MSP ಬಗ್ಗೆ ಮಾತನಾಡುವವರು ಕಾನೂನು ಏಕೆ ರೂಪಿಸುತ್ತಿಲ್ಲ? – ಪ್ರಧಾನಿ ಮಾತಿಗೆ ರೈತ ಮುಖಂಡರ ತಿರುಗೇಟು

ರೈತರು ಮಾಡುತ್ತಿರುವ ಪ್ರತಿಭಟನೆಗೆ ಜಾತಿ, ಧರ್ಮದ ಬಣ್ಣ ಹಚ್ಚುತ್ತಿರುವುದನ್ನು ರಾಕೇಶ್ ಟಿಕಾಯತ್ ತೀವ್ರವಾಗಿ ಖಂಡಿಸಿದ್ದಾರೆ.
MSP ಬಗ್ಗೆ ಮಾತನಾಡುವವರು ಕಾನೂನು ಏಕೆ ರೂಪಿಸುತ್ತಿಲ್ಲ? – ಪ್ರಧಾನಿ ಮಾತಿಗೆ ರೈತ ಮುಖಂಡರ ತಿರುಗೇಟು

ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 8 ರಂದು ಕೃಷಿ ಕಾನೂನುಗಳು ಹಾಗು ರೈತರ ಹೋರಾಟದ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಕುರಿತು ಮಾತನಾಡಿದ ಪ್ರಧಾನಿ ಮೋದಿ “MSP ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಧಾನಿ ಮಾತನಾಡಿದ ಬೆನ್ನಲೆ ಭಾರತೀಯ ಕಿಸಾನ್ ಯೂನಿಯನ್ ರೈತ ಮುಖಂಡ ರಾಕೇಶ್ ಟಿಕಾಯತ್ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಹಸಿವಿನ ಮೇಲಿನ ವ್ಯವಹಾರವನ್ನು ಖಂಡಿಸುತ್ತೇವೆ, ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಹೊಸ ವಿವಾದಾತ್ಮಕ ಕೃಷಿಕಾನೂನುಗಳನ್ನು ರದ್ದುಗೊಳಿಸುವುದರ ಜೊತೆಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಕುರಿತು ನಿರ್ದಿಷ್ಟ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಇದುವರೆಗೂ ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ (ಎಂಎಸ್‌ಪಿ) ಯಾವುದೇ ರೀತಿಯಾದಂತಹ ಕಾನೂನು ಇಲ್ಲ. ಇದರಿಂದ ವ್ಯಾಪಾರಿಗಳು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿದ್ದಾರೆ. ಇಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಮಾನಗಳ ಟಿಕೆಟ್‌ನ ದರಗಳು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಏರಿಳಿತಗೊಳ್ಳುತ್ತವೆ. ಬೆಳೆಗಳ ಬೆಲೆಯನ್ನು ಅದೇ ರೀತಿ ನಿರ್ಧರಿಸುವುದಿಲ್ಲ ಏಕೆ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಹಸ್ರಾರು ರೈತ ಸಮುದಾಯದ ಜನರು ಪಾಲ್ಗೊಂಡಿದ್ದರ ಬಗ್ಗೆ ಮೋದಿ ಮಾತಿಗೆ ಪ್ರತಿಕ್ರಿಯಿಸಿದ ರೈತ ಮುಖಂಡರು, ಈ ಬಾರಿ ನಮ್ಮ ಹೋರಾಟದಲ್ಲಿ ರೈತ ಸಮುದಾಯದವರು ಒಗ್ಗಟ್ಟಿನಿಂದ ಒಂದುಗೂಡಿ ಹೋರಾಟ ಮಾಡುತ್ತಿರುವುದಲ್ಲದೆ, ದೇಶದ ಜನ ಕೂಡಾ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದಿದ್ದಾರೆ.

ರೈತರು ಮಾಡುತ್ತಿರುವ ಪ್ರತಿಭಟನೆಗೆ ಜಾತಿ, ಧರ್ಮದ ಬಣ್ಣ ಹಚ್ಚುತ್ತಿರುವುದನ್ನು ರಾಕೇಶ್ ಟಿಕಾಯತ್ ತೀವ್ರವಾಗಿ ಖಂಡಿಸಿದ್ದಾರೆ. ಆಂದೋಲನವನ್ನು ಮೊದಲು ಪಂಜಾಬ್ ಸಮಸ್ಯೆ ಎಂದು ಬಿಂಬಿಸಲಾಯಿತು. ನಂತರ ಸಿಖ್ಖರ ಧಾರ್ಮಿಕ ಚಳವಳಿಯಂತೆ ಬಿಂಬಿಸಲಾಯಿತು. ಇದು ಧರ್ಮಾತೀತ, ಜಾತ್ಯಾತೀತ ಹೋರಾಟವಲ್ಲ, ದೇಶದ ರೈತರು ಒಂದಾಗಿದ್ದಾರೆ. ಇಲ್ಲಿ ಸಣ್ಣ, ದೊಡ್ಡ ರೈತರೆಂಬ ಬೇಧವಿಲ್ಲ ಚಳವಳಿ ಎಲ್ಲಾ ರೈತರಿಗೆ ಸೇರಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಭಾಷಣಕ್ಕೆ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರಾದ ಅಭಿಮನ್ಯು ಕೊಹಾರ್ ಪ್ರತಿಕ್ರಿಯಿಸಿದ್ದಾರೆ. ”ಎಂಎಸ್ಪಿ ತೆಗೆಯುವುದಿಲ್ಲ, ಅದು ಉಳಿಯುತ್ತದೆ ಎಂದು ಸರ್ಕಾರ ಈಗಾಗಲೇ ನೂರು ಬಾರಿ ಹೇಳಿದೆ. ಆದರೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕುರಿತು ಸರ್ಕಾರ ಕಾನೂನು ಖಾತರಿ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಧಾನಿ ಭಾಷಣದ ವೇಳೆ ಪ್ರತಿಭಟನಾ ನಿರತ ರೈತರೊಂದಿಗೆ ಮತ್ತೊಮ್ಮೆ ನಾವು ಮಾತನಾಡಲು ಸಿದ್ದ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳು ಪ್ರತಿಕ್ರಿಯೆ ನೀಡಿವೆ.” ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧ ಆದರೆ, ಆ ಮಾತುಕತೆಗೆ ಸೂಕ್ತವಾದ ವೇದಿಕೆ ಇರಬೇಕು,” ಎಂದಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com