ಏರುತ್ತಿರುವ ತೈಲ ದರ ಏರಿಕೆ ಜನಸಾಮಾನ್ಯರನ್ನು ಚಿಂತೆಗೀಡು ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ದರ ಕಡಿಮೆಯಾಗುವ ಯಾವುದೇ ಸೂಚನೆಗಳೇ ಕಾಣುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಬೇಕಿದ್ದ ಕೇಂದ್ರ ಸರ್ಕಾರ ಯಾವುದೇ ಪ್ರಯತ್ನಗಳನ್ನು ಮಾಡುತ್ತಿರುವ ಸೂಚನೆಗಳು ಕಾಣುತ್ತಿಲ್ಲ.
ಈ ಕುರಿತಾಗಿ ಭಾನುವಾರ ರಾಜಸ್ಥಾನದಲ್ಲಿ ಮಾತನಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಜ್ಯ ಸರ್ಕಾರಗಳ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ. ಕೇಂದ್ರ ಸರ್ಕಾರ ತನ್ನಿಂದ ಸಾಧ್ಯವಾದಷ್ಟು ತೈಲ ಬೆಲೆ ಇಳಿಸಲು ಪ್ರಯತ್ನಿಸುತ್ತಿದೆ. ರಾಜಸ್ಥಾನ ರಾಜ್ಯ ಸರ್ಕಾರ ಕೂಡಾ ತನ್ನ ತೆರಿಗೆಯನ್ನು ಇಳಿಸಬೇಕು, ಎಂದಿದ್ದಾರೆ.
ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ತೈಲ ಬೆಲೆ ಏರಿಕೆ ಆದ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆಗಳ ನೇತೃತ್ವ ಹೊತ್ತಿದ್ದ ಸ್ಮೃತಿ ಇರಾನಿಯವರು, ತಮ್ಮದೇ ಸರ್ಕಾರವಿದ್ದಾಗ ತೈಲ ಬೆಲೆ ಏರಿಕೆಯನ್ನು ತಡೆಯಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ಸೋತಿದ್ದಾರೆ. ಈಗ ರಾಜ್ಯ ಸರ್ಕಾರಗಳ ಗೂಬೆ ಕೂರಿಸಿ ತಮ್ಮ ಕೈ ತೊಳೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
“ರಾಜಸ್ಥಾನ ಸರ್ಕಾರಕ್ಕೆ ಇನ್ನೂ ತೆರಿಗೆ ಕಡಿತ ಮಾಡಲು ಅವಕಾಶವಿದೆ. ರಾಜ್ಯದ ಜನರಿಗಾಗಿ ಯಾವ ರೀತಿ ತೆರಿಗೆ ಕಡಿತ ಮಾಡುತ್ತಾರೆ ಎಂಬುದನ್ನು ನೋಡೋಣ,” ಎಂದು ಹೇಳಿ, ದೇಶದ ಜನರಿಗಾಗಿ ಕೇಂದ್ರ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಹೇಳದೆ ಹೊರಟು ಹೋದರು.
ಇತ್ತೀಚಿಗೆ ಪೆಟ್ರೋಲ್ ಮತ್ತು ಡೀಸೆಲ್ನಿಂದ ಜನರ ಮೇಲಾಗುತ್ತಿರುವ ಹೊರೆಯನ್ನು ತಪ್ಪಿಸಲು, ರಾಜಸ್ಥಾನ ಸರ್ಕಾರವು 2%ದಷ್ಟು ವ್ಯಾಟ್ (Value-added Tax) ಕಡಿತಗೊಳಿಸಿತ್ತು.