ದೆಹಲಿಯ ಗಡಿಭಾಗಗಳಲ್ಲಿ ಬೀಡುಬಿಟ್ಟ ಪ್ರತಿಭಟನಾ ನಿರತ ರೈತರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ. ಸ್ವಯಂ ಸೇವಕರ ತಂಡಗಳು ಈ ಕಾರ್ಯಕೈಗೊಂಡಿದ್ದು, ಟೆಂಟ್ಗಳಲ್ಲಿ ಉಳಿದು ಕೊಂಡಿರುವಂತಹ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಪ್ರತಿಭಟನಾ ನಿರತ ಸ್ಥಳಗಳಲ್ಲಿ ಬಲಪಂಥೀಯರು ಉಳಿದುಕೊಂಡಿರುವುದರ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ರಾಕೇಶ್ ಟಿಕಾಯತ್ ಹೇಳಿಕೆಯ ಮೇರೆಗೆ ಈ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಪ್ರತಿಭಟನೆ ಹತ್ತಿಕ್ಕಲು ಕುಮ್ಮಕ್ಕು ನೀಡುತ್ತಿರುವ ರೈತರಲ್ಲದವರನ್ನು ಪತ್ತೆಹಚ್ಚಲಾಗುತ್ತಿದೆ. ಅಂತವರನ್ನು ಹೊರ ಕಳಿಸಲಾಗುವುದು ಎಂದಿದ್ದಾರೆ.
ಪ್ರತಿಭಟನಾ ತಾಣವನ್ನು ಪ್ರವಾಸಿ ತಾಣವಾಗಿಸಿಕೊಂಡಿರುವವರಿಗೆ ಈ ತಾಪಾಸಣೆ ಬೇಸರದ ಸಂಗತಿ ಎನಿಸಬಹುದು. ಇದು ಪ್ರತಿಭಟನಾ ತಾಣ ಇಲ್ಲಿ ರೈತ ವಿರೋಧಿ ಕೃಷಿ ಕಾಯ್ದೆ ಕುರಿತು, ರೈತರ ಬೇಡಿಕೆ ಹಾಗೂ ಸಮಸ್ಯೆಯ ಬಗ್ಗೆ ಅರಿತು ಹೋರಾಡುವವರಿಗೆ ಮಾತ್ರ ಉಳಿಯಲು ಅವಕಾಶವಿದೆ ಎಂದು ಕಿಸಾನ್ ಆಂದೋಲನ್ ಸಮಿತಿಯ ಸದಸ್ಯ ಜಗ್ತಾರ್ ಸಿಂಗ್ ಬಜ್ವಾ ಹೇಳಿದ್ದಾರೆ.
ಫೆಬ್ರವರಿ 7 ರ ಮುಂಜಾನೆಯಿಂದ ತಪಾಸಣಾ ಕಾರ್ಯಕೈಗೊಂಡಿದ್ದು, ಭಾರತೀಯ ಕಿಸಾನ್ ಯೂನಿಯನ್ನ ಉತ್ತರ ಪ್ರದೇಶದ ಯುವ ಅಧ್ಯಕ್ಷ ದಿಗಂಬರ್ ಸಿಂಗ್ ನೇತೃತ್ವದ ತಂಡದಿಂದ ತಪಾಸಣಾ ಕಾರ್ಯಕೈಗೊಳ್ಳಲಾಗಿದೆ.
ಗಾಜೀ಼ಪುರ ಗಡಿಭಾಗಗಳಲ್ಲಿ ಉಳಿದುಕೊಂಡ ಪ್ರತಿಭಟನಾ ನಿರತ ರೈತರ ಆಧಾರ್ ಕಾರ್ಡ್ ಪಡೆದು ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ಅವರ ಮೂಲ ಪ್ರದೇಶದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಅವರು ತಮ್ಮ ಜಿಲ್ಲೆಯ ರೈತ ಮುಖಂಡರ ಶಿಫಾರಸ್ಸಿನ ಮೇರೆಗೆ ಪ್ರತಿಭಟನೆಗೆ ಬಂದಿದ್ದಾರೋ ಇಲ್ಲವೋ ಎಂದು ಪರಿಶೀಲಿಸಲಾಗುತ್ತಿದೆ.