ರಿಹಾನಾ, ರೈತ ಪ್ರತಿಭಟನೆ ಮತ್ತು ಮಹಿಳಾ ಧ್ವನಿಗಳು

ರಿಹಾನಾ ಅಂತಲ್ಲ, ಪ್ರಭುತ್ವ ಜನರ ಹಕ್ಕನ್ನು ಕಿತ್ತುಕೊಳ್ಳಲು, ಅಧಿಕಾರವನ್ನು ದಮನ ಮಾಡಲು ಪ್ರಯತ್ನಿಸಿದಾಗೆಲ್ಲಾ ಗಟ್ಟಿ ಧ್ವನಿಯಲ್ಲಿ ಮಹಿಳೆಯರು ಪ್ರತಿರೋಧಿಸಿದ್ದು, ಪ್ರಶ್ನಿಸಿದ್ದು ಇತಿಹಾಸದುದ್ದಕ್ಕೂ ಕಾಣಸಿಗುತ್ತದೆ.
ರಿಹಾನಾ, ರೈತ ಪ್ರತಿಭಟನೆ ಮತ್ತು ಮಹಿಳಾ ಧ್ವನಿಗಳು

ರಾಷ್ಟ್ರ ರಾಜಧಾನಿಯ ರಸ್ತೆಗಳು ಕಳೆದೆರಡು ತಿಂಗಳುಗಳಿಂದ ರೈತ ಪ್ರತಿಭಟನೆಗೆ ಸಾಕ್ಷಿಯಾಗಿವೆ. ದೆಹಲಿಯ ಈ ಬಾರಿಯ ದಾಖಲೆಯ ಚಳಿಗೆ ಅರುವತ್ತಕ್ಕೂ ಹೆಚ್ಚು ಪ್ರತಿಭಟನಾ ನಿರತ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾಗಿಯೂ ಭಾರತದ ಸೆಲೆಬ್ರಿಟಿಗಳು ಅದರಲ್ಲೂ ತಮ್ಮ ಸಿನಿಮಾಗಳಲ್ಲಿ ರೈತರ ಬಗ್ಗೆ, ಸಿಖ್ಖರ ದೇಶಪ್ರೇಮದ ಬಗ್ಗೆ ಪುಟಗಟ್ಟಲೆ ಮಾತಾಡುವ ಬಾಲಿವುಡ್ ಹಿರೋಗಳು ಒಂದು ಮಾತೂ ಆಡಿರಲಿಲ್ಲ.

ಪಾಪ್ ಗಾಯಕಿ ರಿಹಾನಾ ಮಾಡಿದ 'ಈ ಬಗ್ಗೆ ನಾವು ಯಾಕೆ ಮಾತಾಡುತ್ತಿಲ್ಲ' ಎನ್ನುವ ಟ್ವೀಟ್ ನಮ್ಮ ಸೆಲೆಬ್ರಿಟಿಗಳನ್ನೂ ಬಡಿದೆಬ್ಬಿಸಿವೆ. ಅವರೆಲ್ಲಾ ಸೇಫ್ ಝೋನ್‌ನಲ್ಲಿ ಕೂತು ಪ್ರಭುತ್ವದ ಪರವಾಗಿಯೇ ಮಾತನಾಡಿದರೂ ಕೊನೆ ಪಕ್ಷ ಈ ಬಗ್ಗೆ ಹೇಳಿಕೆಯನ್ನಾದರೂ ನೀಡಿದರು ಎನ್ನುವುದು ಸದ್ಯದ ಮಟ್ಟಿಗಿನ ಸಮಾಧಾನ.

ರಿಹಾನಾ ನಂತರ ಸ್ವೀಡನ್ನಿನ ಪರಿಸರ ಹೋರಾಟಗಾರ್ತಿ ಗ್ರೇಟ್ಟಾ ತಂಬರ್ಗ್ ಭಾರತದ ರೈತರಿಗೆ, ರಿಹಾನಾರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ದೆಹಲಿ ಪೊಲೀಸರು ಗ್ರೇಟ್ಟಾ ಟ್ವಿಟರ್‌ನಲ್ಲಿ ಹಂಚಿ ಕೊಂಡಿದ್ದ ಟೂಲ್ ಕಿಟ್ ರಚಿಸಿದ 'ಅಪರಿಚಿತ' ವ್ಯಕ್ತಿಯ ವಿರುದ್ಧ ಎಫ್.ಐ. ಆರ್ ದಾಖಲಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತದ ರೈತ ಪ್ರತಿಭಟನೆಯು ಎರಡು ತಿಂಗಳುಗಳಿಂದ ನಿರಂತರ ನಡೆಯುತ್ತಿದ್ದರೂ ನಮ್ಮ ಸೆಲೆಬ್ರಿಟಿಗಳು ಸಂವೇದನೆ ಕಳೆದುಕೊಂಡಂತೆ ಇದ್ದು ಬಿಟ್ಟಿದ್ದರು. ಈಗ ರಿಹಾನಾ ಮಾಡಿದ ಟ್ವೀಟ್‌ನಿಂದಾಗಿ ಇಡೀ ಪ್ರಪಂಚ ಭಾರತದ ಕಡೆ, ಸರ್ಕಾರದ ಕಡೆ ತಿರುಗಿ ನೋಡುವಂತಾಗಿದೆ. ದೇಶ ವಿದೇಶದ ಹಲವಾರು ಸೆಲೆಬ್ರಿಟಿಗಳು, ಮಾಧ್ಯಮಗಳು ರೈತರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿದ ನಂತರ ಹೊಸ ಭಾರತದಲ್ಲಿ‌ನ ಘಟನಾವಳಿಗಳು ಜಗತ್ತಿನ ಗಮನಕ್ಕೆ ಬರುತ್ತಿದೆ.

ಇಲ್ಲಿನ‌ ಬಲಪಂಥೀಯ ಮೂಲಭೂತವಾದಿ ಶಕ್ತಿಗಳು ರಿಹಾನಾಳ ಧರ್ಮವನ್ನು ಹುಡುಕಿದವು, ಎಷ್ಟೋ ವರ್ಷಗಳ ಹಿಂದೆ ರಿಹಾನಾಳನ್ನು ಥಳಿಸುತ್ತಿದ್ದ ಅವಳ ಮಾಜಿ‌ ಪತಿಯನ್ನು ಪ್ರಶಂಸಿಸಲೂ ಹೇಸಲಿಲ್ಲ. ತಮ್ಮನ್ನು‌ ಒಪ್ಪದ, ತಮ್ಮ ಸಿದ್ಧಾಂತಗಳನ್ನು ವಿರೋಧಿಸಿದ ಮಹಿಳೆಯರ ವೈಯಕ್ತಿಕ ಬದುಕಿನ ಬಗ್ಗೆ ಅತಿ ಕೆಟ್ಟದಾಗಿ ಕಮೆಂಟ್ ಮಾಡುವುದು ಪ್ರಪಂಚದ ಎಲ್ಲಾ ದೇಶದಲ್ಲಿನ ಮೂಲಭೂತವಾದಿಗಳ ಕೊಳಕು‌ ಮನಸ್ಥಿತಿ ಎನ್ನುವುದು ರಿಹಾನಾಳಂತಹ ಮಧ್ಯಮ ವರ್ಗದ, ಬದುಕಿನಲ್ಲಿ ಸಾಕಷ್ಟು ನೋವುಂಡವರಿಗೆ ಅರ್ಥವಾಗದೇ ಇರುವಂಥದ್ದಲ್ಲ.

ರಿಹಾನಾ ಅಂತಲ್ಲ, ಪ್ರಭುತ್ವ ಜನರ ಹಕ್ಕನ್ನು ಕಿತ್ತುಕೊಳ್ಳಲು, ಅಧಿಕಾರವನ್ನು ದಮನ ಮಾಡಲು ಪ್ರಯತ್ನಿಸಿದಾಗೆಲ್ಲಾ ಗಟ್ಟಿ ಧ್ವನಿಯಲ್ಲಿ ಮಹಿಳೆಯರು ಪ್ರತಿರೋಧಿಸಿದ್ದು, ಪ್ರಶ್ನಿಸಿದ್ದು ಇತಿಹಾಸದುದ್ದಕ್ಕೂ ಕಾಣಸಿಗುತ್ತದೆ.

ನಾಜೀ ಕ್ರೌರ್ಯದ ಪರಮಾವಧಿಯಲ್ಲೂ , ಯಹೂದಿಗಳಿಗೆ ಆಶ್ರಯ ನೀಡಿದರೆ ಇಡೀ ಕುಟುಂಬವೇ ಭೀಕರ ಶಿಕ್ಷೆಗೊಳಗಾಗಬಹುದು ಎಂಬ ಅರಿವಿದ್ದೂ ಆಶ್ರಯ ಬೇಡಿ ಬಂದ ಯಹೂದಿಗಳನ್ನು ಸುರಕ್ಷಿತವಾಗಿ ಜರ್ಮನಿಯಿಂದ ಹೊರ ಕಳುಹಿಸಲು‌ ನೆರವಾದ ಎಲಿಜಬೆತ್ ಷಾರ್ಲೆಟ್ ಗ್ಲೋಡೆನ್ ಅವರ ಇತಿಹಾಸವೇ ಸಾಕು ಪ್ರಭುತ್ವದ, ಪ್ರಬಲ ಶಕ್ತಿಗಳ ವಿರುದ್ಧ ನಿಂತ ಮಹಿಳೆಯರ ಛಾತಿಯನ್ನು ಅರಿಯಲು.

ಸಿಎಎ ವಿರುದ್ಧದ ಪ್ರತಿಭಟನೆಯಲ್ಲೂ ಅಷ್ಟೇ, ದೇಶದಲ್ಲಿ ಮೆರವಣಿಗೆಗಳನ್ನು ಸಂಘಟಿಸಿ, ಪ್ರತಿಭಟನಾ ಸಭೆ ಹಮ್ಮಿಕೊಂಡು ಸುಸ್ತಾಯಿತೇನೋ ಅನ್ನುವಷ್ಟರಲ್ಲಿ ಶಾಹಿನ್ ಭಾಗಿನ ಮಹಿಳೆಯರು ಸರ್ಕಾರದ ವಿರುದ್ಧ ಎದ್ದು ನಿಂತಿದ್ದರು. ಭಾರತದ ಮಾಧ್ಯಮಗಳಿಂದ, ಸರ್ಕಾರದ ಮಂದಿಗಳಿಂದ 'ಅವಿದ್ಯಾವಂತರು', 'ನಿರ್ಲಕ್ಷಿತರು', 'ಅಜ್ಞಾನಿಗಳು', 'ಲೋಕ ಜ್ಞಾನವಿಲ್ಲದವರು' ಎಂದೆಲ್ಲಾ ಕರೆಸಿಕೊಂಡ ಮಹಿಳೆಯರು ನಿರಂತರ 104 ದಿನಗಳ ಕಾಲ ದೆಹಲಿಯ ಪುಟ್ಟ ಗಲ್ಲಿಯಂತಿರುವ ರಸ್ತೆಯಲ್ಲಿ ಕುಳಿತು, ಸೌಹಾರ್ದದ ಗೀತೆ ಹಾಡಿ ಪ್ರತಿಭಟಿಸಿ ಜಗತ್ತಿನ ಗಮನ ಸೆಳೆದಿದ್ದರು. ಧರಿಸುವ ಬಟ್ಟೆ ನೋಡಿ ಯೋಗ್ಯತೆ ಅಳೆದವರಿಗೆ ತಮ್ಮ ಧೀಶಕ್ತಿಯಿಂದಲೇ ಉತ್ತರಿಸಿದ್ದರು.

ನ್ಯೂಜಿಲೆಂಡ್‌ನಲ್ಲಿ ಮಸೀದಿಯೊಂದರ ಮೇಲೆ ಧಾಳಿ ನಡೆದಾಗ ಅಲ್ಲಿನ ಪ್ರಧಾನಿ ಜೆಸಿಂಡಾ ಆ ದೇಶದಲ್ಲಿ ಅಲ್ಪಸಂಖ್ಯಾತರು ಅಭದ್ರತೆಯಲ್ಲಿ ಬದುಕಬೇಕಿಲ್ಲ, ಪ್ರತಿಯೊಬ್ಬ ನ್ಯೂಜೆಲೆಂಡಿಗರೂ ತಮ್ಮವರೇ ಎಂಬ ಭರವಸೆ ಮೂಡಿಸಲು ಹಿಜಾಬ್ ಧರಿಸಿ, ಸಾಂತ್ವನ ಸಭೆಯಲ್ಲಿ ಭಾಗವಹಿಸಿ ಆ ಮೂಲಕ ಬಲಪಂಥೀಯ ಮತೀಯವಾದವನ್ನು ಸಹಿಸಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದ್ದರು.

ಮೊನ್ನೆ‌ಮೊನ್ನೆಯಂತೆ ಜೋ ಬೈಡೆನ್ ಪದ ಗ್ರಹಣ ಸಂದರ್ಭದಲ್ಲೂ ಕವನ ವಾಚಿಸಿದ 22ರ ಯುವತಿ ಅಮಾಂಡಾ ಗೋರ್ಮನ್ ಅಧಿಕಾರದ ಮದದಲ್ಲಿ ಮೆರೆದವರನ್ನು ನೇರವಾಗಿಯೇ ಎಚ್ಚರಿಸಿದ್ದರು.

ಈ ಎಲ್ಲಾ ಗಟ್ಟಿ ದನಿಗಳ‌‌ ಪರಂಪರೆಯ ಮುಂದುವರಿಕೆ ಎಂಬಂತೆ ಗ್ರೇಟ್ಟಾ, ರಿಹಾನಾ ಅಂತಹವರು ಭಾರತದ ರೈತರ ಪರ ನಿಂತಿದ್ದಾರೆ. ರೈತರು ದೆಹಲಿಗೆ ಬರದಂತೆ ತಡೆಯಲು ಸರ್ಕಾರ ಮತ್ತು ಆಡಳಿತ ಯಂತ್ರ ಒಡ್ಡಿದ ತಡೆಗಳನ್ನು ಜಗತ್ತು ನೋಡುವಂತೆ ಮಾಡುತ್ತಿದ್ದಾರೆ. ರೈತರ ದಾರಿಗೆ ಅಡ್ಡಲಾಗಿ ಇರಿಸಿದ ಬ್ಯಾರಿಕೇಡ್‌ಗಳನ್ನು, ರಸ್ತೆ ಅಗೆದು ಜೋಡಿಸಿದ ಮೊಳೆಗಳನ್ನು, ತೋಡಿದ ಗುಂಡಿಗಳನ್ನು, ಸರ್ಕಾರದ ಕುತಂತ್ರವನ್ನು ಪ್ರಪಂಚ ಗಮನಿಸುತ್ತಿದೆ ಎಂದಾದ ಮೇಲೆ ಭಾರತದ ಪುರುಷ ಸೆಲೆಬ್ರಿಟಿಗಳಿಗೂ, ಕಂಗಾನಾರಂತಹ ಸರ್ಕಾರದ ಚಮಚಾಗಿರಿ ಮಾಡುತ್ತಿರುವವರಿಗೂ ಎಚ್ಚರವಾಗಿದೆ.

"ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅಜೆಂಡಾ ಜಾರಿಗೆ ತರಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ರೈತ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು ರಿಹಾನಾರ ಟ್ವೀಟಿನ ನಂತರವೇ. ಸಚಿನ್ ತೆಂಡೂಲ್ಕರ್ ರಂತಹ ಒಂದು ತಲೆಮಾರನ್ನೇ ಪ್ರಭಾವಿಸಿದ ಮಹಾನ್ ಕ್ರಿಕೆಟಿಗ ರೈತ ಪ್ರತಿಭಟನೆಯನ್ನೂ, ಸರ್ಕಾರದ ವಿರುದ್ಧದ ಧ್ವನಿಯನ್ನೂ ಪ್ರೊಪಂಗಡ ಎಂದು ಕರೆದರೆ ಬಾಲಿವುಡ್ ನಟ ಅಕ್ಷಯ ಕುಮಾರ್ ಭಾರತದ ಒಗ್ಗಟ್ಟಿನ ಬಗ್ಗೆ ಮಾತಾಡಿ ಮತ್ತೆ ಸರ್ಕಾರದ ಪರ ನಿಂತಿದ್ದಾರೆ. ಕರಣ್ ಜೋಹರ್, ವಿರಾಟ್ ಕೊಹ್ಲಿ ಸಹ ಸರ್ಕಾರದ ವಿರುದ್ಧ ಈಜುವ, ಸತ್ಯದ ಪರ ವಹಿಸುವ ಧೈರ್ಯ ತೋರಿಲ್ಲ. ಆದರೆ ನಟಿ ತಾಪ್ಸಿ‌ ಪನ್ನು ಮಾತ್ರ "ಕೇವಲ ಒಂದು ಟ್ವೀಟ್ ನಿಮ್ಮ ಏಕತೆಯನ್ನು, ಒಂದು ಹಾಸ್ಯ ನಿಮ್ಮ ವಿಶ್ವಾಸವನ್ನು, ಒಂದು ಶೋ ನಿಮ್ಮ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸುವುದಾದರೆ ನೀವು ನಿಮ್ಮ ಮೌಲ್ಯ ವ್ಯವಸ್ಥೆಯನ್ನು ಬಲಗೊಳಿಸಬೇಕೇ ಹೊರತು ಪ್ರೊಪಗಂಡ ಪಾಠ ಮಾಡುವುದಲ್ಲ" ಎಂದು ಹೇಳುವ ಆ ಮೂಲಕ ಮತ್ತೊಂದು ಗಟ್ಟಿ ಮಹಿಳಾ ಧ್ವನಿಯ ಪ್ರತಿರೋಧ ದಾಖಲಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com