ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಶನಿವಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ತನ್ನ ಮೊದಲನೇ ಹಂತದ ರಥ ಯಾತ್ರೆಯನ್ನು ಆರಂಭಿಸಿದೆ. ಒಟ್ಟು 25 ದಿನಗಳ ಕಾಲ ನಡೆಯಲಿರುವ ಈ ರಥ ಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ಹಸಿರು ನಿಶಾನೆ ತೋರಿದ್ದಾರೆ.
ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನವದ್ವೀಪ್ (ನಬದ್ವೀಪ್) ಎಂಬ ಪ್ರದೇಶದಿಂದ ಮೊದಲ ಹಂತದ ರಥಯಾತ್ರೆ ಹೊರಟಿದೆ. ಈ ಯಾತ್ರೆಯು ಕೇವಲ ಅಧಿಕಾರದಲ್ಲಿ ಮಾತ್ರ ಪರಿವರ್ತನೆ ತರುವುದಲ್ಲ, ಬದಲಾಗಿ ರಾಜ್ಯದ ಜನರ ಯೋಚನೆಯನ್ನೂ ಬದಲಾಯಿಸಲಿದೆ ಎಂದು ಹೇಳಿದ್ದಾರೆ.
“ಹತ್ತು ವರ್ಷಗಳ ಹಿಂದೆ ಮಮತಾ ದೀದಿ ಪ್ರಮಾಣ ವಚನ ಸ್ವೀಕರಿಸಬೇಕಾದರೆ, ತಾಯಿ, ಮಣ್ಣು ಮತ್ತು ರಾಜ್ಯದ ಜನರ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿಕೊಂಡಿದ್ದರು. ಇಂದು ತಾಯಿಯನ್ನು ದರೋಡೆ ಮಾಡಿದ್ದಾರೆ, ಮಣ್ಣನ್ನು ಅವಮಾನ ಮಾಡಿದ್ದಾರೆ, ರಾಜ್ಯದ ಜನರು ರಕ್ಷಣೆ ಇಲ್ಲದೇ ಸಾಯುತ್ತಿದ್ದಾರೆ,” ಎಂದು ನಡ್ಡಾ ಹೇಳಿದ್ದಾರೆ
.
ಈ ರಥ ಯಾತ್ರೆಯ ಮುಖಾಂತರ ಮತಗಳ ಧ್ರುವೀಕರಣವನ್ನು ಬಿಜೆಪಿ ಎದುರು ನೋಡುತ್ತಿದೆ. ಈ ಯಾತ್ರೆಯು ರಾಜ್ಯದ ಜನರ ಕೋಮು ಭಾವನೆಯನ್ನು ಕೆರಳಿಸುವ ಷಡ್ಯಂತ್ರ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ. ತೃಣಮೂಲ ಕಾಂಗ್ರೆಸ್ನ ಹಿಡಿತ ಹೆಚ್ಚಿರುವ ಪ್ರದೇಶಗಳಲ್ಲಿ ಈ ಯಾತ್ರೆಯು ಸಾಗಲಿದೆ.
ಈ ಯಾತ್ರೆಗೆ ನೇರವಾಗಿ ತಡೆ ಒಡ್ಡಲು ಟಿಎಂಸಿ ಇನ್ನೂ ಮುಂದಾಗಿಲ್ಲ. ನಬದ್ವೀಪದಲ್ಲಿ ಬಹಿರಂಗ ಸಮಾವೇಶಕ್ಕೆ ಅನುಮತಿ ನೀಡಲಾಗಿತ್ತಾದರೂ, ರಥ ಯಾತ್ರೆಗೆ ಇನ್ನೂ ಅಧಿಕೃತ ಅನುಮತಿ ಸಿಕ್ಕಿಲ್ಲ. ಈ ಅವಕಾಶವನ್ನು ಬಿಜೆಪಿ ತನ್ನತ್ತ ಸೆಳೆಯುವ ಸಂಭವಗಳು ಹೆಚ್ಚಾಗಿವೆ.
ಸ್ಥಳೀಯಾಡಳಿತದಿಂದ ಅನುಮತಿ ದೊರಕದೇ ಇದ್ದರೂ ರಥ ಯಾತ್ರೆಯನ್ನು ಮುಂದುವರೆಸುವುದಾಗಿ ಬಿಜೆಪಿ ನಾಯಕರು ಪಟ್ಟು ಹಿಡಿದು ಕುಳಿತಿದ್ದಾರೆ. ಒಂದು ವೇಳೆ ರಥ ಯಾತ್ರೆಗೆ ಅಡ್ಡಿ ಪಡಿಸಿದರೆ, ಅದನ್ನೇ ನೆಪವಾಗಿಟ್ಟುಕೊಂಡು ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಯೋಜನೆ ಬಿಜೆಪಿಯದು, ಎನ್ನಲಾಗಿದೆ.