರ್ಥಿಗಳಲ್ಲಿ ಒಬ್ಬರೂ ಎಸ್ಸಿ, ಎಸ್ಟಿ, ಒಬಿಸಿ ಅಥವಾ ಅಲ್ಪಸಂಖ್ಯಾತ ವ್ಯಕ್ತಿ ಕೂಡ ಇರಲಿಲ್ಲ ಎಂದು ಅವರು ಗಮನಸೆಳೆದರು.ಪಾರ್ಶ್ವ ಪ್ರವೇಶಕ್ಕಾಗಿ ಏಕರೂಪದ ಮೌಲ್ಯಮಾಪನ ಪರೀಕ್ಷೆಯನ್ನು ಹೊಂದಿರದ ಕಾರಣ ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿಯಲ್ಲಿನ ಭ್ರಷ್ಟಾಚಾರವನ್ನು ಈ ನೇಮಕಾತಿ ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. ದೇಶದ ವಿವಿಧ ಮೂಲೆಗಳಲ್ಲಿ ಕುಳಿತು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವ ವಿವಿಧ ವರ್ಗ ಮತ್ತು ಆರ್ಥಿಕ ಹಿಂದುಳಿದ ವರ್ಗದ ಯುವಕರಿಗೆ ಇದರಿಂದ ಅನ್ಯಾಯವಾಗಿದೆ. ಪಾರ್ಶ್ವ ಪ್ರವೇಶದ ಮೂಲಕ, ಈ ಯುವಕರಿಗೆ ಒದಗಿಸಬೇಕಾದ ಅವಕಾಶಗಳನ್ನು ಈಗ ಕಿತ್ತುಕೊಳ್ಳಲಾಗುತ್ತಿದೆ ಎಂದು ಆಜಾದ್ ಹೇಳಿದರು. ಈ ವರ್ಷದ ಬಜೆಟ್‌ನ ಪ್ರಮುಖ ಭಾಗವಾಗಿರುವ ಖಾಸಗೀಕರಣದ ವಿಷಯವನ್ನೂ ಆಜಾದ್ ಟೀಕಿಸಿದ್ದಾರೆ.

ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲಾ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಕೆಲವು ಸಾರ್ವಜನಿಕ ರಂಗದ ಉದ್ಯಮಗಳು ಪ್ರಸ್ತುತ ಲಾಭದಾಯಕವಾಗಿವೆ. ಈ ಸಂಸ್ಥೆಗಳನ್ನು ಮಾರಾಟ ಮಾಡಲು ಸರ್ಕಾರ ಏಕೆ ಪ್ರಯತ್ನಿಸುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಆಜಾದ್ ಹೇಳಿದರು. ಖಾಸಗೀಕರಣದಿಂದ ಸಂಗ್ರಹಿಸಲು ನಿಗದಿಪಡಿಸಲಾಗಿರುವ 1.75 ಲಕ್ಷ ಕೋಟಿ ರೂ.ಗಳನ್ನು ಎಲ್ಲಿ ಖರ್ಚು ಮಾಡಲಾಗುವುದು ಎಂಬುದರ ಬಗ್ಗೆ ಸರ್ಕಾರದ ಬಳಿ ಪಾರದರ್ಶಕತೆ ಇಲ್ಲ ಎಂದೂ ಅವರು ಹೇಳಿದರು.

ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಸಾರ್ವಜನಿಕ ವಲಯವೇ ನಿರ್ಮೂಲನೆ ಆಗಲಿದೆ ಎಂದು ಆರೋಪಿಸಿದ ಚಂದ್ರಶೇಖರ ಆಜಾದ್ ಅವರು ಈಗ ಸರ್ಕಾರ ಖಾಸಗೀ ರಂಗದಲ್ಲೂ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಇಂದಿಗೂ ಖಾಸಗೀ ರಂಗದಲ್ಲಿ ಹುದ್ದೆ ಪಡೆಯುತ್ತಿರುವವರಲ್ಲಿ ಹಿಂದುಳಿದ ವರ್ಗ , ದಲಿತ ಮತ್ತು ಅಲ್ಪ ಸಂಖ್ಯಾತ ವರ್ಗದ ಅಭ್ಯರ್ಥಿಗಳ ಸಂಖ್ಯೆ ಗೌಣವಾಗಿದೆ ಎಂದೂ ಅವರು ಹೇಳಿದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com