ಕೇಂಬ್ರಿಡ್ಜ್ ಹಾರ್ವರ್ಡ್ ವಿಶ್ವವಿದ್ಯಾನಿಲಯದ 2021 ರ ನೈಮನ್ ಫೌಂಡೇಶನ್ ಫಾರ್ ಜರ್ನಲಿಸಂನ ಲೂಯಿಸ್ ಎಮ್. ಲಿಯಾನ್ಸ್ ಪ್ರಶಸ್ತಿಗೆ (Louis M. Lyons Award for Conscience and Integrity in Journalism) ಭಾರತದ ಖ್ಯಾತ ಪ್ರಕಟನೆ ದಿ ಕಾರವಾನ್ ಮ್ಯಾಗಜಿನ್ ಆಯ್ಕೆಯಾಗಿದೆ.
ಭಾರತದಲ್ಲಿ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಕುಸಿತದ ಕುರಿತು ಅನನ್ಯ ಮತ್ತು ರಾಜಿಯಾಗದ ವರದಿಗಾರಿಕೆಯನ್ನು ಗುರುತಿಸಿ ದಿ ಕಾರವಾನ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ನೈಮನ್ ಸಂಸ್ಥೆ ತಿಳಿಸಿದೆ.
ನರೇಂದ್ರ ಮೋದಿ ಸರ್ಕಾರದ ಕೃಷಿ ಕಾನೂನು ವಿರೋಧಿ ರೈತ ಹೋರಾಟವನ್ನು ದಿ ಕ್ಯಾರವಾನ್ ಸಮಗ್ರವಾಗಿ ಹಾಗೂ ಸಮರ್ಥವಾಗಿ ವರದಿ ಮಾಡಿರುವುದು ನರೇಂದ್ರ ಮೋದಿ ಸರ್ಕಾರದ ಕೋಪಕ್ಕೆ ಕಾರಣವಾಗಿದೆ. ಹಾಗೂ ಕಾರವಾನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ತಡೆಯಿಡಿಯುವ ಪ್ರಯತ್ನ ಕೂಡಾ ನಡೆದಿತ್ತು. ಅನೇಕ ಕಾರವಾನ್ ಉದ್ಯೋಗಿಗಳ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಲಾಗಿದೆ. ಆದರೆ ಈ ಎಲ್ಲಾ ಬೆದರಿಕೆಗಳನ್ನು ಮೀರಿ ಕಾರವಾನ್ ಆತ್ಮಸಾಕ್ಷಿ, ಸಮಗ್ರತೆ ಮತ್ತು ಬದ್ಧತೆಯನ್ನು ಕಾಪಾಡಿಕೊಂಡಿದೆ ಎಂದು ನೈಮನ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಕ್ಯಾರವಾನ್ ಅವರ ಕೆಲಸವು “ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವದಲ್ಲಿ ಅನಿವಾರ್ಯ ವರದಿಯ ಪರಂಪರೆಯ ಮತ್ತೊಂದು ಅಧ್ಯಾಯ. ಹಿಂದುತ್ವ ರಾಜಕಾರಣ ಪ್ರವರ್ಧಮಾನಕ್ಕೆ ಬಂದ ಕಳೆದ ದಶಮಾನದಿಂದಲೂ ಕ್ಯಾರವಾನ್ ಸತ್ಯವನ್ನು ದಾಖಲಿಸುತ್ತಾ ಬಂದಿದೆ. ಹಿಂಸಾದಾಳಿ ಹಾಗೂ ಬಂಧನದ ಭೀತಿ ಎದುರಿಸುತ್ತಿರುವ ಅದರ ವರದಿಗಾರರು ನಿರಂತರವಾಗಿ ಹಿಂದುತ್ವ ಭಯೋತ್ಪಾದನೆ, ರಾಜಕೀಯ ಕೊಲೆ, ಜಾತಿ ಹಾಗೂ ಲಿಂಗ ತಾರತಮ್ಯ ಹಾಗೂ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಬರೆಯುತ್ತಲೇ ಬಂದಿದ್ದಾರೆಂದು ನೈಮನ್ ಫೌಂಡೇಶನ್ ಹೇಳಿಕೆಯಲ್ಲಿ ತಿಳಿಸಿದೆ.
ಲೂಯಿಸ್ ಎಮ್. ಲಿಯಾನ್ಸ್ ಪ್ರಶಸ್ತಿಯನ್ನು 1964 ರಲ್ಲಿ ಸ್ಥಾಪಿಸಲಾಗಿದ್ದು, ಭಾರತೀಯ ಮಾಧ್ಯಮ ಸಂಸ್ಥೆಯೊಂದು ಈ ಗೌರವವನ್ನು ಪಡೆಯುವುದು ಇದೇ ಮೊದಲು. ಆ ಕೀರ್ತಿ ದಿ ಕ್ಯಾರವಾನ್ ಗೆ ಸಲ್ಲುತ್ತದೆ.