ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದಲ್ಲಿ ನಡೆದ ಭೀಕರ ಪ್ರವಾಹದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಸ್ಸಾಂ ಪ್ರವಾಸದಲ್ಲಿರುವ ನರೇಂದ್ರ ಮೋದಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹಾಗೂ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಏಕಾಏಕಿ ಹಿಮಪಾತ ಸಂಭವಿಸಿದ ಪರಿಣಾಮ, ಧೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ನೂರಾರು ಮಂದಿ ಕೊಚ್ಚಿ ಹೋಗಿದ್ದಾರೆ. ಧೌಲಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಎದುರಾದ ಕಾರಣ ನದಿ ತಟದ ರೌನಿ ಎಂಬ ಗ್ರಾಮಕ್ಕೆ ನೀರು ನುಗ್ಗಿದೆ. ಅಷ್ಟೇ ಅಲ್ಲ, ಜಲವಿದ್ಯುತ್ ಸ್ಥಾವರ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲೂ ಭಾರೀ ನಷ್ಟ ಉಂಟಾಗಿದೆ.
10 ಮರಣ ಅಧಿಕೃತ ವರದಿಯಾಗಿದ್ದು, ನೂರಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ 100 ರಿಂದ 160 ಮಂದಿ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿರಬಹುದು ಎಂದು ಉತ್ತರಾಖಂಡ ರಾಜ್ಯದ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಅವರು ತಿಳಿಸಿದ್ದಾರೆ. ಪ್ರವಾಹದ ಯಾವುದೇ ಮುನ್ಸೂಚನೆ ಇರದುದರಿಂದ ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆಯಿದೆಂದು ಮೂಲಗಳು ತಿಳಿಸಿವೆ.
ರಿಷಿ ಗಂಗಾ ಜಲವಿದ್ಯುತ್ ಯೋಜನೆಗೆ ನಡೆಯುತ್ತಿದ್ದ ಕಾಮಗಾರಿ ಸ್ಥಳಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮವಾಗಿ, ಇಲ್ಲಿದ ಜನರು ಹಾಗೂ ಕಾಮಗಾರಿಗೆ ಬಳಸುತ್ತಿದ್ದ ಉಪಕರಣ, ವಾಹನ ಸೇರಿದಂತೆ ಎಲ್ಲವೂ ಕೊಚ್ಚಿ ಹೋಗಿದೆ. ಇದೇ ವೇಳೆ ಸಮೀಪದ ಅಲಕಾನಂದ ನದಿಯಲ್ಲೂ ಪ್ರವಾಹ ಭೀತಿ ಎದುರಾಗಿದ್ದು, ಚಮೋಲಿ ಜಿಲ್ಲಾಡಳಿತ ಹಾಗೂ ಪೊಲೀಸರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ರಾಜ್ಯ ಹಾಗೂ ಕೇಂದ್ರ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಒಂದು ಧ್ರುವ್ ಹೆಲಿಕಾಪ್ಟರ್ ಹಾಗೂ ಎರಡು ಎಂಐ-17 ಯುದ್ಧ ವಿಮಾನಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಭಾರತೀಯ ಸೇನೆಯನ್ನು ರವಾನೆ ಮಾಡಲಾಗಿದೆ. ಈಗಾಗಲೇ ಮೂರು NDRF ತಂಡ ಉತ್ತರಾಖಂಡ್ನಲ್ಲಿ ಬೀಡು ಬಿಟ್ಟಿದ್ದು, ಇನ್ನಷ್ಟು ತಂಡ ಅನಾಹುತ ಸ್ಥಳಕ್ಕೆ ತೆರಳಲು ಸಜ್ಜಾಗಿವೆ.
ನೀರಿನ ರಭಸಕ್ಕೆ ಋಷಿ ಗಂಗಾ ಅಣೆಕಟ್ಟು ಧ್ವಂಸಗೊಂಡಿದೆ, 'ವಿಷ್ಣು ಪ್ರಯಾಗ್' ಹೈಡ್ರೋ ಪವರ್ ಯೂನಿಟ್ಗೆ ಹಾನಿಯುಂಟಾಗಿದೆ. ಹರಿದ್ವಾರ, ಕೇದಾರನಾಥ ಹಾಗೂ ಬದ್ರೀನಾಥದವರೆಗೆ ಅಲರ್ಟ್ ಜಾರಿಗೊಳಿಸಲಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.